ದಾವಣಗೆರೆ (Davanagere): ವೃತ್ತಿರಂಗಭೂಮಿಯು ಪುನರುತ್ಥಾನಗೊಳ್ಳಬೇಕಿದೆ ಎಂದು ಪ್ರತಿಮಾ ಸಭಾದ ಗೌರವಾಧ್ಯಕ್ಷ ಪ್ರೊ.ಎಸ್.ಹಾಲಪ್ಪ ಸಲಹೆ ನೀಡಿದರು.
ವೃತ್ತಿ ರಂಗಭೂಮಿ ರಂಗಾಯಣವು ರಾಷ್ಟ್ರೀಯ ವೃತ್ತಿ ರಂಗೋತ್ಸವ ಅಂಗವಾಗಿ ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ವೃತ್ತಿ ರಂಗಭೂಮಿಯ ಪುನರುತ್ಥಾನ ಹೇಗೆಂದರೆ ಕಂಪನಿ ನಾಟಕಗಳ ಕಲಾವಿದರಿಗೆ ಶಿಸ್ತಿನ ತರಬೇತಿ ಅಗತ್ಯವಿದೆ. ಹವ್ಯಾಸಿ ರಂಗ ಶಾಲೆಗಳ ಹಾಗೆ ಹಾಗೆ ವೃತ್ತಿ ರಂಗಭೂಮಿಗೂ ರಂಗಶಾಲೆಯ ಅಗತ್ಯ ಇದೆ. ಇದರಿಂದ ನಾಟಕ ಕಂಪನಿಗಳು ಒಳ್ಳೆಯ ನಾಟಕಗಳನ್ನು ಅಂದರೆ ಸದಭಿರುಚಿಯ ನಾಟಕಗಳನ್ನು ಆಡಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ನೂರೈಯವತ್ತು ವರ್ಷಕ್ಕೂ ಅಧಿಕ ಇತಿಹಾಸವಿರುವ ರಂಗಭೂಮಿಗೆ ವರದಾಚಾರ್, ಪೀರ್ ಸಾಹೇಬ್, ಡಾ.ರಾಜಕುಮಾರ್ ಮೊದಲಾದ ಕಲಾವಿದರ ಪರಂಪರೆ ಇದೆ. ಅಂಥ ಕಲಾವಿದರ ಅಭಿನಯವನ್ನು ಗಮನಿಸುತ್ತಾ ಇಂದಿನ ಕಲಾವಿದರು ಬೆಳೆಯಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿಚಾರ ಸಂಕಿರಣವು ದಿಕ್ಸೂಚಿ ಆಗಲಿದೆ. ತಜ್ಞರು ಬೆಳಕು ಚೆಲ್ಲಲಿದ್ದಾರೆ ಎಂದರು.
ನಂತರ ‘ಪರಂಪರೆಯ ಕಣ್ಮರೆ; ಬದಲಾಗುತ್ತಿರುವ ವೃತ್ತಿ ರಂಗ ಸ್ವರೂಪ’ ಕುರಿತು ಡಾ. ವಿಶ್ವನಾಥ್ ವಂಶಾಕೃತ ಮಠ ಮಾತನಾಡಿ, ರಂಗಭೂಮಿ ಪರಂಪರೆ ಮರೆಯಲು ಸಾಧ್ಯವೇ? ಪರಂಪರೆ ಕಣ್ಮರೆ ಆಗುವುದಿಲ್ಲ ಅಂದರೆ ಬದಲಾವಣೆಯನ್ನು ಹೊಂದುತ್ತದೆ. ಬದಲಾವಣೆಯ ರೂಪ, ಸ್ವರೂಪ ನಿರಂತರವಾಗಿರುತ್ತದೆ ಎಂದರು.
ರಂಗಭೂಮಿಯು ಹಲವಾರು ಬದಲಾವಣೆಗಳನ್ನು ಕಂಡಿದೆ. ಆದರೆ ಸಂಶೋಧನೆ ಮತ್ತು ಪರಿಶೋಧನೆ ವೃತ್ತಿ ರಂಗಭೂಮಿಗೆ ಸಾಧ್ಯವಾಗಿಲ್ಲ. ಮೊದಲಿಗೆ ಪೌರಾಣಿಕ ನಂತರ ಭಕ್ತಿ ಪ್ರಧಾನಗಳ ಜೊತೆಗೆ ಐತಿಹಾಸಿಕ ನಾಟಕಗಳನ್ನು ಆಡಲಾಗುತ್ತಿತ್ತು. ಆಮೇಲೆ ಸದಭಿರುಚಿಯ ಸಾಮಾಜಿಕ ನಾಟಕಗಳನ್ನು ಆಡಲಾಯಿತು ಎಂದು ಸ್ಮರಿಸಿದರು.
ಪುರುಷರೇ ಸ್ತ್ರೀ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಸಂಗೀತ ಪ್ರಧಾನ ನಾಟಕಗಳು ಆಗಿದ್ದರಿಂದ ಕಂದ, ಸೀಸ ಪದ್ಯಗಳಿಂದ ಕೂಡಿರುತ್ತಿದ್ದವು. ಅದೃಶ್ಯಪ್ಪ ಮಾನ್ವಿ ಅವರು ಭೀಮನ ಪಾತ್ರಕ್ಕೆ ಹೆಸರುವಾಸಿಯಾಗಿದ್ದರು. ಅವರ ನಾಟಕಗಳನ್ನು ನೋಡಲು ಅರ್ಧ ಗುಂಡಿಗೆಯ ಪುರುಷರು ಹಾಗೂ ಗರ್ಭಿಣಿಯರಿಗೆ ಪ್ರವೇಶವಿಲ್ಲವೆಂದು ಸಾರುತ್ತಿದ್ದರು. ಏಕೆಂದರೆ ಅವರ ಅಭಿನಯವನ್ನು ಕಂಡ ಗರ್ಭಿಣಿಯರಿಗೆ ಗರ್ಭಪಾತವಾದ ಉದಾಹರಣೆಗಳಿವೆ. ಅವರ ಹಾಗೆ ಕಂಚಿನ ಕಂಠದ ಪಾತ್ರಧಾರಿಗಳು ಇದ್ದರು. ಅದ್ಭುತ ಪರದೆಗಳಿದ್ದವು. ದೊಂದಿಗಳ ಬೆಳಕಿನಲ್ಲಿ ನಾಟಕವಾಡುತ್ತಿದ್ದ ಕಾಲವಿತ್ತು. ಆದರೆ ಕಂಚಿನ ಕಂಠದ ಕಲಾವಿದರು ಈಗಿಲ್ಲ. ಅಸ್ಖಲಿತವಾಗಿ ಸಂಭಾಷಣೆ ಹೇಳುವ ನಟರಿಲ್ಲ. ಅವತ್ತಿನ ಆಜಾನುಬಾಹು, 56 ಇಂಚಿನ ಎದೆ ಹೊಂದಿದ ಕಲಾವಿದರು ಇಲ್ಲ. ಹವಾಮಾನ, ಜೈವಿಕ ಬದಲಾವಣೆ ಪರಿಣಾಮಗಳು ಆಗಿವೆ. ಈಗೆಲ್ಲ ಸಾಮಾಜಿಕ ನಾಟಕಗಳನ್ನು ಹೆಚ್ಚಾಗಿ ಆಡಲಾಗುತ್ತಿದೆ. 80ರ ದಶಕದಲ್ಲಿ 70-80 ಕಂಪನಿಗಳಿದ್ದವು 2000 ಸಮೀಕ್ಷೆಯಲ್ಲಿ 26 ಕಂಪನಿಗಳು ಮಾತ್ರ ಉಳಿದಿವೆ ಎಂದು ಕಳವಳ ವ್ಯಕ್ತಪಡಿಸಿದರು.
‘ವೃತ್ತಿಪರತೆ ಮತ್ತು ಆಧುನಿಕ ರಂಗ ಚಿಂತನೆಗಳು’ ಕುರಿತು ಮಹಮ್ಮದ್ ಅಲಿ ಆರ್. ಹೊಸೂರು ಮಾತನಾಡಿ, ರಂಗಭೂಮಿಯು ರಂಜನೆ ಮತ್ತು ಶಿಕ್ಷಣವನ್ನು ನೀಡುವಂತದ್ದು ಆಗಿದೆ. ಆದರೆ ಕುಟುಂಬ ಸಮೇತ ನೋಡುವ ನಾಟಕ, ಫುಲ್ ಕಾಮಿಡಿ ನಾಟಕಗಳು ಎಂದು ಪ್ರಚಾರ ಮಾಡುತ್ತಾರೆ. ಆದರೆ ರೈತ ಚಳವಳಿಗಳನ್ನು ಹತ್ತಿಕ್ಕುವ, ಉದ್ಯೋಗಕ್ಕಾಗಿ ಯುವಕರು ಬೀದಿಯಲ್ಲಿರುವಂತಹ ಕುರಿತ ನಾಟಕಗಳು ಬರಬೇಕಿದೆ ಜೊತೆಗೆ ಸ್ಟ್ಯಾಂಡ್ ಮೈಕ್ ಮುಂದೆ ನಾಟಕವಾಡುವುದನ್ನೇ ನಿಲ್ಲಿಸಿ ಆಧುನಿಕತೆ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕಾಗಿದೆ. ಮುಖ್ಯವಾಗಿ ಆಧುನಿಕ ರಂಗಭೂಮಿಯು ವೃತ್ತಿಪರತೆ ರೂಢಿಸಿಕೊಳ್ಳುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಗೋಷ್ಠಿಯನ್ನು ಸಮನ್ವಯಗೊಳಿಸಿದ ಸತೀಶ್ ಕುಲಕರ್ಣಿ ಅವರು ಪ್ರೇಕ್ಷಕರ ಅಭಿರುಚಿಯನ್ನು ವಿಸ್ತಾರ ಗೊಳಿಸುವ ಉದ್ದೇಶದಿಂದ ರಾಷ್ಟ್ರೀಯ ನಾಟಕವನ್ನು ಆಯೋಜಿಸಲಾಗಿದೆ ಎಂದರು. ವೃತ್ತಿಪರತೆಯನ್ನು ಯಕ್ಷಗಾನ ಮತ್ತು ರಂಗಭೂಮಿಯಲ್ಲಿ ಕಾಣಲು ಸಾಧ್ಯ ಆದರೆ ದೊಡ್ಡಮಟ್ಟದಲ್ಲಿ ಕಾಣುತ್ತಿಲ್ಲ. ಈಗಿನ ಕಲಾವಿದರಿಗೆ ಸೊಂಟ ಮತ್ತು ಕಂಠದ ಶಕ್ತಿ ಕಡಿಮೆಯಾಗುತ್ತಿದೆ. ಹೀಗಾಗಿ ಆಧುನಿಕ ರಂಗಭೂಮಿಯು ಜನರಿಂದ ದೂರವಾಗುತ್ತಿದೆ. ಕಾಲದ ಓಟದ ಜೊತೆಗೆ ರಂಗಭೂಮಿ ಓಟವೂ ಕಾಣಬೇಕು ಎಂದು ವಿವರಿಸಿದರು.
ಆಶಯ ನುಡಿಗಳನ್ನು ಆಡಿದ ದಾವಣಗೆರೆ ವೃತ್ತಿರಂಗಭೂಮಿ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಮಾತನಾಡಿ, ಮೂರು ಹಗಲು-ಮೂರು ರಾತ್ರಿಗಳ ಬೆರಗಿನ ಈ ರಾಷ್ಟ್ರೀಯ ನಾಟಕೋತ್ಸವ. ತತ್ವಪದಕಾರರು ಹೇಳುವಂತಹ ಬೆರಗು ಹೌದು, ಮಹಾ ಬೆರಗೂ ಹೌದು. ರಂಗಭೂಮಿ ಹಚ್ಚಿಟ್ಟ ಕರ್ಪೂರದಂತೆ. ಇದ್ದಲಿ ಹಾಗೂ ಬೂದಿಯನ್ನು ಹುಡುಕಬಾರದು. ಆದರೆ ಇಂದು ರಂಗಭೂಮಿ ಹಚ್ಚಿಟ್ಟ ಕರ್ಪೂರವಾಗಿ ಉಳಿದಿಲ್ಲ. ಅದು ತೋರುದೀಪವಾಗಿ ಅಂದರೆ ಮಾರ್ಗಸೂಚಿಯಾಗಿ ಆಗಬೇಕಾಗಿದೆ ಎಂದು ಆಶಿಸಿದರು.
ದಾವಣಗೆರೆ ವೃತ್ತಿ ರಂಗಾಯಣದ ವಿಶೇಷ ಅಧಿಕಾರಿ ರವಿಚಂದ್ರ ಸ್ವಾಗತಿಸಿದರು. ರುದ್ರಾಕ್ಷಿ ಬಾಯಿ ನಾಡಗೀತೆ ಹಾಡಿದರು. ಡಾ. ಶೃತಿ ರಾಜ್ ರಂಗ ಗೀತೆ ಹಾಡಿದರು.