ದಾವಣಗೆರೆ: ಜು.31ರ ಒಳಗಾಗಿ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸದಿದ್ದರೆ ಜಿಲ್ಲಾ ಕೇಂದ್ರ ಬಂದ್ ಮಾಡುವ ಜೊತೆಗೆ ಜನ ಪ್ರತಿನಿಧಿಗಳು, ಪಾಲಿಕೆ, ಜಿಲ್ಲಾಡಳಿತದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಮಾದಿಗ ದಂಡೋರ ಜಿಲ್ಲಾ ಸಮಿತಿ ಜಿಲ್ಲಾಧ್ಯಕ್ಷ ಎಚ್.ಸಿ.ಗುಡ್ಡಪ್ಪ ಎಚ್ಚರಿಸಿದರು.
ನಗರದ ಅಶೋಕ ರಸ್ತೆಯ ಮಾದಿಗ ದಂಡೋರ ಸಮಿತಿ ಜಿಲ್ಲಾ ಕಚೇರಿಯಲ್ಲಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಜಿಲ್ಲಾ ಕೇಂದ್ರದಲ್ಲಿ ನೆನೆಗುದಿಗೆ ಬಿದ್ದಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲು ಜಿಲ್ಲಾಡಳಿತ, ಪಾಲಿಕೆಗೆ ಒಂದು ವಾರದ ಗಡುವು ನೀಡಿದೆ.
ಸಭೆಯಲ್ಲಿ ಮಾತನಾಡಿದ ಎಚ್.ಸಿ.ಗುಡ್ಡಪ್ಪ, ನಗರದಲ್ಲಿ ಡಾ.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕಳೆದ 2 ದಶಕಗಳಿಂದಲೂ ಮಾದಿಗ ದಂಡೋರ ಸಮಿತಿ, ದಲಿತ ಸಂಘರ್ಷ ಸಮಿತಿ, ಸಾರ್ವಜನಿಕರು ಹೋರಾಟ ನಡೆಸಿಕೊಂಡು, ಜಿಲ್ಲಾಡಳಿತ, ಪಾಲಿಕೆ, ಜನ ಪ್ರತಿನಿಧಿಗಳಿಗೆ ಮನವಿ ಮಾಡುತ್ತಲೇ ಬಂದಿದ್ದರೂ ಅಂಬೇಡ್ಕರ್ ಭವನ ವಿಚಾರ ಮಾತ್ರ ಸಂಪೂರ್ಣ ನೆನೆಗುದಿಗೆ ಬಿದ್ದಿದೆ. ಅಂಬೇಡ್ಕರ್ ಭವನದ ಬಗ್ಗೆ ಜನ ಪ್ರತಿನಿಧಿಗಳು, ಅಧಿಕಾರಿಗಳಿಗೆ ಯಾಕಿಷ್ಟು ಅಸಡ್ಡೆ ಎಂದು ಪ್ರಶ್ನಿಸಿದರು.
ಇಡೀ ಜಗತ್ತೇ ಒಪ್ಪುವಂತಹ ಸಂವಿಧಾನ ಕೊಟ್ಟಂತಹ ವಿಶ್ವ ನಾಯಕ, ದಲಿತ, ಹಿಂದುಳಿದ, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ಸಮುದಾಯಗಳ ಬಡವರ ಪರ ಜೀವಿತಾವದಿಯುದ್ದಕ್ಕೂ ಹೋರಾಟ ನಡೆಸಿದ ಅಂಬೇಡ್ಕರ್ ಹೆಸರಿನಲ್ಲಿ ಜಿಲ್ಲಾ ಕೇಂದ್ರದಲ್ಲಿ ಒಂದು ಸಮುದಾಯ ಭವನ ಇಲ್ಲದಿರುವುದು ದುರಂತ. ವಿದ್ಯಾರ್ಥಿ, ಯುವಜನರು, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ನಿರ್ಲಕ್ಷ್ಯ ತೋರುತ್ತಿರುವುದನ್ನು ಇನ್ನು ಸಹಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಅಂಬೇಡ್ಕರ್ ಭವನ ನಿರ್ಮಾಣಕ್ಕೆ ವಿಳಂಬ ನೀತಿ ಅನುಸರಿಸುತ್ತಿರುವ ಜಿಲ್ಲಾಡಳಿತದ ವಿರುದ್ಧ ತೀವ್ರ ಹೋರಾಟಕ್ಕೆ ತೀರ್ಮಾನಿಸಲಾಗಿದೆ. ಜು.31ರ ಒಳಗಾಗಿ ಅಂಬೇಡ್ಕರ್ ಭವನ ನಿರ್ಮಿಸಲು ಶಂಕು ಸ್ಥಾಪನೆ ನೆರವೇರಿಸದಿದ್ದರೆ, ಮಾದಿಗ ದಂಡೋರ ಸಮಿತಿಯು ಎಲ್ಲಾ ಸಂಘಟನೆಗಳು, ಸಮುದಾಯಗಳ ಮುಖಂಡರ ಜೊತೆಗೆ ಚರ್ಚಿಸಿ, ದಾವಣಗೆರೆ ಮಹಾ ನಗರ ಬಂದ್ ಸೇರಿದಂತೆ ವಿವಿಧ ಹಂತದ ಹೋರಾಟಕ್ಕೆ ನಿರ್ಧಾರ ಮಾಡಿದೆ ಎಂದು ಅವರು ತಿಳಿಸಿದರು.
ಸಿದ್ದರಾಮಯ್ಯ ಮೊದಲ ಸಲ ಸಿಎಂ ಆಗಿದ್ದಾಗ ಆಗಿನ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಇಲ್ಲಿನ ಪಿಬಿ ರಸ್ತೆಯ ಉಪ ವಿಭಾಗಾಧಿಕಾರಿ ಕಚೇರಿ ಪಕ್ಕದ ಲೋಕೋಪಯೋಗಿ ಇಲಾಖೆ ಸ್ವಾಧೀನದ ನಿವೇಶನವನ್ನ ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರಿಸುವಂತೆ, ಅಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಮುಂದಾಗಿದ್ದರು. ಆಗಿನ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪನವರಿಗೂ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅದು ಕಾರ್ಯ ರೂಪಕ್ಕೆ ಬರದಂತೆ ತಡೆದಿವೆ ಎಂದು ಅವರು ಆರೋಪಿಸಿದರು.
ದಶಕಗಳ ಬೇಡಿಕೆಯಾದ ಅಂಬೇಡ್ಕರ್ ಭವನಕ್ಕೆ ಇಂದಿಗೂ ಸ್ಥಳ ನಿಗದಿಯಾಗಿಲ್ಲ, ಜಾಗ ಗುರುತಿಸಿಲ್ಲ. ಬರೀ ಆಶ್ವಾಸನೆಗಳನ್ನು ನೀಡುತ್ತಲೇ ಇಡೀ ದಲಿತ ಸಮುದಾಯವನ್ನು ಅವಮಾನಿಸುತ್ತಾ ಬಂದ ಜಿಲ್ಲಾಡಳಿತ, ಪಾಲಿಕೆ ಕ್ರಮವನ್ನು ತೀವ್ರವಾಗಿ ಖಂಡಿಸುತ್ತೇವೆ. ಅಂಬೇಡ್ಕರ್ ಭವನಕ್ಕಾಗಿ ಮಾದಿಗ ದಂಡೋರ ಸಮಿತಿ ಯಾವುದೇ ಹಂತದ ಹೋರಾಟಕ್ಕೂ ಸಿದ್ಧವಾಗಿದೆ. ಜು.31ರ ಒಳಗಾಗಿ ಅಂಬೇಡ್ಕರ್ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸದಿದ್ರೆ ತೀವ್ರ ಹೋರಾಟ ಮಾತ್ರ ನಿಶ್ಚಿತ ಎಂದು ಎಚ್.ಸಿ.ಗುಡ್ಡಪ್ಪ ಎಚ್ಚರಿಸಿದರು.
ಸಮಿತಿ ಉಪಾಧ್ಯಕ್ಷ ಎಚ್.ಚಿದಾನಂದಪ್ಪ ಮಾತನಾಡಿ, ಮಾದಿಗ ಸಮುದಾಯದ ರಮೇಶ ಜಿಗಜಿಣಗಿ 7 ಸಲ ಸಂಸದರಾದರೂ ಕೇಂದ್ರ ಸಚಿವ ಸ್ಥಾನ ನೀಡದೇ ಬಿಜೆಪಿ ಸರ್ಕಾರ ಅವಮಾನಿಸಿದೆ. ತಕ್ಷಣವೇ ಬಿಜೆಪಿ ವರಿಷ್ಟರು ರಮೇಶ ಜಿಗಜಿಣಗಿಯವರನ್ನು ಕೇಂದ್ರ ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಮಾದಿಗ ಸಮಾಜಕ್ಕೆ ಸಾಮಾಜಿಕ ನ್ಯಾಯವನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಸಮಿತಿ ಪದಾಧಿಕಾರಿಗಳಾದ ಬಿ.ಮಲ್ಲೇಶಪ್ಪ, ಎಂ.ಡಿ.ಶಿವಕುಮಾರ, ಹುಚ್ಚವನಹಳ್ಳಿ ಚಂದ್ರಪ್ಪ, ಕಳವೂರು ರಂಗಪ್ಪ ಇತರರು ಇದ್ದರು.