ಜಗತ್ತಿನ ಭಾಷಾ ತಜ್ಞರು, ಮನೋವಿಜ್ಞಾನಿಗಳು,ಸಾಮಾಜಿಕ ಚಿಂತಕರು, ಮಗುವಿನ ಮಾತೃಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ಸಿಗಬೇಕು ಎಂದು ಪ್ರತಿಪಾದಿಸಿದ್ದಾರೆ.
ಮಾತೃಭಾಷೆಯಲ್ಲಿ ಶಿಕ್ಷಣವನ್ನು ನೀಡಿದಾಗ ಮಕ್ಕಳು ಬಹುಬೇಗ ವಿಷಯವನ್ನು ಗ್ರಹಿಸುವುದಲ್ಲದೆ ಕಲಿಕೆಯಲ್ಲಿ ಮುಂದಿರುತ್ತಾರೆ. ಮಗುವಿನ ಚಿಂತನ ಕೌಶಲ್ಯ, ಕ್ರಿಯಾಶೀಲತೆ, ವಾಕ್ಚಾತುರ್ಯ, ಅರಿವು, ಭಾವನಾತ್ಮಕ ಅಂಶಗಳು ಮಗುವಿನ ವ್ಯಕ್ತಿತ್ವದ ವಿಕಸನಕ್ಕೆ ಸಹಾಯಕವಾಗುತ್ತವೆ.
ಬೇರೆಲ್ಲ ಭಾಷೆಗಳಿಗಿಂತ ಮಾತೃಭಾಷೆಯ ಶಿಕ್ಷಣ ಅತ್ಯಂತ ಪರಿಣಾಮಕಾರಿಯಾಗಿದ್ದು ವಿದ್ಯಾರ್ಥಿಯ ಬದುಕನ್ನು ನಿರ್ಧರಿಸುವಲ್ಲಿ ಮಾತೃಭಾಷೆ ಮಹತ್ವದ ಪಾತ್ರವನ್ನು ವಹಿಸುತ್ತದೆ.
ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದೇ ಶಿಕ್ಷಣದ ಅತ್ಯುತ್ತಮವಾದ ಮಾಧ್ಯಮ ಎನ್ನುವುದನ್ನು ಅನೇಕ ಅಧ್ಯಯನಗಳು ದೃಢೀಕರಿಸಿವೆ. (ಯುನೆಸ್ಕೊ 1953, ರಾಷ್ಟ್ರೀಯ ಶಿಕ್ಷಣ ನೀತಿ 1968, 1986,2020) ಬೆನ್ಸನ್ ರವರು ವಿವರಿಸುತ್ತಾ ಮಗುವಿನ ಆರಂಭಿಕ ಕಲಿಕೆಯು ಅದರ ಮೊದಲ ಭಾಷೆಯಲ್ಲಿ ನಡೆದಾಗ ಆ ಮಗುವು ತನ್ನ ಮಾತನಾಡುವ ಭಾಷೆ ಮತ್ತು ಬರೆಯುವ ಭಾಷೆಗೆ ಸಂಬಂಧ ಕಟ್ಟಿಕೊಳ್ಳಲು ಸಹಾಯ ಮಾಡುತ್ತದೆ ಎನ್ನುತ್ತಾರೆ.
ಪ್ರಪಂಚದಲ್ಲಿ ಅನೇಕ ಭಾಷೆಗಳು ಅಳಿವಿನ ಅಂಚಿನಲ್ಲಿವೆ.. ಯಾವುದೇ ಭಾಷೆ ಉಳಿಯಬೇಕಾದರೆ ಅದನ್ನು ಹೆಚ್ಚು ಬಳಸಬೇಕಾಗುತ್ತದೆ…. ಜಪಾನ್ ಎನ್ನುವ ಒಂದು ಪುಟ್ಟ ದೇಶ ಮಾತೃಭಾಷೆಯನ್ನು ಉಳಿಸಲು ಪ್ರತಿ ವಿಶ್ವವಿದ್ಯಾನಿಲಯಗಳಲ್ಲಿ ಭಾಷಾಂತರಕ್ಕಾಗಿಯೇ ಪ್ರತ್ಯೇಕ ವಿಭಾಗ ತೆರೆದಿದೆ. ಅಲ್ಲದೆ ವಿಜ್ಞಾನ ಅಥವಾ ಯಾವುದೇ ವಿಷಯದಲ್ಲಿ ನಿಯತಕಾಲಿಕೆಗಳು ಬಂದರೆ ಜಪಾನ್ ನಲ್ಲಿ ಕೆಲವೇ ದಿನಗಳಲ್ಲಿ ಭಾಷಾಂತರಿಸಿ ಅಲ್ಲಿನ ವಿದ್ಯಾರ್ಥಿಗಳಿಗೆ ನೀಡುತ್ತಾರೆ. ಇಂತಹ ಪ್ರವೃತ್ತಿ ನಮ್ಮ ಕನ್ನಡ ನೆಲದಲ್ಲೂ ಕೂಡ ಆರಂಭವಾಗಬೇಕಾಗಿದೆ.
ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2022 ಮಕ್ಕಳಿಗೆ 8 ವರ್ಷದವರೆಗೆ ಅವರ ಮಾತೃಭಾಷೆಯಲ್ಲಿಯೇ ಕಲಿಸಬೇಕೆಂದು ಶಿಫಾರಸು ಮಾಡುತ್ತದೆ. ಶಿಕ್ಷಣ ಹಕ್ಕು ಕಾಯ್ದೆ 2009ರ ಅಡಿಯಲ್ಲಿ ಅಧ್ಯಾಯ V ನೇ ವಿಭಾಗ 29(f) ಪ್ರಶ್ನಾರ್ಥವಾಗಿ ಸೂಚನೆಗಳ ಮಾಧ್ಯಮವು ಪ್ರಾಯೋಗಿಕವಾಗಿ ಮಗುವಿನ ಮಾತೃಭಾಷೆಯಲ್ಲಿರಬೇಕು ಎಂದು ಹೇಳುತ್ತದೆ.
Read also : ಮಕ್ಕಳೇಕೆ ಕಲಿಕೆಯಲ್ಲಿ ಹಿಂದುಳಿಯುವರು?? : ಮಕ್ಕಳಿಗೆ ಶಿಕ್ಷೆಗಿಂತ ಪ್ರೀತಿ,ವಿಶ್ವಾಸ ಸರಿಯಾದ ಮಾರ್ಗ
ಭಾರತೀಯ ಸರ್ಕಾರದ ಉಪಕ್ರಮ DIKSHA ಪೋರ್ಟಲ್ ಭಾರತೀಯ ಸಂಕೇತ ಭಾಷೆ ಮತ್ತು 32 ಇತರ ಭಾರತೀಯ ಭಾಷೆಗಳಲ್ಲಿ 1- 12 ತರಗತಿಗಳಿಗೆ ಕೋರ್ ಸಾಮಗ್ರಿಗಳನ್ನು ನೀಡುತ್ತಿದೆ. ಇಲ್ಲಿ ಪಠ್ಯಪುಸ್ತಕಗಳು ಮತ್ತು ಬೋಧನಾ ಸಂಪನ್ಮೂಲಗಳು ಸಹ ಲಭ್ಯವಿದೆ ಸಂಪನ್ಮೂಲಗಳ ಇಂತಹ ಸಮಗ್ರ ಗ್ರಂಥಾಲಯವನ್ನು ಒದಗಿಸುವ ಮೂಲಕ ದೀಕ್ಷ ಪೋರ್ಟಲ್ ಶಿಕ್ಷಕರಿಗೆ ಅಂತರ್ಗತ ಕಲಿಕೆ ವಾತಾವರಣವನ್ನ ಸೃಷ್ಟಿಸಲು ಸುಲಭಗೊಳಿಸುತ್ತದೆ ವಿದ್ಯಾರ್ಥಿಗಳಿಗೆ ಅವರ ಸ್ಥಳೀಯ ಭಾಷೆಯಲ್ಲಿ ಕಲಿಯಲು ಅಮೂಲ್ಯವಾದ ಅವಕಾಶವನ್ನು ನೀಡುತ್ತದೆ.
ಮಾತೃಭಾಷೆಯ ಮಹತ್ವ ಶಿಕ್ಷಣದಲ್ಲಿ
ಮಾತೃಭಾಷೆಯ ಮಹತ್ವವೇನು ವಿವಿಧ ಸಂಶೋಧನೆಗಳು ಮತ್ತು ಪುರಾವೆಗಳು ಮಕ್ಕಳಿಗೆ ಅವರ ಮಾತೃಭಾಷೆಯಲ್ಲಿ ಕಲಿಸುವುದು ವಿಶೇಷವಾಗಿ ಅಡಿಪಾಯದ ವರ್ಷಗಳಲ್ಲಿ 3 ರಿಂದ 8 ವರ್ಷಗಳು ಹೆಚ್ಚಿನ ಧಾರಣ ಶಕ್ತಿ ಹೆಚ್ಚಿನ ಪ್ರಾವಿಣ್ಯತೆ, ಕಡಿಮೆ ಉತ್ಪ್ರೇಕ್ಷಿತ ಶ್ರೇಣಿಗಳು ಮತ್ತು ಸುಧಾರಿತ ಪರೀಕ್ಷಾ ಅಂಕಗಳನ್ನು ಉಂಟುಮಾಡುತ್ತದೆ.
ಪ್ರಪಂಚದ ಜನಸಂಖ್ಯೆಯ 40% ಜನರು ಮಾತನಾಡುವ ಅಥವಾ ಅರ್ಥ ಮಾಡಿಕೊಳ್ಳುವ ಭಾಷೆಯಲ್ಲಿ ಶಿಕ್ಷಣವನ್ನು ಹೊಂದಿಲ್ಲ ಎಂದು ಅಂದಾಜಿಸಲಾಗಿದೆ. ಇಂದು ಪ್ರಪಂಚದಾದ್ಯಂತ ಸುಮಾರು 7000 ಭಾಷೆಗಳನ್ನು ಜನರು ಮಾತನಾಡುತ್ತಾರೆ, ಆದರೆ ಹೆಚ್ಚು ಭಾಷೆಗಳು ಆತಂಕಕಾರಿ ದರದಲ್ಲಿ ಕಣ್ಮರೆಯಾಗುವುದರಿಂದ ಭಾಷಾ ವೈವಿಧ್ಯತೆಯು ಹೆಚ್ಚು ಅಪಾಯದಲ್ಲಿದೆ ಮತ್ತು ಒಂದು ಭಾಷೆ ಕಣ್ಮರೆಯಾದಾಗ ಅದು ಸಂಪೂರ್ಣ ಸಾಂಸ್ಕೃತಿಕ ಮತ್ತು ಬೌದ್ಧಿಕ ಪರಂಪರೆಯನ್ನು ತೆಗೆದುಕೊಳ್ಳುತ್ತದೆ.
ಮಾತೃಭಾಷೆಯಲ್ಲಿ ಮಕ್ಕಳು ಕಲಿಯುವುದರಿಂದ ಜ್ಞಾನವನ್ನು ಕಟ್ಟಿಕೊಳ್ಳಲು, ಪರಿಕಲ್ಪನೆಗಳ ಸ್ಪಷ್ಟತೆಗೆ.. ಮಾತೃಭಾಷೆ ಸೇತುವೆಯಾಗಿ ಕೆಲಸ ಮಾಡುತ್ತದೆ. ಮಾತೃಭಾಷೆಯಲ್ಲಿ ಕಲಿಯುವ ಮಗು ವಿಮರ್ಶಾತ್ಮಕ ಚಿಂತನೆ, ಸೃಜನಾತ್ಮಕತೆ, ಸಮಸ್ಯೆ ಪರಿಹರಿಸುವ ಕೌಶಲ್ಯ ವೃದ್ಧಿಯಾಗುತ್ತವೆ ಎಂದು ಹಲವು ಅಧ್ಯಯನಗಳಿಂದ ಕಂಡುಬಂದಿವೆ. ಆತ್ಮವಿಶ್ವಾಸ, ಸ್ವಾಭಿಮಾನ, ಸಾಂಸ್ಕೃತಿಕ ಗುರುತಿನ ಪ್ರಜ್ಞೆ, ಸ್ವಯಂ ಭರವಸೆ, ಆಂತರಿಕ ಪ್ರೇರಣೆಗಳು ಮಗುವಿನಲ್ಲಿ ಹೆಚ್ಚಾಗುತ್ತವೆ..
ಭಾರತ ಬಹು ಸಂಸ್ಕೃತಿ ಮತ್ತು ಬಹು ಭಾಷೆಗಳಿರುವ ವಿಶಿಷ್ಟವಾಗಿರುವ ದೇಶ. ವಿವಿಧತೆಯಲ್ಲಿ ಏಕತೆಯನ್ನು ಸಾರುವಂತ ದೇಶದಲ್ಲಿ 22 ಅಧಿಕೃತ ಭಾಷೆಗಳಿವೆ. ಮಾತೃಭಾಷೆಯ ಶಿಕ್ಷಣದ ಮೂಲಕ ಈ ವೈವಿಧ್ಯತೆಯನ್ನು ಅಳವಡಿಸಿಕೊಳ್ಳುವುದು ಪ್ರತಿಯೊಂದು ಭಾಷೆಯು ಸಾಂಸ್ಕೃತಿಕ ಪರಂಪರೆಯನ್ನು ಆಚರಿಸುತ್ತದೆ. ಎಲ್ಲ ಮಕ್ಕಳ ವಿಶಿಷ್ಟ ಗುರುತುಗಳನ್ನು ಮೌಲ್ಯಿಕರಿಸುವ ಸಮಾನ ಮತ್ತು ಅಂತರ್ಗತ ವ್ಯವಸ್ಥೆಯನ್ನು ರಚಿಸುತ್ತದೆ..
ಮಕ್ಕಳನ್ನು ಶೈಕ್ಷಣಿಕವಾಗಿ ಸಶಕ್ತ ಗೊಳಿಸಲು ಅವರ ಕಲಿಕಾ ಸಾಮರ್ಥ್ಯವನ್ನು ಒರಗೆ ಹಚ್ಚಲು ಮತ್ತು ಎಲ್ಲರಿಗೂ ಉಜ್ವಲ ಭವಿಷ್ಯದ ದಾರಿ ತೆರೆದುಕೊಳ್ಳಲು ಮಾತೃಭಾಷೆ ಪ್ರಬಲ ಮಾಧ್ಯಮವಾಗಿದೆ….
ನಾಗರಾಜ್ ಹೆಚ್