ದಾವಣಗೆರೆ : ಬೆಂಗಳೂರಿನ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ ಕೇಂದ್ರದಲ್ಲಿ ನಡೆದ ಮಹತ್ವದ ಸಭೆಯಲ್ಲಿ ದಾವಣಗೆರೆಯ ಐಟಿವಲಯಕ್ಕೆ ಸಂಬಂಧಿಸಿದ ವಿಚಾರದ ಕುರಿತು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಸುದೀರ್ಘ ಚರ್ಚೆ ನಡೆಸಿದ್ದಾರೆ.
ಕರ್ನಾಟಕದ ಮಹತ್ವದ ಐಟಿ ಕೇಂದ್ರಗಳಲ್ಲಿ ಒಂದಾಗಿ ದಾವಣಗೆರೆ ಹೊರಹೊಮ್ಮುವ ಸಾಧ್ಯತೆ ಮತ್ತು ಅಗತ್ಯದ ಹಿನ್ನೆಲೆಯಲ್ಲಿ ಈ ಸಭೆ ಆಯೋಜಿಸಲಾಗಿತ್ತು. ದಾವಣಗೆರೆಗೆ ಐಟಿ/ಐಟಿಇಎಸ್ ಸಂಸ್ಥೆಗಳನ್ನು ಆಕರ್ಷಿಸುವ ಕ್ರಮಗಳನ್ನು ರೂಪಿಸಲು ಹಾಗೂ ಎಸ್‌ಟಿಪಿಐ ಕೇಂದ್ರದ ಮೂಲಸೌಕರ್ಯಗಳ ಸಮಗ್ರ ವಿಮರ್ಶೆ ನಡೆಸಿ ವಲಯದ ಅಭಿವೃದ್ಧಿಯ ಬಗ್ಗೆ ಮಹತ್ವದ ಸಭೆ ನಡೆದಿದೆ.
.
ಚರ್ಚೆಯ ಪ್ರಮುಖ ಅಂಶಗಳು; ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ ಕೇಂದ್ರ ಹಾಗೂ ವ್ಯಾಪಾರ ಅಭಿವೃದ್ಧಿ ಕೇಂದ್ರದ ಬಗ್ಗೆ ಮಾತನಾಡಿರುವ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ದಾವಣಗೆರೆಯಲ್ಲಿ ಎಸ್‌ಟಿಪಿಐ ಮೂಲಸೌಕರ್ಯ ವಿಸ್ತರಣೆಯ ಸಾಧ್ಯತೆಗಳನ್ನು ಪರಿಶೀಲಿಸಿ, ಬೆಳವಣಿಗೆಯ ಅಗತ್ಯತೆಗೆ ಸ್ಪಂದಿಸುವುದು ಮತ್ತು ಪ್ರಾದೇಶಿಕ ಶಕ್ತಿಗಳನ್ನು ಅನಾವರಣಗೊಳಿಸುವುದು ಹಾಗೂ ಎಸ್‌ಟಿಪಿಐ ಸಹಯೋಗದೊಂದಿಗೆ ದಾವಣಗೆರೆಯ ತಂತ್ರಜ್ಞಾನ ವಲಯದ ಪರಿವರ್ತನೆಗೆ ಕಾರಣವಾಗಬಹುದಾದ ಉತ್ಸಾಹಭರಿತ ಕ್ರಮಗಳ ಕುರಿತು ಚರ್ಚೆ ನಡೆಸಿದರು.
ಈ ಮಹತ್ವದ ಸಭೆಯಲ್ಲಿ ಬೆಂಗಳೂರಿನ ಎಸ್ ಟಿಪಿಐ ನಿರ್ದೇಶಕರಾದ ಡಾ.ಸಂಜಯ್ ತ್ಯಾಗಿಯವರು,ಕ್ಯೂ- ಸ್ಪೈಡರ್ಸ್ ನ ಸಿಇಒ ಗಿರೀಶ್ ರಾಮಣ್ಣನವರು ಹಾಗೂ ದಾವಣಗೆರೆ ಜಿಲ್ಲಾಧಿಕಾರಿಗಳಾದ ಜಿ.ಎಂ ಗಂಗಾಧರಸ್ವಾಮಿಯವರು ಭಾಗವಹಿಸಿದ್ದರು.