ಹರಿಹರ: ಶಾಸಕ ಬಸವನಗೌಡ ಪಾಟೀಲ್ ಯತ್ನಾಳರ ಹಿಡಿತವಿಲ್ಲದ ನಾಲಿಗೆಯಿಂದಾಗಿ ಬಿಜೆಪಿ ಗಂಡಾಂತರವಾಗಲಿದೆ. ದೊಡ್ಡ ನಾಯಕರಾಗಿ ಬೆಳೆಯಬೇಕಾದವರು ಆಧಾರ ರಹಿತವಾಗಿ ಮಾತನಾಡುವುದನ್ನು ಬಿಡಬೇಕೆಂದು ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಆಗ್ರಹಿಸಿದರು.
ಗುರುಪೀಠ ಹಾಗೂ ಸಮುದಾಯದ ಜನರಿಗೆ ನೋವುಂಟು ಮಾಡಿದೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀಗಳ ಕುರಿತು ಯತ್ನಾಳ ಆಡಿರುವ ಮಾತುಗಳು, ವ್ಯಕ್ತಪಡಿಸಿರುವ ಆಂಗಿಕ ಭಾಷೆ, ಜೊತೆಗಿದ್ದ ಗದ್ದಿಗೌಡರ್ ಯತ್ನಾಳರ ಮಾತಿಗೆ ನಕ್ಕಿದ್ದು ಗುರುಪೀಠ ಹಾಗೂ ಸಮುದಾಯದ ಜನರಿಗೆ ನೋವುಂಟು ಮಾಡಿದೆ, ಸನಾತನ ಧರ್ಮದ ಬಗ್ಗೆ ಪ್ರಸಂಶೆ ವ್ಯಕ್ತಪಡಿಸುವವರೆ ಕಾವಿಧಾರಿಗಳ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯೆ ಎಂದು ಪ್ರಶ್ನಿಸಿದರು.
ಯತ್ನಾಳರು ಒಮ್ಮೆ ಮಠಕ್ಕೆ ಭೇಟಿ ನೀಡಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ಮಾತನಾಡಲಿ
ಪಂಚಮಸಾಲಿ ಸಮಾಜದ ರಾಜ್ಯ ಕಾರ್ಯಾಧ್ಯಕ್ಷ ಸೋಮನಗೌಡ ಪಾಟೀಲ್ ಮಾತನಾಡಿ, ವಾಸ್ತವ ಅರಿಯದೆ ಟೀಕೆ ಮಾಡುವುದು ಶೋಬೆ ತರುವುದಿಲ್ಲ, ದೊಡ್ಡ ನಾಯಕರಾಗಿ ಬೆಳೆಯಬೇಕಾದ ಯತ್ನಾಳರು ಒಮ್ಮೆ ಮಠಕ್ಕೆ ಭೇಟಿ ನೀಡಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ಮಾತನಾಡಲಿ ಎಂದು ಹೇಳಿದರು.
ಖರ್ಚು, ವೆಚ್ಚ ಲೆಕ್ಕ ಪಾರದರ್ಶಕ
ಗುರುಪೀಠದ ಆಡಳಿತಾಧಿಕಾರಿ ಡಾ.ರಾಜಕುಮಾರ್ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ನಾಡಿನ ಎಲ್ಲಾ ಮಠ, ಮಾನ್ಯಗಳಿಗೂ ಆಗಾಗ್ಗೆ ಅನುದಾನ ನೀಡಿದ್ದು ಅದೇ ರೀತಿ ಈ ಮಠಕ್ಕೂ ನೀಡಿದೆ. ಅನುದಾನ ಪೀಠದ ಟ್ರಸ್ಟಿಗೆ ಬಂದಿದೆಯೆ ಹೊರತು ಶ್ರೀಗಳಿಗೆ ಬಂದಿಲ್ಲ, ಖರ್ಚು, ವೆಚ್ಚ ಲೆಕ್ಕ ಪಾರದರ್ಶಕವಾಗಿದ್ದು ಯತ್ನಾಳರು ಪರಿಶೀಲಿಸಬಹುದಾಗಿದೆ ಎಂದರು.
ಶ್ರೀಗಳ ಬಗ್ಗೆ ಅವಹೇಳನಕಾರಿ ಮಾತನಾಡಿದರೆ ಯತ್ನಾಳರ ಮನೆ ಮುಂದೆ ಪ್ರತಿಭಟನೆ
ಗುರುಪೀಠದ ಧರ್ಮದರ್ಶಿ ಚಂದ್ರಶೇಖರ ಪೂಜಾರ್ ಮಾತನಾಡಿ, ಪಂಚಮಸಾಲಿ ಸಮುದಾಯದ ಮುಖಂಡರಿಗೆ ಲೋಕಸಭಾ ಟಿಕೆಟ್ ಅಗತ್ಯದ ಸಂಖ್ಯೆಯಲ್ಲಿ ನೀಡಿರಿ ಎಂದ್ದು ತಪ್ಪೆ, ಪಕ್ಷಾತೀತವಾಗಿ ಪಂಚಮಸಾಲಿ ಸಮುದಾಯದ ಹಿತಕ್ಕೆ ಶ್ರಮಿಸುತ್ತಿರುವ ಮಠದ ಬಗ್ಗೆ, ಶ್ರೀಗಳ ಬಗ್ಗೆ ಅವಹೇಳನಕಾರಿ ಮಾತನಾಡಿದರೆ ಯತ್ನಾಳರ ಮನೆ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪಂಚಮಸಾಲಿ ಸಮುದಾಯಕ್ಕೆ ಅನ್ಯಾಯ ಎಸಗಿರುವುದು ವಾಸ್ತವ
ವಚನಾನಂದ ಶ್ರೀಗಳು ಮಾತನಾಡಿ, ಶೇ.10 ರಷ್ಟು ಜನಸಂಖ್ಯೆ ಇರುವ ವೀರಶೈವ ಸಮುದಾಯದವರಿಗೆ ಬಿಜೆಪಿಯು ಮುಖ್ಯಮಂತ್ರಿ ಸ್ಥಾನ, ರಾಜ್ಯಾಧ್ಯಕ್ಷ ಸ್ಥಾನ ಇತ್ಯಾದಿ ನೀಡಿದೆ, ದೊಡ್ಡ ಸಮುದಾಯವಾದ ಪಂಚಮಸಾಲಿ ಸಮುದಾಯಕ್ಕೆ ಅನ್ಯಾಯ ಎಸಗಿರುವುದು ವಾಸ್ತವ. ಮಠವು ಯಾವ ಪಕ್ಷದ ಪರ ಅಥವಾ ವಿರುದ್ಧವಿಲ್ಲ, ಸಮುದಾಯದ ಮುಖಂಡರಿಗೆ ಸೂಕ್ತ ಸ್ಥಾನ, ಮಾನ ನೀಡಿರಿ ಎಂದು ಆಗ್ರಹಿಸಿದ್ದೇವೆ, ಆದರೆ ಯತ್ನಾಳರು ಸಣ್ಣತನ ಪ್ರದರ್ಶಿಸುತ್ತಿದ್ದಾರೆ, ತ್ರಿವಿಧ ದಾಸೋಹ ನೀಡುತ್ತಾ ಮಠವು ಅಲ್ಪಾವಧಿಯಲ್ಲಿ ಕಂಡಿರುವ ಅಭಿವೃದ್ಧಿಯನ್ನು ಅವರು ಗಮನಿಸಬೇಕೆಂದರು.
ಸುದ್ದಿಗೋಷ್ಟಿಯಲ್ಲಿ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ, ಸಮುದಾಯದ ಮುಖಂಡರಾದ ಪ್ರಕಾಶ್ ಪಾಟೀಲ್, ಶಂಕರಗೌಡ ಪಾಟೀಲ್, ವಸಂತಮ್ಮ ಹುಲ್ಲತ್ತು, ರಶ್ಮಿ ಕುಂಕದ್, ಮಂಜಣ್ಣ, ಹಾಲೇಶ್ ಗೌಡ, ಭಿಷ್ಟನಗೌಡ, ಪರಮೇಶ್ ಪಟ್ಟಣಶೆಟ್ಟಿ ಹಾಗೂ ಇತರರಿದ್ದರು.