ನವದೆಹಲಿ (Davanagere): ಮಕ್ಕಳಲ್ಲಿ ಅಪೌಷ್ಠಿಕತೆಯನ್ನು ಹೋಗಲಾಡಿಸಲು ಪಿ.ಎಂ ಪೋಶನ್ ಯೋಜನೆ ಅಡಿಯಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯು ಕಾರ್ಯನಿರ್ವಹಿಸುತ್ತಿದ್ದು, ಕೇಂದ್ರ ಸರ್ಕಾರದ ಪಾಲಿನಲ್ಲಿ ಅಡುಗೆ ತಯಾರಕರ ಗೌರವಧನದ ವ್ಯತ್ಯಾಸವನ್ನು ಮನಗಂಡು ಶೀಘ್ರವೇ ಕರ್ನಾಟಕ ರಾಜ್ಯ ಸರ್ಕಾರದ ಮಾದರಿಯಲ್ಲಿ ಸರಿದೂಗಿಸುವಂತೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಸದನಕ್ಕೆ ಆಗ್ರಹಿಸಿದರು.
ದೇಶಾದ್ಯಂತ 1.27 ಮಿಲಿಯನ್ ಶಾಲೆಗಳಲ್ಲಿ 120 ಮಿಲಿಯನ್ ಮಕ್ಕಳಿಗೆ, ಮಕ್ಕಳ ದಾಖಲಾತಿ ಹಾಗೂ ಅವರಲ್ಲಿನ ಪೌಷ್ಠಿಕತೆಯನ್ನು ಹೆಚ್ಚಿಸಲು ಸರ್ಕಾರಿ ಶಾಲೆಗಳು, ಅಂಗನವಾಡಿ ಹಾಗೂ ಮದರಸಗಳಲ್ಲಿ ಉಚಿತ ಆಹಾರ ನೀಡಲಾಗುತ್ತಿದೆ. ಈ ಯೋಜನೆಯು ವಿಶ್ವದಾದ್ಯಂತ ಅತ್ಯಂತ ಪ್ರಮುಖ ಹಾಗೂ ವಿಶೇಷವಾಗಿದೆ.
ಬಿಸಿಯೂಟ ತಯಾರಕರಿಗೆ ಗೌರವಧನದಲ್ಲಿ ಕೇಂದ್ರದ ಪಾಲು 60% ಮತ್ತು ರಾಜ್ಯದ ಪಾಲು 40% ಗೌರವಧನವನ್ನು ಬಿಸಿಯೂಟ ತಯಾರಕರಿಗೆ ನೀಡಲಾಗುತ್ತಿದ್ದು, ಮುಖ್ಯ ಅಡುಗೆ ತಯಾರಕರಿಗೆ ರೂ.3700 ಹಾಗೂ ಸಹಾಯಕರಿಗೆ ರೂ.3600 ಪಾವತಿಸಲಾಗುತ್ತಿದೆ. ಈ ಪೈಕಿ ರಾಜ್ಯ ಸರ್ಕಾರವು ರೂ.3000 ಭರಿಸುತ್ತಿದ್ದು, ಕೇಂದ್ರ ಸರ್ಕಾರವು ಕೇವಲ ರೂ.600 ಭರಿಸುತ್ತಿದೆ. ರಾಜ್ಯ ಸರ್ಕಾರವು ಯೋಜನೆಯ ಪ್ರಾರಂಭದಿಂದಲೂ ಗೌರವಧನ್ನು ರೂ 400 ರಿಂದ ಹೆಚ್ಚಿಸುತ್ತಾ ಬಂದಿದ್ದು, ಪ್ರಸ್ತುತ ಪ್ರತಿ ತಿಂಗಳು ರೂ.3000 ಮುಟ್ಟಿರುತ್ತದೆ. ಆದರೆ ಕೇಂದ್ರದ ಪಾಲು ಕೇವಲ ರೂ. 600ರಲ್ಲಿಯೇ ಸ್ಥಗಿತವಾಗಿದ್ದು, ಯಾವುದೇ ರೀತಿಯ ಗೌರವಧನದಲ್ಲಿ ಹೆಚ್ಚಳವನ್ನು ಮಾಡಿರುವುದಿಲ್ಲ.
ಯೋಜನೆಯ ಪ್ರಾರಂಭದಿಂದಲು ಅಡುಗೆ ತಯಾರಕರನ್ನು ಕೇವಲ ಸ್ವಯಂ ಸೇವಕರೆಂದು ಪರಿಗಣಿಸಲಾಗಿದೇಯೇ ಹೊರತು ಪಿಂಚಣಿ ಮತ್ತು ಭವಿಷ್ಯ ನಿಧಿ ಸೌಲಭ್ಯಗಳನ್ನು ಪಡೆಯುವ ಉದ್ಯೋಗಿಗಳೆಂದು ಪರಿಗಣಿಸಿಲ್ಲ. ಇದರಿಂದ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಾಗಿರುವ ಈ ವರ್ಗಕ್ಕೆ ಜೀವನ ನಿರ್ವಹಣೆ ಕಷ್ಟಕರವಾಗಿದೆ.
ರೂ. 3700 ರೂಪಾಯಿ ಗೌರವಧನದಿಂದ ಅಗತ್ಯ ಸೇವೆಗಳನ್ನು ಪೂರೈಸಿಕೊಳ್ಳಲು ಬಿಸಿಯೂಟ ತಯಾರಕರಿಗೆ ಆಗುತ್ತಿಲ್ಲ. ಇದನ್ನು ಮನಗಂಡು ಕೇಂದ್ರ ಸರ್ಕಾರದ ಪಾಲಾದ 60% ಗೌರವಧನವನ್ನು ರಾಜ್ಯ ಸರ್ಕಾರಗಳ ಅನುಗುಣವಾಗಿ ಅತೀ ಶೀಘ್ರವೇ ಹೆಚ್ಚಿಸಿ ಸರಿದೂಗಿಸಲು ಕೇಂದ್ರ ಸರ್ಕಾರಕ್ಕೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಒತ್ತಾಯಿಸಿದರು.