ದಾವಣಗೆರೆ, ಅ. 24 (Davanagere) : ಮಹಾನಗರ ಪಾಲಿಕೆಯಿಂದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನವೆಂಬರ್ ತಿಂಗಳನ್ನು ಕನ್ನಡ ಸ್ವಚ್ಛತಾ ಮಾಸವನ್ನಾಗಿ ಆಚರಿಸಲಾಗುವುದು ಎಂದು ಮಹಾಪೌರ ಚಮನ್ಸಾಬ್ ಕೆ. ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆಯ ಎಲ್ಲಾ ವಾರ್ಡುಗಳಲ್ಲಿ ಸ್ವಚ್ಛತಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು. ಇದಕ್ಕೆ ಬೇಕಾಗುವ ಸಲಕರಣೆಗಳು, ವಾಹನಗಳು ಮತ್ತು ಮಾನವ ಸಂಪನ್ಮೂಲವನ್ನು ಹೆಚ್ಚುವರಿಯಾಗಿ ತೆಗೆದುಕೊಂಡು ಎಲ್ಲಾ ವಾರ್ಡುಗಳಲ್ಲಿ ಸ್ವಚ್ಛತೆ ಮಾಡಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಕಸ ಸಂಗ್ರಹಣೆ ವಾಹನಗಳು ಮನೆ ಮನೆಗೆ ಬಂದು ಹಸಿ ಕಸ, ಒಣ ಕಸವನ್ನು ಸಂಗ್ರಹಿಸುತ್ತಿದ್ದು, ಕೆಲವು ನಾಗರಿಕರು ರಾತ್ರಿ ವೇಳೆ ಎಲ್ಲೆಂದರಲ್ಲಿ ಕಸ ಹಾಕುವುದು ಕಂಡುಬಂದಲ್ಲಿ ಆರೋಗ್ಯ ನಿರೀಕ್ಷಕರು ಮನೆ ಬಾಗಿಲಿಗೆ ಬಂದು ದಂಡ ವಿಧಿಸಿ ಕಸ ಹಾಕಿದವರ ಫೋಟೋ ಸಹಿತ ಪತ್ರಿಕೆಗಳಲ್ಲಿ ಪ್ರಚುರಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ಆಸ್ತಿ ಮಾಲೀಕರುಗಳು ಆಸ್ತಿ ತೆರಿಗೆ, ನೀರಿನ ತೆರಿಗೆ, ಯುಜಿಡಿ ಶುಲ್ಕ, ಉದ್ದಿಮೆ ಪರವಾನಿಗೆ ಶುಲ್ಕವನ್ನು ಮಹಾನಗರ ಪಾಲಿಕೆಗೆ ಪಾವತಿಸಬೇಕು. ಒಂದು ವೇಳೆ ಪಾವತಿಸದೇ ಇದ್ದಲ್ಲಿ ಪಾಲಿಕೆಯ ಅಧಿಕಾರಿಗಳೇ ಭೇಟಿ ನೀಡಿ ಸ್ಥಳದಲ್ಲಿಯೇ ದಂಡದೊಂದಿಗೆ ತೆರಿಗೆ, ಶುಲ್ಕ ವಸೂಲಿಗೆ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ನವೆಂಬರ್ ಮಾಹೆಯಿಂದ ವಾರ್ಡ್ಗಳಲ್ಲಿ ಇ-ಆಸ್ತಿ ಅಂದೋಲನ ಪ್ರಾರಂಭ ಮಾಡಲಾಗುವುದು. ಎಲ್ಲಾ ಆಸ್ತಿ ಮಾಲೀಕರುಗಳು ಆಸ್ತಿ ತೆರಿಗೆ ಪಾವತಿಸಿದ ಚಲನ್, ಇ.ಸಿ. ಮನೆಗೆ ಸಂಬಂಧಿಸಿದ ದಾಖಲೆಗಳನ್ನು ಸಿದ್ದವಾಗಿಟ್ಟುಕೊಳ್ಳಬೇಕು. ಪಾಲಿಕೆಯಿಂದ ಆಂದೋಲನದ ವೇಳಾಪಟ್ಟಿಯನ್ನು ಪ್ರಕಟಪಡಿಸಿದ ನಂತರ ನಿಗದಿತ ದಿನಾಂಕಗಳಂದು ಆಯಾ ವಾರ್ಡುಗಳಲ್ಲಿ ಸ್ಥಳದಲ್ಲಿಯೇ ಇ-ಸ್ವತ್ತು ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಖಾಲಿ ನಿವೇಶನಗಳ ಮಾಲೀಕರು ತಮ್ಮ ನಿವೇಶನಗಳಲ್ಲಿ ಬೆಳೆದಿರುವ ಗಿಡಗೆಂಟಿಗಳನ್ನು ತಾವೇ ಸ್ವಚ್ಛಗೊಳಿಸಿಕೊಳ್ಳಬೇಕು. ತಪ್ಪಿದಲ್ಲಿ ಮಹಾನಗರಪಾಲಿಕೆಯಿಂದ ಸ್ವಚ್ಚಗೊಳಿಸಿ ಅವರ ಆಸ್ತಿ ತೆರಿಗೆಯಲ್ಲಿ ಸೇರಿಸಲಾಗುವುದು ಎಂದು ತಿಳಿಸಿದರು.
ಜಲಸಿರಿ ಯೋಜನೆ 14 ವಲಯಗಳಲ್ಲಿ ಪ್ರಾರಂಭಿಸಿ 24×7 ಮಾದರಿಯಲ್ಲಿ ನೀರು ಪೂರೈಕೆ ಮಾಡಲಾಗುತ್ತಿದ್ದು ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು. ಹೆಚ್ಚಿನ ಬಿಲ್ ಬಂದಲ್ಲಿ, ನಳ ಸಂಪರ್ಕ ಮತ್ತು ತೊಂದರೆಯಾದರೆ ದೂ.ಸಂ. 9036544419 ಗೆ ಕರೆ ಮಾಡಬೇಕೆಂದು ಮನವಿ ಮಾಡಿದರು.
ಮಹಾನಗರ ಪಾಲಿಕೆ ಪ್ರಧಾನ ಕಚೇರಿಯಲ್ಲಿ ಸಹಾಯ ಮೇಜು ಪ್ರಾರಂಭಿಸುತ್ತಿದ್ದು, ಸಾರ್ವಜನಿಕರು ಏನಾದರೂ ಕುಂದು ಕೊರತೆಗಳಿದ್ದಲ್ಲಿ ಅಥವಾ ಪಾಲಿಕೆಯಿಂದ ನೀಡಲಾಗುವ ಸೇವೆಗಳಲ್ಲಿ ಏನಾದರೂ ವ್ಯತ್ಯಯ ಉಂಟಾದಲ್ಲಿ ಹೆಲ್ಸ್ ಡೆಸ್ಕ್ ಅನ್ನು ಸಂಪರ್ಕಿಸುವುದು ಎಂದು ತಿಳಿಸಿದರು.
Read also : Davanagere | 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ರಥಯಾತ್ರೆ, ದಾವಣಗೆರೆಯಲ್ಲಿ ಆದ್ದೂರಿ ಸ್ವಾಗತ
ಈಗ ಶೇ.50 ರಷ್ಟು ಮಾತ್ರ ಕಂದಾಯ ಪಾವತಿ ಮಾಡುತ್ತಿದ್ದಾರೆ. ಇನ್ನೂ ಕೆಲವರು 4 ಅಥವಾ 5 ವರ್ಷ ಬಿಟ್ಟು ಕಂದಾಯ ಪಾವತಿ ಮಾಡುವುದಕ್ಕೆ ಬಂದಾಗ ಬಡ್ಡಿ ಜಾಸ್ತಿಯಾಗಿದೆ ಎಂದು ಪಾಲಿಕೆಯಲ್ಲಿ ಜಗಳ ಮಾಡುತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬರು ಸರಿಯಾದ ಸಮಯಕ್ಕೆ ಕಂದಾಯ ಪಾವತಿ ಮಾಡಿದರೆ, ಯಾರಿಗೂ ಹೆಚ್ಚು ಬರುವುದಿಲ್ಲ ಎಂದು ತಿಳಿಸಿದರು.
ಪಾಲಿಕೆಯಲ್ಲಿ 400 ಪೌರಕಾರ್ಮಿಕರು ಕೊರತೆಯಿದ್ದು. ಮುಂದಿನ ದಿನಗಳಲ್ಲಿ ಖಾಲಿ ಇರುವ ಪೌರ ಕಾರ್ಮಿಕರನ್ನು ಮಾಡಿ ಭರ್ತಿಮಾಡಲು ಅನುಮತಿ ಪಡೆಯಲಾಗುವುದು ಎಂದು ತಿಳಿಸಿದರು.
ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ ಮಹಾನಗರ ಪಾಲಿಕೆಯ ಹಳೆಯ ಪ್ರಾಪರ್ಟಿಗಳ ಪಾರ್ಕ್ ಜಾಗ, ಮಾಲೀಕರು ಬೇರೆ ಕಡೆ ವಾಸವಾಗಿರುವುದನ್ನು ತಿದ್ದುಪಡಿ ಮಾಡಿ ಮ್ಯಾನುವಲ್ ನಮೂನೆ-3 ಕೊಟ್ಟು ಸಬ್ರಿಜಿಸ್ಟ್ರಲ್ಲಿ ರಿಜಿಸ್ಟರ್ ಆಗಿ ಖಾತೆಗೆ ಬರುತ್ತಿರುವ ಪ್ರಕರಣಗಳು ಸಂಖ್ಯೆ ಜಾಸ್ತಿ ಇದ್ದವು, ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ರೀತಿಯ ಕಡಿವಾಣ ಹಾಕಿ, ಎಲ್ಲಿಯೂ ದಾಖಲೆಗಳನ್ನು ತಿದ್ದುಪಡಿ ಮಾಡಲಿಲ್ಲ ಎಂದು ತಿಳಿಸಿದರು.
ಖಾತೆಗೆ ಸಂಬಂಧಪಟ್ಟಂತೆ ಪಾರ್ಕ್ಗಳ ಜಾಗಗಳನ್ನು ಗುರುತಿಸಿ ಅದರ ಖಾತೆಗಳನ್ನು ರದ್ದು ಮಾಡಿ ಪಾಲಿಕೆ ವಶಕ್ಕೆ ತೆಗೆದುಕೊಳ್ಳಲಾಗಿದೆ. ಹಾಗೂ ಮಹಾನಗರ ಪಾಲಿಕೆಯಲ್ಲಿ ಪ್ರತಿಯೊಬ್ಬರೂ ಕೂಡ ಸಾಲಿನಲ್ಲಿ ನಿಂತು ಟ್ಯಾಕ್ಸ್ ಕಟ್ಟುವ ವ್ಯವಸ್ಥೆ ಇತ್ತು, ಇದನ್ನು ಆನ್ಲೈನ್ ಮೂಲಕ ಕಟ್ಟುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಉಪಮೇಯರ್ ಸೋಗಿ ಶಾಂತಕುಮಾರ್ ಹಾಗೂ ಇನ್ನಿತರರು ಇದ್ದರು.