Kannada News | Dinamaana.com | 22-09-2024
ಉಳಿದ ಮಾತು ……(LG Havanur)
ಭಾರತೀಯ ಅಧಿಕಾರಶಾಹಿಯು ಮೇಲ್ಜಾತಿಗಳ ಹಿಡಿತದಲ್ಲಿ ದೃಢವಾಗಿದೆ, ಅಷ್ಟೇ ಅಲ್ಲದೆ, ಮೇಲ್ಜಾತಿಗಳು ಮತ್ತು ಕೆಳಜಾತಿಗಳ ನಡುವಿನ ಅಂತರವೂ ದಿನೇ ದಿನೇ ವಿಸ್ತಾರಗೊಳ್ಳುತ್ತಿದೆ. ಹಿಂದುಳಿದ ಜಾತಿಗಳ ಮೀಸಲಾತಿ ಜಾರಿ ಕೂಡ ನಲವತ್ತು ವರುಷಗಳ ಕಾಲ ವಿಳಂಬವಾಯಿತು. ಈಗ ಕಾಲ ಬದಲಾಗಿದೆ. ಅಸ್ಪೃಶ್ಯರು, ಹಿಂದುಳಿದವರು, ಅಲ್ಪಸಂಖ್ಯಾತರು ಮುಂತಾದ ಕಾಯಕ ಜೀವಿಗಳ ಬದುಕು ಅಸಹನೀಯವಾಗುವತ್ತ ಸಾಗುತ್ತಿದೆ. ಇದು ಭಾರತದ ವೈಫಲ್ಯ.
ಹೀಗೆ ದೇಶದ ಮುಕ್ಕಾಲು ಭಾಗಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಸಮುದಾಯಗಳು ಅಲ್ಪಮಟ್ಟಿಗಾದರೂ ತಮ್ಮ ಬದುಕನ್ನು ಘನತೆಯಿಂದ, ಗೌರವಗಳಿಂದ, ಅರ್ಥಪೂರ್ಣವಾಗಿ ಕಟ್ಟಿಕೊಳ್ಳಲು ಕಾರಣವಾದವರು ಎಲ್.ಜಿ.ಹಾವನೂರು ಎಂಬ ಒಬ್ಬ ಸಾಮಾನ್ಯ ಗ್ರಾಮೀಣ ಪ್ರತಿಭೆ.
ಹಾವನೂರು ವರದಿ ಸಾಮಾಜಿಕ ನ್ಯಾಯದ ಕನ್ನಡಿ..(LG Havanur)
ಇಡೀ ದೇಶಕ್ಕೇ ಮಾದರಿಯಾದಂತಹ ಹಿಂದುಳಿದ ವರ್ಗಗಳ ಬೈಬಲ್ ಎಂದೇ ಪ್ರಖ್ಯಾತಿ ಪಡೆದ ಹಾವನೂರು ವರದಿಯು ತನ್ನ ತಲಸ್ಪರ್ಶಿ, ವೈಜ್ಞಾನಿಕವಾದ ಅಧ್ಯಯನಗಳಿಂದ ಸಾಮಾಜಿಕ ನ್ಯಾಯದ ಕನ್ನಡಿಯಂತಿದೆ.
ಸಂವಿಧಾನದ ಶ್ರಮವನ್ನು ನೆನಪಿಸುವ ರೀತಿಯಲ್ಲಿ ಬದುಕಿದರು..(LG Havanur)
“ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡುವಂತಹ ಅವಕಾಶ ಸಂವಿಧಾನದಲ್ಲಿ ಇಲ್ಲ.ಒಂದು ವೇಳೆ, ಈ ವ್ಯವಸ್ಥೆಯನ್ನೇನಾದರೂ ನಿರ್ಮೂಲನೆ ಮಾಡಿದ್ದಿದ್ದರೆ ನಮ್ಮ ಸಂವಿಧಾನದ ಪರಿವಿಡಿ ಹಾಗೂ ಇತರೆ ಕಾನೂನುಗಳು ಈಗ ಇರುವುದಕ್ಕಿಂತ ಅರ್ಧದಷ್ಟು ಕಡಿಮೆಯಾಗಿರುತ್ತಿತ್ತು.”ಹೀಗೆ ಬಾಬಾಸಾಹೇಬ ಅಂಬೇಡ್ಕರ್ ರ ಸಂವಿಧಾನದ ಶ್ರಮವನ್ನು ನೆನಪಿಸುವ ರೀತಿಯಲ್ಲಿ ಲಕ್ಷ್ಮಣ ಗೂಳಪ್ಪ ಹಾವನೂರು ಬದುಕಿದರು.
ಇಂದಿನ ಭಾರತ, ತನ್ನ ಗರ್ಭದಲ್ಲಿರಿಸಿಕೊಂಡಿರುವ ಜಾತಿ ತಾರತಮ್ಯಗಳನ್ನು ಕೊನೆಗೊಳಿಸಲು ತೀವ್ರವಾಗಿ ಶ್ರಮಿಸುತ್ತಿದೆ ಎಂಬಂತಹ ವಾತಾವರಣ ದೇಶದ ಯಾವ ಮೂಲೆಯಲ್ಲೂ ಕಂಡುಬರುತ್ತಿಲ್ಲ.ಜಾತಿರಹಿತ ಸಮಾಜ ಕಟ್ಟುವ ಈ ವಿಷಯದಲ್ಲಂತೂ ಇನ್ನೂ ಆರಂಭವೇ ಆಗಿಲ್ಲ ಎನ್ನುವಷ್ಟರ ಮಟ್ಟಿಗೆ ಇದೆ. ಸುಮಾರು 250 ಮಿಲಿಯನ್ನಿಗೂ ಹೆಚ್ಚಿರುವ ಅಸ್ಪೃಶ್ಯ ಜನರು, ಅಸ್ಪೃಶ್ಯತೆಯ ಬೇಗೆಯಲ್ಲಿ ಬೇಯುತ್ತಿದ್ದಾರೆ.
ಭಾರತದ ಸಂವಿಧಾನ ಕೂಡ ಅಪಾಯದಲ್ಲಿ …
ಜಾಗತೀಕರಣ,ಉದಾರೀಕರಣ ಮತ್ತೆ ಈಗಿನ ಕೋಮುವಾದೀಕರಣಗಳ ಬಿರುಗಾಳಿಯ ದಾಳಿಗಳಿಗೆ ಸಿಕ್ಕು,ಅತ್ತ, ಕೈಯ್ಯಲ್ಲಿ ಕಸುಬೂ ಇಲ್ಲದೆ,ವಿಶಾಲ ಭಾರತದಲ್ಲಿ ಜಾಗವೂ ಇಲ್ಲದೆ ಅಭದ್ರತೆಯ ಭಾವದಲ್ಲಿ ಬದುಕುತ್ತಿರುವ ,ಅಂಚಿನ ಸಮುದಾಯಗಳು,ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಏಕೈಕ ರಕ್ಷಕನಂತಿರುವ ಭಾರತದ ಸಂವಿಧಾನ ಕೂಡ ಅಪಾಯದಲ್ಲಿ ಇರುವಂತೆ ತೋರುತ್ತಿದೆ.
Read also : ದಿನಮಾನ ಹೆಮ್ಮೆ : ನೆಲದ ಮೈಯ್ಯಿಗೆ ದುಡಿವ ಹೆಜ್ಜೆಗಳ ಕಾವ್ಯ ಬರೆವ -ಪಿ.ಆರ್.ವೆಂಕಟೇಶ್
ಇಂಥಾ ಹೊತ್ತಿನಲ್ಲಿ ಮತ್ತೆ ಮತ್ತೆ ಹಾವನೂರು ನೆನಪಾಗುತ್ತಾರೆ. ಇಂತಹ ಒಬ್ಬ ವ್ಯಕ್ತಿ ಕರ್ನಾಟಕದಲ್ಲಿ ಜೀವಿಸಿದ್ದರು ಎಂಬುದು ಕೂಡ ಇಂದಿನ ಯುವ ತಲೆಮಾರಿಗೆ ತಿಳಿದಂತೆ ಕಾಣಿಸುತ್ತಿಲ್ಲ.ಆದುದರಿಂದ ವಿದ್ಯಾರ್ಥಿಗಳನ್ನು, ಯುವಜನತೆಯನ್ನು ಗಮನದಲ್ಲಿಟ್ಟುಕೊಂಡು ಈ ಕಿರು ಪುಸ್ತಕವನ್ನು ರಚಿಸಲಾಗಿದೆ. ಇಲ್ಲಿರುವ ಹಾವನೂರು ಕುರಿತ ಮಾಹಿತಿಗಳು ಆರೋಗ್ಯವಂತ ಸಮ ಸಮಾಜ ನಿರ್ಮಾಣ ಕಾರ್ಯಕ್ಕೆ ಕೇವಲ ಪ್ರವೇಶಿಕೆ ಮಾತ್ರವೇ ಆಗಿವೆ ಎಂಬುದನ್ನು ಮರೆಯುವಂತಿಲ್ಲ.
ಬಿ.ಶ್ರೀನಿವಾಸ