ಹರಿಹರ: ಹರಿಹರದಲ್ಲಿ ಸಂಚಾರಿ ಪೊಲೀಸ್ ಠಾಣೆ ಮಂಜೂರಾತಿ ಕುರಿತ ವಿಷಯವನ್ನು ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಲು ಕೋರಿ ಜನಪರ ಹೋರಾಟ ವೇದಿಕೆಯಿಂದ ಶಾಸಕ ಬಿ.ಪಿ.ಹರೀಶ್ ಇವರಿಗೆ ಮನವಿ ಅರ್ಪಿಸಲಾಯಿತು.
ನಂತರ ವೇದಿಕೆ ಸಂಚಾಲಕ ಜೆ.ಕಲೀಂಬಾಷಾ ಇವರು ಮಾತನಾಡಿ, ಜಿಲ್ಲೆಯಲ್ಲಿ ದಾವಣಗೆರೆಯ ನಂತರ ಹರಿಹರ ದೊಡ್ಡ ನಗರವಾಗಿದೆ. ಮಾಜಿ ಕೈಗಾರಿಕಾ ನಗರ, ಐತಿಹಾಸಿಕ ಶ್ರೀ ಹರಿಹರೇಶ್ವರ ದೇವಸ್ಥಾನದ ಮೂಲಕ ದಕ್ಷಿಣ ಕಾಶಿ ಎಂಬ ಖ್ಯಾತಿಯನ್ನು ಹರಿಹರ ಹೊಂದಿದೆ.
ಒಂದು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರದಲ್ಲಿ ಹತ್ತಾರು ಶಿಕ್ಷಣ ಸಂಸ್ಥೆಗಳಲ್ಲಿ ಅಂದಾಜು 20 ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ, ಬ್ಯಾಂಕು, ಹೋಟಲ್, ವಸತಿ ಗೃಹ, ಹಿಂದು, ಮುಸ್ಲಿಂ, ಕ್ರೈಸ್ತ ಸಮುದಾಯದವರ ಅಧ್ಯಾತ್ಮಿಕ ಕೇಂದ್ರಗಳಿವೆ.
ಭೌಗೋಳಿಕವಾಗಿ ರಾಜ್ಯದ ಮಧ್ಯ ಭಾಗದಲ್ಲಿರುವ ನಗರದೊಳಗೆ ಬೀರೂರು-ಸಮ್ಮಸಗಿ (ಹಳೆ ಪಿ.ಬಿ.ರಸ್ತೆ) ಮತ್ತು ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿಗಳು ಹಾದು ಹೋಗಿದ್ದು, ನಗರದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ (ಪೂನಾ-ಬೆಂಗಳೂರು ರಸ್ತೆ) ನಂ. 48 ಇದೆ. ನಿತ್ಯ ನಗರದೊಳಗೆ 1400 ಕೆಎಸ್ಆರ್ಟಿಸಿ ಬಸ್ ಸೇರಿದಂತೆ 50 ಸಾವಿರಕ್ಕೂ ಹೆಚ್ಚು ಭಾರಿ ಮತ್ತು ಲಘು ವಾಹನಗಳ ಸಂಚಾರವಿದೆ.
ಇದೆಲ್ಲದರ ಪರಿಣಾಮವಾಗಿ ನಗರದೊಳಗಿನ ಪ್ರಮುಖ ರಸ್ತೆ, ವ್ಯಾಪಾರ ಸ್ಥಳಗಳಲ್ಲಿ ಜನ ಹಾಗೂ ವಾಹನಗಳ ಸಂಚಾರ ಅಧಿಕವಾಗಿದೆ. ರಸ್ತೆಗಳಲ್ಲಿ ವಾಹನಗಳನ್ನು ಬೇಕಾಬಿಟ್ಟಿ ನಿಲುಗಡೆ ಮಾಡಲಾಗುತ್ತಿದೆ, ಫುಟ್ಪಾತ್ಗಳೆಲ್ಲಾ ಅಂಗಡಿ, ಮುಂಗಟ್ಟುಗಳಿಂದ ಅಕ್ರಮಿತವಾಗಿವೆ, ಪರಿಣಾಮವಾಗಿ ಪಾದಚಾರಿಗಳು, ಸೈಕಲ್ ಸವಾರರು, ಶಾಲಾ ವಿದ್ಯಾರ್ಥಿಗಳು ರಸ್ತೆಗಳಲ್ಲಿ ಭಾರಿ ವಾಹನಗಳ ಜೊತೆಗೆ ಜೀವ ಕೈಯಲ್ಲಿ ಹಿಡಿದು ಸಂಚಾರ ಮಾಡುತ್ತಿದ್ದಾರೆ.
ವಾಹನ ಸಂಚಾರದ ಅವ್ಯವಸ್ಥೆಯಿಂದಾಗಿ ಪ್ರತಿ ವರ್ಷ ಅಮಾಯಕ ವಿದ್ಯಾರ್ಥಿಗಳು, ನಾಗರೀಕರು ರಸ್ತೆ ಅಪಘಾತಗಳಲ್ಲಿ ತಮ್ಮ ಅಮೂಲ್ಯ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ಸಿವಿಲ್ ಪೊಲೀಸ್ ರು ಕೆಲ ಮಟ್ಟಿಗೆ ವಾಹನ ಸಂಚಾರ ನಿಯಂತ್ರಣ ಮಾಡುತ್ತರಾದರೂ ಅದು ಪರಿಣಾಮ ಬೀರುತ್ತಿಲ್ಲ. ಈ ಸಮಸ್ಯೆಗೆ ಸೂಕ್ತ ಪರಿಹಾರವೆಂದರೆ ಸಂಚಾರಿ ಪೊಲೀಸ್ ಠಾಣೆ ಸ್ಥಾಪನೆಯಾಗಿದೆ.
ಬೆಂಗಳೂರಿನಲ್ಲಿ ಜುಲೈ 15 ರಿಂದ ಜುಲೈ 26ರವರೆಗೆ ನಡೆಯುವ ರಾಜ್ಯದ ವಿಧಾನಸಭಾ ಅಧಿವೇಶನದಲ್ಲಿ ಸದರಿ ವಿಷಯವನ್ನು ಪ್ರಸ್ತಾಪಿಸಿ ರಾಜ್ಯ ಸರ್ಕಾರದ ಗಮನ ಸೆಳೆದು ನಗರಕ್ಕೆ ತುರ್ತಾಗಿ ಸಂಚಾರಿ ಪೊಲೀಸ್ ಠಾಣೆ ಮಂಜೂರು ಮಾಡಿಸಿಕೊಡಬೇಕಾಗಿ ಕೋರಿದರು.
ಕಳೆದ ವಿಧಾನಸಭಾ ಅಧಿವೇಶನದಲ್ಲೂ ಈ ವಿಷಯ ಪ್ರಸ್ತಾಪಿಸಿದ್ದೆ, ಈ ಬಾರಿಯೂ ಪ್ರಸ್ತಾಪಿಸಿ ಸರ್ಕಾರದ ಮೇಲೆ ಒತ್ತಡ ತರುತ್ತೇನೆ ಎಂದು ಶಾಸಕ ಹರೀಶ್ ಭರವಸೆ ನೀಡಿದರು.
ವೇದಿಕೆ ಪದಾಧಿಕಾರಿಗಳಾದ ಎಚ್.ಕೆ.ಕೊಟ್ರಪ್ಪ, ಟಿ.ಜೆ.ಮುರುಗೇಶಪ್ಪ, ಪಿ.ಜೆ.ಮಹಾಂತೇಶ್, ಐರಣಿ ಹನುಮಂತಪ್ಪ, ಮೊಹ್ಮದ್ ಇಲಿಯಾಸ್ ಬಡೇಘರ್, ಹಲಗೇರಿ ನಜೀರ್ ಅಹ್ಮದ್, ಕಾನೂನು ಸಲಹೆಗಾರ ಇನಾಯತ್ ಉಲ್ಲಾ ಹಾಗೂ ಇತರರಿದ್ದರು.