ಹರಿಹರ (Davangere District) : ನೀರು, ಪರಿಸರವನ್ನು ಕಲುಷಿತಗೊಳಿಸದೆ ಶುದ್ಧವಾಗಿ ಉಳಿಸುವುದೆ ನಮ್ಮ ಮುಂದಿನ ಪೀಳಿಗೆಯ ನಿಜವಾದ ಆಸ್ತಿ ಎಂದು ಶಿವಮೊಗ್ಗದ ಪರ್ಯಾವರಣ ಟ್ರಸ್ಟ್ನ ಪ್ರೊ.ಬಿ.ಎಂ.ಕುಮಾರಸ್ವಾಮಿ ಹೇಳಿದರು.
ನಗರದ ಖೋಡೆ ಸಿ.ವೆಂಕೂಸಾ ಐಟಿಐ ಕಾಲೇಜಿನಲ್ಲಿ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಸಮಿತಿ ಹಾಗೂ ಶಿವಮೊಗ್ಗದ ಪರ್ಯಾವರಣ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ಶೃಂಗೇರಿಯಿಂದ ವಿಜಯನಗರ ಜಿಲ್ಲೆ ಕಿಷ್ಕಿಂದೆವರೆಗಿನ ನಿರ್ಮಲ ತುಂಗಭದ್ರ ಅಭಿಯಾನಕ್ಕಾಗಿ ಭಾನುವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.
ನಾವೆಲ್ಲಾ ಆಸ್ತಿ, ಬ್ಯಾಂಕ್ ಬ್ಯಾಲೆನ್ಸ್ ಮಾಡುವತ್ತ ಚಿತ್ತ ಹರಿಸಿ ನಮ್ಮ ನದಿ, ಪರಿಸರದ ಉಳಿವಿಗೆ ಗಮನ ಹರಿಸದಿದ್ದರೆ ನಮ್ಮ ಮಕ್ಕಳು ಸೇವಿಸುವ ಗಾಳಿ, ಕುಡಿಯುವ ನೀರು ಕಲುಷಿತವಾಗುತ್ತದೆ. ಆರೋಗ್ಯಯುತ ಬದುಕು ನಡೆಸಲಾಗದಿದ್ದರೆ ಹಣ, ಆಸ್ತಿಯಿಂದ ಪ್ರಯೋಜನವಿಲ್ಲ ಎಂದರು.
ಈ ನದಿ ಉದ್ದಕ್ಕೂ ಇರುವ ನಗರ, ಪಟ್ಟಣಗಳ ಒಳಚರಂಡಿಗಳ ನೀರನ್ನು ನೇರವಾಗಿ ನದಿಗೆ ಬಿಡದೆ ಶೂದ್ಧೀಕರಿಸಿ ಬಿಡಬೇಕು. ಕೊಳಚೆ ನೀರು ನೇರವಾಗಿ ನದಿಗೆ ಸೇರಿದರೆ ನೀರು ಕಳುಷಿತಗೊಳ್ಳುವ ಜೊತೆಗೆ ಜಲಚರ ಪ್ರಾಣಿಗಳ ಅಂತ್ಯವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ನದಿಯ ಕುರಿತು ಜನ ಹಾಗೂ ಸರ್ಕಾರಕ್ಕೆ ಜಾಗೃತಿ ಮೂಡಿಸಲು ತುಂಗಭದ್ರ ನದಿಗಳ ಉಗಮ ಸ್ಥಳವಾದ ಶೃಂಗೇರಿಯಿಂದ ವಿಜಯನಗರ ಜಿಲ್ಲೆಯ ಕಿಷ್ಕಿಂದೆವರೆಗೆ ನವೆಂಬರ್ ತಿಂಗಳಲ್ಲಿ 400 ಕಿ.ಮೀ.ವರೆಗೆ ಪಾದಯಾತ್ರೆ ಆಯೋಜಿಸಿದೆ. ಈ ಭಾಗದ ರೈತರು, ವಿದ್ಯಾರ್ಥಿಗಳು ಸೇರಿದಂತೆ ಈ ನದಿ ನೀರು ಕುಡಿಯುವ ಪ್ರತಿಯೊಬ್ಬರೂ ಅಭಿಯಾನದಲ್ಲಿ ಭಾಗವಹಿಸಬೇಕೆಂದು ಕೋರಿದರು.
Read also : Davanagere Crime News : ಗೋಕಾಕ್ ಮೂಲದ ಮೆಕ್ಯಾನಿಕಲ್ ಇಂಜಿನಿಯರ್ ಆತ್ಮಹತ್ಯೆ
ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಮಾತನಾಡಿ, ಪಕ್ಷಾತೀತ, ಧರ್ಮಾತೀತವಾಗಿರುವ ನದಿ ಉಳಿಸುವ ಈ ಹೋರಾಟಕ್ಕೆ ಎಲ್ಲಾ ಅಗತ್ಯ ಬೆಂಬಲ ನೀಡುತ್ತೇವೆ. ತಲ್ಲೂಕಿನ ನದಿ ದಡದ ಗ್ರಾಮಗಳ ವಾಸಿಗಳು ಈ ಅಭಿಯಾನದಲ್ಲಿ ಸೇರಿಕೊಳ್ಳಬೇಕೆಂದು ಕೋರಿದರು.
ಹಿಂದೂ ರಾಷ್ಟ್ರ ಸೇನೆಯ ರಾಜ್ಯ ಪ್ರವರ್ತಕ ಸಂದೀಪ್ ಗುರೂಜಿ, ಸ್ವಾಭಿಮಾನ ಆಂದೋಲನ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ನವದೆಹಲಿಯ ಬಸವರಾಜ್ ಪಾಟೀಲ್, ಅಭಿಯಾನದ ಹರಿಹರದಿಂದ ಕಿಷ್ಕಿಂದೆವರೆಗಿನ ಪ್ರಭಾರಿಯಾದ ಹಾವೇರಿಯ ನಾಗರಾಜ್ ಕುಲಕರ್ಣಿ, ಶಿವಮೊಗ್ಗದ ತ್ಯಾಗರಾಜ ಮಿತ್ಯಂತ, ಕಿರಣ್ ಕುಮಾರ್, ಚನ್ನೇಸ್ ಗೌಡ್ರು, ಅಶೋಕ್, ಕಿಷ್ಕಿಂದೆಯ ಮಂಜುನಾಥ, ಸುರೇಶ್, ಹರಿಹರದ ಎಚ್.ಕೆ.ಕೊಟ್ರಪ್ಪ ಮಾತನಾಡಿದರು.