ದಾವಣಗೆರೆ- ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ಅನ್ವಯ ಏ.25ರಂದು ವಿಶ್ವ ಮಲೇರಿಯಾ ದಿನ ಹಾಗೂ ಮೇ 16ರಂದು ರಾಷ್ಟ್ರೀಯ ಡೆಂಗ್ಯು ದಿನ ಆಚರಿಸಲಾಗುವುದು ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕೆ.ಹೆಚ್.ಗಂಗಾಧರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೇರಿಯಾ ನಿಯಂತ್ರಿಸುವ ಮತ್ತು ಅಂತಿಮವಾಗಿ ನಿರ್ಮೂಲನೆ ಮಾಡುವ ಉದ್ದೇಶದಿಂದ ಪ್ರತಿ ವರ್ಷ ಏ.25ರಂದು ವಿಶ್ವ ಮಲೇರಿಯಾ ದಿನ ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷ ಹೆಚ್ಚು ಸಮಾನತೆಯ ಜಗತ್ತಿಗೆ ಮಲೇರಿಯಾ ವಿರುದ್ಧದ ಹೋರಾಟವನ್ನು ತೀವ್ರಗೊಳಿಸೋಣ ಎಂಬ ಘೋಷವಾಕ್ಯದೊಂದಿಗೆ ಮಲೇರಿಯಾ ದಿನ ಆಚರಿಸಲಾಯಿತು. ಭಾರತದಲ್ಲಿ 2008ರಿಂದ ವಿಶ್ವ ಮಲೇರಿಯಾ ದಿನ ಆಚರಣೆ ಮಾಡಲಾಗುತ್ತಿದೆ ಎಂದರು.
2025ರ ವೇಳೆಗೆ ಕರ್ನಾಟಕವನ್ನು ಮಲೇರಿಯಾ ಮುಕ್ತಗೊಳಿಸುವ ಗುರಿ ಸಾಧಿಸಬೇಕಾಗುವುದರಿಂದ ಎಲ್ಲಾ ಹಂತದಲ್ಲಿ ಮಲೇರಿಯಾ ನಿವಾರಣ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ರಕ್ತ ಪರೀಕ್ಷೆ, ಜ್ವರ ಸಮೀಕ್ಷೆ, ಡಿಡಿಟಿ ಸಿಂಪಡಣೆ, ಸಮಸ್ಯಾತ್ಮಕ ಪ್ರದೇಶದಲ್ಲಿ ಸೊಳ್ಳೆ ಪರದೆಗಳ ವಿತರಣೆ, ವಲಸೆ ಜನರ ಸಮೀಕ್ಷೆ, ಸೊಳ್ಳೆ ನಿಯಂತ್ರಣಕ್ಕಾಗಿ ಲಾರ್ವಾಹಾರಿ ಮೀನುಗಳ ಬಿಡುಗಡೆ ಒಳಗೊಂಡಂತೆ ಹಲವಾರು ನಿಯಂತ್ರಣ ಕ್ರಮ ತೆಗೆದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ದಾವಣಗೆರೆ ಜಿಲ್ಲೆಯನ್ನು ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಶ್ರಮಿಸುತ್ತಿದೆ ಎಂದು ಅವರು ವಿವರಿಸಿದರು.
ಮುಂಗಾರು ಸಮಯದಲ್ಲಿ ಮನೆಯ ಸುತ್ತಮುತ್ತಲಿನ ಘನತ್ಯಾಜ್ಯ ವಸ್ತುಗಳಲ್ಲಿ ಸಂಗ್ರಹವಾಗುವ ಮಳೆ ನೀರಿನಲ್ಲಿ ಈಡಿಸ್ ಸೊಳ್ಳೆಗಳ ಉತ್ಪತ್ತಿ ತಡೆಗಟ್ಟುವಲ್ಲಿ ಕ್ರಮಗಳನ್ನು ಕೈಗೊಳ್ಳುವುದು, ಡೆಂಗ್ಯು ನಿಯಂತ್ರಣದಲ್ಲಿ ಸಮುದಾಯದ ಸಕ್ರಿಯ ಭಾಗವಹಿಸುವಿಕೆ ಹಾಗೂ ಸಂಬಂಧಪಟ್ಟ ಇಲಾಖೆಗಳ ಅಗತ್ಯ ಸಹಕಾರ ಪಡೆಯುವುದು, ಯಾವುದೇ ಜ್ವರವಿದ್ದರೂ ನಿರ್ಲಕ್ಷ್ಯ ಮಾಡದೇ, ತಕ್ಷಣ ವೈದ್ಯರಲ್ಲಿ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಡೆಂಗ್ಯು ಜ್ವರದಿಂದ ಉಂಟಾಗುವ ಸಾವು-ನೋವು ತಡೆಗಟ್ಟಬಹುದು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಷ್ಟ್ರೀಯ ಡೆಂಗ್ಯು ದಿನ ಆಚರಣೆ ಮಾಡುತ್ತಿದ್ದೇವೆ ಎಂದರು.
ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಡಿ.ಮುರುಳೀಧರ್, ಡಾ.ಸುರೇಶ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.