ದಾವಣಗೆರೆ, ಸೆ. 1, (Davangere District) : ನಡಿಗೆ, ಯೋಗ ಮಾಡುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ, ಇದರೊಂದಿಗೆ ನಿತ್ಯ ನಡಿಗೆ, ಪಾದಯಾತ್ರೆ ಕೂಡಾ ಯೋಗದ ಒಂದು ಭಾಗವಾಗಿದೆ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
ನಗರದ ಚೌಕಿಪೇಟೆಯ ಶ್ರೀ ಬಕ್ಕೇಶ್ವರ ದೇವಸ್ಥಾನದಲ್ಲಿ ಭಾನುವಾರ ಮುಂಜಾನೆ ಕೊಟ್ಟೂರು ಶ್ರೀ ಗುರುಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್, ಸರ್ವ ಯೋಗ ಕೇಂದ್ರಗಳು, ಲಯನ್ಸ್ ಕ್ಲಬ್, ಜಿಲ್ಲಾ ಯೋಗ ಒಕ್ಕೂಟ ಆಶ್ರಯದಲ್ಲಿ ಹಮ್ಮಿಕೊಂಡ ಮಾಗಾನಹಳ್ಳಿ ಸಮೀಪದ ಕೋಡಿ ಕ್ಯಾಂಪ್ನ ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ಪಾದಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶ್ರೀಗಳು ಆಶೀರ್ವಚನ ನೀಡಿದರು.
ಪಾದ ಎಂದರೆ ಜ್ಞಾನ, ಕ್ರಿಯೆಗಳ ಸಂಗಮ. ಜ್ಞಾನ, ಕ್ರಿಯೆಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಜೀವನ ಯಾತ್ರೆಯನ್ನು ಯಶಸ್ವಿಗೊಳಿಸುವುದೇ ನಿಜವಾದ ಪಾದಯಾತ್ರೆಯಾಗಿದೆ. ನಮ್ಮ ಬದುಕಿಗೆ ಜ್ಞಾನದ ಜೊತೆಗೆ ಕ್ರಿಯೆಯೂ ಬೇಕು. ಇವೆರಡೂ ಇದ್ದರೆ ಜೀವನ ಪರಿಪೂರ್ಣವಾಗುತ್ತದೆ. ಆಗ ಆ ವ್ಯಕ್ತಿ ನಿಜವಾದ ಶರಣ, ಜ್ಞಾನಿ, ಸಂತನಾಗುತ್ತಾನೆ. ಈ ಪಾದಯಾತ್ರೆ ಮಾಡುವ ಮೂಲಕ ನಾವುಗಳು ಅಂತರಂಗದ ಯಾತ್ರೆ ಮಾಡಬೇಕು. ಅಂತರಂಗವನ್ನು ಶುದ್ದಿ ಮಾಡುವುದೇ ನಿಜವಾದ ಪಾದಯಾತ್ರೆ ಎಂದು ತಿಳಿಸಿದರು.
ಶ್ರಾವಣ ಮಾಸದ ಒಂದು ಭಾಗವಾಗಿ ಇಲ್ಲಿನ ಸಮೀಪದ ಮಾಗಾನಹಳ್ಳಿ ಬಳಿ ಇರುವ ಕೋಡಿ ಕ್ಯಾಂಪ್ನಲ್ಲಿರುವ ಶ್ರೀ ಕೊಟ್ಟೂರು ಬಸವೇಶ್ವರ ದೇವಸ್ಥಾನಕ್ಕೆ ಟ್ರಸ್ಟ್, ಯೋಗ ಕೇಂದ್ರದ ಸದ್ಭಕ್ತರು ಶ್ರಾವಣದ ಒಂದು ಭಾನುವಾರ ಪಾದಯಾತ್ರೆ ಹೋಗಬೇಕು ಎಂಬ ಸಂಕಲ್ಪ ಮಾಡಿದ್ದಾರೆ. ಇಂತಹ ಕಾರ್ಯ ಪ್ರತಿವರ್ಷವೂ ಸಹಾ ನಿರಂತರವಾಗಿ ನಡೆಯಲಿ ಎಂದು ನುಡಿದರು.
ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್ ಮಾತನಾಡಿ, ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ಪಾದಯಾತ್ರೆಗೆ ಇಂದು ಶ್ರೀಗಳು ಚಾಲನೆ ನೀಡಿದ್ದಾರೆ. ಶ್ರಾವಣ ಮಾಸದ ಒಂದು ಭಾನುವಾರ ಈ ಪಾದಯಾತ್ರೆ ಈ ಪಾದಯಾತ್ರೆ ಹಮ್ಮಿಕೊಂಡಿದ್ದು, ಈ ಪಾದಯಾತ್ರೆ ಪ್ರತಿವರ್ಷವೂ ಕೂಡಾ ನಿರಂತರವಾಗಿ ನಡೆಯಲಿ. ಯೋಗದ ಜೊತೆಗೆ ಪಾದಯಾತ್ರೆ ಇದ್ದರೆ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ. ನಮ್ಮ ಯೋಗ ಬಳಗ ಸದಾ ನಿಮ್ಮ ಜೊತೆ ಇರುತ್ತದೆ ಎಂದು ಹೇಳಿದರು.
Read also : Davangere Viraktamatha |ಇಷ್ಟಲಿಂಗ ಪೂಜೆಯಿಂದ ಮನೋವಿಕಾರ ದೂರ : ಬಸವಪ್ರಭು ಸ್ವಾಮೀಜಿ
ಶ್ರೀ ಗುರುಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್ ಅಧ್ಯಕ್ಷ ಕಣಕುಪ್ಪಿ ಮುರುಗೇಶಪ್ಪ, ಕಣಕುಪ್ಪಿ ಕರಿಬಸಪ್ಪ, ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಜಿ.ಉಳುವಯ್ಯ, ಉತ್ತಂಗಿ ಪ್ರಕಾಶ, ತೀರ್ಥರಾಜ ಹೋಲೂರು, ರಾಜು ಎಲ್.ಬದ್ದಿ, ಪರಶುರಾಮ, ನಾಗರಾಜ, ಮಾದೇಗೌಡರು, ಬಾದಾಮಿ ಜಯಣ್ಣ, ನಿರಂಜನ ಅಣಬೂರು ಮಠ, ಚಂದ್ರು ಸೇರಿದಂತೆ ಯೋಗ ಒಕ್ಕೂಟದ ಸದಸ್ಯರು, ಕೊಟ್ಟೂರೇಶ್ವರ ಸ್ವಾಮಿ ಭಕ್ತರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಮಾಧ್ಯಮ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಚನ್ನಬಸವ ಶೀಲವಂತ್ರನ್ನು ಸನ್ಮಾನಿಸಿದರು.