ದಾವಣಗೆರೆ (Davanagere): ಶಿಕ್ಷಣ ಪ್ರೇಮಿಗಳು ಕೊಡುಗೆ ನೀಡುವುದರಿಂದ ಶೈಕ್ಷಣಿಕವಾಗಿ ಗ್ರಾಮೀಣ ಪ್ರದೇಶದ ಮಕ್ಕಳು ಪ್ರಗತಿ ಸಾಧಿಸಲು ಸಹಾಯಕವಾಗುತ್ತದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.
ತಾಲೂಕಿನ ಕೋಲ್ಕುಂಟೆ ಗ್ರಾಮದಲ್ಲಿ ಭಾನುವಾರ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ರಾಷ್ಟ್ರೀಯ ಆಹ್ವಾನ ಫೌಂಡೇಶನ್ ವತಿಯಿಂದ 1 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಶಾಲೆಯ ನಾಲ್ಕು ಹೈಟೆಕ್ ಕೊಠಡಿ ಮತ್ತು ಶೌಚಾಲಯ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳ ಅಭಿವೃದ್ಧಿ ಕೇವಲ ಸರ್ಕಾರ ಹಾಗೂ ಇಲಾಖೆಗಳ ಅನುದಾನದಿಂದ ಸಾಧ್ಯವಿಲ್ಲ, ಸಂಘ-ಸಂಸ್ಥೆಗಳು, ಎನ್ಜಿಒಗಳು ಹಾಗೂ ಸಹಕಾರದಿಂದ ಸಾಧ್ಯವಿದೆ. ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾಕಷ್ಟು ಸರ್ಕಾರಿ ಶಾಲೆಗಳು ಶಿಥಿಲಗೊಂಡು ದುಸ್ಥಿತಿಯಲ್ಲಿವೆ. ಮಳೆ ಬಂದರೆ ಸೋರುತ್ತವೆ. ಇಂತಹ ಕಟ್ಟಡಗಳನ್ನು ಪುನರ್ ನಿರ್ಮಾಣ ಮಾಡಲು ಸಂಘ-ಸಂಸ್ಥೆಗಳು, ಎನ್ಜಿಒಗಳು ಮತ್ತು ದಾನಿಗಳು ಮುಂದೆ ಬಂದು ಶಾಲಾ ಕೊಠಡಿಗಳನ್ನು ನಿರ್ಮಿಸಿದರೆ ಮಕ್ಕಳ ಶೈಕ್ಷಣಿಕ ಪ್ರಗತಿ ಸಾಧಿಸುವ ಜೊತೆಗೆ ಸರ್ಕಾರಕ್ಕೆ ಆರ್ಥಿಕ ಹೊರೆ ತಪ್ಪಲಿದೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದ ಬಡ ಮಕ್ಕಳು ಶಿಕ್ಷಣ ಪಡೆಯುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಉದ್ದೇಶದಿಂದ ರಾಷ್ಟ್ರೀಯ ಆಹ್ವಾನ ಫೌಂಡೇಶನ್ ವತಿಯಿಂದ 1 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಶಾಲಾ ಕೊಠಡಿ, ಶೌಚಾಲಯ ನಿರ್ಮಿಸಲಾಗುತ್ತಿದೆ. ಇಂತಹದೊಂದು ಸತ್ಕಾರ್ಯ ಮಾಡುವ ಮೂಲಕ ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಆಸರೆಯಾಗಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
10 ರೂ. ದಾನ ಮಾಡಿದರೆ, ದೇವಸ್ಥಾನ ಮುಂದೆ ದೊಡ್ಡ ಬೋರ್ಡ್ ಹಾಕಿಕೊಳ್ಳುತ್ತಾರೆ. ಅಂತಹ ದಾನ ಕೊಟ್ಟು ಪ್ರಚಾರ ತೆಗೆದುಕೊಳ್ಳುತ್ತಾರೆ. 1 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಶಾಲೆ ಕಟ್ಟಿಸುತ್ತಿರುವ ಬ್ರಜ ಕಿಶೋರ್ ಪ್ರಧಾನ್ ಅವರು ಎಲೆಮರೆ ಕಾಯಿಯಂತಿದ್ದಾರೆ. ಕ್ಷೇತ್ರದ ವ್ಯಾಪ್ತಿಯ ತ್ಯಾವಣಿಗಿ ಮೊರಾರ್ಜಿ ಶಾಲೆ ವಸತಿಯಲ್ಲಿ ಜಾಗದ ಸಮಸ್ಯೆ ಇದೆ. ಕೂಡಲೇ ಆ ಸಮಸ್ಯೆಗೆ ಪರಿಹಾರ ನೀಡಬೇಕೆಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರಿಗೆ ಮನವಿ ಮಾಡಿದ್ದೇವು.
ಎರಡೇ ದಿನಗಳಲ್ಲಿ ಖಾತೆ ಮಾಡಿಸಿ ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರ ಮಾಡಿಸಿ ಸಮಸ್ಯೆ ಬಗೆಹರಿಸಿದ್ದರು. ಇಂತಹ ದಕ್ಷ ಜಿಲ್ಲಾಧಿಕಾರಿ ಇರುವುದು ನಮಗೆ ಹೆಮ್ಮೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮೀಣ ಜನರ ನಾಡಿ ಮಿಡಿತ ಅರಿತ ಮತ್ತು ಅವರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ಸರಳ, ಸಜ್ಜನಿಕ ಯಾರಾದರೂ ಶಾಸಕರಿದ್ದರೆ, ಅದು ಶಾಸಕ ಕೆ.ಎಸ್.ಬಸವಂತಪ್ಪ ಅವರೇ. ನನಗೆ ಗೊತ್ತಿರಲಿಲ್ಲ, ಅವರ ಹೆಸರೇನು ಎಂದರೆ ‘ಆಂಬ್ಯುಲೆನ್ಸ್’ ಎಂದು ಕರೆಯುತ್ತಾರೆ. ಕಷ್ಟದಲ್ಲಿದ್ದಾಗ ಯಾರೂ ಫೋನ್ ತೆಗೆದುಕೊಳ್ಳುತ್ತಾರೋ, ಇಲ್ಲವೋ ಗೊತ್ತಿಲ್ಲ. ಆದರೆ ಯಾರಾದರೂ ಫೋನ್ ಮಾಡಿದರೆ ಕೂಡಲೇ ಫೋನ್ ತೆಗೆದು ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ, ಅದು ಬಸವಂತಪ್ಪ ಅವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಲ್ಲಿ ಮಹಿಳೆಯರ ಸಬಲೀಕರಣ ಆಗುತ್ತದೆ, ಅಲ್ಲಿ ಸಮೃದ್ಧಿಯ ನೆಲೆಬೀಡಾಗುತ್ತದೆ. ಮಕ್ಕಳಲ್ಲಿ ನಾವು ದೇವರನ್ನು ಕಾಣುತ್ತೇವೆ. ಹೀಗಾಗಿ ಈ ಮಕ್ಕಳಿಗಾಗಿ ಆಹ್ವಾನ ಫೌಂಡೇಶನ್ ವತಿಯಿಂದ ನಾವು ಇಲ್ಲಿ ದೇವಸ್ಥಾನ ಕಟ್ಟುತ್ತಿದ್ದೇವೆ. ಗ್ರಾಮಸ್ಥರ್ಯಾರು ಅಡ್ಡಿಪಡಿಸಬಾರದು. ಒಳ್ಳೆಯ ಕೆಲಸ ಮಾಡುವವರಿಗೆ ಬೆನ್ನು ತಟ್ಟಬೇಕು. ಆಗ ಗ್ರಾಮ ಅಭಿವೃದ್ಧಿ ಪಥದಲ್ಲಿ ಸಾಗುತ್ತದೆ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಡಿಡಿಪಿಐ ಕೊಟ್ರೇಶ್, ಕೋಲ್ಕುಂಟೆ ಗ್ರಾಮಾಭ್ಯುದಯ ಸಂಘದ ಗೌರವಾಧ್ಯಕ್ಷ ಸುಚೇಂದ್ರ ಪ್ರಸಾದ್, ಆಹ್ವಾನ ಫೌಂಡೇಶನ್ನ ಬ್ರಜ ಕಿಶೋರ್ ಪ್ರಧಾನ್, ಪತ್ನಿ ಮಾನಸಿ, ಶಾಲೆಯ ಮುಖ್ಯ ಶಿಕ್ಷಕ ಚಂದ್ರಪ್ಪ, ಓಂಕಾರಪ್ಪ, ಚಂದ್ರಪ್ಪ, ಪಿಡಿಒ ಇಸ್ರತ್, ಅಶೋಕ್, ಲೋಕೇಶ್, ಎಸ್ಡಿಎಂಸಿ ಸದಸ್ಯರು, ಮಕ್ಕಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
Read also : ಇಂದಿನ ಒತ್ತಡದ ಬದುಕಿಗೆ ನಿತ್ಯ ಯೋಗಾಭ್ಯಾಸ ಸಹಕಾರಿ : ಪ್ರಸನ್ನಕುಮಾರ್