ದಾವಣಗೆರೆ (Davanagere): ಸುಪ್ರೀಂ ನ್ಯಾಯಾಲಯದ ಆದೇಶದ ಅನ್ವಯ ಒಳ ಮೀಸಲಾತಿ ಜಾರಿಯಾದ ಬಳಿಕ ಬ್ಯಾಖ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ (ಮಹಾತ್ಮ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಸಮಿತಿಯು ಸೋಮವಾರ ಜಿಲ್ಲಾಡಳಿತದ ಮುಂಭಾಗ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮುಖಾಂತರ ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಿತು.
ಒಳ ಮೀಸಲಾತಿ ಜಾರಿಯಾಗುವವರೆಗೂ ಯಾವುದೇ ಸರ್ಕಾರಿ ಹುದ್ದೆಗಳನ್ನು ನೇಮಕಾತಿ ಮಾಡುವುದಿಲ್ಲ ಎಂದಿದ್ದ ರಾಜ್ಯಸರ್ಕಾರದ ಸಚಿವ ಹೆಚ್.ಸಿ. ಮಹಾದೇವಪ್ಪ ಅವರನ್ನೊಳಗೊಂಡ ಸಚಿವ ಸಂಪುಟದ ಉಪ ಸಮಿತಿಯು ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳ ಮೇಲೆ ಒತ್ತಡ ತರುತ್ತಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ವಿವಿಧ ಇಲಾಖೆಗಳಲ್ಲಿರುವ 916 ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಎಚ್ಚರಿಕೆ ರೀತಿಯ ಸಂದೇಶವನ್ನು ಉಪ ಸಮಿತಿ ನೀಡಿದೆ. ನೇಮಕಾತಿ ಆದ ಪಕ್ಷದಲ್ಲಿ ಹಲವು ತಳಜಾತಿಗಳ ಪ್ರತಿಭಾವಂತ ವಿದ್ಯಾವಂತರಿಗೆ ಅನ್ಯಾಯವಾಗುತ್ತದೆ. ಆದ್ದರಿಂದ ಒಳ ಮೀಸಲಾತಿ ಜಾರಿಯಾದ ತರುವಾಯವೇ ಬ್ಯಾಕ್‌ಲಾಗ್ ಹುದ್ದೆ ಭರ್ತಿ ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ಜಿಲ್ಲಾ ಸಂಚಾಲಕ ರಾಘವೇಂದ್ರ ಡಿ. ಕಡೆಮನಿ, ಹೆಚ್. ಮಲ್ಲಿಕಾರ್ಜುನ ವಂದಾಲಿ, ಡಿ, ರುದ್ರೇಶ್, ಬಿ.ಆರ್. ಮಂಜಾನಾಯ್ಕ್, ಗುಮ್ಮನೂರು ಮಂಜುನಾಥ್, ಎಂ. ಶಿವಕುಮಾರ್, ನಾಗರಾಜ್, ಹೆಚ್. ಪ್ರಶಾಂತ್, ಕೃಷ್ಣ ಹಾಜರಿದ್ದರು.