Kannada News | Dinamaana.com | 05-07-2024
ಮೊನ್ನೆ ಸಂಜೆ ವಾಕಿಂಗ್ ಹೋದಾಗ ಬಾಲ್ಯದ ಹಳ್ಳ ನೆಪ್ಪಾತು. ನಾವು ಬಾಲಕರಿದ್ದಾಗ ನಮ್ಮೂರಾಗ ಹಬ್ಬ, ಜಾತ್ರಿ ಬಂದ್ವು ಅಂದ್ರ ಒಂದು ತಿಂಗ್ಳ ಮುಂಚೆನೆ ತಯಾರಿ ಶುರು ಆಕಿತ್ತು. ಹಬ್ಬಕ್ಕೆ ಬಟ್ಟಿ-ಬರಿ ಹಾಗೂ ಹಾಸ್ಗಿ ಮಡಿ ಮಾಡೊ ಕೆಲ್ಸ. ಇಡೀ ಊರಿನ ಬಟ್ಟಿ ಹಾಗೂ ಹಾಸ್ಗಿಗಳನ್ನು ಮಡಿ ಮಾಡುವ ಏಕೈಕ ತಾಣ ಅಂದ್ರ ಅದು ನಮ್ಮೂರಿನ ಹಳ್ಳ.
ಈ ಹಳ್ಳಕ್ಕ ಜಾತಿ ಧರ್ಮದ ಅಮಲು ಇರ್ಲಿಲ್ಲ..
ನಾವು ಬಾಲಕರಿದ್ದಾಗ ವರ್ಷಪೂರ್ತಿ ಹಳ್ಳ ಹರಿತಿತ್ತು. ಹಬ್ಬದ ಮುನ್ನಾ ದಿನಗಳಲ್ಲಿ ಹಳ್ಳ ಜನಗಳಿಂದ ಗಿಜಿಗುಡುತಿತ್ತು. ರಸ್ತೆಯ ತುಂಬಾ ಜನ ಓಡಾಡ್ತ ಇದ್ರು. ಕೆಲವ್ರಂತೂ ಬೆಳಿಗ್ಗೆನೇ ಬಟ್ಟಿ ಕಟ್ಟಿಗೊಂಡು ಹಳ್ಳಕ್ಕ ಹೋಕಿದ್ರು. ಆಮ್ಯಾಲೆ ಅವ್ರ ಮನಿಯವರು ಊಟಕ್ಕ ಬುತ್ತಿ ಕಟಿಗೊಂಡು ಹೋಗತಿದ್ರು. ಹಳ್ಳದಾಗ ಕೂತಕೊಂಡು ಉಂಡು, ಬಟ್ಟಿ ಒಣ್ಗಸ್ಕಂಡು ಮನಿಗೆ ಬರ್ತಿದ್ರು. ಈ ಹಳ್ಳಕ್ಕ ಜಾತಿ ಧರ್ಮದ ಅಮಲು ಇರ್ಲಿಲ್ಲ. ಎಲ್ಲಾ ಧರ್ಮ ಜಾತಿಯವರೂ ಅಲ್ಲಿಗೆ ಬಂದು ತಮ್ಮ ಕೊಳೆಯನ್ನು ಕಳಕೋತಿದ್ರು.
ನಮ್ಮೂರಿನ ಸುತ್ತಮುತ್ತ ಸಾಕಷ್ಟು ಹಳ್ಳ ಅದಾವು. ಅದ್ರಗ ಎಲ್ಡು ಹಳ್ಳ ತುಂಬಾ ಮುಖ್ಯ ಅದಾವು. ಒಂದು ಸಣ್ಣ ಹಳ್ಳ, ಇನ್ನೊಂದು ದೊಡ್ಡ ಹಳ್ಳ. ಊರಿಗೆ ಹತ್ರ ಇರೋದೇ ಸಣ್ಣ ಹಳ್ಳ. ಇದು ಮಳಿಗಾಲದಾಗ ಜೋರಾಗಿ ಮಳಿ ಬಂದಾಗ ಮಾತ್ರ ಹರಿತಿತ್ತು. ಇನ್ನು ಊರಿಂದ ಮೈಲು ದೂರದಲ್ಲಿರೋದೇ ದೊಡ್ಡ ಹಳ್ಳ. ಇದು ವರ್ಷ ಪೂರ್ತಿ ಹರಿತಿತ್ತು.
ಈ ಎಲ್ಡು ಹಳ್ಳಗಳು ನಮ್ಮೂರಿನ ಜೀವನಾಡಿ…
ಈ ಎಲ್ಡು ಹಳ್ಳಗಳು ನಮ್ಮೂರಿನ ಜೀವನಾಡಿ ಇದ್ದಂಗ. ಜೋರಾಗಿ ಮಳಿ ಬಂದ ಮರುದಿನ ಎಲ್ಡೂ ಹಳ್ಳಗಳು ತುಂಬಿ ಹರಿತಿದ್ವು. ಆಗ ರಸ್ತೆ ಮಾರ್ಗ ಬಂದ್ ಆಕಿದ್ವು. ಆ ಕಡೆಗಿನ ಬಂಡಿ, ಬಸ್ಸು, ಎಲ್ಲವೂ ಆ ಕಡೆ, ಈ ಕಡೆಗಿನ ಬಂಡಿ, ಬಸ್ಸು ಎಲ್ಲವೂ ಈ ಕಡೆನೇ ಇರತಿದ್ವು. ಜೋರಾಗಿ ಹಳ್ಳ ಹರಿವಾಗ ದಾಟುವ ಪ್ರಯತ್ನ ಮಾಡಿದ ಎಷ್ಟೋ ಮಂದಿ, ದನ, ಕರ, ಕುರಿ ಎಲ್ಲವೂ ನೀರು ಪಾಲಾಗಿ ಬನ್ನಿಕಲ್ಲು ಕೆರೆಗೆ ಹಾರವಾಕಿದ್ವು. ‘ಅಯ್ಯೋ ಪಾಪ, ಅವ್ರು ನೀರಾಗ ತೇಲ್ಕೊಂಡು ಹೋದ್ರಂತೆ, ಅಯ್ಯೋ ನೋಡ್ರಿ ಅವ್ರ ಆಕ್ಳಗಳು ತೇಲಿ ಹೋದ್ವಂತೆ” ಇಂತ ಸುದ್ದಿಗಳು ಊರಾಗ ಹರಿದಾಡತಿದ್ವು. ನಮ್ಮೂರಿನ ದೊಡ್ಡಹಳ್ಳಕ್ಕ ನಾಲ್ಕಾರು ಊರುಗಳಿಂದ ನೀರು ಬರುತ್ತಿತ್ತು. ಸಣ್ಣಹಳ್ಳಕ್ಕ ನಮ್ಮೂರಿನ ಜಮೀನುಗಳ ನೀರು ಮಾತ್ರ ಬರ್ತಿತ್ತು. ಸಣ್ಣ ಮಕ್ಕಳಂಗ ಸಣ್ಣಹಳ್ಳ ತುಂಬಾ ರಭಸ. ದೊಡ್ಡವರಂತೆ ದೊಡ್ಡಹಳ್ಳ ಪ್ರಶಾಂತವಾಗಿ ಹರಿತಿತ್ತು.
ಹರಿವ ನೀರು ಕೊಚ್ಚೆಯಾಗಿರೋದು ದುರಂತ….
ಮಳಿ ಬಂದ ಮರುದಿನ ನಮಗೆಲ್ಲ ಖುಷಿಯೋ ಖುಷಿ. ಮದ್ಯಾಹ್ನ ಬಹುತೇಕ ಊರಿನ ಹುಡುಗ್ರೆಲ್ಲ ಸಣ್ಣಹಳ್ಳದಾಗ ಇರತಿದ್ವು. ಹರಿಯುವ ಹಳ್ಳದಾಗ ಈಜಾಡ್ತಾ, ಈಜಾಡ್ತಾ ಕಾಲ ಕಳಿತಿದ್ವಿ. ಊರಾಗಿನ ದನಕರುಗಳ್ನೆಲ್ಲ ಅಲ್ಲೆ ಮೈತೊಳಿಯೋರು. ನಾವು ಅವುಗಳ ಬಾಲ ಹಿಡಕೊಂಡು ಹಳ್ಳದಾಗ ಈಜಾಡ್ತಿದ್ವಿ. ಆ ದಿನಗಳನ್ನ ನೆನಪಿಸಿಕೊಂಡ್ರ ಮೈ ಜುಮ್ ಅನ್ನತದ. ಈಗ ಅದ ಸಣ್ಣಹಳ್ಳ ಚರಂಡಿ ನೀರು ಹರಿವ ಕೊಚ್ಚೆಯಾಗಿರೋದು ದುರಂತ ಅನಿಸ್ತದ.
ಒಮ್ಮೆ ನಮ್ಮವ್ವ ಕೂಲಿ ಕೆಲಸಕ್ಕ ಹೊಲಕ್ಕ ಹೋದಾಗ ಸಂಜಿಮುಂದ ಜೋರಾಗಿ ಮಳಿ ಬಂತಂತೆ. ಆಗ ಜೊತೆಗಾರರೆಲ್ಲ ಜೋರಾಗಿ ಹೆಜ್ಜಿ ಹಾಕ್ತ ಹಳ್ಳದ ದಂಡಿಗಿ ಬರೋವೇಳೆಗೆ ಹಳ್ಳ ತುಂಬಿ ಹರಿತ್ತಿತ್ತಂತೆ. ಇನ್ನೂ ಜೋರಾಗುವ ಸಂಭವ ಇತ್ತಂತೆ. ಅಲ್ಲೆ ಇದ್ದ ನಾಲ್ಕಾರು ಗಂಡುಮಕ್ಕಳು ಇವ್ರನ್ನ ಕೈಹಿಡಿದು ಹಳ್ಳ ದಾಟಿಸುವ ಪ್ರಯತ್ನ ಮಾಡಿದ್ರಂತೆ. ಎಲ್ರೂ ಗಟ್ಟಿಯಾಗಿ ಕೈ ಕೈ ಹಿಡಕೊಂಡು ಒಂದು ಬಿಗಿ ಮ್ಯಾಲ ಹೆಜ್ಜಿ ಇಡ್ತಾ ಸಾವಕಾಶವಾಗಿ ದಾಟ್ತಾ ಬಂದ್ರಂತೆ.
ಇನ್ನೊಂದು ಇಪ್ಪತ್ತು ಹೆಜ್ಜಿ ದೂರದಾಗ ದಂಡಿ ಐತಿ ಅನ್ನುವಾಗ ನಮ್ಮವ್ವನ್ನ ಕಾಲು ಜಾರಿತಂತೆ. ಆಯ ತಪ್ಪಿ ನೀರೊಳಗ ಬಿದ್ಲಂತೆ. ಅವ್ರ ಜೊತೆಗೆ ಇದ್ದ ತೆಲಿಗಿ ಚನ್ನಪ್ಪ(ನನಗೆ ಅಣ್ಣನಾಗಬೇಕು) ನಮ್ಮವ್ವನ ಎಲ್ಡೂ ಕೈ ಹಿಡಿದು ಎಳಕೊಂಡ್ನಂತೆ. ನೀರಲ್ಲಿ ಕೊಚ್ಚಿ ಹೋಗಬೇಕಿದ್ದ ನಮ್ಮವ್ವ ಬದುಕಿದ್ಲು. ಈಗ್ಲೂ ನಮ್ಮವ್ವ ಆರೋಗ್ಯವಾಗಿದಾಳ, ಆದ್ರ ನಮ್ಮವ್ವನ ಕಾಪಾಡಿದ ಚನ್ನಪ್ಪನ ದೇವ್ರು ಕರ್ಕೊಂಡಬಿಟ್ಟ.
ಇಂದು ಸಂಜಿ ಮುಂದ ವಾಕಿಂಗ್ ಹೋದಾಗ ದೊಡ್ಡಹಳ್ಳ ಇನ್ನೂ ಹರಿತಿರೋದು ಕಂಡು ಖುಷಿಯಾತು. ಕಳೆದ ಇಪ್ಪತ್ತು ವರ್ಸದಾಗ ಮಳಿಗಾಲದಾಗ ಮಾತ್ರ ಹರಿತದ್ದ ಹಳ್ಳ, ಜನವರಿ ಮುಗುದು ಫೆಬ್ರವರಿ ಬಂದ್ರೂನೂ ಹರಿಯೋದು ಕಂಡು ಖುಷಿ ಆತು. ಹಂಗೆನೆ ರಸ್ತೆ ಬಿಟ್ಟು ಹಳ್ಳದ ನೀರಾಗ ಕಾಲಿಟ್ಟೆ. ಆಹಾ! ಎಲ್ಡೂ ಕಾಲುಗಳ್ನ ಪವಿತ್ರ ನದಿಯಲ್ಲಿಟ್ಟಷ್ಟು ಖುಷಿಯಾತು.
(ಈಗ ನದಿಗಳೆಲ್ಲವೂ ಕಲುಷಿತ ಆಗಿ ಯಾವ ನದಿನೂ ಪವಿತ್ರ ಆಗಿ ಉಳಿದಿಲ್ಲ). ಕಾಲಿಗೆ ಆದ ತಣ್ಣನೆಯ ಅನುಭವದಿಂದ ಮನಸ್ಸು ತಣ್ಣಗಾತು. ಬೊಗಸ್ಯಾಗ ನೀರು ಹಿಡಕೊಂಡೆ. ತಿಳಿನೀರು. ಹಂಗೆ ಬಾಯಿಗೆ ಹಾಕೊಂಡೆ. ಅದೇ ಟೇಸ್ಟ್. ಎರಿ ಮಣ್ಣಿನ ಘಮಲು ಬಾಯಿಗೆ ಮೆತ್ತಿಕೊಂಡಂಗಾತು.
ಹಂಗ ಹಳ್ಳದ ದಂಡಿಗುಂಟ ಅಡ್ಡಾಡ್ತ ಮುಂದೆ ಹೋದೆ. ಅಲ್ಲಲ್ಲಿ ಬೆಳೆದ ಹಾಪು, ಕುರುಚಲು ಗಿಡಗಳು ಕಣ್ಣಿಗೆ ಬಿದ್ವು. ನಾವು ಹುಡುಗ್ರಿದ್ದಾಗ ಬ್ಯಾಸಿಗಿ ದಿನದಾಗ ಹಳ್ಳಕ್ಕ ಬಂದ್ರ ನೀರು ಕುಡಿಯಾಕಂತ ಹಳ್ಳದಾಗ ಒರತಿ ತೆಗೆತಿದ್ವಿ. ಹಳ್ಳದ ನೀರು ನಾರಿನ ವಾಸ್ನೆಯಿಂದ ಕೂಡಿರ್ತಿತ್ತು. ಕುಡಿಯಾಕ ಆಗ್ತಿರಲಿಲ್ಲ. ಅದಕ್ಕ ನೀರು ಹರಿವ ಜಾಗದ ಪಕ್ಕದಲ್ಲಿನ ಉಸುಗನ್ನು ಬಗೆದು ತೆಗೆದು ಒರತಿ ಮಾಡತಿದ್ವಿ. ಅದ್ರಾಗ ಬಸಿನೀರು ಬಂದು ತಿಳಿಯಾದ ನೀರು ನಿಲ್ಲುತ್ತಿತ್ತು. ಅದನ್ನು ಕುಡಿತಿದ್ವಿ. ಆಗೆಲ್ಲ ಬ್ಯಾಸಿಗಿ ದಿನದಾಗ ರೈತರು ನಾರು ಪಡೆಯಲು, ಹಳ್ಳದ ಉಸುಕಿನ್ಯಾಗ ಅಲ್ಲಲ್ಲಿ ಕತ್ತಾಳೆ ಎಲೆಗಳನ್ನ ನೆನೆಹಾಕಿ ಮುಚ್ಚಿ ಇಡತಿದ್ರು. ಕತ್ತಾಳೆ ಎಲೆ ಕೊಳೆತ ಮ್ಯಾಲ ಅದ್ರೊಳಗಿನ ನಾರು ತೆಗೆದು ಹಗ್ಗ ಮಾಡತಿದ್ರು. ಈಗ ಅಂದಿನ ರೈತ್ರು ಇಲ್ಲ, ನಾರು ಇಲ್ಲ, ಹಳ್ಳದಾಗ ಕೊಳೆತ ನಾರಿನ ವಾಸ್ನೆನೂ ಇಲ್ಲ.
ಬೋರ್ ಹಾಕ್ಸಿದ್ರೂನೂ ನೀರು ಸಿಗೋದು ದುಸ್ತರ ಆಗೈತಿ….
ಈ ವರ್ಸ ಮಳಿ ಬಾಳ ಆಗಿರೋದ್ರಿಂದ ಫೆಬ್ರವರಿ ಬಂದ್ರೂನೂ ಹಳ್ಳ ಹರಿತಿದೆ ಅನಿಸ್ತು. ಇತ್ತೀಚಿನ ವರ್ಸದಾಗಂತೂ ಹಳ್ಳದಾಗ ಅಲ್ಲಲ್ಲಿ, ಗೋಕಟ್ಟಿ, ಚೆಕ್ಡ್ಯಾಂ ಅಂತ ಕಟ್ಯಾರ. ಕೆಲವು ಒಡೆದು ಹೋಗಿ ನೀರು ನಿಲ್ಲದಂಗ ಆಗ್ಯಾವು. ಕೆಲವು ಗಟ್ಟಿಮುಟ್ಟ ಅದಾವು. ನಮ್ದು ಬಯಲುಸೀಮೆ ಆಗಿರೋದ್ರಿಂದ ನೀರಾವರಿ ಸೌಲಭ್ಯ ಇಲ್ಲ. ಬೋರಿನ ನೀರೇ ಗತಿ. ಈಗಿಗಂತೂ 500 ಅಡಿ ಬೋರ್ ಹಾಕ್ಸಿದ್ರೂನೂ ನೀರು ಸಿಗೋದು ದುಸ್ತರ ಆಗೈತಿ. ಹಂಗಾಗಿ ಬ್ಯಾಸಗಿ ದಿವಸಕ ದನಕರುಗಳಿಗೆ ಹಳ್ಳದ ನೀರೇ ಕುಡಿಯಲು ಆಧಾರ.
ಪ್ಲಾಸ್ಟಿಕ್ ರಕ್ಕಸನನ್ನು ನೋಡಿ ಮನಸಿಗೆ ಬ್ಯಾಸ್ರ ಆತು…
ಹಳ್ಳದ ಗುಂಟ ಸಾಗಿದಾಗ ಎಲ್ಡು ಬ್ಯಾರೆ ಬ್ಯಾರೆ ದೃಶ್ಯಗಳು ಮನಸಿಗೆ ಪರಿಣಾಮ ಬೀರಿದ್ವು. ಒಂದು ಕಾಯ್ಕುಳ್ಳು, ಇನ್ನೊಂದು ಪ್ಲಾಸ್ಟಿಕ್. ಪ್ಲಾಸ್ಟಿಕ್ ಎಲ್ರಿಗೂ ಗೊತ್ತಿರುವಂತದ್ದೆ. ಆದ್ರ ಕಾಯ್ಕುಳ್ಳು ಈಗಿನ ಜಮಾನಕ್ಕ ಗೊತ್ತಿಲ್ಲ. ಮೇಯಲು ಹೋದ ದನಕರುಗಳು ಹಾಕಿದ ಸಗಣಿ ಒಣಗಿ ಕುಳ್ಳು ಆಗ್ತದ. ನಾವು ಬಾಲಕರಿದ್ದಾಗ ಈ ಕಾಯ್ಕುಳ್ಳನ್ನ ಆರಿಸಿ ಮನೆಗೆ ತಗೊಂಡುಹೋಗಿ ಒಲೆಗೆ ಇಂಧನ ಆಗಿ ಬಳಸ್ತಾ ಇದ್ವಿ. ಎಲ್ಲೆಂದರಲ್ಲ್ಲಿ ಕಾಯ್ಕುಳ್ಳು ಕಂಡುಬಂದ್ವು. ಈಗ ಕಾಯ್ಕುಳ್ಳು ಆರ್ಸೋರು ಯಾರು ಇಲ್ಲದೇ ಬಿದ್ದಲ್ಲೆ ಗೆದ್ಲು ಹತ್ತಾಕತ್ಯಾವು. ಹಂಗ ಹಳ್ಳದಗುಂಟ ಸಾಗಿದಾಗ ಕುರುಚಲು ಗಿಡಗಳಲ್ಲಿ ಸಿಕ್ಕಿಹಾಕಿಕೊಂಡ ಪ್ಲಾಸ್ಟಿಕ್ ರಕ್ಕಸನನ್ನು ನೋಡಿ ಮನಸಿಗೆ ಬ್ಯಾಸ್ರ ಆತು.
ಅಭಿವೃದ್ದಿಯ ಹೆಸರಲ್ಲಿ ನಮ್ಮ ಹಳ್ಳಿಯ ಜೀವನಾಡಿಗಳು ಎನಿಸಿಕೊಂಡಿದ್ದ ಹಳ್ಳಗಳ ತುಂಬ ಪ್ಲಾಸ್ಟಿಕ್ ರಾಕ್ಷಸ ತುಂಬಿಕೊಂಡಿರುವುದು ದುರಂತ ಎನಿಸ್ತು. ಅಲ್ಲೊಂದು ಇಲ್ಲೊಂದು ಪಕ್ಷಿ ಧ್ವನಿ ಕೇಳಿ ಒಂಚೂರು ಸಮಾದಾನ ಆತು. ಹಂಗೆ ಮತ್ತ ಮನಿಕಡೆಗೆ ಹೆಜ್ಜಿ ಹಾಕ್ತ ನಡೆದೆ. ಮನಿಯೇನೋ ತಲುಪಿದೆ. ಆದ್ರ ಹಳ್ಳದಾಗ ಇರೋ ಪ್ಲಾಸ್ಟಿಕ್ ಮಾತ್ರ ಮನಸಿನಿಂದ ದೂರ ಹೋಗ್ಲೇ ಇಲ್ಲ.
ಆರ್.ಬಿ.ಗುರುಬಸವರಾಜ
ಹೊಳಗುಂದಿ