Kannada News | Dinamaana.com | 28-10-2024
ಕಳೆದ ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ಶಿಗ್ಗಾಂವಿಯ ಮಾಜಿ ಶಾಸಕ ಮಂಜುನಾಥ ಕುನ್ನೂರು ವಿಧಾನಸಭೆಯ ಮೊಗಸಾಲೆಗೆ ಬಂದಿದ್ದರು. ಹೀಗೆ ಬಂದವರು ಕಾಂಗ್ರೆಸ್ಸಿನ ಕೆಲ ನಾಯಕರ ಮುಂದೆ ತಮ್ಮ ನೋವು ತೋಡಿಕೊಂಡಿದ್ದರು
‘ಸಾರ್, ನಮ್ಮ ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವುದು ಸುಲಭ. ಈ ಗೆಲುವಿಗೆ ಅಗತ್ಯವಾದ ಒಂದೇ ಮಾನದಂಡವೆಂದರೆ ಪಂಚಮಸಾಲಿ ಲಿಂಗಾಯತರಿಗೆ ಟಿಕೆಟ್ ಕೊಡುವುದು. ಆದರೆ, ಇದು ಗೊತ್ತಿದ್ದರೂ ಕ್ಷೇತ್ರದಲ್ಲಿ ಉದ್ದೇಶಪೂರ್ವಕವಾಗಿ ಪಂಚಮಸಾಲಿಗಳಿಗೆ ಟಿಕೆಟ್ ತಪ್ಪಿಸಲಾಗುತ್ತಿದೆ.
ಅದರಲ್ಲೂ ಬಿಜೆಪಿಯ ಬಸವರಾಜ ಬೊಮ್ಮಾಯಿ ಅವರ ಗೆಲುವಿಗೆ ಅನುಕೂಲ ಮಾಡಿಕೊಡಲು ಮುಸ್ಲಿಮರಿಗೆ ಟಿಕೆಟ್ ಕೊಡಲಾಗುತ್ತಿದೆ.ಅರವತ್ತು ಸಾವಿರದಷ್ಟಿರುವ ಪಮಚಮಸಾಲಿ ಸಮುದಾಯಕ್ಕೆ ಟಿಕೆಟ್ ತಪ್ಪಿಸಿ,ಮುಸ್ಲಿಮರಿಗೆ ಟಿಕೆಟ್ ಕೊಡುತ್ತಿರುವುದರಿಂದ ಕಾಂಗ್ರೆಸ್ ಗೆಲುವು ಗಳಿಸಲು ಸಾಧ್ಯವಾಗುತ್ತಿಲ್ಲ.
ಯಾಕೆಂದರೆ ಮುಸ್ಲಿಮರ ವೋಟು ಗಣನೀಯ ಸಂಖ್ಯೆಯಲ್ಲಿ ಸಿಕ್ಕರೂ ಹಿಂದುಳಿದ,ದಲಿತ ಸಮುದಾಯಗಳ ಮತ ಬ್ಯಾಂಕನ್ನು ಕ್ರೋಢೀಕರಿಸಲು ಕಾಂಗ್ರೆಸ್ಸಿಗೆ ಸಾಧ್ಯವಾಗುತ್ತಿಲ್ಲ.ಆದರೆ ಅದೇ ಕಾಲಕ್ಕೆ ಬೊಮ್ಮಾಯಿ ಅವರು ಪಂಚಮಸಾಲಿ ಲಿಂಗಾಯತರು,ವಾಲ್ಮೀಕಿಗಳು,ಸಾದ ಲಿಂಗಾಯತರ ಮತಗಳನ್ನು ಕನ್ ಸಾಲಿಡೇಟ್ ಮಾಡುತ್ತಾರೆ.ಉಳಿದಂತೆ ಕುರುಬರು, ಮುಸ್ಲಿಮರು, ದಲಿತರ ಮತ ಬ್ಯಾಂಕಿನಲ್ಲೂ ಒಂದಷ್ಟು ಮತ ಸೆಳೆದು ಗೆಲ್ಲುತ್ತಿದ್ದಾರೆ. ಈ ಸತ್ಯ ನಮ್ಮ ಪಕ್ಷದ ಟಾಪ್ ಲೀಡರುಗಳಿಗೆ ಗೊತ್ತಿಲ್ಲ ಅಂತಲ್ಲ.ಆದರೆ ಅವರು ಬೇಕು ಅಂತಲೇ ಬಸವರಾಜ ಬೊಮ್ಮಾಯಿ ಅವರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ.
ಈಗ ಬಸವರಾಜ ಬೊಮ್ಮಾಯಿ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದಾರಲ್ಲ? ಹೀಗಾಗಿ ಸಧ್ಯದಲ್ಲೇ ಶಿಗ್ಗಾಂವಿ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಹೀಗಾಗಿ ಈ ಸಲವಾದರೂ ಪಂಚಮಸಾಲಿ ಸಮುದಾಯದವರಿಗೆ ಪಕ್ಷದ ಟಿಕೆಟ್ ಕೊಡುವಂತಾಗಬೇಕು.ಇವತ್ತು ನನ್ನ ಮಗ ರಾಜು ಕುನ್ನೂರ್ ಗೆ ಟಿಕೆಟ್ ಕೊಡಿ ಅಂತ ನಾನು ಕೇಳಲು ಬಂದಿದ್ದೇನೆ. ಹಾಗಂತ ನನ್ನ ಮಗನಿಗೇ ಟಿಕೆಟ್ ಅಗುತ್ತದೆ ಅಂತಲ್ಲ.ಅದರೆ ಯಾವ ಕಾರಣಕ್ಕೂ ಪಂಚಮಸಾಲಿಗಳನ್ನು ಬಿಟ್ಟು ಬೇರೆಯವರಿಗೆ ಟಿಕೆಟ್ ಕೊಡಬಾರದು.
ಹೀಗೆ ಪಂಚಮಸಾಲಿಗಳಿಗೆ ಟಿಕೆಟ್ ಕೊಟ್ಟರೆ, ಆ ಸಮುದಾಯದ ಮತಗಳ ಜತೆ ಅಹಿಂದ ವರ್ಗಗಳ ಮತ ಬ್ಯಾಂಕ್ ಸೇರಿ ಕಾಂಗ್ರೆಸ್ ಸುಲಭವಾಗಿ ಗೆಲ್ಲುತ್ತದೆ. ಹಾಗಂತ ಸಿಎಂ ಮತ್ತು ಡಿಸಿಎಂ ಅವರಿಗೆ ನೀವು ಒಂದು ಮಾತು ಹೇಳಬೇಕು ಸಾರ್. ಒಂದು ವೇಳೆ ಇಷ್ಟೆಲ್ಲ ಹೇಳಿಯೂ ಈ ಸಲ ಶಿಗ್ಗಾಂವಿ ಟಿಕೆಟ್ಟನ್ನು ಪಂಚಮಸಾಲಿಗಳಿಗೆ ಕೊಟ್ಟಿಲ್ಲ ಅಂದ್ರೆ ಯಥಾ ಪ್ರಕಾರ ಬಿಜೆಪಿ ಗೆಲ್ಲುತ್ತದೆ.ನಾವು ಕೈ ಕೈ ಹಿಸುಕಿಕೊಂಡು ತಿರುಗಾಡಬೇಕಾಗುತ್ತದೆ ಅಂತ ಮಂಜುನಾಥ್ ಕುನ್ನೂರ್ ಹೇಳುತ್ತಿದ್ದರೆ, ಕೇಳುತ್ತಿದ್ದ ಕಾಂಗ್ರೆಸ್ ನಾಯಕರು ಅವತ್ತು ಬೆರಗಾಗಿದ್ದರು.
ಭರತ್ ಬೊಮ್ಮಾಯಿ ಗೆಲ್ಲೋದು ಸುಲಭವಲ್ಲ (Political analysis)
ಅಂದ ಹಾಗೆ ಈ ಬೆಳವಣಿಗೆ ನಡೆದು ಕೆಲವೇ ಕಾಲದಲ್ಲಿ ಶಿಗ್ಗಾಂವಿ ಕ್ಷೇತ್ರದ ಉಪಚುನಾವಣೆ ಎದುರಾಗಿದೆ.ಈ ಸಲ ಬಿಜೆಪಿಯಿಂದ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಕಣಕ್ಕಿಳಿದಿದ್ದಾರೆ.ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾಸಿರ್ ಅಹ್ಮದ್ ಖಾನ್ ಪಠಾಣ್ ಕಣಕ್ಕಿಳಿದಿದ್ದಾರೆ.
ಹೀಗೆ ಮೇಲ್ನೋಟಕ್ಕೆ ನೋಡಿದರೆ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಗೆಲ್ಲುವುದು ಸುಲಭ ಎಂಬ ಭಾವನೆ ಹಲವರಲ್ಲಿದೆ. ಕಾರಣ? ಯಥಾ ಪ್ರಕಾರ ಕಾಂಗ್ರೆಸ್ ಪಕ್ಷದ ಟಿಕೆಟ್ಟನ್ನು ಮುಸ್ಲಿಮರಿಗೆ ನೀಡಲಾಗಿದೆ. ಹೀಗಾಗಿ ಎಂದಿನಂತೆ ಬಲಿಷ್ಟ ವರ್ಗದ ಬೆಂಬಲವಿಲ್ಲದೆ,ಅಹಿಂದ ವರ್ಗಗಳ ಮತಗಳನ್ನು ಕನ್ ಸಾಲಿಡೇಟ್ ಮಾಡಲು ಸಾಧ್ಯವಾಗದೆ ಕಾಂಗ್ರೆಸ್ ಸೋಲುವುದು ಗ್ಯಾರಂಟಿ ಎಂಬುದು ಇಂತವರ ಲೆಕ್ಕಾಚಾರ.
ಆದರೆ ಶಿಗ್ಗಾಂವಿಯ ಮತ ಬ್ಯಾಂಕುಗಳನ್ನು ಸ್ಪರ್ಶಿಸುತ್ತಾ ಹೋದರೆ,’ಯೇ ಅಷ್ಟು ಸುಲಭವಾಗಿ ಭರತ್ ಬೊಮ್ಮಾಯಿ ಗೆಲ್ಲಲು ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿ ಬರುತ್ತವೆ. ಅದರ ಪ್ರಕಾರ,ಈ ಸಲ ಕಾಂಗ್ರೆಸ್ ಪಕ್ಷ ತಮ್ಮವರಿಗೆ ಟಿಕೆಟ್ ಕೊಡದೆ ಇರುವುದರಿಂದ ಪಂಚಮಸಾಲಿ ಸಮುದಾಯಕ್ಕೆ ಅಸಮಾಧಾನವಾಗಿದೆ ಎಂಬುದೇನೋ ನಿಜ.ಆದರೆ ಇದೊಂದೇ ಕಾರಣಕ್ಕೆ ಪಂಚಮಸಾಲಿ ಮತದಾರರು ಭರತ್ ಬೊಮ್ಮಾಯಿ ಜತೆ ನಿಲ್ಲುತ್ತಾರೆ ಅಂತಲ್ಲ.ಕಾರಣ? ತಮ್ಮ ಸಮುದಾಯದವರೊಬ್ಬರು ಶಾಸಕರಾಗಿ ದಶಕಗಳೇ ಕಳೆದಿವೆ. ಹೀಗಿರುವಾಗ ಈ ಸಲ ಬೊಮ್ಮಾಯಿ ಕುಟುಂಬದ ಕುಡಿಯ ಜತೆ ನಿಂತರೆ ಮುಂದೆ ಇನ್ನಷ್ಟು ಕಾಲ ಪಂಚಮಸಾಲಿಗಳಿಗೆ ಅನ್ಯಾಯವಾಗುವುದು ಗ್ಯಾರಂಟಿ. ಹೀಗಾಗಿ ಇಂತಹ ಅಪಾಯ ತಪ್ಪಬೇಕು ಎಂದರೆ ಈ ಸಲ ಕಾಂಗ್ರೆಸ್ ಜತೆ ನಿಂತು ಭರತ್ ಬೊಮ್ಮಾಯಿ ಅವರನ್ನು ಸೋಲಿಸಬೇಕು ಎಂಬ ಭಾವನೆ ಪಂಚಮಸಾಲಿ ಸಮುದಾಯದಲ್ಲಿದೆ.
Read also : Political analysis | ಕುಮಾರಣ್ಣ ಒಪ್ಪಿದ್ರೂ ಯೋಗಿ ಒಪ್ತಿಲ್ಲ
ಇನ್ನು ಕ್ಷೇತ್ರದಲ್ಲಿರುವ ಸಾದ ಲಿಂಗಾಯತರಲ್ಲೂ ಬೊಮ್ಮಾಯಿ ಪಾಲಿಟಿಕ್ಸ್ ಬಗ್ಗೆ ಅಸಮಾಧಾನವಿದೆ.ಯಾಕೆಂದರೆ ಇತ್ತೀಚಿನ ವರ್ಷಗಳಲ್ಲಿ ಸಾದ ಲಿಂಗಾಯತರಿಗೆ ಬಸವರಾಜ ಬೊಮ್ಮಾಯಿ ಅವರಿಂದಾದ ಅನುಕೂಲ ಅಷ್ಟಕ್ಕಷ್ಟೇ.’ಯೇ ಬಿಡ್ರೀ. ನಾವು ಅವರ ಮನೆ ಹತ್ರಾನೇ ಹೋಗದಿಲ್ಲ. ಕ್ಷೇತ್ರದಲ್ಲಿದ ಕಂಟ್ರಾಕ್ಟು ಕೆಲಸಗಳಿಂದ ಹಿಡಿದು ಯಾವ ಕೆಲಸವೇ ಇದ್ದರೂ ಅವರು ನಮಗೆ ಪ್ರಾಮಿನೆನ್ಸು ಕೊಡುವುದಿಲ್ಲ.ಹೀಗಿರುವಾಗ ನಾವೇಕೆ ಅವರ ಜತೆ ಹೋಗಬೇಕು?’ಎಂಬ ಮಾತು ಈ ಕ್ಯಾಂಪಿನಲ್ಲಿ ಕೇಳುತ್ತದೆ.
ಅರ್ಥಾತ್,ಈವರೆಗೂ ಬೊಮ್ಮಾಯಿ ಅವರ ಕೈ ಹಿಡಿಯುತ್ತಿದ್ದ ಲಿಂಗಾಯತ ಮತ ಬ್ಯಾಂಕ್ ಈ ಸಲ ಅಷ್ಟು ಸಾಲಿಡ್ಡಾಗಿ ಭರತ್ ಬೊಮ್ಮಾಯಿ ಜತೆ ನಿಲ್ಲುವುದಿಲ್ಲ. ಇದೇ ರೀತಿ ಮುಸ್ಲಿಂ,ಕುರುಬ ಮತ ಬ್ಯಾಂಕಿನ ಮೇಲೆ ಪ್ರಭಾವ ಬೀರಿ ಹತ್ತು,ಹನ್ನೆರಡು ಪರ್ಸೆಂಟಿನಷ್ಟು ಮತ ಕೀಳುತ್ತಿದ್ದ ಬೊಮ್ಮಾಯಿಗೆ ಈ ಬಾರಿ ನಿರಾಸೆ ಕಾದಿದೆ.ಕಾರಣ? ಈ ಮತ ಬ್ಯಾಂಕಿನ ಮೇಲೆ ಸಿಎಂ ಸಿದ್ದರಾಮಯ್ಯ ಅವರಿಗಿರುವ ಪ್ರಭಾವ ಕೈ ಅಭ್ಯರ್ಥಿಗೆ ಪ್ಲಸ್ ಆಗಿ, ಬಿಜೆಪಿ ಅಭ್ಯರ್ಥಿಗೆ ಮೈನಸ್ ಆಗಲಿದೆ ಎಂಬುದು ಖುದ್ದು ಕಾಂಗ್ರೆಸ್ಸಿಗರ ವಾದ. ಆ ದೃಷ್ಟಿಯಿಂದ ನೋಡಿದರೆ ಭರತ್ ಬೊಮ್ಮಾಯಿ ಗೆಲುವು ಕಷ್ಟ ಅನ್ನಿಸುವುದು ಸಹಜ.
ಮ್ಯಾಜಿಕ್ ಮಾಡಲಿದ್ದಾರೆ ಬಸಣ್ಣ (Political analysis)
ಹೀಗೆ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರ ಮೈನಸ್ಸು,ಕಾಂಗ್ರೆಸ್ ಅಭ್ಯರ್ಥಿ ಪಠಾಣ್ ಅವರಿಗಿರುವ ಪ್ಲಸ್ ಪಾಯಿಂಟುಗಳ ಬಗ್ಗೆ ಏನೇ ಮಾತುಗಳಿರಲಿ, ಆದರೆ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ತೋರಿಸಲಿರುವ ಮ್ಯಾಜಿಕ್ಕಿನ ಬಗ್ಗೆ ಹಲವರಿಗೆ ಕುತೂಹಲವಿದೆ.
ಬೊಮ್ಮಾಯಿ ಮ್ಯಾಜಿಕ್ಕಿನ ಬಗ್ಗೆ ಹೇಳುವವರು:ಭರತ್ ಬೊಮ್ಮಾಯಿ ಗೆಲ್ಲುವುದು ನಿಶ್ಚಿತ ಎನ್ನುತ್ತಾರೆ. ಅವರ ಪ್ರಕಾರ, ಕ್ಷೇತ್ರದ ಪಂಚಮಸಾಲಿ ಮತ ಬ್ಯಾಂಕು ಭರತ್ ಬೊಮ್ಮಾಯಿ ಜತೆ ನಿಲ್ಲುವುದು ಶತ:ಸ್ಸಿದ್ದ. ಕಾರಣ? ಕ್ಷೇತ್ರದಲ್ಲಿ ನಡೆಯುವ ಬಹುತೇಕ ಕಾಮಗಾರಿಗಳ ಕಂಟ್ರಾಕ್ಟುಗಳಲ್ಲಿ ಪಂಚಮಸಾಲಿಗಳಿಗೆ ಹೆಚ್ಚು ಆದ್ಯತೆ ಸಿಗುತ್ತಿದೆ. ಇದೇ ರೀತಿ ಆ ಸಮುದಾಯದ ಹೆಣ್ಣು ಮಗಳೊಬ್ಬರನ್ನು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಸ್ಥಾನದಲ್ಲಿ ಕೂರಿಸಿದವರು ಬೊಮ್ಮಾಯಿ.ಹೀಗೆ ನೋಡುತ್ತಾ ಹೋದರೆ ಪಂಚಮಸಾಲಿ ಸಮುದಾಯದ ಶಾಸಕರಿದ್ದರೆ ಆ ಕ್ಷೇತ್ರದ ಪಂಚಮಸಾಲಿಗಳಿಗೆ ಎಷ್ಟು ಅನುಕೂಲವಾಗುತ್ತಿತ್ತೋ? ಅದಕ್ಕಿಂತ ಹೆಚ್ಚಿನ ಅನುಕೂಲ ಬಸವರಾಜ ಬೊಮ್ಮಾಯಿ ಅವರಿಂದಾಗಿದೆ.
ಹೀಗಾಗಿ ಬೊಮ್ಮಾಯಿ ಆಳ್ವಿಕೆಯಲ್ಲಿ ಕ್ಷೇತ್ರದ ಪಂಚಮಸಾಲಿ ಲಿಂಗಾಯತರಿಗೆ ಹೆಚ್ಚು ಅನುಕೂಲವಾಗಿದೆ.ಇದೇ ರೀತಿ ತಮಗಿಂತ ಪಂಚಮಸಾಲಿ ಸಮುದಾಯಕ್ಕೇ ಬೊಮ್ಮಾಯಿ ಆದ್ಯತೆ ಕೊಡುತ್ತಾರೆ ಎಂಬ ಭಾವನೆ ಸಾದ ಲಿಂಗಾಯತರಲ್ಲಿದ್ದರೂ,ಅದು ಭರತ್ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಜತೆ ನಿಲ್ಲುವ ಮಟ್ಟದಲ್ಲಿಲ್ಲ.
ಇದೇ ರೀತಿ ಬೊಮ್ಮಾಯಿ ಜನತಾ ಪರಿವಾರದ ಹಿನ್ನೆಲೆಯಿಂದ ಬಂದವರಾದ್ದರಿಂದ ಸೆಕ್ಯುಲರ್ ಫೇಸ್ ಕಟ್ಟನ್ನು ಉಳಿಸಿಕೊಂಡು ಬಂದಿದ್ದಾರೆ. ಹೀಗಾಗಿ ಮುಸ್ಲಿಂ ಮತ ಬ್ಯಾಂಕಿನಲ್ಲೂ ಪಾಲು ಪಡೆಯುವ ಚಾಕುಚಕ್ಯತೆ ಅವರಿಗಿದೆ. ಇದೇ ರೀತಿ ಕ್ಷೇತ್ರದಲ್ಲಿರುವ ವಾಲ್ಮೀಕಿ ಮತದಾರರು ಅವರ ಜತೆ ದೊಡ್ಡ ಮಟ್ಟದಲ್ಲಿ ನಿಂತಿದ್ದಾರೆ.ಹೀಗಾಗಿ ಅವರ ಈ ಮ್ಯಾಜಿಕ್ಕು ಭರತ್ ಬೊಮ್ಮಾಯಿ ಅವರಿಗೆ ಪ್ಲಸ್ ಆಗುವುದು ನಿಶ್ಚಿತ ಎಂಬುದು ಬಹುತೇಕರ ಮಾತು.
ಸಂಡೂರಿನಲ್ಲಿ ಸಂತೋಷ್ ಲಾಡ್ ಪವರ್ (Political analysis)
ಈ ಮಧ್ಯೆ ಉಪಚುನಾವಣೆ ನಡೆಯುವ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಅನ್ನಪೂರ್ಣ ಮುಂದಿದ್ದಾರೆ. ಕಣದಲ್ಲಿರುವ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರು ಕ್ಷೇತ್ರದ ಲಿಂಗಾಯತ,ವಾಲ್ಮೀಕಿ ಮತ ಬ್ಯಾಂಕನ್ನು ಕ್ರೋಢೀಕರಿಸಿ ಗೆಲ್ಲುತ್ತಾರೆ ಎಂಬ ಲೆಕ್ಕಾಚಾರ ಕಮಲ ಪಾಳಯದಲ್ಲಿದ್ದರೂ ಅದು ಸರಳವಾಗಿಲ್ಲ.
ಕಾರಣ? ಕ್ಷೇತ್ರದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹವಾ ಹೇಗಿದೆ ಎಂದರೆ ಅದರ ಬಿರುಸಿಗೆ ಬಿಜೆಪಿ ಸುಸ್ತೆದ್ದು ಹೋಗಿದೆ. ಕ್ಷೇತ್ರದಲ್ಲಿ ಲಿಂಗಾಯತ, ವಾಲ್ಮೀಕಿ, ಮುಸ್ಲಿಂ ಸೇರಿದಂತೆ ಎಲ್ಲ ವರ್ಗದ ಮತದಾರರಲ್ಲಿ ಲಾಡ್ ಪರ ಒಲವಿದ್ದು,ಈ ಅಂಶವೇ ಕಾಂಗ್ರೆಸ್ ಅಭ್ಯರ್ಥಿಯ ಪಾಲಿಗೆ ಪ್ಲಸ್ ಆಗಲಿದೆ.
ಈ ಮಧ್ಯೆ ಬಿಜೆಪಿ ಪಾಳಯದಲ್ಲೇ ಹೇಳಿಕೊಳ್ಳುವ ಒಗ್ಗಟ್ಟು ಕಾಣುತ್ತಿಲ್ಲ.ಮೊದಲನೆಯದಾಗಿ ಅಭ್ಯರ್ಥಿ ಬಂಗಾರು ಹನುಮಂತು ಹಿಂದೆ ಗಣಿಧಣಿ ಜನಾರ್ಧನ ರೆಡ್ಡಿ ನಿಂತಿರುವುದರಿಂದ ಮಾಜಿ ಸಚಿವ ಬಿ.ಶ್ರೀರಾಮುಲು ತಟಸ್ಥರಾಗಿದ್ದಾರೆ.ಇದೇ ರೀತಿ ಪಕ್ಷದ ಟಿಕೆಟ್ಟನ್ನು ದೇವೇಂದ್ರಪ್ಪ ಅವರಿಗೆ ನೀಡದಿರುವುದರಿಂದ ಮುನಿಸಿಕೊಂಡ ಕಾರ್ತಿಕ್ ಘೋರ್ಪಡೆ ದೂರ ಉಳಿದಿದ್ದಾರೆ.ಪರಿಣಾಮ? ಅವರ ಕಾರ್ಖಾನೆಯಲ್ಲಿ ಕೆಲಸ ಮಾಡುವ ಮೂವತ್ತು ಸಾವಿರದಷ್ಟು ಮತಗಳು ಏನಾಗಲಿವೆ? ಎಂಬ ಅತಂಕ ಬಿಜೆಪಿ ಪಾಳಯದಲ್ಲಿದೆ.
ಈ ಮಧ್ಯೆ ಸಂಡೂರಿನ ಮತದಾರರು ಸ್ಥಳೀಯರಿಗೆ ಪ್ರಾಮಿನೆನ್ಸು ಎಂಬ ಮನ:ಸ್ಥಿತಿಯಲ್ಲಿದ್ದು ಈ ಅಂಶವೇ ಬಂಗಾರು ಹನುಮಂತು ಅವರಿಗೆ ಕಿರಿಕಿರಿ ಮಾಡುವ ಲಕ್ಷಣಗಳಿವೆ. ಕಾರಣ? ಬಂಗಾರು ಹನುಮಂತು ವಿಜಯನಗರ ಜಿಲ್ಲೆಯವರು.
ಎಲ್ಲಕ್ಕಿಂತ ಮುಖ್ಯವಾಗಿ ಸಂಡೂರಿನ ಗಣಿ ಲಾಬಿಗೆ ಈ ಹಿಂದೆ ಬಿಜೆಪಿ ಅವಧಿಯಲ್ಲಾದ ಕಹಿ ನೆನಪು ಮಾಸಿಲ್ಲ.ಇನ್ನು ಸ್ಥಳೀಯ ಕಂಟ್ರಾಕ್ಟರುಗಳ ವಿಷಯದಲ್ಲಿ ಸಚಿವ ಸಂತೋಷ್ ಲಾಡ್ ಸದಾ ಕಾಲ ಮೃದುವಾಗಿದ್ದಾರೆ. ಈ ಮಧ್ಯೆ ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗಿದ್ದು,ಈ ಅಂಶ ಕಾಂಗ್ರೆಸ್ಸಿನ ಅಭ್ಯರ್ಥಿ ಅನ್ನಪೂರ್ಣ ಅವರಿಗೆ ಪ್ಲಸ್ ಆಗುವ ಲಕ್ಷಣಗಳು ಹೆಚ್ಚಿವೆ. ಇಷ್ಟೆಲ್ಲದರ ನಡುವೆ ಜಾತಿ ಸಮೀಕರಣವನ್ನು ಬಳಸಿಕೊಂಡು ಗೆಲ್ಲುವ ಲೆಕ್ಕಾಚಾರ ಬಿಜೆಪಿಯಲ್ಲಿದ್ದರೂ ಅದು ಸರಳ ಅನ್ನಿಸುತ್ತಿಲ್ಲ.
ವಿಜಯೇಂದ್ರ ಲೆಮನ್ ಟೆಕ್ನಿಕ್? (Political analysis)
ಈ ಮಧ್ಯೆ ಚನ್ನಪಟ್ಟಣದ ಕಣದಲ್ಲಿ ‘ಕೆ.ಆರ್.ಪೇಟೆ ಲೆಮನ್ ಟೆಕ್ನಿಕ್’ ಬಳಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಿರ್ಧರಿಸಿದ್ದಾರಂತೆ. ಇದಕ್ಕೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಲೇಟೆಸ್ಟ್ ರಿಪೋರ್ಟು ಕಾರಣ.ಅದರ ಪ್ರಕಾರ, ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ತಮ್ಮ ಪ್ರತಿಸ್ಪರ್ಧಿ ನಿಖಿಲ್ ಕುಮಾರಸ್ವಾಮಿ ಅವರಿಗಿಂತ ಮುಂದಿದ್ದಾರೆ. ಕ್ಷೇತ್ರದಲ್ಲಿರುವ ಗಣನೀಯ ಸಂಖ್ಯೆಯ ಒಕ್ಕಲಿಗ ಮತಗಳ ಜತೆ ಮುಸ್ಲಿಂ, ದಲಿತ, ಕುರುಬ ಮತಗಳನ್ನು ಕನ್ ಸಾಲಿಡೇಟ್ ಮಾಡಿದರೆ ಯೋಗೇಶ್ವರ್ ಗೆಲುವು ಸಾಧಿಸುವುದು ಸುಲಭ ಎಂಬುದು ಈಗಿನ ಲೆಕ್ಕಾಚಾರ.
ಈ ಹಿನ್ನೆಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಲು ಬಿಜೆಪಿ-ಜೆಡಿಎಸ್ ಮಿತ್ರಕೂಟದ ನಾಯಕರು ಬೇರೆ ಬೇರೆ ಟೆಕ್ನಿಕ್ಕುಗಳನ್ನು ಹುಡುಕುತ್ತಿದ್ದಾರೆ.ದೇವೇಗೌಡ-ಕುಮಾರಸ್ವಾಮಿ ಅವರ ಲೆಕ್ಕಾಚಾರ ಒಂದು ಬಗೆಯಲ್ಲಿದ್ದರೆ,ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತೊಂದು ಲೆಕ್ಕಾಚಾರದಲ್ಲಿದ್ದಾರೆ.ಅರ್ಥಾತ್,ಚುನಾವಣಾ ಕಣದಲ್ಲಿ ಕೆ.ಆರ್.ಪೇಟೆ ಲೆಮನ್ ಟೆಕ್ನಿಕ್ ಬಳಸಲು ಅವರು ನಿರ್ಧರಿಸಿದ್ದಾರೆ.
ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಕೆ.ಅರ್.ಪೇಟೆ ಕ್ಷೇತ್ರದ ಉಪಚುನಾವಣೆ ನಡೆಯಿತಲ್ಲ? ಅ ಸಂದರ್ಭದಲ್ಲಿ ಸಣ್ಣ-ಪುಟ್ಟ ಜಾತಿಗಳ ಮತಗಳನ್ನು ಕ್ರೋಢೀಕರಿಸಿ ಪಕ್ಷದ ಕ್ಯಾಂಡಿಡೇಟನ್ನು ಗೆಲ್ಲಿಸಿದ್ದೇ ವಿಜಯೇಂದ್ರ ಅವರ ಲೆಮನ್ ಟೆಕ್ನಿಕ್. ಈಗ ಚನ್ನಪಟ್ಟಣದ ಕಣದಲ್ಲಿ ಅದನ್ನು ಜಾರಿ ಮಾಡುವುದು ವಿಜಯೇಂದ್ರ ಥಿಂಕಿಂಗು.
ಆರ್.ಟಿ.ವಿಠ್ಠಲಮೂರ್ತಿ