ದಾವಣಗೆರೆ: ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಕೆಲವು ಹಳ್ಳಿಗಳಿಗೆ ಕೆಎಸ್ಆರ್ಟಿಸಿ ಬಸ್ ಸೌಲಭ್ಯ ಇಲ್ಲದ ಕಾರಣ ರೈತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ದೊಡ್ಡ ಸಮಸ್ಯೆಯಾಗಿದೆ. ಆ ಮಾರ್ಗಗಳಿಗೆ ಕೂಡಲೇ ಬಸ್ ಸೌಲಭ್ಯ ಒದಗಿಸಬೇಕೆಂದು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗೆ ಶಾಸಕ ಕೆ.ಎಸ್.ಬಸವಂತಪ್ಪ ಸೂಚನೆ ನೀಡಿದರು.
ನಗರದ ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ಕೆಎಸ್ಆರ್ಟಿಸಿ ಬಸ್ ಸೌಲಭ್ಯ ಇಲ್ಲದ ಗ್ರಾಮಗಳಲ್ಲಿ ಜನರು ದ್ವಿಚಕ್ರ ವಾಹನ, ಆಟೋ, ಟೆಂಪೆÇ, ಸರಕು ಸಾಗಣೆ ವಾಹನ, ಟ್ರ್ಯಾಕ್ಟರ್ಗಳನ್ನು ಅವಲಂಬಿಸುವುದು ಅನಿವಾರ್ಯವಾಗಿದೆ. ಸೂಕ್ತ ಸಾರಿಗೆ ಇಲ್ಲದ ಕಾರಣ ತಾಲೂಕು, ಜಿಲ್ಲಾ ಕೇಂದ್ರಗಳಿಗೆ ನಿತ್ಯ ಓಡಾಡುವ ಉದ್ಯೋಗಿಗಳು, ವಿದ್ಯಾರ್ಥಿಗಳ ಪಾಡು ಹೇಳತೀರದಾಗಿದೆ ಎಂದರು.
ಮಾಯಕೊಂಡದಲ್ಲಿ 10 ಕೋಟಿ ರೂ.ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಲು ನಿರ್ಧರಿಸಿದ್ದು, ಕೂಡಲೇ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಕ್ರಮ ವಹಿಸಬೇಕು ಎಂದ ಶಾಸಕರು, ಮಾಯಕೊಂಡ ಬಸ್ ನಿಲ್ದಾಣದಲ್ಲಿ ದಾವಣಗೆರೆ-ಹೊಸದುರ್ಗ ಮಾರ್ಗದಲ್ಲಿ ಸಂಚರಿಸುವ ಬಸ್ಗಳ ನಿಲುಗಡೆಗೆ ವ್ಯವಸ್ಥೆ ಮಾಡಬೇಕು. ಜೊತೆಗೆ ಮಾಯಕೊಂಡ ಬಸ್ ನಿಲ್ದಾಣದಲ್ಲಿ ಒಬ್ಬ ಕಂಟ್ರೋಲರ್ ನೇಮಿಸಿ ನಿರ್ಗಮನ ಮತ್ತು ಆಗಮನ ಬಸ್ಗಳ ಹಾಜರಿ ಹಾಕಲು ಕ್ರಮ ವಹಿಸಬೇಕೆಂದರು. ನಿಯಂತ್ರಣಾಧಿಕಾರಿ ಶ್ರೀನಿವಾಸ್ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಮಾಯಕೊಂಡ ಮತ್ತು ಬಸವಾಪಟ್ಟಣದಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಮಾಯಕೊಂಡ ಮತ್ತು ಬಸವಾಪಟ್ಟಣದಿಂದ ಬೆಂಗಳೂರಿಗೆ ತೆರಳಲು ಬಸ್ ಸೌಲಭ್ಯ ಕಲ್ಪಿಸಬೇಕು. ಕೊರೋನಾ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಹಳೇ ಮಾರ್ಗಗಳಲ್ಲಿ ಬಸ್ ಸಂಚಾರ ಪುನರ್ ಆರಂಭ ಮಾಡಲು ಸೂಚನೆ ನೀಡಿದರು.
ಚನ್ನಗಿರಿ ತಾಲೂಕಿನ ಕಾರಿಗನೂರು ಮಾರ್ಗವಾಗಿ ಕತ್ತಲಗೆರೆ, ಬೆಳಲಗೆರೆ, ಸಾಗರಪೇಟೆ, ದಾಗಿನಕಟ್ಟೆ, ಕಂಚುಗಾರನಹಳ್ಳಿ ಹಾಗೂ ನಿಲೋಗಲ್ ಬಸ್ ಸಂಚರಿಸಬೇಕು. ಗುಡ್ಡದ ಕುಮಾರನಹಳ್ಳಿ ಮಾರ್ಗವಾಗಿ ಹೊನ್ನಾಳಿ ಮತ್ತು ದಾವಣಗೆರೆ ತಾಲೂಕಿನ ಜಮ್ಮಾಪುರ, ಕೆರೆಯಾಗಳಹಳ್ಳಿಗೆ ಬಸ್ ಸಂಚರಿಸಬೇಕು. ಗಿರಿಯಾಪುರ ಮಾರ್ಗವಾಗಿ ಅಣಜಿಗೆ ಹೋಗಲು ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು.
ಶಾಸಕರ ಒತ್ತಾಯದ ಮೇರೆಗೆ ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್, ಕೂಡಲೇ ಆ ಮಾರ್ಗಗಳಿಗೆ ಬಸ್ ಸೌಲಭ್ಯ ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಬಸವಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಚಂದ್ರಣ್ಣ, ಶಂಬಣ್ಣ, ಕೆಎಸ್ಆರ್ಟಿಸಿ ವಿಭಾಗೀಯ ಕಚೇರಿಯ ಅಧಿಕಾರಿಗಳು ಭಾಗವಹಿಸಿದ್ದರು.