ದಾವಣಗೆರೆ :
ಮಹಿಳೆಯರನ್ನು ಶೋಷಿಸುತ್ತಿರುವ ಮೈಕ್ರೋ-ಫೈನಾನ್ಸ್ ಕಂಪನಿಗಳಿಗೆ ಸರಕಾರ ಕಡಿವಾಣ ಹಾಕುವವರೆಗೂ ಹೋರಾಟ ನಡೆಸುವುದಾಗಿ ಮೈಕ್ರೋ-ಫೈನಾನ್ಸ್ಅಕ್ರಮ ವಿರೋಧಿ ಮಹಿಳಾ ವೇದಿಕೆ ಪ್ರಕಟಣೆಯಲ್ಲಿ ಹೇಳಿದೆ.
ರಾಜ್ಯಾದ್ಯಂತ ಮಹಿಳಾ ಸಂಘಗಳ ಜೊತೆ ನಿರಂತರ ಸಂವಾದದಲ್ಲಿ ತೊಡಗಿ, ಮೈಕ್ರೋ-ಫೈನಾನ್ಸ್ ಸಂತ್ರಸ್ತ ಮಹಿಳೆಯರ ಸತ್ಯ ಕತೆಗಳನ್ನು ಸಂಗ್ರಹಿಸುತ್ತಿದ್ದೇವೆ. ಮೈಕ್ರೋ-ಫೈನಾನ್ಸ್ ಮೇಲೆ ಸೂಕ್ತ ನಿಯವಾಳಿಗಳನ್ನು ತರುವಲ್ಲಿ ಸರ್ಕಾರದ ಮೇಲೆ ಒತ್ತಡ ತರುವ ದಿಕ್ಕಿನಲ್ಲಿ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯಲಿದೆ ಎಂದು ವೇದಿಕೆಯ ಜಬೀನಾ ಖಾನಂ, ಕರಿಬಸಪ್ಪ ಎಂ ಹೇಳಿದ್ದಾರೆ.
ಕಟ್ಟುನಿಟ್ಟಿನ ನಿಯಮಾವಳಿ ಜಾರಿಗೆ ತನ್ನಿ
ಯಾವುದೇ ಕಾನೂನು-ಕಟ್ಟಳೆಗೆ ಒಳಪಡದ ರೀತಿಯಲ್ಲಿ ಅತೀ ಚಾಣಾಕ್ಷತೆಯಿಂದ ನುಣುಚಿಕೊಳ್ಳುತ್ತಾ ಮಹಿಳೆಯರನ್ನು ಈ ಪರಿಯಾಗಿ ಶೋಷಿಸುತ್ತಿರುವ ಮೈಕ್ರೋ-ಫೈನಾನ್ಸ್ ಸಂಘಗಳ ಅಕ್ರಮಗಳ ಬಗ್ಗೆ ಮಾಧ್ಯಮಗಳಾಗಲೀ, ಸರಕಾರವಾಗಲೀ, ಬ್ಯಾಂಕುಗಳಾಗಲೀ ಸೊಲ್ಲೆತ್ತದಿರುವುದು ಪರಮಾಶ್ಚರ್ಯ. ಸರಕಾರ ಇವುಗಳ ಮೇಲೆ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಹಾಕದಿರುವುದು, ಬ್ಯಾಂಕುಗಳು ಕಡಿಮೆ ಬಡ್ಡಿದರದಲ್ಲಿ ಸರಳವಾಗಿ ಸಾಲಸೌಲಭ್ಯ ಮಾಡಿಕೊಡದಿರುವುದೇ ಈ ಖಾಸಗೀ ಸಾಲದ ಸಂಘಗಳ ಇಷ್ಟು ದೊಡ್ಡ ಪ್ರಮಾಣದ ಶೋಷಣೆಗೆ ಕಾರಣವಾಗಿದೆ.
ಕಿರುಸಾಲಬೇಕೆನ್ನುವ ಜನರೂ ಕೂಡ ಸಂಪೂರ್ಣ ಅಸಹಾಯಕರಾಗಿದ್ದು ಅದರಿಂದ ಸ್ವತಃ ತಮಗಾಗುತ್ತಿರುವ ಅನ್ಯಾಯ, ಶೋಷಣೆಗೆ ಕುರುಡಾಗಿದ್ದಾರೆ. ಇಂತಹ ಗಂಭೀರ ಸನ್ನಿವೇಶದಲ್ಲಿ ಮಹಿಳಾಸಂಘಟನೆಗಳು ಸಮಾಜವನ್ನೆಚ್ಚರಿಸಲು ‘ಮೈಕ್ರೋ-ಫೈನಾನ್ಸ್ ಅಕ್ರಮ ವಿರೋಧೀ ಮಹಿಳಾ ವೇದಿಕೆ-ಕರ್ನಾಟಕ’ ದಡಿ ಒಗ್ಗೂಡಿದ್ದೇವೆ ಎಂದು ಹೇಳಿದ್ದಾರೆ.
ಮಹಿಳೆಯರು ಮರ್ಯಾದೆಗೆ ಕೊಡುವ ಬೆಲೆಯನ್ನು ಬಂಡವಾಳ ಮಾಡಿಕೊಂಡ ಮೈಕ್ರೋಫೈನಾನ್ಸ್ ಕಂಪನಿಗಳು ಹಣ ಮರುಪಾವತಿಗಾಗಿ ಅವರನ್ನು ಬಹಿರಂಗವಾಗಿ ಅವಮಾನಿಸಿ ಮರ್ಯಾದೆ ಕಳೆಯುವ ಮಾಡೆಲ್ ಅನ್ನು ಅಳವಡಿಸಿಕೊಂಡವು. ಸುಲಭವಾಗಿ ಹೆಚ್ಚಿನ ಷರತ್ತುಗಳಿಲ್ಲದೆ ಸಾಲ ಕೊಡುತ್ತೇವೆಂದು ಬಂದ ಕಂಪನಿಗಳು, ಮಹಿಳೆಗೆ ಬೇಡದಿದ್ದರೂ ಒತ್ತಾಯದಿಂದ ಅವಳ ಮೇಲೆ ಸಾಲವನ್ನು ಹೇರತೊಡಗಿದವು.
ಅಣಬೆಗಳಂತೆ ಹುಟ್ಟಿಕೊಂಡ ಮೈಕ್ರೋ-ಫೈನಾನ್ಸ್ ಸಂಘಗಳು ಮಹಿಳೆಯರನ್ನು ಅನವಶ್ಯಕ ವಸ್ತುಗಳ ಮೋಹಕ್ಕೆ ಬೀಳಿಸಿ ಹೆಚ್ಚು-ಹೆಚ್ಚು ಸಾಲ ತೆಗೆದುಕೊಳ್ಳವಂತೆ ಪೀಡಿಸತೊಡಗಿದವು. ಹತ್ತಾರು ಸಾಲಗಳ ಹಣವು ಕೈಯಲ್ಲಿ ಓಡಾಡುವಂತೆ ಮಾಡುತ್ತಾ, ಅವರನ್ನು ಅದಕ್ಕೆ ದಾಸರನ್ನಾಗಿಸುತ್ತಾ ಒಂದು ನೇಣಿನ ಕುಣಿಕೆಯನ್ನು ಮಹಿಳೆಯರ ಕೊರಳಸುತ್ತ ಹೆಣೆದು ಬಿಟ್ಟಿವೆ. ಇಂದು ಹೆಚ್ಚಿನ ಮಹಿಳೆಯರು ಅದರಿಂದ ಹೊರಬರುವ ದಾರಿಯೇ ಕಾಣದೆ ದಿಕ್ಕೆಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.