ಮಾಯಕೊಂಡ (Davanagere): ಕಬ್ಬೂರು ಗ್ರಾಮದವರು ಸರಕಾರದ ಯಾವುದೇ ಯೋಜನೆಗೆ ಕಾಯದೆ ಕೆರೆ ತುಂಬಿಸುವ ಪ್ರಯತ್ನ ಮಾಡಿರುವುದು ಶ್ಲಾಘನೀಯ ಎಂದು ಸಿರಿಗೆರೆ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಶ್ಲಾಘಿಸಿದರು.
ಸಮೀಪದ ಕಬ್ಬೂರು ಗ್ರಾಮದ ಕೆರೆಗೆ ಭಾಗಿನ ಅರ್ಪಿಸಿ ಮಾತನಾಡಿದ ಅವರು, ಸ್ವಾರ್ಥಿಗಳಿಂದ ಗ್ರಾಮಗಳು ಅಭಿವೃದ್ದಿ ಹೊಂದಲು ಸಾಧ್ಯವಿಲ್ಲ. ನಿಸ್ವಾರ್ಥತೆಯಿಂದ ಕೂಡಿದ ಮನಸ್ಸುಗಳೇ ಸರ್ವರ ಹಿತ ಬಯಸುವುದು. ಭೂಮಿ ಮೇಲೆ ಸ್ವಾರ್ಥಿಗಳೇ ಹೆಚ್ಚಾಗಿದ್ದಾರೆ. ಯಾವುದೇ ಸರ್ಕಾರದ ಯೋಜನೆ ಕಾಯದೆ ಕೆರೆ ತುಂಬಿಸುವ ಪ್ರಯತ್ನ ಮಾಡಿರುವುದು ಶ್ಲಾಘನೀಯ. ಭೂಮಿ ಮೇಲೆ ನೀರು ಸಾಕಷ್ಟು ಇರುತ್ತದೆ. ಆದರೆ, ಬಳಕೆಗೆ ಬಾರದು. ಆದ್ದರಿಂದ ನದಿ, ತೊರೆ, ಹಳ್ಳದ ಮೂಲಕ ಸಮುದ್ರ ಸೇರಿ ಹೋಗುವ ನೀರನ್ನ ಮೊದಲು ತಡೆದು, ದೇವರು ಕೊಟ್ಟ ಸಂಪತ್ತನ್ನು ಸದ್ಬಳಕೆ ಮಾಡಿಕೊಳ್ಳುವುದು ಜಾಣ್ಮೆ ಎಂದರು.
ಮೊದಲು ಕೈಗೊಂಡ ಏತ ನೀರಾವರಿ ಉಬ್ರಾಣಿ ಯೋಜನೆ, ನಂತರ ಇಪ್ಪತ್ತೆರಡು ಕೆರೆ ಏತ ನೀರಾವರಿ ಎರಡೂ ಕೆರೆಗಳಿಗೂ ಯಶಸ್ವಿ ಆಗಲಿಲ್ಲ. ನಂತರ ಭರಮಸಾಗರ, ಜಗಳೂರು ಏತ ನೀರಾವರಿ ಇವುಗಳಿಗೂ ಮೊದಲು ಪ್ರಾರಂಭವಾದ ಬಹುದೊಡ್ಡ ಯೋಜನೆ ಸಾಸ್ವೆಹಳ್ಳಿ ಏತ ನೀರಾವರಿ ಇದಕ್ಕೂ ಸಾಕಷ್ಟು ಅಡೆತಡೆಗಳು ಬಂದವು, ಕೋರ್ಟು ಕೂಡಾ ಶೀಘ್ರ ಯೋಜನೆ ಪರವಾಗಿ ಆದೇಶ ನೀಡಿತು. ಆದ್ದರಿಂದ ಈ ವರ್ಷ ಮುತ್ತುಗದೂರು ಕೆರೆಗೆ ಪ್ರಾಯೋಗಿಕ ನೀರು ಹರಿಯಿತು. ಇನ್ನೂ ಮುಂದಿನ ದಿನಗಳಲ್ಲಿ ಯೋಜನೆಯ ಎಲ್ಲಾ ಕೆರೆಗಳಿಗೂ ನೀರು ತಲುಪುವಂತೆ ನೋಡಿಕೊಳ್ಳಬೇಕಿದೆ. ಇದರಿಂದ ಸಾಕಷ್ಟು ಅಂತರ್ಜಲ ವೃದ್ದಿಯಾಗಿ ನಮ್ಮ ರೈತರ ಬದುಕು ಹಸನಾಗುತ್ತದೆ ಎಂದು ತಿಳಿಸಿದರು.
ಈ ವೇಳೆ ಕಬ್ಬೂರು ಹಾಗು ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಇದ್ದರು.