Kannada News | Dinamaana.com | 01 -09-2024
ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಸಾಧಿಸುವ ಗುರಿಯನ್ನು ಸಂವಿಧಾನದ ಮುನ್ನುಡಿಯಲ್ಲಿ ಘೋಷಿಸಲಾಗಿದೆ.ಆರ್ಟಿಕಲ್ ೧೪ ಸಮಾನತೆಯ ತತ್ವವನ್ನು ಒತ್ತಿ ಹೇಳಿದರೆ,15 ,16 ಮತ್ತು 29ನೇ ಪರಿಚ್ಛೇದಗಳು ಈ ಪರಿಕಲ್ಪನೆಯನ್ನು ಮತ್ತಷ್ಟು ವಿವರಿಸಿವೆ ಹಾಗೂ ಧರ್ಮ, ಜನಾಂಗ ಮತ್ತು ಜಾತಿಯ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸಿವೆ.
ಆದಾಗ್ಯೂ ಆರ್ಟಿಕಲ್ 15 ತಾರತಮ್ಯದ ವಿರುದ್ಧದ ನಿಷೇಧವನ್ನು ರಾಜ್ಯಕ್ರಮಕ್ಕೆ ಮಾತ್ರ ಸೀಮಿತಗೊಳಿಸಿದೆ.ಆರ್ಟಿಕಲ್ 16 ಇದನ್ನು ರಾಜ್ಯದ ಅಡಿಯಲ್ಲಿ ಉದ್ಯೋಗಕ್ಕೆ ಸೀಮಿತಗೊಳಿಸಿದೆ.ಆರ್ಟಿಕಲ್ 29 ಇದನ್ನು ಶಿಕ್ಷಣ ಸಂಸ್ಥೆಗಳಿಗೆ ಸೀಮಿತಗೊಳಿಸಿದೆ.ರಾಷ್ಟ್ರೀಯ ಗುರಿಯಾಗಿ ಜಾತಿ ರಹಿತ ಸಮಾಜವನ್ನು ಸ್ಥಾಪಿಸುವುದು,ಸಂವಿಧಾನದ ನಿರ್ದೇಶನ ತತ್ವಗಳಲ್ಲಿ ಅಥವಾ ಪೀಠಿಕೆಯಲ್ಲಿಯೂ ಸ್ಥಾನ ಪಡೆದಿಲ್ಲ.
ಭಾರತದ ಸಂವಿಧಾನವನ್ನು ತಾನು ಬೆಳೆದುಬಂದ ಸಮುದಾಯದ ಸಂಕಟಗಳ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿದ ಎಲ್.ಜಿ.ಹಾವನೂರರಿಗೆ ಸಂವಿಧಾನದ ಪುಟ ಪುಟದ ಇಂಚಿಂಚೂ ನೆನಪಿನಲ್ಲಿತ್ತು.ಅಗಾಧವಾದ ಕಾನೂನು ಪಾಂಡಿತ್ಯವನ್ನಷ್ಟೇ ಅಲ್ಲದೆ, ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಯಾವುದೇ ಸಂವಿಧಾನದ ಆದೇಶವಿಲ್ಲದ್ದನ್ನು ಅವರು ಅರಿತುಕೊಂಡಿದ್ದರು.ಹಾವನೂರರ ನೋವು,ಸಂಕಟಗಳೇನಿದ್ದರೂ ಬಾಬಾಸಾಹೇಬರಂತೆ ಅನುಭವ ಜನ್ಯವಾಗಿದ್ದವು.ಇದರಿಂದಾಗಿ ಹಾವನೂರು,
“ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡುವಂತಹ ಅವಕಾಶ ಸಂವಿಧಾನದಲ್ಲಿ ಇಲ್ಲ.ಒಂದು ವೇಳೆ ಈ ವ್ಯವಸ್ಥೆಯನ್ನು ನಿರ್ಮೂಲ ಮಾಡಿದರೆ ನಮ್ಮ ಸಂವಿಧಾನದ ಪರಿವಿಡಿ ಹಾಗೂ ಇತರೆ ಕಾನೂನುಗಳು ಈಗಿರುವುದಕ್ಕಿಂತ ಅರ್ಧದಷ್ಟು ಕಡಿಮೆಯಾಗಿರುತ್ತಿದ್ದವು”.-ಎಂಬುದಾಗಿ ಹೇಳಿದರು.
ಹಾವನೂರು ವರದಿ ಜಾರಿಯ ನಂತರದ ದಿನಗಳು (LG Havanur)
ಹಾವನೂರ್ ಬೆಳೆಸಿದ ಹುಡುಗ ಸಂಗನಗೌಡ ಚನ್ನಬಸವನಗೌಡ ಯರೇಸೀಮೆ.ಅವರು ರಾಣೆಬೆನ್ನೂರು ,ಹಾವೇರಿ,ಧಾರವಾಡಗಳಲ್ಲಿ ಹೆಸರಾಂತ ವಕೀಲರಾಗಿದ್ದವರು.(ಇತ್ತೀಚೆಗೆ ವಯೋಸಹಜವಾಗಿ ಮರಣಹೊಂದಿರುತ್ತಾರೆ.) ಮೂಲತ ಪಂಚಮಸಾಲಿ ಸಮುದಾಯದ ಯರೇಸೀಮೆ ವಕೀಲರು ಈ ಹಿಂದೆ ಅವರನ್ನು ಪತ್ರಿಕೆಯೊಂದಕ್ಕೆ ಸಂದರ್ಶಿಸಿದಾಗ ,
“ಹಾವನೂರ್ ಸರ್ ಬಗ್ಗೆ,ಮಾತನಾಡಲೇಬೇಕು….He is genius…”ಎಂದು ಮಾತಿಗೆ ಶುರುವಿಟ್ಟುಕೊಂಡಿದ್ದರು.
ನಾನು ಅದೇ ತಾನೆ ಎಲ್.ಎಲ್.ಬಿ.ಮುಗಿಸಿಕೊಂಡು ಬಂದಿದ್ದೆ.ಅವರ ಮನೆ ದೇವ್ರು ಹಾವನೂರು ಇನ್ ದ್ಯಾಮವ್ವ. ನನ್ನೂರು ಹೊನ್ನತ್ತಿ.ಅವರು ತಮ್ಮ ಮನೆ ದೇವರಿಗೆ ಹೋಗಬೇಕೆಂದರೆ ನಮ್ಮೂರನ್ನು ನೋಡಕಾ ಹೋಗಬೇಕಿತ್ತು. ನಾವೋ ಊರ ಗೌಡ್ರು. 40 -50 ಎಕರೆ ಜಮೀನು ಇತ್ತು. ಅದು ಹೇಗೋ ಹಾವನೂರರ ಪರಿಚಯವಾಯಿತು. ಹಳ್ಳಿಗಾಡಿನಿಂದ ನಿಮ್ಮಂತಹ ಯುವಕರು ಮುಂದೆ ಬರಬೇಕ್ರಿ ಎಂದು ಕೈ ಕುಲುಕಿದರು.
ಅದು ಅವರು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿದ್ದ ಸಂಕಟದ ದಿನಗಳಾಗಿದ್ದವು.ಆಗ ಅವರನ್ನು ಇಡೀ ರಾಜ್ಯದ ಮೇಲ್ವರ್ಗಗಳ ವಿರೋಧಿ ಎಂಬಂತೆ ಬಿಂಬಿಸಲಾಗಿತ್ತು.ಅದು ಶುದ್ಧ ತಪ್ಪಾಗಿತ್ತು.ನೋಡಿ ಅವರು ಹಿಂದುಳಿದ ಬ್ಯಾಡರು, ನಾನು, ಲಿಂಗಾಯತ. ಆದರೆ ನನ್ನನ್ನೂ ಅವರು ತನ್ನ ತಮ್ಮ ನಂತೆ ನೋಡಿಕೊಂಡರು. ಅಷ್ಟೇ ಅಲ್ಲ ,ಎಲ್ಲಾ ಹಿಂದುಳಿದವರು ಒಳ್ಳೆಯವರುಲ್ಲೊ,ಎಲ್ಲಾ ಮೇಲ್ವರ್ಗದವರೂ ಕೆಟ್ಟವರಲ್ಲ ಎಂದು ಸದಾ ಹೇಳುತ್ತಿದ್ದರು. ಈ ಸಮಾಜದಲ್ಲಿ ಜಾತಿ ಎನ್ನುವುದು ಒಂದು ಸಮಸ್ಯೆಯೇ ಅಲ್ಲ.”Caste is not the real problem of the society,Class ….class ಇದೆಯಲ್ಲ ಇದೇ ನಿಜವಾದ ಸಮಸ್ಯೆ “ಎಂದು ಹೇಳುತ್ತಿದ್ದರು.
ಹಾವನೂರ್ ಮೇಲೆ ಕಲ್ಲಿನ ಸುರಿಮಳೆ! (LG Havanur)
ಅದು 1977 ನವೆಂಬರ್ರೋ ಡಿಸೆಂಬರೊ ಇರಬಹುದು. ಹಾವನೂರರ ಜೊತೆ ನಾನೂ ಕೂಡ ರಾಜ್ಯ ಸುತ್ತುತ್ತಿದ್ದೆ. ದಾವಣಗೆರೆಯ ಐ.ಬಿ.ಯಲ್ಲಿ ಇದ್ದಕ್ಕಿದ್ದಂತೆ ಜನವೋ ಜನ. ಗದ್ದಲವಾಗುವುದು ಖಚಿತವೆಂದು ಪೊಲೀಸರು ಸೂಚನೆ ಕೊಟ್ಟು ನಮ್ಮನ್ನು ಹೇಗೋ ಮಾಡಿ ಕಾರು ಹತ್ತಿಸಿ ಕಳುಹಿಸಲು ತಯಾರಾದರು.ಆದರೆ, ದಾವಣಗೆರೆಯಲ್ಲಿ ಕಾರಿಗೆ ಕಲ್ಲು ತೂರಿದರು. ಹಾವನೂರ್ ವರದಿಗೆ ಧಿಕ್ಕಾರವನ್ನೂ ಸಹ ಕೂಗಿದ್ದಲ್ಲದೆ ಹಾವನೂರರ ಜಾತಿಯನ್ನು ನಿಂದಿಸಿದರು.ಅಲ್ಲಿಂದ ತಪ್ಪಿಸಿಕೊಂಡು ಬರುವಾಗ ನಮಗೂ ಒಂದೆರೆಡು ಕಲ್ಲಿನ ಏಟು ಬಿದ್ದಿದ್ದವು.
ಮೇಲ್ವರ್ಗಗಳು ಹಾವನೂರರ ವೈಜ್ಞಾನಿಕವಾದ ವರದಿಯನ್ನು,ಅದರೊಳಗಿದ್ದ ಸಾಮಾಜಿಕ ನ್ಯಾಯ ತತ್ವವನ್ನು ಅರ್ಥ ಮಾಡಿಕೊಳ್ಳಲಿಲ್ಲ.ಹಾವನೂರ್ ಸಾಹೇಬರು ಸೋಷಿಯಲ್ ಕಾಜ್ ಗೋಸ್ಕರ ಬದ್ಧತೆಯನ್ನಿಟ್ಟುಕೊಂಡು ಕೆಲಸ ಮಾಡಿದರು. ದೇವರಾಜ ಅರಸು ಎಂಬ ಮುಖ್ಯಮಂತ್ರಿಯ ಮೂಲಕ ಸಾಮಾಜಿಕ ನ್ಯಾಯ ಎಂಬ ಔಷಧಿಯನ್ನು ಇಂಜೆಕ್ಟ್ ಮಾಡಿದರು.
ಅದು ಅರಸು ಎಂಬ ತಾಯಿಯ ಗರ್ಭದಲ್ಲಿ ಬೆಳೆದು ಭ್ರೂಣವಾಗಿ ಬೆಳೆದು, ಸಂತತಿ ಬೆಳೆಯುತ್ತಾ ಬಂದಿದೆ . ದೇಶ ಮತ್ತು ರಾಜ್ಯದ ದಮನಿತ ಸಮುದಾಯಗಳ ಬಗ್ಗೆ ಅಪಾರ ಕಳಕಳಿ ಹೊಂದಿದ್ದ ಹಾವನೂರರದು ಏನಿದ್ದರೂ ಲಾಂಗ್ ಟರ್ಮ್ ಪಾಲಿಸಿ.ಅಗಾಧ ದೂರದೃಷ್ಟಿಯ ನಾಯಕರಾಗಿದ್ದ ಅವರು ಎಂದಿಗೂ ಸ್ವಜನಪಕ್ಷಪಾತ,ಕುಟುಂಬ ರಾಜಕಾರಣ ಮಾಡಲಿಲ್ಲ.” ಎಂದರು.
ಹಾವನೂರರ ಕೊನೆಯ ದಿನಗಳು (LG Havanur)
ಸದಾ ಸಾಮಾಜಿಕ ತತ್ವವನ್ನೇ ಉಸಿರಾಗಿಸಿಕೊಂಡಿದ್ದ ಹಾವನೂರರಿಗೆ ತಮ್ಮ ಆಲೋಚನಾ ಕ್ರಮಕ್ಕೆ ವಿರುದ್ಧವಾದ ಪಕ್ಷವನ್ನು ಅಪ್ಪಿಕೊಂಡರು ? ಅದಕ್ಕೆ ಯರೇಸೀಮೆಯವರು,ಇಲ್ಲ…ಇಲ್ಲಾ…ಇದು ನನಗೂ ನಿಲುಕದ ಪ್ರಶ್ನೆ.ಆದರೆ ಅವರಿಗೆ ಅಪಾಯದ ಮುನ್ಸೂಚನೆ ಇದ್ದರೂ ಇದ್ದೀತೇನೋ. ರಾಜಕೀಯ ಸಂನ್ಯಾಸದ ಎರಡು ದಶಕಗಳ ಅವಧಿಯ ದೊಡ್ಡ ಗ್ಯಾಪ್ ನಂತರ ,ಆ ರಾಜಕೀಯ ಪಕ್ಷ, ಹಾವನೂರರನ್ನು ಸೆಳೆದಿರಬೇಕು.
ಇವರಾಗಿಯೇ ಹೋಗಿದ್ದಲ್ಲ.ಈ ನಿರ್ಧಾರ ತೆಗೆದುಕೊಳ್ಳುವ ಸಮಯದಲ್ಲಿ ಹಾವನೂರರ ದೇಹ ಮಾತ್ರ ಇತ್ತು.ಅವರ ಕಣ್ಣುಕಾಣಿಸುತ್ತಿರಲಿಲ್ಲ, ಕಿವಿ ಕೂಡ ಕೇಳಿಸುತ್ತಿರಲಿಲ್ಲ. ಈ ವಿಷಯದಲ್ಲಿ I am too young to say. ಏನೇ ಇರಲಿ, ಅವರ ಸಾಮಾಜಿಕ ಬದ್ಧತೆಗೆ ಸರಿಸಾಟಿ ಯಾರೂ ಇಲ್ಲ ಎಂದು ಮಾತು ಮುಗಿಸಿದರು.
Read also : LG Havanur | ಹಿಂದುಳಿದ ವರ್ಗಗಳ ಮಂಡಲ್ ವರದಿ: – ಎಲ್.ಜಿ.ಹಾವನೂರ್ ವರದಿಯ ಆಲ್ ಇಂಡಿಯಾ ವರ್ಶನ್!
ಬಿ.ಶ್ರೀನಿವಾಸ.ದಾವಣಗೆರೆ