ದಾವಣಗೆರೆ (Davanagere) : ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಸೇವೆಗಳನ್ನು ಮಾಡಿದರೆ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ತಿಳಿಸಿದರು.
ದೊಡ್ಡಬಾತಿ ಗ್ರಾಮದ ಶ್ರೀ ಕೋಟೆ ಆಂಜನೇಯ ದೇವಸ್ಥಾನದ ಉದ್ಘಾಟನೆ, ಶಿಲಾಮೂರ್ತಿ ಪ್ರತಿಷ್ಠಾಪನೆ ಹಾಗೂ ನವಗ್ರಹ ಪ್ರತಿಷ್ಠಾಪನೆ ಮತ್ತು ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಿ ಮಾತನಾಡಿದರು.
ಪುರಾತನ ಕಾಲದ ಬಾತಿ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಜೀರ್ಣೋದ್ಧಾರ ಮಾಡಿರುವುದು ಉತ್ತಮ ಸಂಗತಿ. ಇಲ್ಲಿನ ಗ್ರಾಮಸ್ಥರ ಒಗ್ಗಟ್ಟಿನ ಕಾರ್ಯವು ಮೆಚ್ಚುವಂತದ್ದು, ಒಗ್ಗಟ್ಟಿನಿಂದ ಏನಾದರೂ ಸಾಧಿಸಬಹುದು ಎನ್ನುವುದಕ್ಕೆ ದೊಡ್ಡ ಬಾತಿ ಗ್ರಾಮಸ್ಥರು ಸಾಕ್ಷಿಯಾಗಿದ್ದಾರೆ. ಹೀಗೆ ಎಲ್ಲಾ ಗ್ರಾಮಗಳಲ್ಲಿಯು ಒಗ್ಗಟ್ಟು ಪಕ್ಷಾತೀತವಾಗಿ ಪ್ರದರ್ಶನವಾಗಬೇಕು ಎಂದರು.
ಸರ್ಕಾರದಿಂದ ದೇವಸ್ಥಾನ ಅಭಿವೃದ್ಧಿಗೆ 8 ಲಕ್ಷ ರೂಪಾಯಿ ನೀಡಲಾಗಿದೆ. 2001 ರಲ್ಲಿ ನಾನು ಮೊದಲು ಮಂತ್ರಿಯಾದಗ ಬೇತೂರು ಗ್ರಾಮದಲ್ಲಿ ಮಹಿಳೆಯರು ಶೌಚಾಲಯ ಸಮಸ್ಯೆ ತೋಡಿಕೊಂಡಿದ್ದರು. ರಾಜ್ಯದಲ್ಲಿ ಎಲ್ಲು ಮಾಡಿರದ ಶೌಚಾಲಯ ನಿರ್ಮಾಣದ ಕಾರ್ಯ ಬಾತಿಯಲ್ಲಿ ಮಾಡಿದ್ದೇವೆ. ಹಲವರು ಪಬ್ಲಿಕ್ ಶೌಚಾಲಯ ಬೇಕು ಎಂದರು. ಪ್ರತಿ ಬೀದಿಯಲ್ಲಿ ಅಂಡರ್ ಗ್ರೌಂಡ್ ನಿರ್ಮಿಸಿ ಮಣ್ಣಿನ ಪೈಪ್ ಅಳವಡಿಸಲಾಯಿತು. 20 ವರ್ಷದ ಮಣ್ಣಿನ ಪೈಪ್ ಬದಲಾವಣೆ ಮಾಡಲು ಮುಂದಾಗಿದ್ದು ಪ್ಲಾಸ್ಟಿಕ್ ಪೈಪ್ ಅಳವಡಿಸುವ ಕಾರ್ಯದ ಜತೆಗೆ ಸಿವೆ ಸಿಸ್ಟಂ ಯೋಜನೆ ಮಾಡಲಾಗಿದೆ. ಯುಜಿಡಿ ಮೂಲಕ ನೇರವಾಗಿ ನೀರು ಅಂಡರ್ ಗ್ರೌಂಡ್ ತಲುಪುವುದು. ಪಂಚಾಯ್ತಿಯಿಂದ ಉತ್ತಮ ರಸ್ತೆ, ಗ್ರಾಮಗಳ ಅಭಿವೃದ್ಧಿಗೆ ಅನುದಾನ ತರುವ ಕಾರ್ಯಗಳಾಗಬೇಕು ಕಾರ್ಯಗಳಾಗಬೇಕು ಎಂದರು.
ಸಂಸದರಾಗಿರುವ ಡಾ.ಪ್ರಭಾ ಮಲ್ಲಿಕಾರ್ಜುನ ಅವರು ಎಸ್.ಎಸ್ ಕೇರ್ ಟ್ರಸ್ಟ್ ಮೂಲಕ ಬಾತಿ ಗ್ರಾಮದಲ್ಲಿ ಕ್ಯಾಂಪ್ ಹಾಕಿಸಿದ್ದರು. ಈ ಗ್ರಾಮ ಸೇರಿದಂತೆ ಅರಸಾಪುರ ಗ್ರಾಮಗಳಲ್ಲಿ ತಾಯಂದಿರುವ ಹಾಗೂ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಪತ್ತೆಯಾಯಿತು. ಆರೋಗ್ಯಕ್ಕಾಗಿ ಕ್ಯಾಂಪ್ ಗಳನ್ನು ಮುಂದವರೆಸಲು ಸಚಿವರು ಸಲಹೆ ನೀಡಿದರು.
ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಮಾತನಾಡಿ, ಈ ಹಿಂದೆ ಎಸ್.ಎಸ್ ಕೇರ್ ಟ್ರಸ್ಟ್ ವತಿಯಿಂದ ಈ ಭಾಗದಲ್ಲಿ ಆರೋಗ್ಯ ಕ್ಯಾಂಪ್ ಹಾಕಲಾಗಿತ್ತು. ಆಗ ಗ್ರಾಮಸ್ಥರು ಕೈ ಜೋಡಿಸಿ ಕ್ಯಾಪ್ ಯಶಸ್ವಿಗೊಳಿಸಿದ್ದರು. ಈಗ ಗ್ರಾಮಸ್ಥರ ಒಗ್ಗಟ್ಟು ಹಾಗೂ ದಾನಿಗಳು ನೀಡಿದ ದೇಣಿಗೆಯಿಂದ ದೇವಸ್ಥಾನದ ನಿರ್ಮಾಣವು ಉತ್ತಮವಾಗಿ ಮೂಡಿ ಬಂದಿದೆ ಎಂದರು.
ಮಹಿಳೆಯರು ಕುಟುಂಬ ನಿರ್ವಹಣೆಯ ಜತೆಗೆ ಉತ್ತಮ ಸಮಾಜ ನಿರ್ಮಾಣಕ್ಕು ಮುಂದಾಗಬೇಕು, ಜಿಲ್ಲಾಡಳಿತ ಭವನದಲ್ಲಿ ಸಂಸದರ ಸಂಪರ್ಕ ಕಚೇರಿ ಇದ್ದು ನಿಮ್ಮೆಲ್ಲ ಏನೇ ಸಮಸ್ಯೆಗಳಿದ್ದರು ಕಚೇರಿಗೆ ಬನ್ನಿ, ನಿಮ್ಮೆಲ್ಲರ ಸಮಸ್ಯೆಗಳಿಗೆ ಕಾಂಗ್ರೆಸ್ ಪಕ್ಷವು ಸದಾ ಜತೆಗಿರುವುದು ಎಂದರು.
ಸಾನಿಧ್ಯವನ್ನು ಉಚ್ಚಂಗಿದುರ್ಗ ರಾಮಘಟ್ಟದ ರೇವಣಸಿದ್ದ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು. ಮಂಜುಳಾ ಜೆಸಿಬಿ ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಜೆಸಿಬಿ ಹನುಮಂತಪ್ಪ, ಕೆ.ಜಿ ಉಮೇಶ್, ಬಾತಿ ಬಸವರಾಜ್, ರೇಖಾ ಸತ್ಯನಾರಾಯಣ, ಮಾಗನಹಳ್ಳಿ ಪರಶುರಾಮ್, ಬೂದಾಳ್ ಬಾಬು, ಬಾತಿ ಶಿವಕುಮಾರ್, ಹುಲ್ಮನಿ ಗಣೇಶ್, ದೊಡ್ಡಬಾತಿ ದೇವಸ್ಥಾನಗಳ ಸ್ವಾಗತ ಕಮಿಟಿಯವರು, ಧರ್ಮದರ್ಶಿಗಳು, ಗ್ರಾಮದ ಮುಖಂಡರು ಇತರರು ಇದ್ದರು.
ಬಾತಿ ಕೆರೆಗೆ ಹೈಟೆಕ್ ಸ್ಪರ್ಶ
ಬಾತಿ ಗ್ರಾಮದಲ್ಲಿರುವ ಬಾತಿಕೆರೆಗೆ ಯುಜಿಡಿ ನೀರು ಹೋಗುತ್ತಿದೆ. ಇದನ್ನು ತಡೆಯಲು ಹೋಸ ಯೋಜನೆ ರೂಪಿಸಲಾಗಿದೆ. ಕೆರೆಯ ಅಭಿವೃದ್ಧಿ ಪಡಿಸಲು 12 ಕೋಟಿ ಮೀಸಲಿಡಲಾಗಿದ್ದು ಯುಜಿಡಿ ಲೈನ್ ತಪ್ಪಿಸಲು ಗ್ರಾಮಸ್ಥರು ಮುಂದಾಗಬೇಕು ಎಂದು ಸಚಿವರು ತಿಳಿಸಿದರು. ದೊಡ್ಡ ಬಾತಿ, ಹಳೇಬಾತಿ, ಬೇತೂರು ಕಲ್ಪನಹಳ್ಳಿ, ಕಕ್ಕರಗೊಳ್ಳ ಹಾಗೂ ದೊಡ್ಡ ಗ್ರಾಮಗಳಿಗೆ ಯುಜಿಡಿ ವ್ಯವಸ್ಥೆ ಮಾಡಲಾಗುವುದು. ಶೀಘ್ರದಲ್ಲೆ ಉತ್ತರ ಭಾಗದಲ್ಲಿ ಆಶ್ರಯ ಯೋಜನೆಯಡಿಯ ಕಾರ್ಯಗಳು ಜಾರಿಯಾಗುವವರು ಎಂದರು.
ತಲಾ ಎರಡು ಗ್ರಾಮಗಳಿಗೆ ಒಂದು ಜಟ್ಟಿಂಗ್ ಮಿಷನ್ ಗ್ರಾಮಗಳಲ್ಲಿ ಸ್ವಚ್ಚತಾ ಕಾರ್ಯಗಳು ನಡೆಯಬೇಕು. ಈ ಹಿನ್ನಲೆ ಬೇತೂರು ಪಂಚಾಯ್ತಿಗೆ ರೂ. 35 ಲಕ್ಷ ವೆಚ್ಚದಲ್ಲಿ ಜಟ್ಟಿಂಗ್ ಮಿಷನ್ ನೀಡಲಾಗಿದೆ. ಮುಂದೆ ಎರಡೇರಡು ಪಂಚಾಯ್ತಿಗೆ ಒಂದು ಜಟ್ಟಿಂಗ್ ಮಿಷನ್ ನೀಡುವ ಯೋಜನೆ ರೂಪಿಸಲಾಗುವುದು. ರಾಜ್ಯದಲ್ಲಿಯೇ ದಾವಣಗೆರೆ ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿಸಬೇಕು ಎಂದು ಸಚಿವರು ತಿಳಿಸಿದರು.
ಸ್ಥಳದಲ್ಲೆ ಸಮಸ್ಯೆಗಳಿಗೆ ಸ್ಪಂದಿಸಿದ ಸಚಿವರು
ವೇದಿಕೆ ಕಾರ್ಯಕ್ರಮದಲ್ಲಿ ಸಚಿವರು ಭಾಷಣ ಪೂರೈಸಿದ ಗ್ರಾಮದ ಮಹಿಳೆಯೊಬ್ಬರು ತಮ್ಮೂರಿಗೆ ಜಿಲ್ಲಾಡಳಿತದಿಂದ ಬಾತಿಗೆ, ಬಾತಿಯಿಂದ ಹರಿಹರಕ್ಕೆ ಬಸ್ ಸೌಲಭ್ಯದ ವ್ಯವಸ್ಥೆ ಕಲ್ಪಿಸುವಂತೆ ಕೋರಿದರು. ಸಚಿವರು ತಕ್ಷಣ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಕರೆ ಮಾಡಿ ತಮ್ಮ ಪೋನ್ ಮಹಿಳೆಗೆ ನೀಡಿದರು. ಈ ಮೂಲಕ ಮಹಿಳೆಯ ಬೇಡಿಕೆಗೆ ಸಚಿವರು ಸ್ಪಂದಿಸಿದ್ದು ಗ್ರಾಮಸ್ಥರಿಂದ ಮೆಚ್ಚುಗೆಗೆ ವ್ಯಕ್ತವಾಯಿತು.