ಶಿವಮೊಗ್ಗ, ಜು. 19 : ಪಶ್ಚಿಮಘಟ್ಟ ವ್ಯಾಪ್ತಿಯ ಹೊಸನಗರ ತಾಲೂಕಿನಲ್ಲಿ ಮಳೆ ಆರ್ಭಟಿಸುತ್ತಿದೆ. ಇದರಿಂದ ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಶುಕ್ರವಾರದ ಮಾಹಿತಿಯಂತೆ, ಪ್ರಸ್ತುತ ಮುಂಗಾರು ಮಳೆ ಅವಧಿಯಲ್ಲಿಯೇ ಅತೀ ಹೆಚ್ಚು 87,496 ಕ್ಯೂಸೆಕ್ ಒಳಹರಿವು ಡ್ಯಾಂಗೆ ಕಂಡುಬಂದಿದೆ.
ಮಳೆ ನೀರನ್ನೇ ವಿದ್ಯುತ್ ಉತ್ಪಾದನೆಗೆ ಬಳಕೆ ಮಾಡಲಾಗುತ್ತಿದೆ. ಡ್ಯಾಂನಲ್ಲಿ ನೀರಿನ ಸಂಗ್ರಹಣೆಗೆ ಒತ್ತು ನೀಡಲಾಗಿದ್ದು, ಹೊರ ಹರಿವನ್ನು ಸ್ಥಗಿತಗೊಳಿಸಲಾಗಿದೆ. ಸದ್ಯ 1791. 50 (ಗರಿಷ್ಠ ಮಟ್ಟ : 1819) ಅಡಿ ನೀರು ಸಂಗ್ರಹವಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ ಡ್ಯಾಂನಲ್ಲಿ 3. 70 ಅಡಿಯಷ್ಟು ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನದಂದು ಲಿಂಗನಮಕ್ಕಿ ಡ್ಯಾಂನಲ್ಲಿ 1758. 95 ಅಡಿ ನೀರು ಸಂಗ್ರಹವಾಗಿತ್ತು.
ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ವರ್ಷ ಸರಿಸುಮಾರು 33 ಅಡಿಯಷ್ಟು ಹೆಚ್ಚು ನೀರು ಡ್ಯಾಂನಲ್ಲಿ ಸಂಗ್ರಹವಾಗಿದೆ. ಒಟ್ಟಾರೆ ಡ್ಯಾಂ ನೀರು ಸಂಗ್ರಹಣ ಸಾಮರ್ಥ್ಯವು 151. 64 ಟಿಎಂಸಿ ಯಾಗಿದೆ. ಪ್ರಸ್ತುತ 76. 40 ಟಿಎಂಸಿ ನೀರು ಸಂಗ್ರಹವಾಗಿದೆ. ಶೇಕಡವಾರು ಪ್ರಮಾಣದಲ್ಲಿ 50. 38 ರಷ್ಟು ನೀರು ಸಂಗ್ರಹವಾಗಿದೆ. ಡ್ಯಾಂ ಗರಿಷ್ಠ ಮಟ್ಟ ತಲುಪಲು ಇನ್ನು ಅರ್ಧದಷ್ಟು ನೀರು ಹರಿದು ಬರಬೇಕಾಗಿದೆ!