ದಾವಣಗೆರೆ (Davanagere) : ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಭದ್ರಾ ಕಾಲುವೆಯಲ್ಲಿ ನೀರು ತುಂಬಿ ಹರಿದು ನೆರೆ ಹಾನಿಯಾದ ಪ್ರದೇಶಗಳಿಗೆ ಬುಧವಾರ ಶಾಸಕ ಕೆ.ಎಸ್.ಬಸವಂತಪ್ಪ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭದ್ರಾ ಜಲಾಶಯದಿಂದ ಈಗಾಗಲೇ ಎಡ ಮತ್ತು ಬಲ ದಂಡೆ ಕಾಲುವೆಗಳಿಗೆ ನೀರು ಬಿಡುಗಡೆ ಮಾಡಿದ್ದು, ನೀರು ಭದ್ರಾ ಕಾಲುವೆಯಲ್ಲಿ ಹರಿದು ಬರುತ್ತಿದೆ. ಬುಧವಾರ ಬೆಳಗಿನಜಾವ ಸುರಿದ ಧಾರಾಕಾರ ಮಳೆಯಿಂದ ಹಳ್ಳ- ಕೊಳ್ಳಗಳಲ್ಲಿ ಹರಿಯುತ್ತಿರುವ ನೀರು ಭದ್ರಾ ಕಾಲುವೆಗೆ ಸೇರಿದ ಪರಿಣಾಮ ಭದ್ರಾ ಕಾಲುವೆ ಕಿತ್ತುಕೊಂಡು ಜಮೀನುಗಳಿಗೆ ನೀರು ನುಗ್ಗಿದೆ. ಬ್ರಿಡ್ಜ್ ಗಳು ಮತ್ತು ರಸ್ತೆಗಳು ಹಾನಿಯಾಗಿವೆ.
ನೆರೆ ಹಾನಿ ಬಗ್ಗೆ ಮಾಹಿತಿ ತಿಳಿದ ತಕ್ಷಣವೇ ಶಾಸಕ ಕೆ.ಎಸ್.ಬಸವಂತಪ್ಪ (MLA K.S.Basavanthappa) ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಕಬ್ಬೂರು ಗ್ರಾಮಕ್ಕೆ ಭೇಟಿ ನೀಡಿ ಹಾನಿಯಾದ ಪ್ರದೇಶಗಳನ್ನು ಪರಿಶೀಲನೆ ನಡೆಸಿದರು.
ಭದ್ರಾ ಕಾಲುವೆಗಳಿಗೆ ಬಿಟ್ಟಿದ್ದ ನೀರಿನ ಪ್ರಮಾಣಕ್ಕಿಂತ ಹೆಚ್ಚು ನೀರು ಬುಧವಾರ ಬೆಳಗಿನಜಾವ ಸುರಿದ ಮಳೆಯಿಂದ ಕಾಲುವೆಯಲ್ಲಿ ಹರಿದ ಪರಿಣಾಮ ಮೊದಲೇ ಸುಮಾರು 50 ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದ ಕಾಲುವೆಗಳು, ಬ್ರಿಡ್ಜ್ ಗಳು ಹಾಳಾಗಿವೆ. ಜಲಾಶಯದಿಂದ ಬಿಟ್ಟ ನೀರು, ಮಳೆ ನೀರು ಸೇರಿ ಕಾಲುವೆಗಳು ತುಂಬಿ ಹರಿದು ಕಾಲುವೆ ಮಾರ್ಗಗಳಲ್ಲಿ ನೆರೆ ಹಾನಿಯಾಗಿ ಜಮೀನುಗಳಿಗೆ ನೀರು ನುಗ್ಗಿದೆ, ರಸ್ತೆಗಳು ಹಾಗೂ ಹಾಳಾಗಿದ್ದ ಕಾಲುವೆ, ಬ್ರಿಡ್ಜ್ ಗಳು ಮತ್ತಷ್ಟು ಹಾನಿಯಾಗಿವೆ ಎಂದು ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಮನೋಜ್ ಶಾಸಕರಿಗೆ ಮಾಹಿತಿ ನೀಡಿದರು.
ರಾತ್ರಿ ಸುರಿದ ಮಳೆ ನೀರು ಕಾಲುವೆಗೆ ಸೇರಿ ಹರಿದ ಪರಿಣಾಮ ಅಲ್ಲಲ್ಲಿ ಕಾಲುವೆ ಕಿತ್ತುಕೊಂಡು ಹೊಲಗಳಿಗೆ ನೀರು ನುಗ್ಗಿದೆ. ಬ್ರಿಡ್ಜ್, ರಸ್ತೆಗಳು ಹಾಳಾಗಿವೆ. ಇದರಿಂದ ಬೆಳೆಗಳು ಹಾನಿಯಾಗಿವೆ. ಕೂಡಲೇ ಭದ್ರಾ ಕಾಲುವೆ ಆಧುನೀಕರಣಗೊಳಿಸಿ ಕಾಮಗಾರಿ ಶಾಶ್ವತವಾಗಿ ಉಳಿಯುವಂತೆ ಮಾಡಬೇಕೆಂದು ಗ್ರಾಮಸ್ಥರು ಶಾಸಕರ ಬಳಿ ತಮ್ಮ ಸಮಸ್ಯೆ ಹೇಳಿಕೊಂಡರು.
ಭದ್ರಾ ಕಾಲುವೆಯಲ್ಲಿ ಹರಿಯುವ ನೀರು ತಗ್ಗಿದ ಮೇಲೆ ಕೂಡಲೇ ತಾತ್ಕಾಲಿಕ ದುರಸ್ತಿ ಮಾಡಿ ನೀರು, ಜಮೀನುಗಳಿಗೆ ನುಗ್ಗದಂತೆ, ರಸ್ತೆಗಳಿಗೆ ಹರಿದು ಹಾನಿಯಾಗದಂತೆ ಕ್ರಮ ವಹಿಸಬೇಕು. ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸುಮಾರು 50 ವರ್ಷಗಳ ಹಿಂದಿನ ಭದ್ರಾ ಕಾಲುವೆ ಮಾರ್ಗದಲ್ಲಿ ಕಾಲುವೆಗಳು, ಬ್ರಿಡ್ಜ್ ಗಳು ಕಿತ್ತುಕೊಂಡಿ ಹೋಗಿ ಹಾನಿಯಾಗಿರುವ ಬಗ್ಗೆ ಈಗಾಗಲೇ ಸದನದಲ್ಲಿ ಚರ್ಚಿಸಿ ಸರ್ಕಾರದ ಗಮನ ಸೆಳೆದಿದ್ದೇನೆ.
ಕಂದಾಯ ಸಚಿವ ಕೃಷ್ಣಭೈರೇಗೌಡ ಹಿರಿಯ ಅಧಿಕಾರಿಗಳಿಗೆ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಭದ್ರಾ ಕಾಲುವೆಗಳ ಆಧುನೀಕರಣಗೊಳಿಸುವುದಾಗಿ ಭರವಸೆ ನೀಡಿದರು.
ಬಳಿಕ ಮಳೆ ಮತ್ತು ಭದ್ರಾ ಕಾಲುವೆ ತುಂಬಿ ನೀರು ಹರಿದು ನೆರೆ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಕಬ್ಬೂರು ಗ್ರಾಮಸ್ಥರಾದ ಬಸವರಾಜ್ , ಮಲ್ಲಿಕಾರ್ಜುನ್, ರಾಮಗೊಂಡನಹಳ್ಳಿ ಶರಣಪ್ಪ, ರಂಗನಾಥ್ ಹಾಗೂ ನೀರಾವರಿ ಇಲಾಖೆಯ ಆಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು.