ದಾವಣಗೆರೆ: ಈ ಬಾರಿ ಅತೀ ಹೆಚ್ಚು ಮುಂಗಾರು ಮಳೆಗಳು ಆಗಲಿವೆ ಎಂದು ಹವಾಮಾನ ಇಲಾಖೆ ಹೇಳಿದ್ದು, ಅಧಿಕಾರಿಗಳು ಈಗಲೇ ಜಾಗೃತರಾಗಿ ತುಂಗಭದ್ರಾ ನದಿ ತುಂಬಿ ಹರಿಯುವಾಗ 22 ಕೆರೆಗಳ ಏತ ನೀರಾವರಿ ಯೋಜನೆಯ ವ್ಯಾಪ್ತಿಯ ಕೆರೆಗಳನ್ನು ಭರ್ತಿ ಮಾಡಿಸಿ ರೈತರ ನೆರವಿಗೆ ಧಾವಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಸೂಚನೆ ನೀಡಿದರು.
ಹರಿಹರ ಸಮೀಪವಿರುವ 22 ಕೆರೆಗಳ ಏತ ನೀರಾವರಿ ಯೋಜನೆಯ ಜಾಕ್ವೆಲ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂಬಂಧಪಟ್ಟ ಇಂಜಿನಿಯರ್ ಗಳು ಈ ಯೋಜನೆ ವ್ಯಾಪ್ತಿಯ ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿಯುವಂತೆ ನೋಡಿಕೊಳ್ಳಬೇಕು. ಕೆರೆಗಳಿಗೆ ನೀರು ತುಂಬಿಸುವಾಗ ಪೈಪ್ ಲೈನ್ ಒಡೆಯದಂತೆ ಮುನ್ನೆಚ್ಚರಿಕೆ
ಕ್ರಮ ವಹಿಸಬೇಕು. ತುಂಗಭದ್ರಾ ನದಿ ತುಂಬಿ ಹರಿಯುವಾಗ ಪೈಪ್ ಲೈನ್ ನಲ್ಲಿ ತಾಂತ್ರಿಕ ಸಮಸ್ಯೆಗಳಿಗೆ ಎಂದು ಕೈ ಚಲ್ಲಿ ಕುಳಿತುಕೊಳ್ಳಬೇಡಿ. ಈ ಯೋಜನೆಯ ಏನೇ ಸಮಸ್ಯೆಗಳು ಇದ್ದರೂ ಈಗಲೇ ಸರಿಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ 22 ಕೆರೆಗಳ ಏತ ನೀರಾವರಿ ಯೋಜನೆ ಹೋರಾಟ ಸಮಿತಿ ಅಧ್ಯಕ್ಷರಾದ ಮುದೇಗೌಡ್ರು ಗಿರೀಶ್, ಎಪಿಎಂಸಿ ಮಾಜಿ ಅಧ್ಯಕ್ಷರಾದ ಎಸ್. ಕೆ .ಚಂದ್ರಣ್ಣ, ಜನತಾ ಬಜಾರ್ ಗುರುಸ್ವಾಮಿ , ಶಂಭಣ್ಣ, ಕೊಟ್ರೇಶ್ ನಾಯ್ಕ್ ಸೇರಿದಂತೆ ಈ ಭಾಗದ ರೈತರು ಹಾಜರಿದ್ದರು.