Kannada News | Dinamaana.com | 16-08-2024
ಸಂಸ್ಕೃತಿ, ನಂಬಿಕೆ, ಆರಾಧನಾ ಪದ್ಧತಿ ಉಳಿಸಬೇಕು ಎಂಬುದು ಸರಿ. ಆದರೆ, ಅದರ ಹೆಸರಿನಲ್ಲಿ ಮುಗ್ದ ಅಭಿವ್ಯಕ್ತಿಯೊಂದರ ಮೇಲೆ ಒತ್ತಡ ಹೇರಿ ಅದನ್ನೊಂದು ಮಹಾಪರಾಧವೆಂಬಂತೆ ಬಿಂಬಿಸುವುದು ಎಷ್ಟು ಸರಿ?. ಸಾಕಷ್ಟು ಜಿಜ್ಞಾಸೆಗಳು ಕಾಡುತ್ತಿವೆ.
ದೈವೋದ್ಯಮಿಗಳ ಪೊಲೀಸ್ಗಿರಿ (Theology)
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೈವೋದ್ಯಮಿಗಳ ಗುಂಪೊಂದು ಇಂತಹ ಪೊಲೀಸ್ಗಿರಿಯನ್ನು ಶುರು ಮಾಡಿದೆ. ಸಿನಿಮಾಗಳಲ್ಲಿ ದೈವವನ್ನು ತೋರಿಸಬಾರದು. ಯಕ್ಷಗಾನದಲ್ಲಿ ತೋರಿಸಬಾರದು. ಸಾಂಸ್ಕೃತಿಕ ವೇದಿಕೆಗಳಲ್ಲಿ ಆರಾಧನೆ ಪದ್ಧತಿಯನ್ನು ತೋರಿಸಬಾರದು. ನಾಟಕಗಳಲ್ಲಿ ತೋರಿಸಲೇಬಾರದು…. ಇತ್ಯಾದಿ ಇತ್ಯಾದಿ.
ಅದಕ್ಕೆ ಈ ದೈವ ʼರಕ್ಷಕʼರು ಹೇಳುವುದು ಇಂಥಹ ಪ್ರದರ್ಶನ ವೇದಿಕೆಗಳಲ್ಲಿ ದೈವಾರಾಧನೆಯನ್ನು ಅಪಹಾಸ್ಯ ಮಾಡಲಾಗುತ್ತಿದೆ ಎಂದು. ಅವರ ಆಶಯ ಸರಿ. ಆದರೆ, ಪಾರಂಪರಿಕ ಹಿನ್ನೆಲೆ ಉಳ್ಳ ಕಲಾ ಪ್ರದರ್ಶನಗಳು, ಪ್ರಬುದ್ಧ ನಿರ್ದೇಶಕರು ಕಲಾವಿದರ ಮೂಲಕ ತೆರೆ ಅಥವಾ ರಂಗಕ್ಕೆ ಬರುವ ಸಿನಿಮಾ ನಾಟಕಗಳಲ್ಲಿ ಇವರು ಹೇಳುವ ʼಅಪಹಾಸ್ಯʼ ಎಲ್ಲಿದೆ ಎಂಬುದು ನನಗಂತೂ ತಿಳಿಯಲಿಲ್ಲ. ಪ್ರದರ್ಶನ ಕಲಾ ಪ್ರಕಾರಗಳಲ್ಲಿ ದೈವಗಳನು ಕಂಡ ಜನ ಅವುಗಳ ಮೇಲಿನ ಭಕ್ತಿಯನ್ನಾಗಲಿ, ಆರಾಧನೆಯನ್ನಾಗಲಿ ಕಡಿಮೆ ಮಾಡಲಿಲ್ಲ. ಇತ್ತೀಚೆಗೆ ನಡೆದ ಒಂದು ಘಟನೆ ಕಾಡಿತು.
ದೈವವನ್ನು ಹೆಣ್ಣು ಅನುಕರಿಸಬಾರದು!!!? (Theology)
ಮಂಗಳೂರಿನ ಯೆಯ್ಯಾಡಿಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಮಹಿಳೆಯೊಬ್ಬರು ದೈವ ನರ್ತನದ ಅನುಕರಣೆ ಮಾಡಿದರು ಎಂಬ ಆರೋಪ ಹೊರಿಸಿ ತುಳುನಾಡಿನ ದೈವಗಳ, ಸಂಸ್ಕೃತಿಯ ಗುತ್ತಿಗೆದಾರರು ತಮ್ಮ ಉದ್ಯಮಕ್ಕೆ ಕುತ್ತು ಬರಬಾರದೆಂಬ ಎಚ್ಚರಿಕೆಯಿಂದ ಇದನ್ನೊಂದು ರಂಪ ರಾದ್ಧಾಂತ ಮಾಡಿಸಿದರು. ಇನ್ಯಾರೂ ವ್ಯವಸ್ಥೆಯೊಂದರ ಕಪಿಮುಷ್ಟಿಯಿಂದ ಆಚೆ ಹೋಗಲೇಬಾರದು ಎಂಬುದಕ್ಕೆ ಸಾಂಸ್ಕೃತಿಕ ತಡೆಬೇಲಿಯನ್ನು ಹಾಕಿದರು.
ದೇವರುಗಳ ಮಾನವ ಅವೃತ್ತಿ ಹೆಣ್ಣಿನ ಮೇಲೆ! (Theology)
ಮೈಮೇಲೆ ದೈವ ಹೆಚ್ಚು ಆವಾಹನೆಯಾಗುವುದು (!?) ಮಹಿಳೆಯರ ಮೇಲೆ. ಅದು ತುಳುನಾಡಿನ ದೈವ ಇರಲಿ, ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ʼಅವತರಿಸುವʼ ದೇವರುಗಳೇ ಇರಲಿ. ಅವುಗಳ ಮಾನವ ಆವೃತ್ತಿ ಸೃಷ್ಟಿಯಾಗುವುದು ಹೆಣ್ಣುಮಕ್ಕಳ ಮೇಲೆಯೇ. ಆದರೆ, ಮಹಿಳೆಯೊಬ್ಬರು ದೈವನರ್ತನದ ಅನುಕರಣೆ ಮಾಡಿದಾಗ ಅಯ್ಯೋ ನಮ್ಮ ಸಂಸ್ಕೃತಿಯೇ ನಾಶವಾಗಿ ಹೋಯಿತು ಎಂಬಷ್ಟರ ಮಟ್ಟಿಗೆ ದೈವೋದ್ಯಮಿಗಳು ಹುಯಿಲೆಬ್ಬಿಸಿದರು.
ಆ ಹಿರಿ ವಯಸ್ಸಿನ ಮಹಿಳೆಯಿಂದ ಕದ್ರಿ ದೇವಸ್ಥಾನದಲ್ಲಿ ಶಿರಸಾಷ್ಟಾಂಗ ನಮಸ್ಕಾರ ಮಾಡಿಸಿ ತಪ್ಪು ಕಾಣಿಕೆ ಹಾಕಿಸಿ ಅವರು ಮಾಡಿದ ʼತಪ್ಪಿಗೆ” ಮಾಫಿ ಕೊಡಿಸಿದರು. ಅವರ ಅಸಹಾಯಕತೆಯನ್ನು ನೇರ ಪ್ರಸಾರ ಮಾಡಿಸಿ ದೈವಗಳ ಶಹಬ್ಬಾಸ್ಗಿರಿ ಗಿಟ್ಟಿಸಿದರು!.
ʼಬುದ್ಧಿವಂತರʼ ಜಿಲ್ಲೆಯವರ ʼಬುದ್ಧಿವಂತಿಕೆʼ (Theology)
ʼಬುದ್ಧಿವಂತರʼ ಜಿಲ್ಲೆಯವರ ʼಬುದ್ಧಿವಂತಿಕೆʼ ಇಲ್ಲೆಲ್ಲಾ ಚೆನ್ನಾಗಿ ಕೆಲಸ ಮಾಡಿದೆ. ಇಷ್ಟಕ್ಕೂ ಆ ಕಾರ್ಯಕ್ರಮದಲ್ಲಿ ದೈವಗಳಿಗೆ ಅಥವಾ ದೈವ ಸಂಸ್ಕೃತಿಗೆ ಅಪಚಾರವಾಗಿದೆ ಎಂದು ನನಗೆಲ್ಲೂ ಅನಿಸಲಿಲ್ಲ. ವೇದಿಕೆಯಲ್ಲಿ ಕಲಾವಿದರೊಬ್ಬರು ʼವಾ ಪೊರ್ಲುಯಾʼ ಎಂಬ ಹಾಡನ್ನು ಧ್ವನಿ ಮುದ್ರಿತ ಹಿನ್ನೆಲೆ ಸಂಗೀತದ ಟ್ರ್ಯಾಕ್ಬಳಸಿ ಚೆನ್ನಾಗಿಯೇ ಹಾಡುತ್ತಿದ್ದರು.
ದೀರ್ಘವಾದ ಆ ಹಾಡನ್ನು ಹಾಡುವುದೂ ಸರಳವಲ್ಲ. ಜನಪದ ಶೈಲಿಯ ಹಾಡಿಗೆ ವಾದ್ಯ, ತಾಸೆಯ ಹಿಮ್ಮೇಳವಿದೆ. ತುಳುವರಿರುವಲ್ಲೆಲ್ಲಾ ತುಂಬಾ ಖ್ಯಾತಿ ಪಡೆದ ಧ್ವನಿಮುದ್ರಿಕೆ ಅದು. ಹಾಗೆ ನೋಡಿದರೆ ಮೂಲ ಗಾಯಕರು ದೈವ ನರ್ತನದ ಸಂಗೀತದ ಹಿನ್ನೆಲೆ ಬಳಸಿ ಹಾಡಲೇಬಾರದಿತ್ತು.
ಹಾಡಿ, ಧ್ವನಿಮುದ್ರಿಸಿದರೂ ಅದನ್ನು ಮಾರುಕಟ್ಟೆಗೆ ಬಿಡಲೇಬಾರದಿತ್ತು. ನಮ್ಮ ಸಂಸ್ಕೃತಿ, ನಮ್ಮ ದೈವಗಳು ಸಂಚಿಯ ಚೀಲದಂತೆ ನಮ್ಮ ಸೊಂಟದಲ್ಲಿ ಭದ್ರವಾಗಿ ಕುಳಿತಿರಬೇಕಿತ್ತು!. ಏಕೆಂದರೆ ನಾವು ದೈವ, ದೇವರುಗಳನ್ನು ನಮ್ಮ ಅಂಗಡಿಗಳಲ್ಲಿ ಮಾತ್ರ ಮಾರಾಟಕ್ಕಿಟ್ಟಿರುವವರು ಅಲ್ಲವೇ.
ವ್ಯಾಪಿಸಿದ ದೈವೋದ್ಯಮ (Theology)
ಸುಮಾರು ಎರಡು ವರ್ಷಗಳಿಂದೀಚೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೈವ ಸಂರಕ್ಷಕರು ಮತ್ತು ದೈವೋದ್ಯಮಿಗಳು ದೊಡ್ಡ ಪ್ರಮಾಣದಲ್ಲಿ ಹುಟ್ಟಿಕೊಂಡಿದ್ದಾರೆ. ಅವರ ಮಾರುಕಟ್ಟೆಗೆ ಬೇರೆಯವರು ಸುಮ್ಮನೆ ನೋಡಿಕೊಂಡು ಹೋಗಲೂ ಬರಬಾರದು!.
ಕಲಾವಿದ, ತಂತ್ರಜ್ಞರಿಗೆ ಕೆಲಸವಿಲ್ಲ (Theology)
ಇಂಥ ವ್ಯವಸ್ಥೆಯಿಂದ ಯಾವುದೇ ಕಲಾವಿದ, ನಿರ್ದೇಶಕ, ರಚನೆಕಾರ ಏನನ್ನೂ ವ್ಯಕ್ತಪಡಿಸುವ ಹಾಗಿಲ್ಲ. ಯಕ್ಷಗಾನದಲ್ಲಿ ದೈವಗಳನ್ನು ತೋರಿಸಬಾರದು. ನಾಟಕಗಳಲ್ಲಿ ದೈವ ಪಾತ್ರಿಯ ಮೇಲೆ ಇಂಥ ಬೆಳಕು ಬೀಳಬಾರದು, ಅದರ ಹಿನ್ನೆಲೆ ಧ್ವನಿ ಹೀಗೇ ಇರಬೇಕು, ಹೀಗಿರಲೇಬಾರದು ಎಂದು ಕಟ್ಟಪಾಡು ವಿಧಿಸುವವರು ಇಂಥ ದೈವೋದ್ಯಮಿಗಳೇ ಆಗಿದ್ದಾರೆ. ಇಲ್ಲಿ ಕಲಾವಿದ, ತಂತ್ರಜ್ಞರಿಗೇನೂ ಕೆಲಸವೇ ಇಲ್ಲ. ಕೆಲಸ ಮಾಡಿದರೆ ಅವರಿಗೆ ಉಳಿಗಾಲವಿಲ್ಲ.
ಮಾಧ್ಯಮಗಳ ಬೌದ್ಧಿಕ ದಾರಿದ್ರ್ಯ (Theology)
ಇದನ್ನೆಲ್ಲಾ ಸಮತೋಲಿತವಾಗಿ ಗಮನಿಸಿ ಮಾತನಾಡಬೇಕಾದ ಕರಾವಳಿಯ ಮಾಧ್ಯಮಗಳು ಈ ದೈವೋದ್ಯಮಿಗಳು ಹೇಳಿದ್ದನ್ನೇ ಜೈ ಎಂದುಕೊಂಡು ಪ್ರಸಾರ ಮಾಡುತ್ತಿವೆ. ಗಂಟೆಗಟ್ಟಲೆ ಚರ್ಚೆ ಮಾಡುತ್ತಿವೆ.
ಇದೇ ಮಾಧ್ಯಮಗಳಲ್ಲವೇ ಭೂತದ ಕೋಲ, ಅಗೇಲು ಸೇವೆಗಳನ್ನೂ ನೇರ ಪ್ರಸಾರಮಾಡಿ ಪ್ರಾಯೋಜಕ್ವದ ಹೆಸರಿನಲ್ಲಿ ದುಡ್ಡುಗಳಿಸಿದ್ದು. ಒಟ್ಟಿನಲ್ಲಿ ಹಾಗಲ್ಲ, ಹೀಗೆ, ಹೀಗೂ ಇರುವ ಸಾಧ್ಯತೆಯ ಬಗ್ಗೆ ಕನಿಷ್ಠ ಆಲೋಚನೆ ಮಾಡಿದವರೂ ಕೂಡಾ ದೈವೋದ್ಯಮಿಗಳ ದೃಷ್ಟಿಯಲ್ಲಿ ʼದೇಶದ್ರೋಹಿʼ ಆಗುತ್ತಾರೆ.
ದೈವಸ್ಥಾನಗಳ ನಾಶ ದೈವೋದ್ಯಮಿಗಳಿಗೆ ಗೊತ್ತಿಲ್ಲ! (Theology)
ಅಭಿವೃದ್ಧಿಯ ಹೆಸರಿನಲ್ಲಿ ಭೂತ, ದೈವ ಸ್ಥಾನಗಳಿದ್ದ ಸಾನ (ತಾಣ)ಗಳು ನೆಲೆ ಕಳೆದುಕೊಳ್ಳುತ್ತಿರುವುದು, ಪರಿಸರ ಅಸಮತೋಲನವಾಗುತ್ತಿರುವುದು, ನಿಸರ್ಗ ನಾಶವಾಗಿ ದೈವಗಳೂ ಪ್ರಾಮುಖ್ಯತೆ ಕಳೆದುಕೊಳ್ಳುತ್ತಿರುವುದು ದೈವೋದ್ಯಮಿಗಳ ಕಣ್ಣಿಗೆ ಬೀಳುವುದಿಲ್ಲ. ಅದಕ್ಕೆ ಪ್ರಬಲವಾದ ಧ್ವನಿ ಎತ್ತುವುದಿಲ್ಲ. ಯಾರೋ ಖಾಸಗಿ ಸಮಾರಂಭದಲ್ಲಿ ಪುಟ್ಟ ಪ್ರಾತ್ಯಕ್ಷಿಕೆ ನೀಡಿದ್ದನ್ನೇ ಮಹಾಪರಾಧವಾಗಿ ಕಾಣಲು ಪುರುಸೊತ್ತು ಇದೆ.
ದೈವ ಸಂಸ್ಕೃತಿ ನಾಶವಾಗುವುದು ನಿಜವೇ? (Theology)
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೈವಗಳ ನರ್ತನದ ಅನುಕರಣೆ ಮಾಡಿದರೆ ದೈವ ಸಂಸ್ಕೃತಿ ನಾಶವಾಗುವುದು ನಿಜವೇ?
ಹಾಗೇನಾದರೂ ಆಗುವುದಿದ್ದರೆ 1980 ರಿಂದ 2010ರ ಅವಧಿಯೊಳಗೆ ಆಗಬೇಕಿತ್ತು. 20 ಮತ್ತು 21 ನೇಯ ಶತಮಾನದ ಮಧ್ಯೆ ಬದುಕಿರುವ ನಮ್ಮ ಕಾಲಘಟ್ಟದಲ್ಲಿ ಮಾಧ್ಯಮಗಳ ಹಾವಳಿಯೂ ಇಷ್ಟೊಂದು ಪ್ರಮಾಣದಲ್ಲಿ ಇರಲಿಲ್ಲ.
ಮನೋರಂಜನೆ ಎಂದರೆ ಯಕ್ಷಗಾನ, ತುಳು ನಾಟಕಗಳು ಮತ್ತು ದೈವಾರಾಧನೆ. ಈ ಪುಟ್ಟ ಜಗತ್ತಿನಲ್ಲಿಯೇ ನಮಗೆ ಬೇಕಾದ್ದನ್ನು ಹುಡುಕಿ ಆನಂದಿಸಬೇಕಿತ್ತು. ಆಗ ಕಾಲೇಜುಗಳ ವಾರ್ಷಿಕೋತ್ಸವಗಳಲ್ಲಿ ದೈವ ನರ್ತನದ ಅನುಕರಣೆ, ಸರ್ಕಾರಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ದೈವ ಹಾಗೂ ಯಕ್ಷಗಾನ ವೇಷಗಳ ಮೆರವಣಿಗೆ, ಸ್ವಾಗತ ಇತ್ಯಾದಿ ಎಲ್ಲವೂ ಇತ್ತು.
ಆ ವೇದಿಕೆಗಳಲ್ಲಿ ದೈವಗಳನ್ನು ನೋಡಿದವರು ದೈವಸ್ಥಾನಗಳ ಮುಂದೆ ಎಂದೂ ತಾತ್ಸಾರದಿಂದ ನಡೆದುಕೊಳ್ಳಲಿಲ್ಲ. ಆರಾಧನೆಗೇನೂ ಕಡಿಮೆ ಮಾಡಲಿಲ್ಲ. ದರ್ಶನ, ಕೋಲ, ಅಗೇಲು ಸೇವೆಗಳು ನಿರಾತಂಕವಾಗಿ ಸಾಗುತ್ತಿದ್ದವು.
ಈ ವೇದಿಕೆಗಳಲ್ಲಿ ಕಾಣಿಸಿಕೊಂಡವರೇ ಮುಂದೆ ನಿಂತು ದೈವಾರಾಧನೆಯ ಕಾರ್ಯಕ್ರಮಗಳನ್ನೂ ಶ್ರದ್ಧಾ ಭಕ್ತಿಯಿಂದ ನಡೆಸಿಕೊಡುತ್ತಿದ್ದರು. ಏಕೆಂದರೆ ಅಂದು ದೈವ ಭಕ್ತರು ಮತ್ತು ದೈವಾರಾಧಕರಷ್ಟೇ ಇದ್ದರು.
ದೈವೋದ್ಯಮವೂ ಅಭಿವ್ಯಕ್ತಿ ಸ್ವಾತಂತ್ರ್ಯವೂ (Theology)
ದೈವಾರಾಧನೆಯೊಂದು ಉದ್ಯಮ ಸ್ವರೂಪ ಪಡೆದದ್ದೇ ತಡ. ಅದಕ್ಕೆ ಒಂದೊಂದು ಶಕ್ತಿಗಳು ಒಂದೊಂದು ತಡೆಬೇಲಿ ಹಾಕಲಾರಂಭಿಸಿದವು. ಉದಾಹರಣೆಗೆ ಕಾಂತಾರ ಸಿನಿಮಾ ಬಂದಾಗ ಜಗತ್ತು ಅದನ್ನು ಪ್ರೀತಿಯಿಂದ ಸ್ವೀಕರಿಸಿತು. ತಮ್ಮ ದೈವಗಳನ್ನು ಹುಡುಕಿಕೊಂಡು ಬರುವ ನೆಪದಲ್ಲಿ ಕುಟುಂಬ ಸಮ್ಮಿಲನಕ್ಕೆ ಕಾರಣವಾಯಿತು. ಆದರೆ, ದೈವೋದ್ಯಮಿಗಳು ಅದಕ್ಕೆ ಇಲ್ಲಸಲ್ಲದ ಟೀಕೆ ಮಾಡಲಾರಂಭಿಸಿದರು. ಅಕ್ಷರಶಃ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಪ್ರಹಾರ ಮಾಡಿದರು.
ಸಂಘರ್ಷ, ಶೋಷಣೆ ಕಾಣಲೇ ಇಲ್ಲ (Theology)
ವಾಸ್ತವವಾಗಿ ಕಾಂತಾರ ಸಿನಿಮಾ ಹೇಳಿದ್ದು ಧಣಿ- ಒಕ್ಕಲುಗಳ ಸಂಘರ್ಷದ ಕಥೆ. ಶೋಷಣೆಯ ಪರಮಾವಧಿಯ ಕಥೆ. ಅಂದೂ- ಇಂದೂ ಅಸ್ತಿತ್ವದಲ್ಲಿರುವ ದೈವೋದ್ಯಮಿಗಳು ಮತ್ತು ಧರ್ಮೋದ್ಯಮಿಗಳ ಯಜಮಾನಿಕೆ ಮತ್ತು ಅಸಹಾಯಕರನ್ನು ದಮನಿಸುವ ನಿಜ ಕಥೆ. ಸಿನಿಮಾ ಓಟ, ದೈವೀಕತೆಯ ಭರಾಟೆಯ ನಡುವೆ ನಿರ್ದೇಶಕರು ಹೇಳಲು ಹೊರಟ ಆಶಯ ಮರೆಯಾಯಿತು, ದೈವಗಳ ಮುಖವಾಡವಷ್ಟೇ ಉಳಿಯಿತು.
ಇದೇ ಅವಧಿಯಲ್ಲಿ ಮಂಗಳೂರಿನಲ್ಲಿ ವಿಜಯ ಕುಮಾರ್ ಕೊಡಿಯಾಲ್ ಬೈಲ್ನಿರ್ದೇಶನದ ʼಶಿವದೂತೆ ಗುಳಿಗೆʼ ನಾಟಕ ಸೂಪರ್ ಹಿಟ್ ಪ್ರದರ್ಶನ ಕಾಣುತ್ತಿತ್ತು. ದೈವೋದ್ಯಮಿಗಳ ಕಣ್ಣು ಅದರ ಮೇಲೂ ಬಿತ್ತು. ಆದರೆ ಕೊಡಿಯಾಲ್ಬೈಲ್ ಅವರು ಜಗ್ಗಲಿಲ್ಲ.
ದುಡ್ಡು– ದೈವ– ಧರ್ಮದ ಅಫೀಮು (Theology)
ಯಾವಾಗ ಪರಿಕಲ್ಪನೆಯೊಂದು (ಕಥೆಯೊಂದು ಸಿನಿಮಾ, ನಾಟಕ ಪ್ರದರ್ಶಕ ಕಲೆಯಾಗಿ) ಜನರನ್ನು ಸೆಳೆಯುತ್ತಾ ಸ್ವಲ್ಪ ಪ್ರಮಾಣದ ವಾಣಿಜ್ಯ ಯಶಸ್ಸಿನತ್ತ ಹೊರಳುತ್ತದೋ ಆ ಹೊತ್ತಿನಲ್ಲಿ ಈ ಉದ್ಯಮಿಗಳಿಗೆ ಸಂಸ್ಕೃತಿ, ಸಂಸ್ಕಾರ ನೆನಪಾಗುತ್ತದೆ. ಅವರ ಮೊದಲ ಪ್ರಹಾರ ಆಗುವುದು ಪ್ರದರ್ಶನ ಮತ್ತು ಪ್ರಸಾರ ಮಾಧ್ಯಮಗಳ ಮೇಲೆ (ಸಿನಿಮಾ, ಟಿವಿ ಮತ್ತು ಸಾಮಾಜಿಕ ಜಾಲತಾಣಗಳು). ಅದಕ್ಕೆ ತಕ್ಕಂತೆ ಕರಾವಳಿಯ ಬಹುದೊಡ್ಡ ಯುವ ಸಮುದಾಯದ ಮೇಲೆ ಧರ್ಮದ ಅಫೀಮನ್ನು ಈಗಾಗಲೇ ತುಂಬಲಾಗಿದೆ.
ಅವರು ಯಾರನ್ನೂ ಕೇಳುವ ಮನೋಸ್ಥಿತಿಯಲ್ಲಿಲ್ಲ. ವಿದ್ವಾಂಸರು, ತಜ್ಞರ ಹೆಸರಿನಲ್ಲಿ ಗುರುತಿಸಿಕೊಂಡಿರುವ ಈ ದೈವ ಗುತ್ತಿಗೆದಾರರು ಹೇಳಿದ್ದನ್ನೇ ಪರಮಸತ್ಯ ಎಂದು ಹೇಳುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಅದನ್ನೇ ವೈಭವೀಕರಿಸುತ್ತಾರೆ. ಸಮೂಹ ಸನ್ನಿಯ ಮುದ್ರೆ ಒತ್ತಿ ಅದನ್ನೇ ಸತ್ಯ ಎಂದು ಸಾರಿಬಿಡುತ್ತಿದ್ದಾರೆ. ಮೂಲಭೂತವಾದಿಗಳಿಗೂ ದೈವೋದ್ಯಮಿಗಳಿಗೂ ಇರುವ ಅಂತರ ತೀರಾ ಕಡಿಮೆಯಾಗಿದೆ.
ದೈವ ವಕ್ತಾರರ ನುಡಿ (Theology)
ಇನ್ನು ಮುಂದೆ ಒಂದು ಫರ್ಮಾನು ಬರಬಹುದೇನೋ ಯಾರೂ ಕೂಡಾ ದೈವ, ದೇವರುಗಳ ವಿಷಯವುಳ್ಳ ಸಾಹಿತ್ಯ ಬರೆಯಲೇಬಾರದು. ಸಂಗೀತ ಸೃಷ್ಟಿಸಲೇಬಾರದು. ದೈವಗಳ ಅಧಿಕೃತ ವಕ್ತಾರರ ಹೊರತಾಗಿ ಯಾರೂ ಬಹಿರಂಗ ಹೇಳಿಕೆ ಕೊಡಲೇಬಾರದು.
ಕಾಂಕ್ರೀಟ್ ಕಾಡಿನಲ್ಲಿ ನಾಗದರ್ಶನ (Theology)
ಕನ್ನಡ ಚಿತ್ರರಂಗ ಸಂಕಷ್ಟದಲ್ಲಿದೆ ಎನ್ನುವ ಕಾರಣಕ್ಕೆ ಕಲಾವಿದರ ಸಂಘದಲ್ಲಿ ನಾಗದರ್ಶನ ಮಾಡಿಸಿ, ಅದೇ ವೇಷದಲ್ಲಿ ಪಾತ್ರಧಾರಿಯಿಂದ ಟಿವಿ ಬೈಟ್ಕೊಡಿಸಬಹುದು. … ಅಜ್ಜನ ಕಟ್ಟೆಯನ್ನು ಬೆಂಗಳೂರಿನ ಗಲ್ಲಿ, ಬೀದಿಗಳಲ್ಲೂ ಕಟ್ಟಬಹುದು. ಕೋಟ್ಯಂತರ ರೂಪಾಯಿಯ ಉದ್ದಿಮೆ ನಡೆಸುವವರು ಕೊರಗಜ್ಜನಿಗೆ ಬೀಡಿ, ಸೇಂದಿ ಕೊಟ್ಟು ತಮ್ಮ ವ್ಯವಹಾರ ಸರಿಪಡಿಸಿಕೊಳ್ಳಬಹುದು.
Read also : ದಿನಮಾನ ಹೆಮ್ಮೆ : ನೆಲದ ಮೈಯ್ಯಿಗೆ ದುಡಿವ ಹೆಜ್ಜೆಗಳ ಕಾವ್ಯ ಬರೆವ –ಪಿ.ಆರ್.ವೆಂಕಟೇಶ್
ಅಜ್ಜ ಎಂಬ ಮೂಲ ಶೋಷಿತನ ನಿಜ ಕಥೆಯನ್ನು ಫ್ಯಾನ್ಸಿ ಲೇಬಲ್ಗಳ ಅಡಿಯಲ್ಲಿ ಮರೆ ಮಾಚಬಹುದು. ಆದರೆ, ಹೆಣ್ಣುಮಕ್ಕಳು ತಮ್ಮ ಖುಷಿಗಾಗಿ ಇತಿಮಿತಿಗಳ ನಡುವೆ ದೈವವನ್ನು ಅನುಕರಿಸಬಾರದು. ಇದರಿಂದ ದೈವಗಳಿಗೆ ತೊಂದರೆಯಿಲ್ಲ. ಒಂದು ವೇಳೆ ಅವು ಅಸ್ತಿತ್ವದಲ್ಲಿದ್ದರೆ ಆನಂದಿಸುತ್ತಿದ್ದವೋ ಏನೋ. ಆದರೆ, ಗುತ್ತಿಗೆದಾರರು ಬಿಡಬೇಕಲ್ಲಾ.
ಶರತ್ ಹೆಗ್ಡೆ ಕಡ್ತಲ