ದಾವಣಗೆರೆ (Davanagere): ವಿದ್ಯಾರ್ಥಿ ನಿಲಯಗಳಲ್ಲಿ ಇಲ್ಲದ ಸ್ವಚ್ಛತೆ, ಮೆನು ಪ್ರಕಾರ ನೀಡದ ಗುಣಮಟ್ಟದ ಆಹಾರ, ಸ್ಟಾಕ್ ಬುಕ್ ಕೊಡದ ವಾರ್ಡನ್‌ಗಳು, ಬಾರದ ವಾರ್ಡನ್‌ಗಳು. ಈ ಎಲ್ಲಾ ಅವ್ಯವಸ್ಥೆ ಕಂಡು ಶಾಸಕ ಕೆ.ಎಸ್.ಬಸವಂತಪ್ಪ ಗರಂ ಆದರು.
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಬಸವಾಪಟ್ಟಣ ಗ್ರಾಮದ ಬಿಸಿಎಂ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಶಾಸಕ ಕೆ.ಎಸ್.ಬಸವಂತಪ್ಪ, ಮಕ್ಕಳ ಸಂಖ್ಯೆ, ಶಿಕ್ಷಣ, ಆಹಾರ, ಸ್ವಚ್ಛತೆ, ದಾಸ್ತಾನು ಪುಸ್ತಕ, ಕಂಪ್ಯೂಟರ್ ಪರಿಶೀಲನೆ, ಹಾಜರಾತಿ, ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದರು.
ಈ ವೇಳೆ 99 ಬಾಲಕಿಯರಲ್ಲಿ 20 ಬಾಲಕಿಯರು ಮಾತ್ರ ಹಾಜರಿದ್ದರು. ಉಳಿದ ಬಾಲಕಿಯರು ಎಲ್ಲಿ?. 99 ಜನಕ್ಕೆ ಆಗುವಷ್ಟು ಆಹಾರ ಸಾಮಗ್ರಿ ನೀಡಲಾಗುತ್ತದೆ. ಸ್ಟಾಕ್ ಬುಕ್ ಕೇಳಿದರೆ ಇಲ್ಲ. ವಾರ್ಡನ್ ತಿಂಗಳಲ್ಲಿ ಎರಡು ದಿನ ಮಾತ್ರ ಕೆಲಸಕ್ಕೆ ಬರುತ್ತಾರೆ. ಆಹಾರ ಸಾಮಗ್ರಿ ಬೇಕಾದರೆ ಬಸ್‌ಗೆ ಹಾಕಿ ಕಳುಹಿಸುತ್ತಾರೆ. ಇದನ್ನು ಪ್ರಶ್ನಿಸಿದರೆ ನಮಗೆ ನೋಟಿಸ್ ಕೊಡುತ್ತಾರೆ ಎಂದು ವಿದ್ಯಾರ್ಥಿಗಳು ಶಾಸಕರ ಬಳಿ ತಮ್ಮ ಸಮಸ್ಯೆಗಳನ್ನು ಬಿಚ್ಚಿಟ್ಟರು.
ನಮ್ಮ ಕಣ್ಣೆದುರಿಗೆ ಎರಡು ಚೀಲ ಗೋದಿ, ಎರಡು ಚೀಲ ಜೋಳ ಮಾರಾಟ ಮಾಡಿ, ಸರ್ಕಾರದ ಹಣ ದೋಚುತ್ತಿದ್ದಾರೆ. ಈ ಕ್ರಮ ತೆಗೆದುಕೊಳ್ಳಬೇಕೆಂದು ಗ್ರಾಮಸ್ಥರೇ ಶಾಸಕರನ್ನು ಆಗ್ರಹಿಸಿದರು.
Read also | Davanagere | ಕರಾಟೆ ಸ್ಪರ್ಧೆ : ನಿಧಿ ಬೇತೂರ್, ಸಮರ್ಥ್ ಬೇತೂರ್‌ಗೆ ಚಿನ್ನದ ಪದಕಗಳು
ಇದೇ ರೀತಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ಎಸ್ಟಿ ವಿದ್ಯಾರ್ಥಿ ನಿಲಯ, ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ, ಮೆಟ್ರಿಕ್ ಪೂರ್ವ ಬಾಲಕಿಯರ ನಿಲಯ ಸೇರಿದಂತೆ ಭೇಟಿ ನೀಡಿದ ಎಲ್ಲಾ ವಿದ್ಯಾರ್ಥಿ ನಿಲಯಗಳಲ್ಲಿ ಸಮಸ್ಯೆಗಳ ಆಗರವೇ ಇದೆ. ಎಲ್ಲಾ ವಿದ್ಯಾರ್ಥಿ ನಿಲಯಗಳಲ್ಲಿ ಸ್ಟಾಕ್ ಬುಕ್ ಇಲ್ಲ. ಮಕ್ಕಳ ಕಡಿಮೆ ಸಂಖ್ಯೆ ಇದ್ದರೂ ವಿದ್ಯಾರ್ಥಿ ನಿಲಯದಲ್ಲಿರುವ ಒಟ್ಟು ಸಂಖ್ಯೆ ತೋರಿಸಿ ಹಣ ಗುಳುಂ ಮಾಡುವುದು, ಮೆನು ಪ್ರಕಾರ ಸರಿಯಾದ ಸಮಯಕ್ಕೆ ಊಟ ಕೊಡುತ್ತಿಲ್ಲ. ಒಂದು ರೀತಿ ಸರ್ಕಾರದ ಹಣವನ್ನು ಹಗಲು ದರೋಡೆ ಮಾಡುತ್ತಿದ್ದಾರೆ ಎಂದು ವಾರ್ಡನ್‌ಗಳ ವಿರುದ್ಧ ಗರಂ ಆದರು.
ವಿದ್ಯಾರ್ಥಿ ನಿಲಯಗಳಿಗೆ ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡುತ್ತಿದೆ. ಆದರೆ ವಾರ್ಡನ್‌ಗಳು ಮಕ್ಕಳಿಗೆ ಮೆನು ಪ್ರಕಾರ ಸರಿಯಾದ ಗುಣಮಟ್ಟದ ಆಹಾರ ಕೊಡುತ್ತಿಲ್ಲ. ವಾರ್ಡನ್‌ಗಳು ವಿದ್ಯಾರ್ಥಿ ನಿಲಯಕ್ಕೆ ಬರುವುದಿಲ್ಲ. ಅಡುಗೆ ಸಿಬ್ಬಂದಿಗಳೇ ನಿರ್ವಹಣೆ ಮಾಡುತ್ತಾರೆ ಎಂಬ ದೂರುಗಳು ಭೇಟಿ ನೀಡಿದ ಎಲ್ಲಾ ನಿಲಯದ ಮಕ್ಕಳು ದೂರಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ತಪ್ಪಿತಸ್ಥ ವಾರ್ಡನ್‌ಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಶಾಸಕ ಬಸವಂತಪ್ಪ ತಿಳಿಸಿದರು.
ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡುವ ಜೊತೆಗೆ ಅವರ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕು. ತಂದೆ-ತಾಯಿ ಬಿಟ್ಟು ದೂರದ ಊರುಗಳಿಂದ ವಿದ್ಯಾರ್ಥಿ ನಿಲಯಗಳಿಗೆ ಬರುತ್ತಾರೆ. ನೀವು ನಿಮ್ಮ ಮಕ್ಕಳ ಪೋಷಣೆ ಮಾಡುವಂತೆ ವಸತಿ ನಿಲಯದ ಮಕ್ಕಳನ್ನು ಕಾಳಜಿಯಿಂದ ನೋಡಿಕೊಳ್ಳಬೇಕು ಇದೇ ಸಂದರ್ಭದಲ್ಲಿ ವಾರ್ಡನ್ ಮತ್ತು ಅಡುಗೆ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಬಸವಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು,ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.