ದಾವಣಗೆರೆ (Davangere): ಷೇರು ಮಾರುಕಟ್ಟೆಯಲ್ಲಿ ಬಂಗಾರದ ಮೇಲೆ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂಬ ಆಸೆ ತೋರಿಸಿ ಫೇಸ್‌ಬುಕ್‌ನ ಅಪರಿಚಿತ ವ್ಯಕ್ತಿಯೊಬ್ಬ ನಗರದ ವೈದ್ಯರೊಬ್ಬರಿಗೆ ಬರೋಬರಿ 2.40 ಕೋಟಿ ರೂ. ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
ನಗರದ ಪ್ರತಿಷ್ಠಿತ ಕುಟುಂಬವೊಂದರ ವೈದ್ಯ ಟೆಲಿಗ್ರಾಂ ಗ್ರೂಪ್‌ನಲ್ಲಿ ಹೂಡಿಕೆಗೆ ಸಂಬಂಧಿಸಿದಂತೆ ಹಾಕಿದ ಸಂದೇಶಕ್ಕೆ, ಅಪರಿಚಿತ ವ್ಯಕ್ತಿ ಪ್ರತಿಕ್ರಿಯಿಸಿದ್ದ. ವಾಟ್ಸ್ ಆಪ್‌ನಲ್ಲಿ ಚಾಟ್ ಮಾಡಲು ಆರಂಭಿಸಿದ್ದ. ಕೆಲ ದಿನಗಳಲ್ಲಿ ಫೇಸ್ ಬುಕ್ ಮೂಲಕ ಸ್ನೇಹಿತನಾದ. ಹೀಗೆ ಸ್ನೇಹಿತನಾದ ಅಪರಿಚಿತ ವ್ಯಕ್ತಿ ‘ಸಿಎಂಸಿ ಮಾರ್ಕೆಟ್’ ಎಂಬ (ನಕಲಿ) ಜಾಲತಾಣದಲ್ಲಿ ಬಂಗಾರದ ಮೇಲೆ ಇಬ್ಬರೂ ಒಟ್ಟಿಗೆ ಹೂಡಿಕೆ ಮಾಡೋಣ, ಕಮಿಷನ್ ರೂಪದಲ್ಲಿ ಹೆಚ್ಚು ಲಾಭ ಗಳಿಸಬಹುದು ಎಂದು ಅಪರಿಚಿತ ವಂಚಕ, ವೈದ್ಯರನ್ನು ನಂಬಿಸಿದ್ದ. ವಂಚಕನು ವಾಟ್ಸ್‌ಆಪ್ ನಲ್ಲಿ ಕಳುಹಿಸಿದ ಲಿಂಕ್ ಮೂಲಕ ಸಿಎಂಸಿ ಮಾರ್ಕೆಟ್ ವೆಬ್‌ಸೈಟ್ ನಲ್ಲಿ ಕಳೆದ ಫೆ.18ರಿಂದ ಮೇ 15ರವರೆಗೆ ಒಟ್ಟು 2,40,92,150 ರೂ. ವೈದ್ಯರು ಹೂಡಿಕೆ ಮಾಡಿದ್ದಾರೆ.
ನಾನಾ ಬ್ಯಾಂಕ್ ಖಾತೆಗಳಿಗೆ ಒಟ್ಟು 17 ಬಾರಿ ಹಣ ವರ್ಗಾವಣೆ ಮಾಡಿರುವ ವೈದ್ಯ, ಮಾರ್ಚ್ 11ರಂದು 5 ಲಕ್ಷ ರೂ. ವಿತ್ ಡ್ರಾ ಮಾಡಿದ್ದಾರೆ. ಬಳಿಕ ಹಣ ವಿತ್ ಡ್ರಾ ಮಾಡಲು ನಡೆಸಿದ ಹತ್ತಾರು ಪ್ರಯತ್ನಗಳು ವಿಫಲವಾದವು. ಅನುಮಾನಗೊಂಡ ವೈದ್ಯ, ಮೇ 17ರಂದು ‘1930’ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ದೂರು ನೀಡಿದ್ದಾರೆ. ಈ ಕುರಿತು ದಾವಣಗೆರೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.