ದಾವಣಗೆರೆ,ಜ.06 (Davanagere) : ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಮತ್ತು ಬಾಲಕಿಯರಿಗೆ ಅಪ್ತ ಸಮಾಲೋಚನೆ ಜೊತೆಗೆ ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ.ಎನ್ ಹೆಗಡೆ ತಿಳಿಸಿದರು.
ಸೋಮವಾರ(ಜ.6)ರಂದು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ದಾವಣಗೆರೆ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮ ವಿಧಾನ್ ಸೆ ಸಮಾಧಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದರು.
ದೌರ್ಜನ್ಯಕ್ಕೆ ಒಳಪಟ್ಟ ಮಹಿಳೆಯರಿಗೆ ಕಾನೂನು ಸಲಹೆ, ಆರ್ಥಿಕ ಪರಿಹಾರ, ತಾತ್ಕಾಲಿಕ ಆಶ್ರಯ, ರಕ್ಷಣೆ ನೀಡುವುದರ ಜೊತೆಗೆ ಸ್ವಯಂಪ್ರೇರಣೆಯಿಂದ ಸ್ವಾವಲಂಬಿಯಾಗಿ ಬದುಕಲು ಅನುಕೂಲವಾಗುವಂತೆ ತರಬೇತಿ ನೀಡುವುದರೊಂದಿಗೆ ಇಂತಹ ಮಹಿಳೆಯರನ್ನು ಆರ್ಥಿಕವಾಗಿ ಸಶಕ್ತರನ್ನಾಗಿ ಮಾಡುವುದೇ ‘ವಿಧಾನ್ ಸೆ ಸಮಾಧಾನ್ ಕಾರ್ಯಕ್ರಮದ ಉದ್ದೇಶವಾಗಿರುತ್ತದೆ.
ಕಾನೂನಿನ ಅರಿವು ಇದ್ದರೆ ಅದರ ಆಳ, ಅಗಲ ಅರ್ಥವಾಗುತ್ತದೆ. ಬದುಕಿನ ವ್ಯವಹಾರದಲ್ಲಿ ಕಾನೂನು ಚೌಕಟ್ಟಿನ ವಿಚಾರಕ್ಕೆ ಬಂದಾಗ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಆಶ್ರಯದ ಅಗತ್ಯವಿರುವ ಮಹಿಳೆಯರಿಗೆ ಅಲ್ಪಾವಧಿ ವಸತಿಗೃಹಗಳಲ್ಲಿ ಹಾಗೂ ಅಲ್ಪಾವಧಿ ಗೃಹಗಳು ಇಲ್ಲದೇ ಇರುವ ಸ್ಥಳಗಳಲ್ಲಿ ಇಲಾಖೆಯ ಸ್ವೀಕಾರ ಕೇಂದ್ರ ಅಥವಾ ರಾಜ್ಯ ಮಹಿಳಾ ನಿಲಯಗಳಲ್ಲಿ ತಾತ್ಕಾಲಿಕವಾಗಿ ಆಶ್ರಯ ನೀಡಲಾಗುವುದು ಎಂದರು.
ಸಲಹಾ ಸೇವಾ ಆಗತ್ಯವಿದ್ದಲ್ಲಿ ತರಬೇತಿ ಹೊಂದಿದ ಸಲಹೆಗಾರರ ಮೂಲಕ ಸಮಾಲೋಚನೆಯ ಸೇವೆಯನ್ನು ನೀಡಲಾಗುವುದು. ಕಾನೂನು ನೆರವು ಅವಶ್ಯಕತೆ ಇರುವ ಪ್ರತಿಯೊಂದು ಪ್ರಕರಣಗಳಿಗೆ ವಕೀಲರನ್ನು ನೇಮಿಸಿಕೊಳ್ಳಲು ಆರ್ಥಿಕ ನೆರವು ನೀಡಲಾಗುವುದು. ರಕ್ಷಣೆ ಕೋರಿ ಬಂದ ಮಹಿಳೆಯರು ವಿದ್ಯಾಭ್ಯಾಸವನ್ನು ಮುಂದುವರೆಸಲು ಇಚ್ಚಿಸಿದಲ್ಲಿ ಅಂತಹವರಿಗೆ ಆರ್ಥಿಕ ನೆರವು ಒದಗಿಸಿ ವಸತಿಗೃಹಗಳಲ್ಲಿ ಆಶ್ರಯ ನೀಡಲಾಗುವುದು. ಸಾಂತ್ವನ ಕೇಂದ್ರದಲ್ಲಿ ದೂರು ದಾಖಲಿಸಿದ ಮಹಿಳೆಗೆ ಆರ್ಥಿಕ ನೆರವಿನ ಅಗತ್ಯವಿದ್ದಲ್ಲಿ ಜಿಲ್ಲಾ ಸಮಿತಿಯ ನಿರ್ಧಾರದ ಪ್ರಕಾರ ಆರ್ಥಿಕ ಪರಿಹಾರ ನೀಡಲಾಗುವುದು. ದೌರ್ಜನ್ಯಕ್ಕೆ ಒಳಗಾದ ಮಹಿಳೆಯು ಮರಣ ಹೊಂದಿದ ಪಕ್ಷದಲ್ಲಿ ಅಂತಹ ಮಹಿಳೆಯರ ಮಕ್ಕಳ ಶಿಕ್ಷಣ ಹಾಗೂ ಪುನರ್ವಸತಿಗಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಠೇವಣಿ ಇಡಲಾಗುವುದು. ಈ ಮಹಿಳೆಯರು ಉದ್ಯೋಗಸ್ಥ ಮಹಿಳೆಯರ ವಸತಿಗೃಹದಲ್ಲಿ ಗರಿಷ್ಠ ವರ್ಷದವರೆಗೆ ಇರಲು ಅವಕಾಶವಿದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ಮಾತನಾಡಿ, ಸಂವಿಧಾನದ ಆಶಯದಂತೆ ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿಶೇಷವಾದ ಯೋಜನೆಗಳನ್ನು ಜಾರಿಗೆ ತಂದಿದೆ. 1990ರಲ್ಲಿ ನ್ಯಾಷನಲ್ ವುಮೆನ್ಸ್ ಆಕ್ಟ್ ಎಂಬ ಕಾನೂನು ಮಾಡಲಾಗಿದೆ. ಈ ಕಾನೂನು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರ ಉದ್ದೇಶ ಸಾಮಾಜಿಕ ಶೋಷಣೆಗಳಾದ ವರದಕ್ಷಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ, ವೈವಾಹಿಕ ಜೀವನಲ್ಲಿ ತೀವ್ರತರಹ ಸಮಸ್ಯೆಗಳು, ಅತ್ಯಾಚಾರ, ದೌರ್ಜನ್ಯದ ವಿರುದ್ದ ಮಹಿಳೆಯರಿಗೆ ಸೂಕ್ತ ಸಲಹೆ ಸಹಕಾರಕ್ಕೆ ಇಲಾಖೆಯ ನೆರವನ್ನು ನೀಡಲಾಗುವುದು ಎಂದರು.
1987ರಲ್ಲಿ ಕಲ್ಪಿಸಿದಂತೆ ಸಮಾಜದ ದುರ್ಬಲ ಮತ್ತು ವಂಚಿತ ವರ್ಗಗಳಿಗೆ ಉಚಿತ ಮತ್ತು ಸಮರ್ಥ ಕಾನೂನು ಸೇವೆಗಳನ್ನು ಒದಗಿಸುವ ಮನೋಭಾವ ಮತ್ತು ಉದ್ದೇಶವು ದುರ್ಬಲ ವರ್ಗದವರಿಗೆ ಅವರ ವಿವಿಧ ಕಾನೂನು ಮತ್ತು ಸಾಂವಿಧಾನಿಕ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಸಾಧ್ಯವಾಗದಿದ್ದಲ್ಲಿ ಸೋಲುತ್ತದೆ ಎಂದರು.
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾಪ್ರಶಾಂತ್ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಉಪನಿರ್ದೇಶಕ ಡಾ.ಕೆ.ಕೆ ಪ್ರಕಾಶ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಿಬ್ಬಂದಿ ಗುರುಪ್ರಸಾದ್, ಹಿರಿಯ ವಕೀಲರಾದ ಸುಧಾ.ಹೆಚ್.ಎನ್, ಅನಿತಾ ಸಿ.ಪಿ ಉಪಸ್ಥಿತರಿದ್ದರು.
Read also : ಯುವಜನೋತ್ಸವ; ಜೇನು ಕುರುಬರ ಹಾಡು, ಕಥೆ ಬರೆಯುವ ಸ್ಪರ್ಧೆ