ದಾವಣಗೆರೆ (Davanagere) : ರಾಜ್ಯ ಸರಕಾರ ಮಂಡಿಸಿದ ಬಜೆಟ್ ನಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಗೆ ಗುತ್ತಿಗೆ ಪದ್ಧತಿ ರದ್ದುಪಡಿಸಿ ಪೌರ ಕಾರ್ಮಿಕರ ಮಾದರಿಯಲ್ಲಿ ನೇರಪಾವತಿ ಜಾರಿಗೊಳಿಸದೆ ರಾಜ್ಯ ಸರಕಾರ ಅನ್ಯಾಯ ಎಸಗಿದೆ ಎಂದು ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘ ಪ್ರತಿಭಟಿಸಿದೆ.
ರಾಜ್ಯ ಕಾಂಗ್ರೆಸ್ ಸರಕಾರ ಕಳೆದ ಚುನಾವಣಾ ಕಾಲಕ್ಕೆ ಎಲ್ಲ ಪೌರ ಕಾರ್ಮಿಕರನ್ನು ಖಾಯಂಗೊಳಿಸುವ ಆರನೇ ಗ್ಯಾರಂಟಿ ನೀಡಿತ್ತು.ಆದರೆ ಪೌರ ಕಾರ್ಮಿಕರಲ್ಲಿ ತಾರತಮ್ಯ ಎಸಗಿರುವ ಸರ್ಕಾರ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ಕಸದ ಚಾಲಕರು. ನೀರು ಸರಬರಾಜು ಸಹಾಯಕರು ಸೇರಿದಂತೆ ಸಾವಿರಾರು ನೌಕರರಿಗೆ ಗುತ್ತಿಗೆ ಪದ್ದತಿಯನ್ನು ಹೇರಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಎಂ.ಬಿ. ನಾಗಣ್ಣಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ಹೊರಗುತ್ತಿಗೆ ನೌಕರರ ಸಂಘದ ತೀವ್ರ ಹೋರಾಟದ ಪರಿಣಾಮ ಈ ಬಾರಿಯ ಬಜೆಟ್ನಲ್ಲಿ ನೇರಪಾವತಿ ಘೋಷಣೆಗೆ ಅಗತ್ಯ ಪ್ರಸ್ತಾವನೆ ಸಲ್ಲಿಸಲು ಹಣಕಾಸು ಇಲಾಖೆ ಸೂಚನೆ ನೀಡಿತ್ತು. ಅದರಂತೆ ನಗರಾಭಿವೃದ್ಧಿ ಇಲಾಖೆ ಅಗತ್ಯ ಪ್ರಸ್ತಾವನೆ ಸಲ್ಲಿಸಿದ್ದರು. ಗುತ್ತಿಗೆ ಏಜೆನ್ಸಿಗಳ ಲಾಭಿಗೆ ಶರಣಾಗಿರುವ ರಾಜ್ಯ ಸರಕಾರ ಹೊರಗುತ್ತಿಗೆ ನೌಕರರಿಗೆ ವಿಶ್ವಾಸ ದ್ರೋಹ ಎಸಗಿದೆ ಎಂದು ಕಿಡಿಕಾರಿದ್ದಾರೆ.
Read also : ಸಬಲೀಕರಣದ ಹಾದಿಯಲ್ಲಿ ಮಹಿಳೆ | ಗೀತಾ ಭರಮಸಾಗರ ಲೇಖನ
ರಾಜ್ಯ ಸರಕಾರ ಎಚ್ಚೆತ್ತು ಗುತ್ತಿಗೆ ಪದ್ದತಿ ರದ್ದುಗೊಳಿಸಿ ನೇರಪಾವತಿ ಜಾರಿಗೊಳಿಸಬೇಕು. ತಪ್ಪಿದ್ದಲ್ಲಿ ರಾಜ್ಯಾದ್ಯಂತ ಕುಡಿಯುವ ನೀರು ಸ್ವಚ್ಚತೆ ಬಹಿಷ್ಕರಿಸಿ ಅನಿರ್ದಿಷ್ಟವಧಿ ಮುಷ್ಕರ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದ್ದಾರೆ.