Kannada News | Dinamaana.com | 23-08-2024
ಸಾಮಾನ್ಯ ಬಡ ರೈತ ಕುಟುಂಬದಲ್ಲಿ ಹುಟ್ಟು…. (LG Havanur)
ಅಖಂಡ ಧಾರವಾಡ ಜಿಲ್ಲೆಯ ರಾಣೆಬೆನ್ನೂರಿನ ಒಂದು ಸಾಮಾನ್ಯ ಬಡ ರೈತ ಕುಟುಂಬದಲ್ಲಿ 25 ನೇ ಮಾರ್ಚ್ 1925 ರಲ್ಲಿ ಜನಿಸಿದ ಲಕ್ಷ್ಮಣ ಜಿ.ಹಾವನೂರು,ಇವರ ತಂದೆ ಗೂಳಪ್ಪ ತಾಯಿ ದುರ್ಗಮ್ಮ. ಹಿಂದುಳಿದ ಬೇಡ ಜನಾಂಗದ ಈ ಕುಟುಂಬ ರಾಣೆಬೆನ್ನೂರಿನ ಕುರುಬಗೇರಿಯಲ್ಲಿ ವಾಸಿಸುತ್ತಿದ್ದರು.
ಬೇಡರು ಮತ್ತು ಕುರುಬ ಸಮುದಾಯಗಳ ನಡುವೆ ಅವಿನಾಭಾವ ಸಂಬಂಧವಿತ್ತು.ಈ ಎರಡೂ ರೈತಾಪಿ ಸಮುದಾಯಗಳಿಗೆ ಹೊಲ ಮತ್ತು ಪಶುಸಂಗೋಪನೆಯೇ ಆದಾಯದ ಮೂಲವಾಗಿತ್ತು. ಶ್ರಮಿಕರೂ ಮತ್ತು ದೈಹಿಕವಾಗಿ ಗಟ್ಟಿಗರೂ ಆಗಿದ್ದ ಈ ಸಮುದಾಯಗಳು ಕುಸ್ತಿಯಂತಹ ದೇಸಿ ಕ್ರೀಡೆಗಳಲ್ಲಿ ಆಸಕ್ತಿಯನ್ನು ಹೊಂದಿದ್ದವು.
ದೇಹ ಹುರಿಗಟ್ಟಿಸುವ ಕನಸು… (LG Havanur)
ಬೇಡರು ಮತ್ತು ಕುರುಬರು ಮೂಲದಲ್ಲಿ ಬಂಧುಗಳು ಆಗಿದ್ದರೋ ಏನೋ….ಈ ಕುರುಬಗೇರಿಯಲ್ಲಿ ಮಾತ್ರ ಬೇಡರು-ಕುರುಬರು, ಒಬ್ಬರಿಗೊಬ್ಬರು ಮಾವ -ಅಳಿಯ; ಅಣ್ಣ ತಮ್ಮಂದಿರಂತಹ ಸಂಬಂಧಗಳನ್ನು ಹೊಂದಿದ್ದರು. ಯುವಕರಿಗೋಸ್ಕರವೇ ಕೇರಿಯಲ್ಲಿ ಗರಡಿ ಮನೆಗಳಿದ್ದವು. ಇಂತಹ ಬೇಡ ಸಮುದಾಯದಿಂದ ಬಂದ ಕುಡಿ ಲಕ್ಷ್ಮಣನಿಗೆ ಕುರುಬಗೇರಿಯಲ್ಲಿದ್ದ ಗರಡಿ ಮನೆಯಲ್ಲಿ ದೇಹ ಹುರಿಗಟ್ಟಿಸುತ್ತಿದ್ದ ಯುವಕರ ಹಾಗೆ ತಾನೂ ಕೂಡ ‘ಸಾಮು’ಮಾಡಿ ಗಟ್ಟಿಮುಟ್ಟಾದ ದೇಹ ಹೊಂದುವ ಆಸೆಯಾಯಿತು.
ಅವರ ಬಾಲ್ಯವು ಕಡುಬಡತನದಲ್ಲಿ ಆರಂಭವಾಗಿದ್ದರೂ ಹುಡುಗರ ಆಟೋಟಗಳಿಗೆ, ಜನರ ವಾತ್ಸಲ್ಯಗಳಿಗೆ ಏನೇನೂ ಕೊರತೆಯಾಗಲಿಲ್ಲ. ಅನಕ್ಷರಸ್ಥ ಕೌಟುಂಬಿಕ ಹಿನ್ನೆಲೆ, ಸಾಮಾಜಿಕವಾಗಿ ಕೆಳಸ್ತರದ ಜನಾಂಗದಿಂದ ಬಂದ ಹುಡುಗನೊಬ್ಬನು ಅನುಭವಿಸುವ ಎಲ್ಲಾ ನೋವುಗಳನ್ನೂ ಹಾವನೂರರು ಅನುಭವಿಸಿದರು.
ಎಷ್ಟೇ ಓದಿ ವಿದ್ಯಾವಂತರಾದರೂ ಸಾಮಾಜಿಕ ಸ್ಥಾನಮಾನಗಳೆಲ್ಲಾ ಉಳ್ಳವರು ಮತ್ತು ಮೇಲ್ವರ್ಗಗಳು ಪಾಲಾಗುತ್ತಿರುವು ದನ್ನು ಸೂಕ್ಷ್ಮವಾಗಿ ಗ್ರಹಿಸಿದರು. ಹಿಂದುಳಿದ ವರ್ಗಗಳು, ಶೆಡ್ಯೂಲ್ಡ್ ಕ್ಯಾಸ್ಟ್ ಮತ್ತು ವರ್ಗಗಳು ಮುಂತಾದ ಅಂಚಿನ ಸಮುದಾಯಗಳಿಗೆ ಆಗುತ್ತಿರುವ ಅನ್ಯಾಯವನ್ನು ಕಂಡು ಮರುಗಿದರು.
ಕಟ್ಟುಮಸ್ತಾದ ದೇಹ,ಪೊದೆ ಮೀಸೆಯನ್ನು ಬೇಕೆಂದೇ ಬಿಟ್ಟಿದ್ದರೇನೋ ಎಂದೆನಿಸುತ್ತದೆ. ಬಾಲ್ಯದಿಂದಲೇ ಆರಂಭವಾದ ಕುಸ್ತಿ ಆಡುವ ಅಭ್ಯಾಸವು ಅವರು ಪದವಿ ಮುಗಿಸಿ,ಎಲ್.ಎಲ್.ಬಿ.ಓದಿ ಲಾಯರ್ ಆಗಿ ,ಸುತ್ತಲಿನ ಹಳ್ಳಿಗಳಲ್ಲಿ ದಪ್ಪ ಪೊದೆ ಮೀಸೆಯ ಸಧೃಡ ಯುವಕ “ಮರ್ಡರ್ ಕೇಸ್ ವಕೀಲರು ” ಎಂದು ಪ್ರಖ್ಯಾತಿ ಹೊಂದುವ ವರೆಗೂ ಮುಂದುವರೆದಿತ್ತು.
ಮರ್ಡರ್ ಕೇಸ್ ವಕೀಲರು.. (LG Havanur)
ಬ್ಯಾಡರ ಹುಡುಗನೊಬ್ಬ ಕಾನೂನು ವಿದ್ಯಾಭ್ಯಾಸ ಮಾಡಿ ಲಾಯರ್ ಆಗುವುದು ಎಂದರೆ ಸಾಮಾನ್ಯದ ಮಾತೆ? ಆ ಕಾಲಕ್ಕೆ ಅದು ಅಸಾಮಾನ್ಯವಾದ ವಿಷಯವಾಗಿತ್ತು. ಕಟ್ಟುಮಸ್ತಾದ ಹುರಿಗಟ್ಟಿದ ದೇಹ,ಅಷ್ಟೇ ಸ್ವಾಭಿಮಾನಿಯಾಗಿದ್ದ ಯುವ ವಕೀಲ ಲಕ್ಷ್ಮಣರಿಗೆ ವೃತ್ತಿ ಜೀವನದ ಆರಂಭದಲ್ಲಿ ಬಾಬಾಸಾಹೇಬ ಅಂಬೇಡ್ಕರರಿಗೆ ಆದಂತೆ ಅನೇಕ ಅವಮಾನಗಳು ಆದವು.
‘ಗೆಲ್ಲುವ ವಕೀಲರು’ಎಂದೇ ಪ್ರಸಿದ್ಧಿ (LG Havanur)
ಅವುಗಳನ್ನು ಮೆಟ್ಟಿ ನಿಂತು ವಕೀಲಿಕಿಯ ಪಟ್ಟುಗಳನ್ನು ಗುರು ದ್ರೋಣರಿಲ್ಲದೆ ಕಲಿತ ಏಕಲವ್ಯನಂತೆ ಏಕಾಂಗಿಯಾಗಿ ತನ್ನ ಸ್ವಂತ ಪರಿಶ್ರಮದಿಂದಲೇ ಕಲಿತರು.ಹಾಗೆಂದು ಹೆಬ್ಬೆರಳನ್ನು ಯಾರಿಗೂ ನೀಡದ ಮಹಾ ಸ್ವಾಭಿಮಾನಿಯೂ ಆಗಿದ್ದರು. ದಿನೇ ದಿನೇ ರಾಣೆಬೆನ್ನೂರು, ಹಾವೇರಿಯ ಮುನ್ಸಿಪ್ ನ್ಯಾಯಾಲಯಗಳಲ್ಲಿ ವಾದ ಮಾಡುತ್ತಾ, ಧಾರವಾಡದ ಸೆಷನ್ಸ್ ಕೋರ್ಟಿನಲ್ಲಿ ವಾದ ಮಾಡಿ ‘ಗೆಲ್ಲುವ ವಕೀಲರು’ಎಂದೇ ಪ್ರಸಿದ್ಧಿಯಾದರು.
ಇದು ಅಷ್ಟು ಸುಲಭದ ಹಾದಿಯೇನೂ ಆಗಿರಲಿಲ್ಲ.ಯಾಕೆಂದರೆ ಆ ದಿನಮಾನಗಳಲ್ಲಿ ವಕೀಲರೆಂದರೆ ಅದೊಂದು ಮುಂದುವರೆದ ಲೆಗಸಿಯಂತಾಗಿತ್ತು.ಅಜ್ಜ,ಅಪ್ಪ ವಕೀಲನ ಆಗಿದ್ದರೆ ಮೊಮ್ಮಗನೂ ಕೂಡ ವಕೀಲನಾಗುವುದು ಬಹು ಸುಲಭದ ಮಾತಾಗಿತ್ತು.ಅದರಲ್ಲೂ ಕೆಳಸ್ತರದ ಸಮುದಾಯದವರಿಗಂತೂ ಗಾಡ್ ಫಾದರ್ ಗಳಿಲ್ಲದೆ ಪರದೇಸಿಗಳಂತೆ ಕಾಣುತ್ತಿದ್ದರು.
ವೃತ್ತಿಯಲ್ಲೂ ಅಸಮಾನತೆಯ, ಮೇಲ್ವರ್ಗಗಳ ಅಸಹನೆಯ ಬಿಸಿಯನ್ನು ಅನುಭವಿಸಬೇಕಾಯಿತು.ಹಾಗಾಗಿ,ಸ್ವಲ್ಪ ಕಾಲ ವಕೀಲಿಕಿಯಿಂದ ಅವರು ಅಷ್ಟೇನೂ ಸಂಪಾದಿಸಲು ಸಾಧ್ಯವಾಗಲಿಲ್ಲ.ಅವರ ಹತ್ತಿರ ಬರುತ್ತಿದ್ದ ಕ್ಲೈಂಟ್ ಗಳಲ್ಲಿ ಬಹುತೇಕರು ಬಡವರೇ ಆಗಿರುತ್ತಿದ್ದರು.ಎಷ್ಟೋ ಜನರು ತಮಗಾದ ಅನ್ಯಾಯವನ್ನು ಹೇಳಿಕೊಳ್ಳಲು ಅದೆಷ್ಟೋ ಮೈಲುಗಳ ದೂರದ ಹಳ್ಳಿಗಳಿಂದ ಬರಿಗಾಲಿನಲ್ಲಿ ಬಂದವರಾಗಿರುತ್ತಿದ್ದರು.ಅವರನ್ನು ನೋಡಿದಾಗಲೆಲ್ಲ ಹಾವನೂರರಿಗೆ ತನ್ನ ಅಪ್ಪನ ನೆನಪಾಗುತ್ತಿತ್ತು.
ಹೀಗೆ ಬಡವರು,ನಿರ್ಗತಿಕರಿಗೆ ಆಶಾಕಿರಣದಂತೆ ಗೋಚರಿಸಿದ ವ್ಯಕ್ತಿ,ಸುತ್ತಲಿನ ಹಳ್ಳಿಗಳಲ್ಲಿ ದಪ್ಪ ಪೊದೆ ಮೀಸೆಯ ಸಧೃಡ ಯುವಕ “ಮರ್ಡರ್ ಕೇಸ್ ವಕೀಲರು ” ಎಂದು ಪ್ರಖ್ಯಾತಿ ಹೊಂದುವ ವರೆಗೂ ಮುಂದುವರೆದಿತ್ತು.
“ಓ..ಮಾವಾಡು ಎನ್ನುವ ಅಭಿಮಾನ..(LG Havanur)
ತುಂಗಭದ್ರೆಯ ಜಾಡಿನ ಜೊತೆಯಲ್ಲಿಯೇ ನಡೆದಂತೆ ಇರುವ ಹಳ್ಳಿಗಳ ಜನರು,ಇವರ ಕಕ್ಷಿದಾರರಾದರು.ಬ್ಯಾಡರ ಜನಾಂಗವೇ ಹೆಚ್ಚಾಗಿ ಇರುವ ಬಳ್ಳಾರಿ ಸೀಮೆಯಲ್ಲೂ ಹಾವನೂರು ವಕೀಲರೆಂದರೆ “ಓ..ಮಾವಾಡು”(ಓ….ನಮ್ಮೋನು)ಎಂಬ ಅಭಿಮಾನ,ಪ್ರೀತಿಗೆ ಪಾತ್ರರಾದರು.
ಸಾಮಾಜಿಕ ನ್ಯಾಯಕ್ಕಾಗಿ …..(LG Havanur)
ಬಸ್ ಸಂಚಾರ ವಿರಳವಾಗಿದ್ದ ಆ ದಿನಗಳಲ್ಲಿ ದೂರದ ಧಾರವಾಡದ ಸೆಷನ್ಸ್ ನ್ಯಾಯಾಲಯಕ್ಕೆ ಹೋಗಲು ಬೆಳ್ಳಂಬೆಳಿಗ್ಗೆ ರಾಣೆಬೆನ್ನೂರಿನ ರೈಲ್ವೆ ಸ್ಟೇಷನ್ ನಲ್ಲಿ ರೈಲಿಗಾಗಿ ಕಾಯುತ್ತಿದ್ದರು.ಹಲವು ಮೇಲ್ವರ್ಗಗಳ ಹಿರಿಯ ವಕೀಲರ ಅಸಡ್ಡೆಗಳ ನಡುವೆಯೂ ಒಂಟಿ ಸಲಗದಂತೆ ವೃತ್ತಿಯಲ್ಲಿಯೂ ಹೆಸರು ಸಂಪಾದಿಸುವುದು ಅಷ್ಟು ಸುಲಭದ ಸಾಧನೆಯೇನೂ ಆಗಿರಲಿಲ್ಲ. ಮೇಲ್ವರ್ಗಗಳ ಅಸೂಯೆಯು ವೃತ್ತಿ ಬದುಕಿನುದ್ದಕ್ಕೂ ಕಾಡಿತು.ತನ್ನಂತಹ ವಿದ್ಯಾವಂತನಿಗೇ ಈ ರೀತಿಯಾದರೆ ಇನ್ನು ಹಿಂದುಳಿದ ತನ್ನ ಜನಾಂಗದ ಜನರ ಸ್ಥಿತಿಗತಿಯೇನು ? ಎಂದು ತೀವ್ರ ಚಿಂತೆಯಿಂದ ಅವರು ಸಾಮಾಜಿಕ ನ್ಯಾಯಕ್ಕಾಗಿ ಅಂದಿನಿಂದಲೇ ತಮ್ಮನ್ನು ತೊಡಗಿಸಿಕೊಂಡರು.
ಕ್ರಮೇಣ ಕಾನೂನಿನ ಹಿಡಿತವನ್ನು ಸಾಧಿಸಿದ ಹಾವನೂರರು,ರಾಜಧಾನಿ ಬೆಂಗಳೂರಿನತ್ತ ಮುಖ ಮಾಡಿದರು. ಹೈಕೋರ್ಟಿನಲ್ಲಿ ನ್ಯಾಯವಾದಿಯಾಗಿ ಸಮರ್ಥವಾಗಿ ಬದ್ಧತೆಯಿಂದ ಪ್ರಕರಣಗಳನ್ನು ಗೆದ್ದರು.ಇವರ ಕಾನೂನಿನ ವಿದ್ವತ್ತನ್ನು ಪರಿಗಣಿಸಿ,ಹೈಕೋರ್ಟಿನ ನ್ಯಾಯಮೂರ್ತಿ ಹುದ್ದೆಗೆ ಸರ್ಕಾರ ಮುಂದಾದಾಗ,ಅದನ್ನು ನಯವಾಗಿಯೇ ಹಾವನೂರರು ತಿರಸ್ಕರಿಸಿದರು. ತಾನೊಬ್ಬ ನ್ಯಾಯಾಧೀಶನಾಗಿ ಕುಳಿತರೆ,ನನ್ನ ವರ್ಗದ ಜನಗಳಿಗೆ ಬಹಿರಂಗವಾಗಿ ಹೋರಾಟ ಮಾಡಲು ಸಾಧ್ಯವಿಲ್ಲ ಎಂದರಿತು ಸಾಮಾಜಿಕ ಬದ್ಧತೆ ಮೆರೆದರು.ಇದು ತಳಸಮುದಾಯಗಳ ಬಗ್ಗೆ ಹಾವನೂರರಿಗಿದ್ದ ಕಳಕಳಿ.
ಕಾನೂನು, ಸಮಾಜ ಕಲ್ಯಾಣ ಸಚಿವರಾಗಿ ……..(LG Havanur)
1972 ರಲ್ಲಿ ರಾಜ್ಯದಲ್ಲಿ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದರು. ಸದಾ ಸಾಮಾಜಿಕ ನ್ಯಾಯದ ಧ್ಯಾನದಲ್ಲಿ,ಸಮಾಜದ ಒಳಿತಿಗಾಗಿ ದುಡಿಯುತ್ತಿದ್ದ ದೇವರಾಜ ಅರಸು ,ನಾಡು ಕಂಡ ಮುತ್ಸದ್ದಿ.ಕರುನಾಡಿನಲ್ಲಿ ಜನರ ಬದುಕನ್ನು ಎತ್ತರಕ್ಕೆ ಏರಿಸಿದ ಅರಸು, ಕೀರ್ತಿಯ ಉತ್ತುಂಗಕ್ಕೇರಲು ಸಂಪುಟದಲ್ಲಿ ಕಾನೂನು, ಸಮಾಜ ಕಲ್ಯಾಣ ಗಳಂತಹ ಮಹತ್ವದ ಖಾತೆಗಳಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಲು ಅವಕಾಶವನ್ನು ಒದಗಿಸಿದರು.
ಈ ಸಚಿವ ಸಂಪುಟದಲ್ಲಿ ಹಾವನೂರರ ಶ್ರಮ ಅಪಾರವಾಗಿತ್ತು.ಕರ್ನಾಟಕದ ಶೇ. 60ಕ್ಕೂ ಹೆಚ್ಚಿರುವ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ಎಲ್.ಜಿ.ಹಾವನೂರು ಅವರನ್ನು ನೇಮಿಸಿದರು.
ಅದುವರೆಗೂ ಕೇವಲ ಸಾಮಾನ್ಯ ವಕೀಲರಾಗಿ ತೆರೆಮರೆಯಲ್ಲಿ ಇದ್ದ ಹಾವನೂರು ಯಾರಿಗೂ ಅಷ್ಟಾಗಿ ಪರಿಚಯವಿರಲಿಲ್ಲ. ಪರಿಚಯವಾಗಲು ಅವರ ಬೆನ್ನು ಹಿಂದೆ ಜಾತಿ ಇರಲಿಲ್ಲ.ಅದರಿಂದಾಗಿ ಅವರು ಮೀಡಿಯಾಗಳಿಂದಾಗಿ ದೂರವೇ ಇದ್ದರು. ಅಂದು ಅರಸು-ಹಾವನೂರು ಜೋಡಿ ಮಾಡಿದ ಮೋಡಿ ಯಿಂದಾಗಿ ಇಂದು,ತಳಸಮುದಾಯಗಳಿಗೆ ಧ್ವನಿ ಬರಲು ಸಾಧ್ಯವಾಗಿದೆ.
ಆ ಕಾಲಕ್ಕೆ ರಾಜಕೀಯವಾಗಿ ಸಾಮಾಜಿಕ ನ್ಯಾಯ ಪರಿಪಾಲನೆ ಮಾಡಿದ ಮೊಟ್ಟ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೂ ಅರಸು ಪಾತ್ರರಾದರು. ಈ ಜೋಡಿಯಿಂದಾಗಿಯೇ ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳಲ್ಲಿ ಜಾಗೃತಿ ಮೂಡಿಸಿದ್ದಾರೆ ಫಲವಾಗಿಯೇ ವೀರಪ್ಪ ಮೊಯಿಲಿ, ಧರಂಸಿಂಗ್, ಮನೋಹರ ತಹಶಿಲ್ದಾರ್, ಜ್ಞಾನ ದೇವ ದೊಡ್ಡಮೇಟಿ, ದೇಸಾಯಿ, ಹೆಗ್ಗಪ್ಪ ಲಮಾಣಿ,ತಳವಾರ ಸೋಮಪ್ಪ, ಅಜೀಜ್ ಸೇಠ್, ಮುಂತಾದ ಹಿಂದುಳಿದ,ಅಲ್ಪಸಂಖ್ಯಾತ ಯುವ ಪೀಳಿಗೆ ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗಿರುವ ಕತೆ ಮಾಡಿತು.
ಅಷ್ಟೇ ಅಲ್ಲದೆ,ಇಪ್ಪತ್ತೆಂಟು -ಮೂವತ್ತು ವರುಷಗಳ ವಯೋಮಾನದ ಮೊಯಿಲಿಯಂತವರು ಸಂಪುಟ ದರ್ಜೆಯ ಸಚಿವರ ಆದದ್ದು ಇತಿಹಾಸ. ನಂತರದ ದಿನಗಳಲ್ಲಿ ತೀರಾ ಕಡಿಮೆ ಜನರಿರುವ ಜನಾಂಗಗಳ ಮೊಯಿಲಿ,ಧರಂಸಿಂಗ್ ಅಂಥವರು ಈ ರಾಜ್ಯದ ಮುಖ್ಯಮಂತ್ರಿಗಳಾಗಿದ್ದು ಸಹ ಪ್ರಜಾಪ್ರಭುತ್ವದ ಸೌಂದರ್ಯವನ್ನು ಹೆಚ್ಚಿಸಿದ್ದು ಸುಳ್ಳಲ್ಲ.
Read also : ಸಾಮಾಜಿಕ ನ್ಯಾಯದ ಸಾಕ್ಷಿ ಪ್ರಜ್ಞೆ ಎಲ್.ಜಿ.ಹಾವನೂರು
ಬಿ.ಶ್ರೀನಿವಾಸ