Kannada News | Dinamaana.com | 30 -08-2024
1976 ರಲ್ಲಿ ಮಂಡಲ್ ಆಯೋಗದ ಅಧ್ಯಕ್ಷರಾಗಿದ್ದ ಬಿ.ಪಿ.ಮಂಡಲ್ ಬೆಂಗಳೂರಿಗೆ ಬಂದಿದ್ದರು.ಆ ಹೊತ್ತಿಗೆ ಕರ್ನಾಟಕದ ಹಿಂದುಳಿದ ವರ್ಗಗಳ ಹಾವನೂರು ವರದಿ ಜಾರಿಯಾಗಿತ್ತು.ಎಲ್.ಜಿ.ಹಾವನೂರು ಸಮಾಜ ಕಲ್ಯಾಣ ಮತ್ತು ಕಾನೂನು ಸಚಿವರಾಗಿದ್ದರು.ಮಂಡಲ್ ಅವರಿಗೆ ಬೆಂಗಳೂರಿನ ಟೌನ್ ಹಾಲ್ ನಲ್ಲಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಸನ್ಮಾನ ಸ್ವೀಕರಿಸಿ ಬಿ.ಪಿ.ಮಂಡಲ್ ಹೇಳಿದ್ದೇನು ಗೊತ್ತೆ? “ನಾನು ಮಾಡಿದ್ದು ಏನೂ ಅಲ್ಲ,ಮಂಡಲ್ ಆಯೋಗದ ವರದಿಗೆ ಮುಖ್ಯ ಸೈದ್ಧಾಂತಿಕ ಸ್ಪೂರ್ತಿ ಹಾವನೂರು ವರದಿಯೇ, ಮಂಡಲ್ ವರದಿ ಎಂದರೆ ಕರ್ನಾಟಕದ ಹಾವನೂರು ವರದಿಯೇ ಆಲ್ ಇಂಡಿಯಾ ಎಡಿಷನ್ ಅಷ್ಟೇ”ಎಂದರು.
ಹಾವನೂರ್ ಅವರು ಹಿಂದುಳಿದ ವರ್ಗಗಳ,ಅಲ್ಪಸಂಖ್ಯಾತ ಸಮುದಾಯಗಳ ಹಿಂದುಳಿದಿರುವಿಕೆಯ ಕಾರಣಗಳನ್ನು ಬಹು ವಿಶ್ಲೇಷಣಾತ್ಮಕ ಆಗಿ,ವೈಜ್ಞಾನಿಕವಾಗಿ ,ಆಳವಾಗಿಧ್ಯಯನ ಸಂಶೋಧನೆಯನ್ನನುಸರಿಸಿ ಯಾವ ತತ್ವಗಳ ಆಧಾರದಲ್ಲಿ ಸಾಮಾಜಿಕ ನ್ಯಾಯದ ಬಗೆಗೆ ಹೇಳಿದ್ದರೋ ತಾವೂ ಕೂಡ ಅದನ್ನೇ ಅನುಸರಿಸಿದ್ದೇನೆ ಎಂದು ಮಂಡಲ್ ಹೇಳಿದರು.
ಬಿ.ಪಿ.ಮಂಡಲ್ ವರದಿ ಸಿದ್ಧಪಡಿಸಿದಾಗ ಇಡೀ ಭಾರತದ ಆರ್ಥಿಕ,ಶೈಕ್ಷಣಿಕ,ಸಾಮಾಜಿಕ ಸ್ಥಿತಿಗತಿಗಳ ವಿಶ್ಲೇಷಣೆ ಮಾಡಲು ಅಗತ್ಯ ಸಿಬ್ಬಂದಿ ಇರಲಿಲ್ಲ.ಆದರೂ ಆವತ್ತಿನ ಜನತಾ ಸರ್ಕಾರದವರು ಅರಸು-ಹಾವನೂರು ತಂದೆ ಸಾಮಾಜಿಕ ನ್ಯಾಯ ಪರಿಕಲ್ಪನೆಯ ಆಧಾರದ ಮೇಲೆಯೇ ಮಂಡಲ್ ವರದಿ ಜಾರಿಗೆ ತಂದರು.
ಹೀಗೆ ಕರ್ನಾಟಕಕ್ಕೆ ಮಾತ್ರವಲ್ಲ, ಚಾತುರ್ವರ್ಣದ ವ್ಯವಸ್ಥೆಯ ಪಳೆಯುಳಿಕೆಗಳನ್ನು ಇನ್ನೂ ಉಳಿಸಿಕೊಂಡಿರುವ ಭಾರತದಂತಹ ಬಹು ಜಾತಿ,ಧರ್ಮಗಳ ದೇಶಕ್ಕೇನೆ ಹಿಂದುಳಿದ ವರ್ಗಗಳಿಗೊಂದು ಹೊಸ ಭಾಷ್ಯ ಬರೆದ ಸರಕಾರ ಎಂದರೆ ಅದು ದೇವರಾಜ ಅರಸು ಸರ್ಕಾರ.ಈ ಸರ್ಕಾರದ ಭಾಗವಾಗಿ ಮತ್ತು ಈ ಆಯೋಗದ ಜವಾಬ್ದಾರಿ ಹೊತ್ತಿದ್ದು,ಕರ್ನಾಟಕದ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಹೊನ್ನತ್ತಿ ಎಂಬ ಗ್ರಾಮವೊಂದರ ಇಂದು ಬಂದ ಹಿಂದುಳಿದ ವರ್ಗಗಳ ಯುವಕ ಎಂಬುದೇ ಒಂದು ಅಚ್ಚರಿ.
ಎಲ್.ಜಿ.ಹಾವನೂರ್ ಎಂದರೆ ….
1978 -79ರ ಸಮಯವದು.ನಾನು ಆಗಿ ತಾನೆ ಬಿ.ಎ.ಪದವಿ ಮುಗಿಸಿದ್ದೆ.ಬೇಡರ ಜಾತಿಯವನು.ಆಗ ತಾನೆ ಬೇಡರ ಜಾತಿಯ ಹುಡುಗ ಓದಿದವನು, ಸರ್ಕಾರಿ ಕೆಲಸ ಸಿಕ್ಕೇ ಸಿಗುತ್ತದೆ ಎಂಬ ಆಶಾಭಾವದಲ್ಲಿ ನನಗೆ ಮದುವೆಯನ್ನೂ ಮಾಡಿಬಿಟ್ಟರು. ನನಗೆ ಹೆಣ್ಣು ಕೊಟ್ಟ ಮಾವನಿಗೆ ತನ್ನ ಮಗಳು ಗಂಡನಾದ ನಾನು,ಯಾವುದಾದರೂ ಸರ್ಕಾರಿ ಕೆಲಸ ಸೇರಬೇಕೆಂಬ ಅಭಿಲಾಷೆಯಿತ್ತು.
ಎಲ್.ಜಿ.ಹಾವನೂರರದೂ ಸಹ ಹೊನ್ನತ್ತಿ ಆಗಿದ್ದರಿಂದ ಮತ್ತು ದೂರದ ಸಂಬಂಧಿಕರು ಆದ ಕಾರಣ ಮತ್ತು ಸಂಪುಟದ ಬಹು ಮುಖ್ಯ ಖಾತೆಗಳ ಸಚಿವರೂ ಆಗಿದ್ದರಿಂದ ಅವರ ಹತ್ತಿರ ಹೋಗಿ ಕೇಳಿಕೊಂಡರೆ ಕೆಲಸ ಆದೀತು ಎಂದು ಯಾರೋ ಹೇಳಿದರು.ನನ್ನ ಮಾವ ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಹೋದರು.
ಅವರ ಮನೆಯಲ್ಲಿಯೇ ಉಳಿದುಕೊಳ್ಳಲು ವ್ಯವಸ್ಥೆಯಾಯಿತು.
ಒಂದು ದಿನ ಕಳೆಯಿತು.
ಎರಡು ದಿನ ಕಳೆಯಿತು.
ಮೂರನೇ ದಿನ ವಿಷಯ ಪ್ರಸ್ತಾಪ ಮಾಡಿದ ನಮ್ಮ ಮಾನವರಿಗೆ ಹಾವನೂರು “ನೋಡಪ್ಪಾ….ನಮ್ಮ ಜನ ನನ್ನ ಹೆಸರೇಳಿಕೊಂಡು ಶಿಫಾರಸ್ಸಿಗಾಗಿ ಬರೋದು ಬೇಡ.ನೀವಾಗಿ ಬಂದರೆ ಊಟ ಮಾಡಿ,ಮೇಲಿದ್ದು ಹೋಗಿ.ಆದರೆ ನಾಕು ಜನರನ್ನು ತುಳಿದು (ಮೆರಿಟ್ಟನ್ನು ಕಡೆಗಣಿಸಿ)ನಿಮಗೆ ನೌಕರಿ ಕೊಡಿಸಾಕಾಗಂಗಿಲ್ಲ”ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿ ಹೊರಟೇ ಬಿಟ್ಟರು.
ಬಸವರಾಜಪ್ಪ ನೆಲೋಗಲ್ ರೈತ,ಶಿಡಗನಾಳ್,ರಾಣೆಬೆನ್ನೂರು ತಾಲ್ಲೂಕು.
Read also : LG Havanur | ದಕ್ಷಿಣ ಆಫ್ರಿಕಾದ ಸಂವಿಧಾನ ರಚನಾ ಸಲಹಾ ಸಮಿತಿಯಲ್ಲಿ ಹಾವನೂರು
ಬಿ.ಶ್ರೀನಿವಾಸ .ದಾವಣಗೆರೆ