ನೀವೆಂದೂ ನನ್ನ ಕವಿತೆಯೊಂದಿಗೆ
ನಡೆಯಲಾರಿರೆ
ಅವಳ ಜಾಡು ಸಿಗದು ನಿಮಗೆ
ಅವಳ ದಾರಿಯೇ ಬೇರೆ
ನಿಮ್ಮ ವ್ಯಂಗ್ಯ ಘೊಷಿಸಬಹುದು
ಬರೀ ಮುಳ್ಳಿನ ದಾರಿಯೆಂದು
ಮುಳ್ಳಿನ ಮೇಲೆ
ನೀವು ತುಳಿದ ಹೂಗಳನ್ನು
ಅರಳಿಸುತ್ತಾಳೆ ಅವಳು.
ಯಾವ ನಿಶೆಗೂ ಬಗ್ಗದವಳು
ನೆಲದ ನಂಟಿನ ದೃಢ ಹೆಜ್ಜೆಯ
ನೇರನಡೆ ಅವಳದು
ನೆಲದ ಸೂರ್ಯ ಮಾತ್ರ
ಅವಳೊಂದಿಗೆ ನಿರಂತರ ನಡೆಯಬಲ್ಲ.
ಸಾವನ್ನು ಉಡಿಯಲಿ ಕಟ್ಟಿಕೊಂಡ
ದುರ್ಗಮದ ಕೊರಕುಗಳ ಹಾಯುತ್ತಾಳೆ
ಹೊಣೆಯರಿತ ಕಾಯಕದ ಅವಳು ನಡೆದಲೆಲ್ಲಾ ಜಿವಂತ ಕನಸುಗಳ ನಾಟಿ.
ನಿಮ್ಮನ್ನು ಮೆಚ್ಚಿಸಲಾರಳು ಅವಳು
ಕಲಾತ್ಮಕತೆಯ ಕುಸುರಿಲ್ಲ, ಸುಂದರ ಪದಗಳ ಧಿರಿಸಿಲ್ಲ
ಕಲ್ಪನೆಯ ಖರಾಮತ್ತುಗಳಿಲ್ಲ, ಭ್ರಮೆಯ ಬಣ್ಣಗಳಿಲ್ಲ.
ನೀವು ಉಗಿದ ಕಸ, ಚಿಂದಿಯ ರಾಶಿ, ತಿಪ್ಪೆ, ಉಪ್ಪಿನ ಘಮಟು,, ಕಕ್ಕಿದ ಕೀವಿನೊಂದಿಗೆ
ಬದುಕ ಕಟ್ಟಿಕೊಳ್ಳುವುದೆ ಅವಳ ಕಲಾತ್ಮಕ ಜಗತ್ತು
ಕಸ ಬಸಿದು ರಸ ಉಣಿಸುತ್ತಾಳೆ
ಚಿಂದಿಗಳ ಹೊಲೆದು
ಚಳಿಗೆ ನಡುಗುವ ಜಗದ ಹೃದಯಕೆ ಬೆಚ್ಚಗಿನ ಕಾವು ಕೊಡುತ್ತಾಳೆ
ನಿದ್ದೆಗಾಗಿ ಹಳಹಳಿಸಿ ಡನ್ ಲಪ್ ಹಾಸಿಗೆಯಲಿ ಹೊರಳಾಡುವ ನಿಮಗೆ
ಆ ಕಾವಿನ ರುಚಿ ದಕ್ಕದು ಬಿಡಿ.
ನನ್ನ ಕವಿತೆ ನಿಮ್ನಳತೆಗೆ ಸಿಗಲಾರಳು
ಅವಳ ಸೌಂದರ್ಯ ದಕ್ಕದು ನಿಮಗೆ
ಬೆವರ ಮಣಿ ತೊಟ್ಟ ಧೀರೆ ಅವಳು
ಕೊಡುವುದಷ್ಟೇ ಗೊತ್ತು ಕಸುದ ರೂಢಿಯಿಲ್ಲ ಅವಳಿಗೆ
ಎಲ್ಲ ಕಣ್ಣಿಗಳ ಕಿತ್ತ ಮುಕ್ತೆ ಅವಳು
ನಿಮ್ಮ ಜಾಣ ಕುರುಡಿಗೆ ಬಲಿಯಾದವಳು
ಅವಳನ್ನೊಮ್ಮೆ ತಡವಿ ನೋಡಿ
ಆಯುಧವಾಗುತ್ತಾಳೆ
ಆಯುಧದ ಹರಿತ ನಿಮಗೆ ದಕ್ಕಿದರೆ ನೀವು ಸಾಯುತ್ತೀರಿ ಮತ್ತೆ ಹುಟ್ಟುತ್ತೀರಿ
ಬಣ್ಣಗಳಿಲ್ಲದ ಬಟ್ಟೆ ತೊಟ್ಟ ಹೊಸ ಬದುಕೊಂದಿಗೆ
ಅವಳಲ್ಲಿ ಸಿಡಿಮದ್ದಿನ ಸ್ಫೋಟವಿದೆ
ಯಾರ ಮನೆಗೂ ಸಿಡಿಯಲ್ಲಿಲ್ಲ
ಪ್ರೀತಿಯ ತೋಟಕೆ ಜಂಗಳ ಕಾಯುವ ಬೇಲಿಯವಳು
ಅವಳು ಶ್ರಮದ ಹಣತೆ
ಪಾಂಡಿತ್ಯದ ಗೊಡವೆಗೆ ಹೋಗದವಳು
ಹಣತೆಯ ಬೆಳಕಲ್ಲಿ
ಜತನಗೊಂಡ ಜವಾಬ್ದಾರಿಯಂತೆ
ಮುಲಾಮು ಹುಡುಕುತ್ತಾಳೆ
ಬದುಕ ಹೋರಾಟದಲಿ ಗಾಯಗೊಂಡ
ಶ್ರಮದ ಮಕ್ಕಳ ಗಾಯ ಸವರಲು.
ನಿಮ್ಮ ಮೌನದೊಂದಿಗೆ ಸಂವಾದಿಸಲು
ಬಿಡುವಿಲ್ಲ. ಅವಳಿಗೆ
ಹದಗೆಟ್ಟ ರಸ್ತೆಗೆ ಡಾಂಬರು ಹಾಸಬೇಕು
ಕಟ್ಟಡಕ್ಕೆ ಕಲ್ಲು ಕಟೆಯಬೇಕು
ಕತ್ತಲೆಯಲ್ಲಿ ಹೂತ ಚುಕ್ಕೆಗಳ ಹುಡುಕಿ
ಜಗದ ಅಂಗಳಕೆ ರಂಗೋಲಿ ಹೊಯ್ಯಬೇಕು
ಅವಳು ಸೌಂದರ್ಯದ ಗಣಿ
ದ್ವೇಷ ಮಥಿಸಿದ ಪ್ರೀತಿ ಹೃದಯಕೆ
ಬೆಳದಿಂಗಳ ಹಾಲವಳು.
Read also : poem | ನಾ ಹೊಲೆದ ಕೆರವ ನಾ ಮೆಟ್ಟಿದ್ದರೆ
ಪಿ.ಆರ್. ವೆಂಕಟೇಶ್