ಕೆ.ಪಿ.ಸಿ.ಸಿ. ಕಚೇರಿ ಮತ್ತು ಕೆ.ಕೆ.ಕಚೇರಿ ಅರ್ಥಾತ್ ಕೇಶವಕೃಪ ಇವೆರಡರ ಪ್ರವೇಶ ಮತ್ತು ಇವೆರಡರ ನಡುವಿನ ಫರಕುಗಳ ಕುರಿತಾದ ವಿಚಾರವಂತ ಮನಸುಗಳ ಸಮರವು ಚುರುಕಿನ ‘ಗತಿ’ ಪಡೆದುಕೊಂಡಿದೆ.
ಇನ್ನೇನಿಲ್ಲ ಮೊನ್ನೆ ಜೂನ್ ಹದಿನಾಲ್ಕರಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಕೆ.ಪಿ.ಸಿ.ಸಿ. ಕಚೇರಿಯಲ್ಲಿ ಸಭೆ ಕರೆದಿದ್ದರು. ಅವರು ಕರೆದ ಸಭೆಗೆ ಕನ್ನಡ ಸಾಂಸ್ಕೃತಿಕ ಲೋಕದ ಸಾಹಿತ್ಯ ಮತ್ತು ನಾಟಕ ಅಕಾಡೆಮಿ ಸೇರಿದಂತೆ ಕನ್ನಡ ಸಂಸ್ಕೃತಿಗೆ ಸಂಬಂಧಿಸಿದ ಬಹುತೇಕ ಅಕಾಡೆಮಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರು ಹಾಜರಾಗಿದ್ದಾರೆ.
ಕೆ.ಪಿ.ಸಿ.ಸಿ. ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕಾರ್ಯದರ್ಶಿಯ ಫೋನ್ ಕರೆಯ ಮೇರೆಗೆ ಕೆ.ಪಿ.ಸಿ.ಸಿ. ಕಚೇರಿಗೆ ಹೋಗಿ ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರು ಸಭೆಯಲ್ಲಿ ಭಾಗವಹಿಸಿದರಂತೆ. ಅವರು ಅಕಾಡೆಮಿ, ಪ್ರಾಧಿಕಾರಗಳಿಗೆ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮರುದಿನವೇ ಜರುಗಿದ ಸಭೆ ಅದಾಗಿತ್ತು. ಆದರೆ ಎರಡು ಪ್ರಾಧಿಕಾರಗಳ ಇಬ್ಬರು ಅಧ್ಯಕ್ಷರು ತಮಗೆ ಕರೆ ಬಂದಿದ್ದರೂ ತಾವು ಭಾಗವಹಿಸದಿರುವ ಕುರಿತು ಅವರಿಬ್ಬರೂ ಇದುವರೆಗೆ ಯಾವ ಹೇಳಿಕೆಗಳನ್ನು ನೀಡಿಲ್ಲ. ಪ್ರಭುತ್ವಕ್ಕೆ ಹೆಚ್ಚು ಹತ್ತಿರವಿರುವ ಅವರು ಇಷ್ಟೊತ್ತಿಗಾಗಲೇ ಈ ಕುರಿತು ಮಾತಾಡಬೇಕಿತ್ತು. ಅದು ಅವರ ಸಾಂಸ್ಕೃತಿಕ ಜವಾಬ್ದಾರಿ ಎಂದು ಭಾವಿಸಲಾಗಿದೆ.
ಕೆ.ಪಿ.ಸಿ.ಸಿ. ಕಚೇರಿಯ ಈ ಸಭೆಯ ಕುರಿತು ಪತ್ರಿಕೆಗಳಲ್ಲಿ ಮರುದಿನ ಫೋಟೋ ಸಮೇತ ಸಂಕ್ಷಿಪ್ತ ಸುದ್ದಿ ಪ್ರಕಟವಾಯಿತು. ಅಂದಿನ ಸಭೆಯಲ್ಲಿ ಏನೇನು ಚರ್ಚೆಯಾಯಿತು ಎಂಬುದು ಸುದ್ದಿಯ ಆದ್ಯತೆ ಆಗಿರಲಿಲ್ಲ. ಅದಕ್ಕೆ ಹೊರತಾಗಿ “ಕೆ.ಪಿ.ಸಿ.ಸಿ. ಕಚೇರಿಗೆ ಸಾಂಸ್ಕೃತಿಕ ಲೋಕದ ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರು ಹೋಗಬಾರದಿತ್ತು” ಎಂಬುದೇ ಸಧ್ಯದ ಗಂಭೀರ ಚರ್ಚೆಯ ವಿಷಯ. ನಿಷೇಧಿತ ಪ್ರದೇಶದಲ್ಲಿ ಪ್ರವೇಶ ಪಡೆದ ರೀತಿಯಲ್ಲಿ ಖಂಡನೆಗಳ ಸುರಿಮಳೆ. ಹಾಗಂತ ಅಕಾಡೆಮಿಗಳ ಅಧ್ಯಕ್ಷರ ಕಾಂಗ್ರೆಸ್ ಕಚೇರಿಯ ಸಭಾ ಭಾಗವಹಿಸುವಿಕೆ ಸ್ವಾಗತಾರ್ಹ ಎಂದು ಖಂಡಿತಾ ಹೇಳಲಾಗದು. ಅಷ್ಟಕ್ಕು ಕೆ.ಪಿ.ಸಿ.ಸಿ. ಅಧ್ಯಕ್ಷರು ಕರೆದಿದ್ದ ನಿಗಮ, ಮಂಡಳಿ ಅಧ್ಯಕ್ಷರುಗಳ ತಮ್ಮ ಪಕ್ಷದ ಸದರಿ ಸಭೆಗೆ ಸಾಂಸ್ಕೃತಿಕ ಲೋಕದ ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರು ಕೂಡಾ ಆಗಮಿಸಿದ್ದಾರೆಂಬ ಮಾಹಿತಿ ಉಪ ಮುಖ್ಯಮಂತ್ರಿ ಅವರಿಗೆ ಇತ್ತೇ? ಎಂಬುದು ಆಗ ಸಾರ್ವಜನಿಕವಾಗಿ ಸ್ಪಷ್ಟವಾಗಿರಲಿಲ್ಲ.
ಆದರೆ, ಒಂದೆರಡು ದಿನಗಳಲ್ಲಿ ವಿಶ್ವಾಸಾರ್ಹ ಪತ್ರಿಕೆಯೊಂದು ಈ ಘಟನೆ ಮತ್ತು ವಿಸ್ತೃತ ಬೆಳವಣಿಗೆಗಳ ಕುರಿತು ಮಹತ್ವದ ಸಂಪಾದಕೀಯ ಬರೆಯಿತು. ಅದಾದ ಮೇಲೆ ಉಪಮುಖ್ಯಮಂತ್ರಿ “ಹೌದು ಕೆ.ಪಿ.ಸಿ.ಸಿ. ಕಚೇರಿಯಲ್ಲಿ ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರು, ಸಾಹಿತಿ, ಕಲಾವಿದರ ಸಭೆ ಕರೆದದ್ದು ನಾನೇ. ಏನೀಗ.? ಅದೇನು ಅಪರಾಧವೇ.? ನಾನು ಕರೆದ ಸಭೆಗೆ ಕೆಲವರು ಬಂದಿಲ್ಲ. ಪೇಪರಿದೆ, ಪೆನ್ನಿದೆ, ಇಂಕಿದೆ ಮುಂದೆ ನೋಡೋಣೆಂಬ ಧಮಕಿ. ಸಾಂಸ್ಕೃತಿಕ ಅಕಾಡೆಮಿಗಳು ಸ್ವಾಯತ್ತ ಸಂಸ್ಥೆಗಳಲ್ಲ. ನಾವು ಎಲ್ಲಿ ಬೇಕಾದರೂ ಸಭೆ ನಡೆಸಬಹುದು. ಅದು ಸಾಂಸ್ಕೃತಿಕ ಲೋಕದ ರಾಜಕಾರಣ ಮತ್ತು ಸಾಹಿತಿ, ಕಲಾವಿದರು ರಾಜಕಾರಣಿಗಳೆಂಬ” ಅರ್ಥ ಸೂಸುವಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಇದು ಸಾಂಸ್ಕೃತಿಕ ಲೋಕವನ್ನೇ ಅವಮಾನಿಸುವ ಅಧಿಕಾರ ಮದದ ಹೇಳಿಕೆಯಾಗಿದೆ.
ಡಿ.ಕೆ.ಶಿವಕುಮಾರ್ ಅವರು ಸಾಂಸ್ಕೃತಿಕ ಅಕಾಡೆಮಿಗಳ ಅಧ್ಯಕ್ಷರನ್ನೂ ನಿಗಮ, ಮಂಡಳಿಗಳ ಕಾಂಗ್ರೆಸ್ ಕಾರ್ಯಕರ್ತರೆಂದೇ ಭಾವಿಸಿದಂತಿದೆ. “ರಾಜಕಾರಣಕ್ಕೆ ನಿಮ್ಮ ಈ ಹುದ್ದೆಗಳು ಮೆಟ್ಟಿಲುಗಳು. ನಿಮ್ಮ ಕೈ, ಬಾಯಿ ಶುದ್ಧವಾಗಿರಬೇಕೆಂಬ” ಉಪದೇಶ ಬೇರೆ. ಮುಂದೆ ಪಕ್ಷದ ಹೆಚ್ಚೆಚ್ಚು ಸ್ಥಾನಗಳ ಗಳಿಕೆಗೆ ಅನುವಾಗುವಂತಹ ಕರೆ ನೀಡಿದ್ದು ಅದು ಅವರ ಪಕ್ಷದ ರಾಜಕೀಯ ನಡೆಗೆ ಸಾಂಸ್ಕೃತಿಕ ಲೋಕದ ಗಣ್ಯರನ್ನು ಬಳಸಿಕೊಳ್ಳುವುದು ನಿಜಕ್ಕೂ ಖಂಡನೀಯ. ಸುದ್ದಿ ಪ್ರಕಟವಾದ ಬೆನ್ನಲ್ಲೇ ರಾಜಕೀಯ ಪಕ್ಷವೊಂದರ ಕಚೇರಿಗೆ ಸಾಂಸ್ಕೃತಿಕ ಲೋಕದ ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರು ಹೋದುದರ ಬಗ್ಗೆ ತೀವ್ರ ಟೀಕೆಗಳು ತೇಲಿ ಬಂದವು. ಅಸಮಾಧಾನ ಮತ್ತು ಕೆಲವು ಆಕ್ರೋಶದ ಪ್ರತಿಕ್ರಿಯೆಗಳು ದಾಂಗುಡಿ ಇಟ್ಟವು.
ಹಾಗೆ ಪ್ರತಿರೋಧ ತೋರಿದ ಅನೇಕರಿಗೆ ಸಾಂಸ್ಕೃತಿಕ ಅಕಾಡೆಮಿಗಳು ಸ್ವಾಯತ್ತ ಸಂಸ್ಥೆಗಳೆಂಬ ಅಸ್ಪಷ್ಟ ತಿಳಿವಳಿಕೆ. ಅವು ಸ್ವಾಯತ್ತ ಸಂಸ್ಥೆಗಳಲ್ಲ. ಸಾಂಸ್ಕೃತಿಕ ಸ್ವಾಯತ್ತತೆ ಗಳಿಸಿಕೊಳ್ಳಲು ಹೆಣಗುತ್ತಿವೆ. ಬರಗೂರು ರಾಮಚಂದ್ರಪ್ಪ ಅವರು ನೀಡಿದ “ಸಾಂಸ್ಕೃತಿಕ ನೀತಿ ಸಂಹಿತೆ” ವರದಿಯನ್ನು ಸರಕಾರ ಜಾರಿಗೊಳಿಸಿಲ್ಲ. ಇದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರ ಅಂಬೋಣ.
ಪಿ. ಮಹ್ಮದ್ ಅವರಂತಹ ಶ್ರೇಷ್ಠ ವ್ಯಂಗ್ಯ ಚಿತ್ರಕಾರ, ಕಾಂಗ್ರೆಸ್ ಕಚೇರಿಯಲ್ಲಿ ಅಕಾಡೆಮಿಗಳ ಅಧ್ಯಕ್ಷರ ಸಭೆ ಕುರಿತು ಅ’ಕೈ’ಡಮಿ ಅಂತ ಶೀರ್ಷಿಕೆ ಹೊತ್ತ ತುಂಬಾ ಸೊಗಸಾದ ವ್ಯಂಗ್ಯಚಿತ್ರ ಬರೆದು ವ್ಯಂಗ್ಯವಾಡಿದರು. ಮಂತ್ರಿ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿ ಬರುವವರನ್ನು ಸಹಿತ ಬಾಲಬಡುಕರೆಂಬ ಠೇಂಕಾರದ ಮಾತುಗಳು. ಮುಂದುವರೆದು ಕೆಲವರನ್ನು ಕಾಡಿದ ಪ್ರಶ್ನೆ ಎಂದರೆ ಉಪ ಮುಖ್ಯಮಂತ್ರಿಗಳ ಸರ್ವಾಧಿಕಾರ ಸ್ವರದರ್ಪದ ಇಂತಹ ಹೇಳಿಕೆ ಮತ್ತು ಒಟ್ಟಾರೆ ಎಲ್ಲ ಬೆಳವಣಿಗೆಗಳ ಬಗ್ಗೆ ಮುಖ್ಯಮಂತ್ರಿಗಳು ಏನು ಹೇಳುತ್ತಾರೆಂಬ ಕುತೂಹಲ.
ಕಾಂಗ್ರೆಸ್ ಕಚೇರಿ ಸಭೆ, ಡಿ.ಕೆ.ಶಿ. ಹೇಳಿಕೆಗೆ ಪ್ರಗತಿಪರರಿಂದ ಮುಂದುವರೆದ ತೆಕ್ಕೆಗಟ್ಟಲೇ ಪ್ರತಿರೋಧಗಳು. ವೈಚಾರಿಕ ಗೆಳೆಯರು ತೋರುವ ಪ್ರಖರ ಪ್ರತಿಕ್ರಿಯೆಗಳು. ಪ್ರತಿಕ್ರಿಯೆಗಳ ಕುರಿತು ಪ್ರತಿಕ್ರಿಯೆಗಳು. ಅದೇನೆಂದರೆ ಪ್ರತಿರೋಧದ ಪ್ರತಿಕ್ರಿಯೆ ತೋರುವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರೀತಿಯು ಎಡಪಂಥೀಯ ಒಲವಿನ ಪ್ರಗತಿಪರ ಸಂವೇದನೆಗಳಿಗೆ ಮಾತ್ರ ಹೆಚ್ಚು ಸಾಧ್ಯ. ಪ್ರತಿಕ್ರಿಯೆಗಳನ್ನು ಸ್ವಾಗತಿಸಿ ಉತ್ತರಿಸುವ ಮನಃಸ್ಥಿತಿ ಅಂಥವರಿಗೆ ಮಾತ್ರ ಸಾಧ್ಯ. ಆ ದಿಶೆಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಪ್ರೊ. ಎಲ್. ಎನ್. ಮುಕುಂದರಾಜ್ ಘಟನೋತ್ತರ ತಾವು ಭಾಗವಹಿಸಿದ ಎರಡನೇ ದಿನದ ಕಾರ್ಯಕ್ರಮವೊಂದನ್ನು ಸದ್ಬಳಕೆ ಮಾಡಿಕೊಂಡರು. ಪ್ರಕಟಿತ ಬಹುಪಾಲು ಈ ಪ್ರತಿರೋಧಗಳಿಗೆ ಅವರು ಸೂಕ್ಷ್ಮಮತ್ತು ಸಾಪೇಕ್ಷವಾಗಿ ಉತ್ತರಿಸಿದರು.
ಸಾಹಿತ್ಯ, ಸಂಗೀತ, ಸಂಸ್ಕೃತಿಗಳೆಂದರೆ ಕೆಲವರಿಗೇ ಮೀಸಲೆಂಬ ನಾಜೂಕಾದ ಜಾಗೆಗಳಲ್ಲ. ದಂತಗೋಪುರ ಸಾಹಿತ್ಯ ನಿರ್ಮಾಣದ ಕಾಲ ಇದಲ್ಲ. ರಾಜಕಾರಣಿಗಳು ಮತ್ತು ಸಾಮಾನ್ಯ ಜನರ ನಡುವೆ ಸಾಹಿತಿಗಳು ನಿಂತು ಮಾತಾಡಬೇಕಿದೆ. ಇದುವೇ ಎಲ್ಲ ಜಾತಿ, ಮತ, ವರ್ಗಗಳಿಗೆ ತಲುಪಬೇಕಾದ ಸಾಂಸ್ಕೃತಿಕ ನ್ಯಾಯದ ಸತ್ಯ ಸಂಗತಿಗಳು. “ನನಗೆ ನನ್ನ ಗುರುಗಳು ಕಲಾಸಿಪಾಳ್ಯದ ಗಡಂಗದಲ್ಲೂ ಪಂಪ, ಕುವೆಂಪು, ಕುಮಾರವ್ಯಾಸ ಕುರಿತು ಗಂಭೀರವಾದ ಬೋಧನೆ ಮಾಡಿದ್ದಾರೆ. ಅಂತಹ ಗುರುಮಾರ್ಗ ಪರಂಪರೆ ನಮ್ಮದು.” ನಾವು ಸಂತೆ, ಜಾತ್ರೆಗಳಲ್ಲಿ ಸರ್ವಜ್ಞನ ಕುರಿತು ಅಡಿಗರ ರಾಜಕೀಯ ಕಾವ್ಯ ಕುರಿತು, ಕುಸುಮಬಾಲೆ ಕುರಿತು ಗಟ್ಟಿಯಾಗಿ ಮಾತಾಡಬೇಕಿದೆ.
ನೆಲಮೂಲದ ಸಾಹಿತ್ಯ, ಸಂಸ್ಕೃತಿ ಪರಿಚಯಿಸಲು ನಾವು ಕೊಳೆಗೇರಿಗೂ ಹೋಗುತ್ತೇವೆ. ಕಾಂಗ್ರೆಸ್ ಕಚೇರಿಗೂ ಹೋಗುತ್ತೇವೆ. ಅಲ್ಲಿಗೆ ಹೋಗಿ ಪ್ರಭುತ್ವವನ್ನೂ ವಿರೋಧಿಸ ಬಲ್ಲ ಕುವೆಂಪು, ಕುಮಾರವ್ಯಾಸನ ಕುರಿತು ಹೇಳುತ್ತೇವೆ. ನಮಗೆ ಯಾವ ಮಡಿ, ಮೈಲಿಗೆಯ ಮನಸಿಲ್ಲ. ಅಷ್ಟಾಗಿ ನಾವು ಹೋದದ್ದು ಕೆ.ಪಿ.ಸಿ.ಸಿ.ಕಚೇರಿಗೆ ಹೊರತು ಮನುವಾದಿ ಕೇಶವಕೃಪಕ್ಕಲ್ಲ.” ಹೀಗೆ ಕೆ.ಪಿ.ಸಿ.ಸಿ. ಕಚೇರಿ ಮತ್ತು ವೈದಿಕ್ಯದ ಪಾಠಶಾಲೆ ಕೇಶವಕೃಪಕ್ಕೂ ಇರುವ ವ್ಯಾಪಕ ವ್ಯತ್ಯಾಸಗಳು. ಅವು ಪಡೆದುಕೊಂಡಿರುವ ಅರ್ಥ ಮತ್ತು ಜೀವಪ್ರಜ್ಞೆಯ ವಿನ್ಯಾಸ, ವಿಸ್ತಾರಗಳು ಗಮನಾರ್ಹವೇ ಹೌದು. ಈ ಎಲ್ಲ ಟೀಕೆ, ಪ್ರತಿಕ್ರಿಯೆ, ಸಂವಾದಗಳ ಹಿಂದೆ ಬೇರಿನಂತೆ ಅನೇಕ ವಿಚಾರಧಾರೆಗಳು ಸಂಗೋಪನ ಶಕ್ತಿಯಾಗಿ ಸಾಪೇಕ್ಷಗೊಂಡಿವೆ. ಮುಕುಂದರಾಜ ಅವರ ಇಂತಹ ಸ್ಪಷ್ಟನೆಗಳು ಕೇವಲ ಸಮರ್ಥನೆಗಾಗಿ ಅಲ್ಲ. ನಂತರ ಮತ್ತಷ್ಟು ಬೆಳವಣಿಗೆಗಳು.
ಯಾವುದೇ ಪಕ್ಷದ ಸರಕಾರವಿದ್ದಾಗಲೂ ಸಾಂಸ್ಕೃತಿಕ ಲಾಬಿ, ರಾಜಕಾರಣ ಇದ್ದೇ ಇರುತ್ತದೆ. ಅವರವರ ಪಕ್ಷದ ಅಧ್ಯಕ್ಷ, ಶಾಸಕ, ಸಚಿವರ ಮನೆ, ಪಕ್ಷದ ಕಚೇರಿಗೂ ಹೋಗಿ ಅಕಾಡೆಮಿ, ಪ್ರಾಧಿಕಾರಗಳ ಪದವಿಗಾಗಿ ಲಾಬಿ ಮಾಡುವ ಕೆಲವು ಸಾಹಿತಿ ಕಲಾವಿದರ ರಾಜಕೀಯ ಮನಸ್ಥಿತಿಗಳ ಕುರಿತು ಚರ್ಚೆಗಳು ಮುನ್ನೆಲೆಗೆ ಬರುತ್ತಲಿವೆ. ಆದರೆ ಅವಕಾಶವಂಚಿತ ಕೆಲವು ಅತೃಪ್ತ ಆತ್ಮಗಳಿಗೆ ತಮ್ಮ ವಯಕ್ತಿಕ ನೆಲೆಯಲ್ಲಿ ಇಂತಹ ಘಟನೆಗಳು ವಿಘ್ನಸಂತಸದ ಗಳಿಗೆಗಳಾಗಿರುವುದು ಮತ್ತೊಂದು ಸಾಂಸ್ಕೃತಿಕ ದುರಂತ.
ಇವರಾದರೂ ಕಾಂಗ್ರೆಸ್ ಕಚೇರಿಗೆ ಹೋಗಿದ್ದಾರೆ. ಈ ಹಿಂದೊಬ್ಬ ಅಡ್ನಾಡಿ ಇದ್ದ. ಅವನು ಮೈಸೂರು ರಂಗಾಯಣವನ್ನೇ ಕೇಸರಿ ಕೃಪದ ಅಡ್ಡೆಯನ್ನಾಗಿ ಮಾಡಿಕೊಂಡಿದ್ದ. ಅವನ ಅಡ್ಡಡ್ಡ ಮತ್ತು ಅಡ್ಡಾದಿಡ್ಡಿ ಆಟಗಳ ಬಗ್ಗೆ ಬೇಕಾದಷ್ಟು ಪ್ರತಿರೋಧ ಅಂಕಣಗಳನ್ನು ಬರೆದೂ ಬರೆದು ನನ್ನಂತಹ ಅನೇಕರಿಗೆ ರೇಜಿಗೆ ಇಟ್ಟಿತ್ತು. ಆದರೆ ಆಗ ಹೆಸರಾಂತ ಪತ್ರಿಕೆಗಳಲ್ಲಿ ಆ ಕುರಿತು ಸಂಪಾದಕೀಯಗಳು ಪ್ರಕಟಗೊಂಡ ನೆನಪು ನನಗಂತೂ ಇಲ್ಲ. ಇದು ಸಹಿತ ಸಮರ್ಥನೆಗಾಗಿ ಅಲ್ಲ.
ಅಂದ್ಹಾಂಗ ರಾಜಕಾರಣಗಳಿಗೆ ಸಾಂಸ್ಕೃತಿಕ ಲೋಕದ ವಿದ್ವಾಂಸರು ಸೂಕ್ತ ಸಲಹೆ ನೀಡಲೇ ಬಾರದೆಂಬ ಕೆಲ ಢೋಂಗಿ ಪ್ರಗತಿಪರರ ಫರ್ಮಾನು. ನೀಡುವುದಾದರೆ ಅವರ ಪ್ರಕಾರ ಆಯಾ ಪಕ್ಷದ ಸದಸ್ಯರಾಗಿಯೇ ಅದು ಆಗಬೇಕಂತೆ. ಭಟ್ಟಂಗಿಗಳಾಗದೇ ಸಾಂಸ್ಕೃತಿಕ ಅಕಾಡೆಮಿಗಳ ಸದಸ್ಯರಾಗಿ, ಅಧ್ಯಕ್ಷರಾಗಿಯೂ ಅದನ್ನು ಆಗು ಮಾಡಬಹುದೆಂಬ ಸಣ್ಣ ಸತ್ಯ ಅರಿಯದ ಇಂಥವರ ಬಗ್ಗೆ ಕನಿಕರ ಬಿಟ್ಟರೆ ಮತ್ತೇನಿಲ್ಲ. ಡಿ.ಕೆ.ಶಿ. ಅವರಂತಹ ಆಟೋಕ್ರಸಿ ಧೋರಣೆಗಳನ್ನು ಸಾಹಿತಿಗಳು ಬದಲು ಮಾಡದೇ ಹೋದರೆ ಇನ್ಯಾರು ಮಾಡಬಲ್ಲರು.?
ದ್ಯಾಸಕ್ಕೆ ಬಂದ ಮತ್ತೊಂದು ನೆನಪು ಹೇಳಲೇಬೇಕಿದೆ. ಬಂಡಾಯ ಸಾಹಿತ್ಯ ಸಂಘಟನೆಗೆ ಆರಂಭದ ದಶಕದಲ್ಲಿ ಇಂತಹ ಸವಾಲು, ಸಂದರ್ಭಗಳು ಎದುರಾಗಿದ್ದವು. ಬಹಳ ಮುಖ್ಯವಾಗಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಪರಿಷತ್ತಿನ ಸಮ್ಮೇಳನ ಇತ್ಯಾದಿಗಳಲ್ಲಿ ಬಂಡಾಯ ಸಾಹಿತಿಗಳು ಭಾಗವಹಿಸುವ ಕುರಿತು ಗಂಭೀರ ಚರ್ಚೆಗಳಾಗಿದ್ದವು. ಅದೆಲ್ಲಿವರೆಗೆ ಸಂವಾದ, ಚರ್ಚೆಗಳು ಏರ್ಪಟ್ಟಿದ್ದವೆಂದರೇ ಆರ್.ಎಸ್.ಎಸ್. ನವರು ಬಂಡಾಯ ಸಾಹಿತಿಗಳನ್ನು ಕರೆದರೆ ಅಲ್ಲಿಗೂ ಹೋಗೋಣ. ಅವರಲ್ಲಿಗೆ ಹೋಗಿ ನಾವು ಹೇಳಬೇಕಾದುದನ್ನೇ ಹೇಳೋಣ ಎಂಬ ಬಂಡಾಯ ಮನೋಧರ್ಮದ ಬದ್ಧತೆಯನ್ನು ಹೊಂದಲಾಗಿತ್ತು. ಹಾಗೆಂದು ಕಾಂಗ್ರೆಸ್ ಕಚೇರಿ ಸಭೆ ಸ್ವಾಗತಾರ್ಹ ಎಂದಲ್ಲ.
ಬಂಡಾಯ ಸಾಹಿತ್ಯ ಸಂಘಟನೆಯ ನಿಲುವಿನಿಂದ ಕನ್ನಡ ಸಾಹಿತ್ಯ ಪರಿಷತ್ತಿನ ನಡೆಯಲ್ಲಿ ಕೆಲವು ಕಾಲ ಕೆಲವು ಬದಲಾವಣೆಗಳು ಕಂಡು ಬಂದವು. ಆದರೆ ಆ ಬದಲಾವಣೆ ಬಹಳ ದಿನಕಾಲ ಉಳಿಯಲಿಲ್ಲ. ಪುನಃ ಅದು ಹಿಂದಿನ ಹಾದಿಗೆ ಹೊರಳಿರುವುದು ಸಾಂಸ್ಕೃತಿಕ ದುರಂತ. ಪ್ರಸ್ತುತ ಅಕಾಡೆಮಿ, ಪ್ರಾಧಿಕಾರ ಅಧ್ಯಕ್ಷರುಗಳ ಮೊದಲ ನಡೆ ಅಸಮಾಧಾನ ತಂದರೂ ಅವರು ಚಲನಶೀಲರೆಂಬ ಸಣ್ಣ ಸಮಾಧಾನ. ಏಕೆಂದರೆ ಕಳೆದೆರಡು ವರುಷಗಳಿಂದ ಅಕಾಡೆಮಿಗಳು ನಿರ್ಜೀವಗೊಂಡಿದ್ದವು.
ಮಲ್ಲಿಕಾರ್ಜುನ ಕಡಕೋಳ
9341010712