ದಾವಣಗೆರೆ (Davanagere) : ರಜೆಯಿದ್ದರೂ ರಜೆ ಚೀಟಿ ಇಲ್ಲ, ಹಾಜರಿ ಪುಸ್ತಕದಲ್ಲಿ ಎಂಟ್ರಿ ಇಲ್ಲ. ಇನ್ನು ಕೆಲಸಕ್ಕೆ ಹಾಜರಿಯಾಗಿದ್ದರೂ ಕೂಡ ಸಂಜೆ ಮಾಡುವ ಸಹಿಯನ್ನು ಬೆಳಗ್ಗೆನೇ ಮಾಡಿರುವುದನ್ನು ಕಂಡ ಶಾಸಕ ಕೆ.ಎಸ್.ಬಸವಂತಪ್ಪ ಶಿಕ್ಷಕರ ವಿರುದ್ಧ ಕೆಂಡಾಮಂಡಲರಾದರು.
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಹೆಮ್ಮನಬೇತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳವಾರ ದಿಢೀರ್ ಭೇಟಿ ನೀಡಿದ ಶಾಸಕರು, ಶೌಚಾಲಯ, ಭೋಜನಾಲಯ, ಮಕ್ಕಳ ಹಾಜರಿ, ಶಿಕ್ಷಣದ ಗುಣಮಟ್ಟ, ಶೈಕ್ಷಣಿಕ ಪ್ರಗತಿಯ ಬಗ್ಗೆ ಪರಿಶೀಲನೆ ನಡೆಸಿದರು.
ಶಿಕ್ಷಕರ ಹಾಜರಿ ಪುಸ್ತಕ, ಮಧ್ಯಾಹ್ನದ ಬಿಸಿಯೂಟದ ಮೆನು, ಮಕ್ಕಳ ಹಾಜರಿಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ನಾಲ್ವರು ಶಿಕ್ಷಕರಲ್ಲಿ ಇಬ್ಬರು ಶಿಕ್ಷಕರು ರಜೆ ಇದ್ದರು. ಆದರೆ ರಜೆ ಚೀಟಿ ಬರೆದಿಲ್ಲ. ರಜೆಯಲ್ಲಿ ಹೋಗಿದ್ದರು. ಹೋದರೂ ಹಾಜರಿ ಪುಸ್ತಕದಲ್ಲಿ ಎಂಟ್ರಿ ಮಾಡಿರಲಿಲ್ಲ. ಇನ್ನಿಬ್ಬರು ಶಿಕ್ಷಕರು ಹಾಜರಿ ಪುಸ್ತಕದಲ್ಲಿ ಸಂಜೆ ಮಾಡುವ ಸಹಿಯನ್ನು ಬೆಳಗ್ಗೆ ಮಾಡಿದ್ದರು. ಇದನ್ನು ಕಂಡ ಶಾಸಕರು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಮಕ್ಕಳು, ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ ಕೊಡುತ್ತಿಲ್ಲ. ವಾರಕ್ಕೆ ಎರಡು ಮೊಟ್ಟೆ ಕೊಡವೇಕು. ವಾರಕ್ಕೆ ಒಂದೇ ಮೊಟ್ಟೆ ಕೊಡ್ತಾರೆ, ಇಲ್ಲದಿದ್ದರೆ ಇಲ್ಲ ಎಂದು ಶಾಸಕರಿಗೆ ಇಲ್ಲಿನ ಸಮಸ್ಯೆ ಬಿಚ್ಚಿಟ್ಟರು.
Read also : Harihara | ವಿಶ್ವಕರ್ಮ ಜಯತ್ಯೋತ್ಸವ ಕಾರ್ಯಕ್ರಮ
ಇದರಿಂದ ಗರಂ ಆದ ಶಾಸಕರು, ಸರ್ಕಾರ ಗ್ರಾಮೀಣ ಪ್ರದೇಶದ ಬಡ ಮಕ್ಕಳು ಶಾಲೆಗೆ ಸೇರಿ ಒಳ್ಳೆಯ ಅಕ್ಷರ ಕಲಿತು ಭವಿಷ್ಯದಲ್ಲಿ ಉತ್ತಮ ಸತ್ಪ್ರಜೆಗಳಾಗಲಿ ಎಂದು ಸರ್ಕಾರ ಹಲವಾರು ಸೌಲಭ್ಯಗಳನ್ನು ಕೊಡುತ್ತಿದೆ. ಆದರೆ ಸರ್ಕಾರ ಕೊಡುವ ಸೌಲಭ್ಯಗಳನ್ನೇ ಮಕ್ಕಳಿಗೆ ಸರಿಯಾಗಿ ಕೊಡುವುದಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.
ದೂರವಾಣಿ ಮೂಲಕ ಉತ್ತರ ವಲಯದ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸಿದ ಶಾಸಕರು, ಇಲ್ಲಿನ ಸಮಸ್ಯೆ ಬಗ್ಗೆ ವಿವರಿಸಿದರು. ಶಿಕ್ಷಕರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ವಾರಕ್ಕೆ ಎರಡು ಮೊಟ್ಟೆ ಕೊಡುವ ಬದಲು ಒಂದೇ ಕೊಡ್ತಾರೆ, ರಜೆ ಹೋದ ಶಿಕ್ಷಕರು ಹಾಜರಿ ಪುಸ್ತಕದಲ್ಲಿ ಎಂಟ್ರಿ ಮಾಡಿಲ್ಲ. ಮಕ್ಕಳ ಸಂಖ್ಯೆ ಕಡಿಮೆ ಇದೆ. ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ನೀಡಬೇಕು ಎಂದು ಸೂಚಿಸಿದರು.
ನರೇಗಾದಡಿ ಹೈಟೆಕ್ ಶೌಚಾಲಯ, ಭೋಜನಾಲಯ, ಶಾಲಾ ಕಾಂಪೌಂಡ್, ಆಟದ ಮೈದಾನ ನಿರ್ಮಾಣ ಮಾಡುವಂತೆ ಗ್ರಾಪಂ ಪಿಡಿಒ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್, ವಕೀಲ ಮಂಜಪ್ಪ, ಸದಸ್ಯ ದುರುಗಪ್ಪ, ತಿಪ್ಪೇಸ್ವಾಮಿ, ರೇವಣಸಿದ್ದಯ್ಯ, ರಂಗನಾಥ್, ಕರಿಬಸಪ್ಪ, ಬಸವಲಿಂಗಪ್ಪ, ಶಾಲೆಯ ಮುಖ್ಯ ಶಿಕ್ಷಕ ನಾಗರಾಜ್ ಇದ್ದರು.
ಅಂಗನವಾಡಿ ಕೇಂದ್ರಕ್ಕೆ ಭೇಟಿ
ಹೆಮ್ಮನಬೇತೂರು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಶಾಸಕ ಕೆ.ಎಸ್.ಬಸವಂತಪ್ಪ, ಮಕ್ಕಳ ಹಾಜರಾತಿ, ಪ್ರತಿದಿನ ಮಕ್ಕಳಿಗೆ ಕೊಡುವ ಆಹಾರ ಪದಾರ್ಥ ಪರಿಶೀಲನೆ ನಡೆಸಿದರು. ಮಕ್ಕಳಿಗೆ, ಗರ್ಭಿಣಿಯರು, ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡಬೇಕು. ಯಾವುದೇ ರೀತಿಯ ಸಮಸ್ಯೆ ಆಗದಂತೆ ಗಮನ ಹರಿಸಬೇಕೆಂದು ಅಂಗನವಾಡಿ ಕೇಂದ್ರದ ಕಾರ್ಯಕರ್ತೆಗೆ ಸೂಚನೆ ನೀಡಿದರು.