ಹರಿಹರ (Harihara) : ದಾವಣಗೆರೆಯಲ್ಲಿ ಜಿಲ್ಲಾ ಮಟ್ಟದ 537ನೇ ಕನಕದಾಸರ ಜಯಂತ್ಯೋತ್ಸವವನ್ನು ಜಿಲ್ಲಾ ಕುರುಬ ಸಮಾಜ ಹಾಗೂ ಸಿದ್ದರಾಮಯ್ಯನವರ ಅಭಿಮಾನಿ ಬಳಗದಿಂದ ಜ.5 ರಂದು ಆಯೋಜಿಸಲಾಗಿದೆ ಎಂದು ಮಾಜಿ ಶಾಸಕ ಎಸ್.ರಾಮಪ್ಪ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.5 ರ ಬೆಳಗ್ಗೆ 11.30ಕ್ಕೆ ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ನಡೆಯುವ ಕನಕ ದಾಸರಜಯಂತ್ಯೋತ್ಸವ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಕನಕದಾಸರ ಪುತ್ಥಳಿ ಉದ್ಘಾಟಿಸುವರು ಎಂದರು.
ಕಾಗಿನೆಲೆ ಮಹಾಸಂಸ್ಥಾನ ಪೀಠದ ನಿರಂಜನಾನಂದ ಪುರಿ, ಪಂಚಮಸಾಲಿ ಪೀಠದ ವಚನಾನಂದ ಶ್ರೀ, ವಾಲ್ಮೀಕಿ ಪೀಠದ ಪ್ರಸನ್ನಾನಂದ ಪುರಿ, ಭೋವಿ ಗುರು ಪೀಠದ ಇಮ್ಮಡಿ ಸಿದ್ದರಾಮೇಶ್ವರ, ಶ್ರೀ ಮಾದರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ಸೇರಿದಂತೆ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಧರ್ಮ ಗುರುಗಳು ಸಮಾರಂಭದ ಸಾನಿಧ್ಯ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ದಾವಣಗೆರೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹರಿಹರ ತಾಲೂಕಿನಿಂದ ಅಂದಾಜು 10 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಳ್ಳುವ ನೀರಿಕ್ಷೆಯಿದೆ ಎಂದರು.
ಕಾಂಗ್ರೆಸ್ ಪಕ್ಷದ ಮುಖಂಡ ಎನ್.ಎಚ್.ಶ್ರೀನಿವಾಸ್ ಮಾತನಾಡಿ, ಕನಕದಾಸರ ಜಯಂತ್ಯೋತ್ಸವದ ಅಂಗವಾಗಿ ಜ.4 ರಂದು ಬೆಳಗ್ಗೆ 9.30ಕ್ಕೆ ದಾವಣಗೆರೆ ಕಾಳಿದಾಸ ವೃತ್ತ ದಿಂದ ಬೈಕ್‍ರ್ಯಾಲಿ ಆಯೋಜಿಸಲಾಗಿದೆ. ಜ.5 ರ ಬೆಳಗ್ಗೆ 9.30 ರಿಂದ ದುರ್ಗಾಂಭಿಕಾ ದೇವಸ್ಥಾನ ದಿಂದ ಆರಂಭವಾಗುವ ಬೃಹತ್ ಮೆರವಣಿಗೆಗೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಚಾಲನೆ ನೀಡುವರು. ಜಿಲ್ಲಾಧಿಕಾರಿಗಳು, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿರಲಿದ್ದಾರೆ ಎಂದು ಮಾಹಿತಿ ನೀಡಿದರು.
ಹರಿಹರ ತಾಲೂಕು ಕುರುಬ ಸಮಾಜದ ಅಧ್ಯಕ್ಷ ಹಾಲೇಶಪ್ಪ ಮಾತನಾಡಿ, ಕನಕ ದಾಸರು ಕೇವಲ ಕುರುಬರಿಗೆ ಮಾತ್ರ ಸೀಮಿತರಾದವರಲ್ಲ ಈ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲಾ ಸಮಾಜದ ಜಿಲ್ಲಾಧ್ಯಕ್ಷರುಗಳಿಗೆ ಹಾಗೂ ಎಲ್ಲಾ ಶಾಸಕರಿಗಳಿಗೆ ಆಹ್ವಾನ ನೀಡಲಾಗಿದೆ. ಸಮಾಜ ಭಾಂದವರು ಸೇರಿದಂತೆ ವಿವಿಧ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಿ ಕೊಂಡರು.
ಸುದ್ದಿಗೋಷ್ಠಿಯಲ್ಲಿ ದಾವಣಗೆರೆ ಪಾಲಿಕೆ ಸದಸ್ಯ ಶ್ರೀನಿವಾಸ್, ಕೆಪಿಸಿಸಿ ಸದಸ್ಯ ಬಿ.ರೇವಣಸಿದ್ದಪ್ಪ, ವಕೀಲರಾದ ಎಂ.ನಾಗೇಂದ್ರಪ್ಪ, ಕೆ.ಬಿ.ರಾಜಶೇಖರ್, ಕರಿಬಸಪ್ಪ, ಶಿವಣ್ಣ, ರುದ್ರಣ್ಣ,ಸಿ.ಎನ್.ಹುಲೀಗೇಶ್ ಹಾಗೂ ಇತರರಿದ್ದರು.
Read also : Davanagere | ರಾಜ್ಯ ಮಟ್ಟದ ಯುವಜನೋತ್ಸವ ಅಂಗವಾಗಿ ಜ. 3 ರಂದು ಬೃಹತ್ ಜಾಥಾ : ಡಿಸಿ