ದಾವಣಗೆರೆ (Davanagere): ರಾಜ್ಯ ಮಟ್ಟದ ಯುವಜನೋತ್ಸವ ಅಂಗವಾಗಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಹಾಗೂ ಜನರಲ್ ತಿಮ್ಮಯ್ಯ ಜಲಸಾಹಸ ಅಕಾಡೆಮಿ ವತಿಯಿಂದ ಆಯೋಜಿಸಲಾದ ರಾಫ್ಟಿಂಗ್ ಹಾಗೂ ಕಾಯ್ಕಿಂಗ್ (ಹಾಯಿದೋಣಿ) ಕ್ರೀಡೆಗಳಿಗೆ ಉತ್ತಮ ಸ್ಪಂದನೆ ದೊರೆತ ಹಿನ್ನಲೆಯಲ್ಲಿ ಮಂಗಳವಾರ ಜಲಸಹಾಸ ಕ್ರೀಡೆಗಳನ್ನು ಮುಂದುವರೆಯಿಸಲಾಯಿತು.
ಕುಂದವಾಡ ಕೆರೆ ಬದಲಿಗೆ ಕೊಂಡಜ್ಜಿ ಕೆರೆಯಲ್ಲಿ ಜಲ ಸಾಹಸ ಕ್ರೀಡೆಗಳು ಜರುಗಿದವು. ಯಶಸ್ವಿಯಾಗಿ ಯುವಜನೋತ್ಸವ ಆಯೋಜಿಸಿದ ಸಂತಸದಲ್ಲಿದ್ದ ಜಿಲ್ಲಾಡಳಿತದ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಹಾಗೂ ಪತ್ರಕರ್ತರು ಜಲ ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಂಡು ಖುಷಿಪಟ್ಟರು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ, ಜಿ.ಪಂ.ಸಿಇಓ ಡಾ.ಸುರೇಶ್ ಬಿ.ಇಟ್ನಾಳ್ ಅವರು ಕೊಂಡಜ್ಜಿ ಕೆರೆಯಲ್ಲಿ ಕಾಯ್ಕಿಂಗ್ ದೋಣಿಯಲ್ಲಿ ಕೂತು ಹುಟ್ಟುಹಾಕಿದರು. ಇವರೊಂದಿಗೆ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಸಿಬ್ಬಂದಿ, ಪತ್ರಕರ್ತರು ತಮ್ಮ ಒತ್ತಡದ ಕಾರ್ಯಗಳ ನಡುವೆ ಜಲ ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಂಡು ಮನೋಲ್ಲಾಸಗೊಂಡರು.
ಸಿಂಗಲ್ ಹಾಗೂ ಡಬಲ್ ಸೀಟರ್ ಕಾಯ್ಕಿಂಗ್ ಬೋಟ್, ರಾಫ್ಟ್ ಜೊತೆಗೆ ಕೊಂಡಜ್ಜಿ ಕೆರೆಯಲ್ಲಿ ಮೋಟಾರ್ ಬೋಟ್ ಹಾಗೂ ಜಟ್ ಸಿಕ್ಕಿಂಗ್ (ವಾಟರ್ ಸ್ಕೂಟರ್) ಕ್ರೀಡೆಗಳನ್ನು ಸಹ ಆಯೋಜಿಸಲಾಗಿತ್ತು.
ಜಲಸಾಹಸ ಕ್ರೀಡಾ ತರಬೇತುದಾರರು ಲೈಫ್ ಜಾಕೇಟ್ ಬಳಕೆ , ಹಾಯಿದೋಣಿ ನಡೆಸುವ ಕೌಶಲ್ಯಗಳ ಕುರಿತು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು. ಸ್ಥಳದಲ್ಲಿ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.