ವಿಶ್ವ ಅಸ್ತಮಾ (Asthma) ದಿನಾಚರಣೆ ಎಂದರೆ ಏನು?
ವಿಶ್ವ ಅಸ್ತಮಾ (Asthma) ದಿನಾಚರಣೆ ಪ್ರತಿ ಮೇ ತಿಂಗಳ ಮೊದಲನೇ ಮಂಗಳವಾರದಂದು ಆಚರಿಸಲಾಗುತ್ತದೆ. ಹಾಗಾಗಿ ಪ್ರತಿವರ್ಷ ಇದರ ದಿನಾಂಕ ಬದಲಾಗುತ್ತದೆ. ವಿಶ್ವ ಅಸ್ತಮಾ(Asthma) ದಿನಾಚರಣೆಯ ಉದ್ದೇಶ ಏನೆಂದರೆ ಉದಾಹರಣೆಗೆ ಯಾವ ರೀತಿ ನಾವು ರಾಮನವಮಿಯಂದು ಎಂದು ಶ್ರೀ ರಾಮನ ಆಚರಣೆಗಳನ್ನು ಜೀವನ ಶೈಲಿಗಳನ್ನು ಆಚರಿಸುತ್ತೇವೆ ಅಥವಾ ಕನಕದಾಸರ ಜನ್ಮದಿನದಂದು ಅವರ ಆದರ್ಶಗಳನ್ನು ಆಚರಿಸುವ ವಿಷಯವನ್ನು ಮನಸ್ಸಲ್ಲಿ ಇಡುತ್ತೇವೆಯೋ, ಅದೇ ರೀತಿ ವಿಶ್ವ ಅಸ್ತಮ ದಿನಾಚರಣೆ ದಿನ ನಾವು ಅಸ್ತಮಾ ಕಾಯಿಲೆಯ ಬಗ್ಗೆ ವಿಚಾರ ಮಂಥನ ಮಾಡುವುದರಿಂದ ಸಮಾಜಕ್ಕೆ ಒಂದು ಪ್ರಜ್ಞೆ ಹುಟ್ಟುತ್ತದೆ. ಇದೇ ರೀತಿ ವಿಶ್ವ ಮಧುಮೇಹ ದಿನ ಹಾಗೂ ಇತ್ಯಾದಿಗಳನ್ನು ಆಚರಿಸಲು ವಿಶ್ವ ಆರೋಗ್ಯ ಸಂಸ್ಥೆ ಪ್ರೇರಣೆ ನೀಡಿದೆ ಬೇರೆ ಬೇರೆ ದಿನಗಳಲ್ಲಿ.
ಅಸ್ತಮಾ (Asthma) ಕಾಯಿಲೆ ಎಂದರೇನು?
ಕೆಮ್ಮು, ಉಬ್ಬಸ, ಉಸಿರಾಟದ ತೊಂದರೆ, ಎದೆ ಭಾರ, ಕಫ ಸಿಕ್ಕಿಹಾಕಿಕೊಳ್ಳುವುದು ಇದು ಅಸ್ತಮಾ (Asthma) ಕಾಯಿಲೆಯ ಪ್ರಮುಖ ಲಕ್ಷಣಗಳು
ಅಸ್ತಮಾ (Asthma) ಕಾಯಿಲೆ ಬರಲು ಕಾರಣವೇನು?
ಅಸ್ತಮಾ ಕಾಯಿಲೆಗಳಲ್ಲಿ ಎರಡು ಬಗೆ. ಒಂದು ಅಲರ್ಜಿಯಿಂದ ಬರುವಂತಹ ಅಸ್ತಮಾ ಮತ್ತು ಇನ್ನೊಂದು ಅನುವಂಶಿಕವಾಗಿ ಬರುವಂತಹ ಅಸ್ತಮ. ಕೆಲವು ದಶಕಗಳ ಹಿಂದೆ ಅನುವಂಶಿಕವಾಗಿ ಬರುವಂತಹ ಅಸ್ತಮ ಪ್ರಮುಖವಾಗಿತ್ತು. ಆದರೆ ಈಗ ಹೆಚ್ಚುತ್ತಿರುವ ಮಾಲಿನ್ಯದಿಂದ ಅಲರ್ಜಿಯಿಂದ ಬರುವಂತಹ ಅಸ್ತಮಾ ಪ್ರಮಾಣ ತುಂಬಾ ಹೆಚ್ಚಾಗಿದೆ. ಓರ್ವ ವ್ಯಕ್ತಿಗೆ ಅಸ್ತಮ ಜೊತೆಗೆ ಬೇರೆ ಯಾವ ಕಾಯಿಲೆಗಳು ಇರಬಹುದಾಗಿದೆ? ಅಲರ್ಜಿ ನೆಗಡಿ, ಸೈನುಸೈಟಿಸ್, ಅಲರ್ಜಿ ಚರ್ಮದ ತುರಿಕೆ, ಕಿವಿ ಸೋರುವಿಕೆ, ರಕ್ತದಲ್ಲಿ ಇಯೋಸಿನೊಫಿಲಿಯ ಇತ್ಯಾದಿ. ಅಸ್ತಮ ಕಾಯಿಲೆಯಲ್ಲಿ ನಮಗೆ ಒಳಗಡೆ ಆಗುವಂತಹ ಶಾರೀರಿಕ ಬದಲಾವಣೆ ಏನು? ಮಾಮೂಲಾಗಿ ಅಗಲವಿದ್ದು ಸರಾಗವಾಗಿ ಉಸಿರಾಡಲು ಸಾಧ್ಯವಿರುವoತಹ ನಮ್ಮ ಉಸಿರಾಟದ ನಾಳಗಳು ಕಿರಿದಾಗುತ್ತವೆ ಹಾಗೂ ಇದರಲ್ಲಿ ಕಫ ತುಂಬಿ ಗಾಳಿ ಆಡುವುದು ಅಂದರೆ ಉಸಿರಾಡುವುದು ಕಷ್ಟಕರವಾಗಿ ಪರಿಣಮಿಸುತ್ತದೆ.
ಅಸ್ತಮಾ ರೋಗಿಗಳು ಊಟದಲ್ಲಿ ಏನು ಪಥ್ಯ ಮಾಡಬೇಕು?
ಹುಳಿ ಪದಾರ್ಥ, ಹುಳಿಯಾಗಿರುವ ಹಣ್ಣುಗಳು (ಕಿತ್ತಲೆ, ದ್ರಾಕ್ಷಿ, ಮೋಸಂಬಿ ಇತ್ಯಾದಿ) ಮತ್ತು ಎಣ್ಣೆಯಲ್ಲಿ ಕರಿದಂತಹ ಪದಾರ್ಥ, ಕೊಬ್ಬಿನ ಅಂಶ ಇರುವಂತಹ ಪದಾರ್ಥ ಹಾಗೂ ತಂಪಾದ ಪಾನೀಯ, ಐಸ್ ಕ್ರೀಮ್ ಮತ್ತು ಫ್ರಿಡ್ಜ್ ನಲ್ಲಿ ಇರುವಂತಹ ಪದಾರ್ಥಗಳನ್ನು ನೇರವಾಗಿ ತಿನ್ನಬಾರದು. ಹುಳಿ ಇರುವಂತಹ ಮೊಸರು ಮಜ್ಜಿಗೆ ಹಾಗೂ ಕೆನೆ ಇರುವಂತಹ ಹಾಲು ಮೊಸರು ಮಜ್ಜಿಗೆ ಸೇವಿಸಬಾರದು.
ಅಸ್ತಮಾ ರೋಗಿಗಳು ಎಂತಹ ವಾತಾವರಣದಲ್ಲಿ ಇದ್ದರೆ ತೊಂದರೆ ಅನುಭವಿಸುತ್ತಾರೆ?
ಧೂಳು, ಹೊಗೆ, ಘಾಟು ವಾಸನೆ ಇರುವಂತಹ ವಾತಾವರಣದಲ್ಲಿ ಅಸ್ತಮ ರೋಗಿಗಳಿಗೆ ತೊಂದರೆ ಆಗುತ್ತದೆ. ಗಾಳಿಯಲ್ಲಿ ಸಣ್ಣ ಕಣಗಳು ಇರುವಂತಹ ಸ್ಥಳದಲ್ಲಿ ಕೆಲಸ ಮಾಡಿದರೆ ಅಸ್ತಮಾ ರೋಗಿಗಳಿಗೆ ಕಾಯಿಲೆ ಉಲ್ಪಣಿಸುತ್ತದೆ. ಉದಾಹರಣೆಗೆ ಹತ್ತಿ ಗಿರಣಿ, ಕಬ್ಬು ಅರೆಯುವಂತಹ ಕಾರ್ಖಾನೆ, ಇದ್ದಲಿನ ಗಣಿ, ಗಣಿಗಾರಿಕೆ ಇತ್ಯಾದಿ.
ಅಸ್ತಮಾ ಹಾಗೂ ಅಲರ್ಜಿ ರೋಗಿಗಳಿಗೆ ಸಹಾಯ ಮಾಡುವಂತಹ ಯಾವುದಾದರೂ ವ್ಯಾಕ್ಸೀನ್ ಇದೆಯಾ?
ಹೌದು ಅಸ್ತಮಾ ಮತ್ತು ಅಲರ್ಜಿ ರೋಗಿಗಳು ಬಾರಿ ಬಾರಿ ವೈರಸ್ ಇನ್ಫೆಕ್ಷನ್ ಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಅದರಲ್ಲೂ ಇನ್ಫ್ಲುಯೆನ್ಜಾ ವೈರಸ್ ನಿಂದ ತುಂಬಾ ಹೆಚ್ಚು. ಇವರಿಗೆ ಇನ್ಫ್ಲುಯೆಂಜಾ ವ್ಯಾಕ್ಸೀನ್ ಪ್ರತಿ ವರ್ಷ ನೀಡುವುದರಿಂದ ಇವರು ಬಾರಿ ಬಾರಿ ಇನ್ಫೆಕ್ಷನ್ ಗೆ ಒಳಗಾಗುವುದನ್ನು ಶೇಕಡ 70 ಪ್ರತಿಶತ ತಪ್ಪಿಸಬಹುದು. ಅಸ್ತಮಾ ಚಿಕಿತ್ಸೆಯಲ್ಲಿ ಉಪಯೋಗಿಸುವಂತಹ ಬಾಯಲ್ಲಿ ಎಳೆದುಕೊಳ್ಳುವಂತಹ ಔಷಧಿಗಳು ಅಂದರೆ ಇನ್ಹೆಲರ್ಸ್ ಳು ಒಳ್ಳೆಯವೇ? ಇದನ್ನು ದೀರ್ಘಕಾಲ ಉಪಯೋಗಿಸುವುದರಿಂದ ಏನಾದರೂ ಅಡ್ಡ ಪರಿಣಾಮಗಳು ಆಗುವುದಾ?
ಅಸ್ತಮಾ ಚಿಕಿತ್ಸೆಯಲ್ಲಿ ಉಪಯೋಗಿಸುವಂತಹ ಇನ್ಹೇಲರ್ ಗಳು ಅತ್ಯಂತ ಸುರಕ್ಷಿತ ಹಾಗೂ ದುಷ್ಪರಿಣಾಮಗಳು ಇಲ್ಲದೆ ಇರುವಂತಹ ಔಷಧಿಗಳು. ಈ ಔಷಧಿಗಳಲ್ಲಿ ನುಂಗುವ ಮಾತ್ರೆಗಳಲ್ಲಿ ಇರುವಂತಹ ಡೋಸ್ನ ಒಂದನೇ 80 ಭಾಗ ಅಥವಾ ಒಂದನೇ 40 ಭಾಗ ಅಷ್ಟು ಕಡಿಮೆ ಪ್ರಮಾಣದಲ್ಲಿ ಉಪಯೋಗಿಸಲಾಗುತ್ತದೆ.
Read also : World tuberculosis Day | ವಿಶ್ವ ಕ್ಷಯ ರೋಗ (ಟಿ ಬಿ) ದಿನಾಚರಣೆ : ರೋಗ ತಡೆಗೆ ಮುನ್ನಚ್ಚರಿಕೆ ಅವಶ್ಯ
ನಮಗೆ ಕಣ್ಣಿಗೆ ತೊಂದರೆ ಆದರೆ ಕಣ್ಣಿನ ಡ್ರಾಪ್ಸ್, ಕಿವಿಗೆ ತೊಂದರೆ ಆದರೆ ಕಿವಿಯ ಡ್ರಾಪ್ಸ್, ಮುಖದ ಮೇಲೆ ಮೊಡವೆ ಆದರೆ ಮೊಡವೆಯ ಕ್ರೀಮ್ ಹೇಗೆ ಉಪಯೋಗ ಮಾಡುತ್ತೀವಿ ಹಾಗೆ ಶ್ವಾಸಕೋಶಗಳಿಗೆ ನೇರ ತಲುಪುವ ಔಷಧಿ ಇನ್ಹೇಲರ್ಸ್. ಹೀಗಾಗಿ ಎಲ್ಲಿ ಕಾಯಿಲೆ ಇದೆಯೋ ಔಷಧಿ ನೇರ ಅಲ್ಲಿಗೆ ತಲುಪುವುದರಿಂದ ದುಷ್ಪರಿಣಾಮ ಆಗುವುದು ನಗಣ್ಯ. ಇನ್ಹೇಲರ್ ಎಷ್ಟು ಸುರಕ್ಷಿತ ಔಷಧಿ ಅಂದರೆ ಇದನ್ನು ಗರ್ಭಿಣಿ ಸ್ತ್ರೀಯರಲ್ಲಿ ಹಾಗೂ ಎದೆಹಾಲು ಕುಡಿಸುವ ತಾಯಂದಿರಲ್ಲಿ ಕೂಡ ಯಾವುದೇ ಚಿಂತೆಯಿಲ್ಲದೆ ಉಪಯೋಗಿಸಬಹುದು. ಇವನ್ನು ಧೀರ್ಘಕಾಲ ಬಳಸುವುದರಿಂದ ದುಷ್ಪರಿಣಾಮಗಳು ಆಗುತ್ತದೆ ಎನ್ನುವ ಭಯ ಬೇಡ.
ಅಸ್ತಮಾ ಕಾಯಿಲೆ ಒಬ್ಬರಿಂದ ಒಬ್ಬರಿಗೆ ಹರಡು ವಂತಹ ಕಾಯಿಲೆ ಹೌದಾ?
ಖಂಡಿತ ಇಲ್ಲ, ಇದು ಅನುವಂಶಿಕವಾಗಿ ತಂದೆ ತಾಯಿಗಳಿಂದ ಬರಬಹುದು ಅಥವಾ ವಾತಾವರಣದ ಅಲರ್ಜಿಯಿಂದ ಬರಬಹುದು. ಆದರೆ ಒಬ್ಬರಿಂದ ಒಬ್ಬರಿಗೆ ಕೆಮ್ಮು ಮತ್ತು ಸೀನಿನಿಂದ ಹರಡುವುದಿಲ್ಲ.
ಮಕ್ಕಳಲ್ಲಿ ಕಂಡುಬರುವಂತಹ ಅಸ್ತಮಾ ಚಿಕಿತ್ಸೆ ಆರೈಕೆ ಮುಂದೆ ಹೇಗೆ?
ಮಕ್ಕಳಲ್ಲಿ ಅದರಲ್ಲಿಯೂ 12 ವರ್ಷದ ಒಳಗಿನ ವಯಸ್ಸಿನವರಿಗೆ ಸತತವಾದ ತಪಾಸಣೆ ಹಾಗೂ ಚಿಕಿತ್ಸೆ ದೊರಕುತ್ತಿದ್ದರೆ ಅವರು ವಯಸ್ಕರಾಗಿ ಬದಲಾಗುವ ಹೊತ್ತಿಗೆ 80 ಪ್ರತಿಶತಹ ಮಕ್ಕಳಿಗೆ ಈ ತೊಂದರೆ ಹೊರಟು ಹೋಗುತ್ತದೆ. ಆದರೆ ನಿರ್ಲಕ್ಷ ಮಾಡದೆ ಸತತ ಔಷಧಿ ಹಾಗೂ ತಪಾಸಣೆ ಅವರು ವಯಸ್ಕರಾಗಿ ಬೆಳೆಯುವ ತನಕ ನೋಡಿಕೊಳ್ಳುವ ಅವಶ್ಯಕತೆ ಇದೆ.
ಅಸ್ತಮಾ ಅಲರ್ಜಿ ನೆಗಡಿ ಇರುವಂತಹ ಗೃಹಿಣಿಯರಲ್ಲಿ ಏನು ಮುಂಜಾಗರೂಕತೆ ಅವಶ್ಯಕ?
ಮನೆಯಲ್ಲಿ ಕೆಲಸ ಮಾಡುವ ಗೃಹಿಣಿಯರು ಪೂಜೆ ಮಾಡುವ ಸಮಯದಲ್ಲಿ ಊದಿನ ಕಡ್ಡಿ ಹೊಗೆಗೆ, ಮಂಗಳಾರತಿ ಹೊಗೆಗೆ ಮತ್ತು ಅಡಿಗೆ ಮಾಡುವ ಸಮಯದಲ್ಲಿ ಒಗ್ಗರಣೆ ಘಾಟಿಗೆ ಮತ್ತು ಕಸ ಗುಡಿಸುವ, ಧೂಳು ಕೊಡವುವ ಸಮಯದಲ್ಲಿ ಧೂಳಿಗೆ ಈಡಾಗುತ್ತಾರೆ. ಅವರು ಕಡ್ಡಾಯವಾಗಿ ಇಂತಹ ಸಮಯಗಳಲ್ಲಿ ಪರಿಸರ ಮಾಲಿನ್ಯ ತಪ್ಪಿಸುವಂತಹ ಮಾಸ್ಕ್ (ಕರೋನ ಮಾಸ್ಕ್ ಅಲ್ಲ) ಉಪಯೋಗಿಸುವ ಅಭ್ಯಾಸ ಇಟ್ಟುಕೊಳ್ಳಬೇಕು. ಬಾಯಿ ಮತ್ತು ಮೂಗನ್ನು ಸೆರಗಿನಿಂದ ಅಥವಾ ಕರವಸ್ತ್ರದಿಂದ ಮುಚ್ಚಿಕೊಂಡರೆ ಉಪಯೋಗವಿಲ್ಲ.
ಅಸ್ತಮಾ ಕಾಯಿಲೆ ಯಾವ ವಯೋಮಾನದವರಿಗೆ ಬರುತ್ತದೆ?
ಹುಟ್ಟಿದ ಮಕ್ಕಳಿನಿಂದ ಹಿಡಿದು 40 ರಿಂದ 50 ವರ್ಷ ವಯೋಮಾನದವರಿಗೆ ಯಾರಿಗಾದರೂ ಅಸ್ತಮ ಕಾಯಿಲೆ ಕಾಣಿಸಿಕೊಳ್ಳುತ್ತದೆ. ನವಜಾತ ಶಿಶುಗಳಲ್ಲಿ ಇದನ್ನು ಹೈಪರ್ ಆಕ್ಟಿವ್ ಏರ್ವೇ ಡಿಸೀಸ್ (HAAD) ಎಂದು ಕರೆಯಲಾಗುತ್ತದೆ. ಐವತ್ತು ವರ್ಷದ ನಂತರ ಬರುವ ಉಬ್ಬಸದ ಕಾಯಿಲೆ ಅಸ್ತಮ ಆಗಿರದೆ ಇದನ್ನು ಸಿಓಪಿಡಿ ಕಾಯಿಲೆ ಎಂದು ಕರೆಯುತ್ತಾರೆ. ಅಲರ್ಜಿ ಕೆಮ್ಮು ಮತ್ತು ಅಲರ್ಜಿ ನೆಗಡಿ ಅಂದರೆ ಅಲರ್ಜಿಕ್ ರೈನೈಟಿಸ್ ಮತ್ತು ಅಲರ್ಜಿಕ್ ಬ್ರಾನ್ಕ್ಯಿ ಟಿಸ್ ಮೊದಲೇ ನಿಯಂತ್ರಿಸಿದರೆ ಇದು ಅಸ್ತಮಾ ಆಗಿ ತಿರುಗುವ ಸಾಧ್ಯತೆ ತುಂಬಾ ಕಡಿಮೆ.
ಹಲವರಲ್ಲಿ ಅಸ್ತಮಾ ಕಾಯಿಲೆ ಕಾಣಿಸಿಕೊಳ್ಳುವ ರಹಸ್ಯವೇನು?
ಮಾಮೂಲಿ ಆರೋಗ್ಯವಂತ ಮನುಷ್ಯರಲ್ಲಿ ಸ್ವಾಭಾವಿಕ ಪ್ರಕ್ರಿಯೆಯಾಗಿ ಒಂದು ಅಲರ್ಜಿ ಕಣ ನಮ್ಮ ದೇಹ ಪ್ರವೇಶಿಸಿದಾಗ ಅದರ ವಿರುದ್ಧವಾಗಿ ನಮ್ಮ ದೇಹ ಒಂದು ಐಜಿಈ ಅನ್ನು ಬಿಡುಗಡೆ ಮಾಡುತ್ತದೆ. ಆದರೆ ಅಸ್ತಮಾ ಅಲರ್ಜಿ ರೋಗಿಗಳಲ್ಲಿ ಒಂದು ಅಲರ್ಜಿ ಕಣದ ವಿರುದ್ಧ ಒಂದಕ್ಕಿಂತ ಹೆಚ್ಚು ಐಜಿಈ ಬಿಡುಗಡೆ ಮಾಡುತ್ತದೆ. ಉದಾಹರಣೆಗೆ ನಮ್ಮ ದೇಹ ಒಂದು ಅಲರ್ಜಿ ಕಣವನ್ನು ಒಂದು ಐಜಿಈ ಮೂಲಕ ನಿಯಂತ್ರಿಸಿದ ನಂತರ ದೇಹದಲ್ಲಿ ಹೆಚ್ಚು ಉಳಿದು ಹೋಗುವಂತಹ ಮೇಲಿನ ನಾಲ್ಕು ಐದು ಐಜಿಈ ಗಳು ನಮ್ಮ ದೇಹದಲ್ಲಿ ಅಸ್ತಮ ಹಾಗೂ ಅಲರ್ಜಿ ಲಕ್ಷಣಗಳನ್ನು ಸೃಷ್ಟಿಸುತ್ತವೆ. ಅಂದರೆ ಅಲರ್ಜಿ ಕಣಗಳಿಗೆ ನಮ್ಮ ದೇಹ ಅತಿ ಹೆಚ್ಚು ರಿಯಾಕ್ಷನ್ ತೋರಿಸವುದೇ ಅಸ್ತಮ ಅಲರ್ಜಿ ಬರಲು ಕಾರಣ.
ಯಾವ ಯಾವ ಪರೀಕ್ಷೆಗಳಿಂದ ನಮಗೆ ಅಸ್ತಮಾ ಅಲರ್ಜಿ, ಚಿಕಿತ್ಸೆ ನೀಡಲು ಸಹಾಯ ಆಗುತ್ತದೆ?
ರೋಗಿಗೆ ಸಂಬಂಧಿಸಿದ ಹಾಗೆ ಬೇರೆಬೇರೆ ರೀತಿ ಪರೀಕ್ಷೆಗಳು ಮಾಡಬಹುದು ಅದು ಆ ಸಮಯಕ್ಕೆ ನಿರ್ಧಾರ ಮಾಡಿದಂತೆ, ಆದರೂ ಕೂಡ ಎದೆಯ ಎಕ್ಸ್ ರೇ ಮತ್ತು ರಕ್ತ ಪರೀಕ್ಷೆ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಶ್ವಾಸಕೋಶದ ಶಕ್ತಿಯ ಪರೀಕ್ಷೆ ಅಂದರೆ ಸ್ಪೈರೋ ಮೀಟರ್ ತುಂಬಾ ಮುಖ್ಯವಾದ ಪರೀಕ್ಷೆ ಆಗಿರುತ್ತದೆ. ಅಸ್ತಮಾ ಜೊತೆಗೆ ಅಲರ್ಜಿ ನೆಗಡಿ ಮತ್ತು ಸೈನುಸೈಟಿಸ್ ಇದೆಯೇ ಎಂದು ಖಾತ್ರಿಪಡಿಸಿಕೊಳ್ಳಲು ಮೂಗಿನ ಎಕ್ಸ್ ರೇ ಅವಶ್ಯಕ. ಕೆಲವೊಮ್ಮೆ ರಕ್ತ ಹಾಗೂ ಕಫದಲ್ಲಿ ಇರುವ ಐಜಿಈ ಪ್ರಮಾಣವನ್ನು ಅಳೆಯುವ ಪರೀಕ್ಷೆ ಕಳಿಸಬೇಕಾಗುತ್ತದೆ. ಕೆಲವೊಮ್ಮೆ ಸಿಟಿ ಸ್ಕ್ಯಾನ್ ಮತ್ತು ಸ್ಲೀಪ್ ಸ್ಟಡಿ ಬೇಕಾಗಬಹುದು ಅನುಮಾನವಿದ್ದರೆ ಮಾತ್ರ.
ಲೇಖಕರು: ಡಾ.ಎನ್.ಹೆಚ್.ಕೃಷ್ಣ,
ಅಸ್ತಮಾ,ಅಲರ್ಜಿ, ಶ್ವಾಸಕೋಶದ ಕಾಯಿಲೆಗಳ ಸಲಹಾ ವೈದ್ಯರು,
ದಾವಣಗೆರೆ