ದಾವಣಗೆರೆ (Davanagere) : ತಾಲೂಕಿನ ಕೊಡಗನೂರು ಕೆರೆ ಏರಿಯ ಮೇಲೆ 60 ಮೀಟರ್ ಉದ್ದ ಕುಸಿದಿರುವ ಏರಿ ನಿರ್ಮಾಣಕ್ಕೆ ರಾಜ್ಯ ಸರ್ಕಾರ 7 ಕೋಟಿ ರೂ. ಬಿಡುಗಡೆ ಮಾಡಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕ ಕೆ.ಎಸ್.ಬಸವಂತಪ್ಪ ತಿಳಿಸಿದ್ದಾರೆ.
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಕೊಡಗನೂರು ಕೆರೆಗೆ ಸಂಬಂದಪಟ್ಟ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೊಡಗನೂರು ಕೆರೆಯ ಏರಿ 140 ಮೀಟರ್ ಉದ್ದವಿದ್ದು ಈ ಕೆರೆ ಏರಿ ಮೇಲೆ ರಾಜ್ಯ ಹೆದ್ದಾರಿ ಹಾದು ಹೋಗಿದ್ದು, ಪ್ರತಿನಿತ್ಯ ನೂರಾರು ವಾಹನಗಳು ಓಡಾಡುವುದರಿಂದ ಕೆರೆ ಏರಿ ಮಧ್ಯೆ 60 ಮೀಟರ್ ಉದ್ದದಲ್ಲಿ ಕೆರೆ ಏರಿ ಸಡಿಲಗೊಂಡು ಕುಸಿಯುತ್ತಿದೆ. ಮಳೆಗಾಲ ಬಂದರೆ ಇನ್ನು ಹೆಚ್ಚು ಧಕ್ಕೆ ಆಗುತ್ತಿದೆ ಎಂದರು.
ಕೆರೆ ಏರಿ ಕುಸಿದಾಗ ಅಧಿಕಾರಿಗಳು ತಾತ್ಕಾಲಿಕವಾಗಿ ದುರಸ್ತಿ ಮಾಡುತ್ತಾರೆ. ವಾಹನಗಳ ದಟ್ಟಣೆಯಿಂದ ಮತ್ತೆ ಮತ್ತೆ ಕೆರೆ ಏರಿಗೆ ಧಕ್ಕೆ ಆಗುತ್ತಿದೆ. ಹೀಗಾಗಿ ಶಾಶ್ವತವಾಗಿ ಉಳಿಯುವ ಭದ್ರವಾದ ಕೆರೆ ಏರಿ ನಿರ್ಮಾಣದ ಹಿನ್ನೆಲೆಯಲ್ಲಿ ನಾನು ಸರ್ಕಾರದ ಮೇಲೆ ಒತ್ತಡ ಹಾಕಿ 7 ಕೋಟಿ ರೂ. ಹಣ ಬಿಡುಗಡೆ ಮಾಡಿಸಿದ್ದೇನೆ. ಈಗಾಗಲೇ ಅಧಿಕಾರಿಗಳು ನೀಲ ನಕ್ಷೆ ತಯಾರಿಸಿದ್ದು, ಶೀಘ್ರದಲ್ಲೇ ಟೆಂಡರ್ ಕರೆದು ಕಾಮಗಾರಿ ಕೈಗೊಳ್ಳುವಂತೆ ಸಂಬಂಧಪಟ್ಟ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
60 ಮೀಟರ್ ಉದ್ದ ಹೊಸದಾಗಿ ಕೆರೆ ಏರಿ ನಿರ್ಮಿಸುತ್ತಿದ್ದು, ಮುಂದೆ ಯಾವುದೇ ರೀತಿ ಕೆರೆ ಏರಿಗೆ ಧಕ್ಕೆ ಆಗದಂತೆ ಬುನಾದಿಯಿಂದ ಭದ್ರವಾದ ಏರಿ ನಿರ್ಮಿಸಲಾಗುವುದು. ಜೊತೆಗೆ ಕೆರೆಯ ಬಸಿ ನೀರಿನಿಂದ ರೈತರ ಜಮೀನುಗಳು ಹಾನಿಯಾಗುತ್ತಿವೆ. ಹೀಗಾಗಿ ಕೆರೆಯ ಸುತ್ತ ಡ್ರೇನೆಜ್ ಮಾಡಿ ಬಸಿ ನೀರು ಹಳ್ಳಕ್ಕೆ ಹೋಗಿ ಕೆರೆಗೆ ಸೇರುವ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಕೊಡಗನೂರು ಕೆರೆ ಸುಮಾರು ನೂರಾರು ಎಕರೆಯ ಪ್ರದೇಶ ಹೊಂದಿದೆ. 22 ಕೆರೆಗಳ ಏತ ನೀರಾವರಿ ಯೋಜನೆಯ ವ್ಯಾಪ್ತಿಗೆ ಈ ಕೆರೆಯು ಸೇರಿದೆ. ಇದರಿಂದಾಗಿ ಈ ಭಾಗದ ಸಾವಿರಾರು ಎಕರೆ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಕಾಪಾಡುವ ಜೊತೆಗೆ ಜನಜಾನುವಾರುಗಳ ಕುಡಿಯುವ ನೀರಿಗೆ ಅನುಕೂಲವಾಗಿದೆ. ಹೀಗಾಗಿ ಕೆರೆ ಏರಿಗೆ ಯಾವುದೇ ರೀತಿ ಧಕ್ಕೆ ಆಗದಂತೆ ತಡೆಗಟ್ಟುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಕೆರೆಯ ಪಕ್ಕದಲ್ಲಿ ರಾಜ್ಯ ಹೆದ್ದಾರಿ ನಿರ್ಮಾಣ ಮಾಡಿದರೆ ಕೆರೆ ಏರಿಗೆ ಯಾವುದೇ ರೀತಿಯ ಧಕ್ಕೆ ಆಗುವುದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಕ್ರಮ ಕೈಗೊಳ್ಳುವುದಾಗಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ರುದ್ರಮುನಿ , ಕೊಡಗನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಣ್ಣ, ಅಶೋಕ್,ಜಯಣ್ಣ ,ದೇವೇಂದ್ರಪ್ಪ .ಮೂರ್ತೆಪ್ಪ , ಬಕ್ಕಣ್ಣ, ಕುಬೇರಪ್ಪ, ಲಕ್ಷ್ಮಣ್ , ಶೇಕಣ್ಣ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡರು ಹಾಜರಿದ್ದರು.