ದಾವಣಗೆರೆ (Davanagere): ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿ ನಾಗರಿಕರು, ವಾರ್ಡ್ ನ ಪ್ರಮುಖರು ಸೇರಿ ಮಹಾನಗರ ಪಾಲಿಕೆಯ ಸದಸ್ಯ ಜಿ. ಎಸ್. ಮಂಜುನಾಥ್ ಗಡಿಗುಡಾಳ್ ನೇತೃತ್ವದಲ್ಲಿ ಕನ್ನಡ ದಿನಾಚರಣೆಯನ್ನು ಆಚರಿಸಿದರು.
ಈ ವೇಳೆ ಮಾತನಾಡಿದ ಗಡಿಗುಡಾಳ್ ಮಂಜುನಾಥ್ ಅವರು, ಕನ್ನಡ ನಾಡು, ನುಡಿ, ಸಂಸ್ಕೃತಿ, ಪರಂಪರೆ ಸಂರಕ್ಷಣೆಗೆ ಶ್ರಮಿಸಿದವರನ್ನು ನೆನಪು ಮಾಡಿಕೊಳ್ಳಬೇಕು. ಇಂಥ ಮಹನೀಯರಿಗೆ ಗೌರವ ಸಲ್ಲಿಸುವ ಕೆಲಸ ಮಾಡೋಣ. ಅವರ ಆಶಯಗಳಂತೆ ಕನ್ನಡ ಉಳಿಸಿ ಬೆಳೆಸಲು ಶ್ರಮಿಸೋಣ ಎಂದು ಕರೆ ನೀಡಿದರು.
ಕನ್ನಡ ನಾಡು, ನುಡಿ, ಇತಿಹಾಸಕ್ಕೆ ತನ್ನದೇ ಆದ ವಿಶಿಷ್ಟ, ಮಹತ್ವ, ಪ್ರಾಮುಖ್ಯತೆ ಇದೆ. ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡವೇ ಶ್ರೇಷ್ಠ. ಕನ್ನಡ ನುಡಿಯೇ ಚೆಂದ. ಕನ್ನಡ ಸಂಸ್ಕೃತಿ ಪರಂಪರೆಯೇ ಅಂದ. ಇಂಥ ಮಹೋನ್ನತ ಇತಿಹಾಸ ಹೊಂದಿರುವ ಕನ್ನಡ ಭಾಷೆ ಉಳಿಸಬೇಕಾದ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.
ಆಡಳಿತ ಭಾಷೆ ಕನ್ನಡ ಭಾಷೆಯಾಗಿದ್ದರೂ ಪರಭಾಷೆಗಳ ಹಾವಳಿ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಕೆಲಸ ಆಗಬೇಕಿದೆ. ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ. ಕನ್ನಡ ಭಾಷೆಯ ಮೇಲೆ ಎಲ್ಲರೂ ಅಭಿಮಾನ ಬೆಳೆಸಬೇಕು. ಮಾತೃಭಾಷೆಯನ್ನು ಪ್ರೀತಿಸುವ, ಗೌರವಿಸುವ ಮನೋಭಾವ ನಮಗಷ್ಟೇ ಅಲ್ಲ ಮಕ್ಕಳಿಗೂ ಕಲಿಸಿಕೊಡಬೇಕಾಗಿದೆ. ಪಾಶ್ಚಿಮಾತ್ಯ ಸಂಸ್ಕೃತಿಯ ಬೆನ್ನೇರಿ ಹೊರಟಿರುವವರಿಗೆ ಕನ್ನಡ ಭಾಷೆಯ ಬಗ್ಗೆ ತಿಳಿಸಿಕೊಡೋಣ ಎಂದು ಕರೆ ನೀಡಿದರು.
ದಾವಣಗೆರೆಯಲ್ಲಿಯೂ ಕನ್ನಡ ನಾಡು, ನುಡಿ, ಭಾಷೆ ಸೇರಿದಂತೆ ಹಲವು ಹೋರಾಟಗಳಲ್ಲಿ ಪಾಲ್ಗೊಂಡವರು ಇದ್ದಾರೆ. ಅವರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡೋಣ. ಅವರಿಗೆ ಅಭಿನಂದಿಸುವ ಜೊತೆಗೆ ಮಹನೀಯರ ಕಾರ್ಯ ತಿಳಿಸಿಕೊಡುವ ಕೆಲಸ ನಾವೆಲ್ಲರೂ ಸೇರಿ ಮಾಡೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಾರ್ಡ್ ನ ಪ್ರಮುಖರು, ಹಿರಿಯರು, ಕನ್ನಡಾಭಿಮಾನಿಗಳು, ಯುವಕರು ಪಾಲ್ಗೊಂಡಿದ್ದರು.
Read also : Davanagere | ಅಭಿವೃದ್ದಿಗೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕು : ಸಚಿವ ಎಸ್.ಎಸ್.ಮಲ್ಲಿಕಾರ್ಜುನ್