ದಾವಣಗೆರೆ (Davanagere) : ಕೌಶಲ್ಯದ ಕೊರತೆಯಿಂದ ಉದ್ಯೋಗ ವಂಚಿತರಾಗುತ್ತಿರುವ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಎಸ್.ಎಸ್. ಕೇರ್ ಟ್ರಸ್ಟ್, ದಾವಣಗೆರೆ ವಿಶ್ವವಿದ್ಯಾನಿಲಯ ಹಾಗೂ ಕ್ಯೂ-ಸ್ಪೈಡರ್ಸ್ ತರಬೇತಿ ಸಂಸ್ಥೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ‘ಕೌಶಲ್ಯ’-ಉಚಿತ ಉದ್ಯೋಗಾಧಾರಿತ ಬೃಹತ್ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಸ್.ಎಸ್. ಕೇರ್ ಟ್ರಸ್ಟ್ನ ಅಜೀವ ಸದಸ್ಯೆ, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೌಶಲ್ಯ ತರಬೇತಿ ಶಿಬಿರಕ್ಕೆ ಮಾ.17ರಿಂದ 20ರವರೆಗೆ ನಗರದ ಅನುದಾನಿತ ಮತ್ತು ಅನುದಾನ ರಹಿತ ಆಯಾ ಕಾಲೇಜುಗಳಲ್ಲ್ಲಿಯೇ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ. ಆಯ್ಕೆಯಾದ ಅಂತಿಮ ವರ್ಷದ ಪದವಿ ಓದುತ್ತಿರುವ 1200 ವಿದ್ಯಾರ್ಥಿಗಳಿಗೆ 60ದಿನಗಳ ಕಾಲ ಉಚಿತವಾಗಿ ಇಲ್ಲಿನ ಬಿಐಇಟಿ ಕಾಲೇಜು ಮತ್ತು ಎಂಬಿಎ ಕಾಲೇಜುಗಳಲ್ಲಿ ಉದ್ಯೋಗಾಧಾರಿತ ತರಬೇತಿ ನೀಡಲಾಗುವುದು ಎಂದರು.
ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಮಾ.22ರಂದು ಬೆಳಿಗ್ಗೆ 10:30ಕ್ಕೆ ಬಿಐಇಟಿ ಕಾಲೇಜು ಆವರಣದಲ್ಲಿರುವ ಎಸ್.ಎಸ್. ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರದಲ್ಲಿ ನೆರವೇರಲಿದ್ದು, ಮಾ.26ರಿಂದ ತರಬೇತಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ದಾವಣಗೆರೆ ನಗರವೊಂದರಲ್ಲಿಯೇ 26 ಅನುದಾನಿತ ಮತ್ತು ಅನುದಾನ ರಹಿತ ಕಾಲೇಜುಗಳಿದ್ದು, ಪ್ರತಿವರ್ಷ ಪದವಿ ಮತ್ತು ಸ್ನಾತಕೋತ್ತರ ಪದವಿ ಮುಗಿಸಿಕೊಂಡು ಸುಮಾರು 10ಸಾವಿರ ವಿದ್ಯಾರ್ಥಿಗಳು ಹೊರಬರುತ್ತಾರೆ. ಆದರೆ, ಇವರಿಗೆ ಉದ್ಯೋಗಕ್ಕಾಗಿ ಕಂಪನಿಗಳು ನಡೆಸುವ ಸಂದರ್ಶನ, ವಿವಿಧ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗುವುದರಿಂದ ಉದ್ಯೋಗದಿಂದ ವಂಚಿತಗೊಳ್ಳುತ್ತಿದ್ದಾರೆ. ಹಾಗಾಗಿ, ಉದ್ಯೋಗಾಂಕ್ಷಿಗಳಿಗೆ ಮತ್ತು ಉದ್ಯೋಗಧಾತರಿಗೆ ಅಗತ್ಯವಿರುವುದು ಕೌಶಲ್ಯ ತರಬೇತಿಯೆಂದು ಮನಗೊಂಡು ನಾವು ಉದ್ಯೋಗಾಧಾರಿತ ತರಬೇತಿ ಶಿಬಿರ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಉದ್ಯೋಗಾಧಾರಿತ ತರಬೇತಿ ನೀಡಲು 70ಸಾವಿರಕ್ಕಿಂತ ಅಧಿಕ ಹಣ ತೆರಬೇಕಾಗುತ್ತದೆ. ಆದರೆ, ದಾವಣಗೆರೆ ನಗರದಲ್ಲಿ ಅತೀಹೆಚ್ಚು ಗ್ರಾಮೀಣ ಭಾಗದಿಂದ, ಬಡ ವಿದ್ಯಾರ್ಥಿಗಳೇ ಹೆಚ್ಚಾಗಿ ಬಂದು ಶಿಕ್ಷಣ ಪಡೆಯುತ್ತಿದ್ದಾರೆ. ಇವರಿಗೆ ಅಷ್ಟು ಶುಲ್ಕ ಭರಿಸುವುದು ಕಷ್ಟಕರವಾಗಲಿದೆ. ಆದ್ದರಿಂದ ಉಚಿತವಾಗಿ ಅವರಿಗೆ ಕೌಶಲ್ಯ ತರಬೇತಿ ನೀಡಬೇಕೆಂಬ ಉದ್ದೇಶದಿಂದ ಈ ಶಿಬಿರ ಹಮ್ಮಿಕೊಂಡಿದ್ದು, ಮುಂದಿನ ದಿನಗಳಲ್ಲಿ ಶಿಕ್ಷಕರಿಗೂ ಕೂಡ ಶಿಬಿರ ಆಯೋಜಿಶುವ ಉದ್ದೇಶವಿದೆ ಎಂದು ಮಾಹಿತಿ ನೀಡಿದರು.
ಕ್ಯೂ-ಸ್ಪೈಡರ್ಸ್ ತರಬೇತಿ ಸಂಸ್ಥೆಯ ಸತೀಶ್ ಮಾತನಾಡಿ, ನಮ್ಮ ಸಂಸ್ಥೆಯು ಕಳೆದ 17 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿಯವರೆಗೂ 2 ಲಕ್ಷಕ್ಕಿಂತ ಅಧಿಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದೆ. ನಮ್ಮ ಸಂಸ್ಥೆಯ ಸಿಎಸ್ಆರ್ ಅನುದಾನದ ಅಡಿಯಲ್ಲಿಯೇ ತರಬೇತಿ ನೀಡುತ್ತಿದ್ದೇವೆ ಎಂದರು.
Davanagere | ಕಂಪನಿ ನಾಟಕಗಳ ಕಲಾವಿದರಿಗೆ ಶಿಸ್ತಿನ ತರಬೇತಿ ಅಗತ್ಯವಿದೆ : ಪ್ರೊ.ಎಸ್.ಹಾಲಪ್ಪ
ದಾವಿವಿ ಕುಲಸಚಿವ ಶಶಿಧರ್, ಸಿಂಡಿಕೇಟ್ ಸದಸ್ಯ ಪ್ರಶಾಂತ್, ವಿರುಪಾಕ್ಷಿ, ವೀರೇಶ್ ಪತ್ರಿಕಾಗೋಷ್ಠಿಯಲ್ಲಿದ್ದರು.