ಕಳೆದ ವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರನ್ನು ರಾಜ್ಯ ಬಿಜೆಪಿಯ ನಾಯಕರೊಬ್ಬರು ಭೇಟಿಯಾಗಿದ್ದಾರೆ.ಈ ಸಂದರ್ಭದಲ್ಲಿ ಯತ್ನಾಳ್ ವರ್ಸಸ್ ವಿಜಯೇಂದ್ರ ನಡುವಣ ಬಿಕ್ಕಟ್ಟಿನ ಬಗ್ಗೆ ಅವರು ಪ್ರಾಕ್ಟಿಕಲ್ ವರದಿ ನೀಡಿದರಂತೆ.
ಅಂದ ಹಾಗೆ ರಾಜ್ಯ ಬಿಜೆಪಿಯ ಅಧ್ಯಕ್ಷರಾಗಿರುವ ವಿಜಯೇಂದ್ರ ಮತ್ತು ಯತ್ನಾಳ್ ಗ್ಯಾಂಗಿನ ಸಂಘರ್ಷದ ಬಗ್ಗೆ ನಡ್ಡಾ ಅವರಿಗೆ ಗೊತ್ತಿಲ್ಲ ಅಂತೇನಲ್ಲ. ಆದರೆ ಏನೇ ಮಾಡಿದರೂ ವಿಜಯೇಂದ್ರ ವರ್ಸಸ್ ಯತ್ನಾಳ್ ಗ್ಯಾಂಗಿನ ಮಧ್ಯೆ ಒಮ್ಮತ ಮೂಡದಿರುವ ಬಗ್ಗೆ ನಡ್ಡಾ ಅವರಿಗೆ ಕಿರಿಕಿರಿಯಾಗಿರುವುದು ನಿಜ.
ಹೀಗಾಗಿಯೇ ರಾಜ್ಯ ಬಿಜೆಪಿ ನಾಯಕರನ್ನು ಒಬ್ಬೊಬ್ಬರಾಗಿ ದಿಲ್ಲಿಗೆ ಬರುವಂತೆ ಆಹ್ವಾನಿಸುತ್ತಿರುವ ನಡ್ಡಾ ಅವರು,ರಾಜ್ಯ ಬಿಕೆಪಿಯ ಸಧ್ಯದ ಬಿಕ್ಕಟ್ಟಿಗೆ ಪರಿಹಾರ ಏನು?ಅಂತ ಕೇಳುತ್ತಿದ್ದಾರೆ. ಹೀಗೆ ನಡ್ಡಾ ಅವರು ನೀಡಿದ ಆಹ್ವಾನದ ಬೆನ್ನಲ್ಲೇ ಕಳೆದ ವಾರ ದಿಲ್ಲಿಗೆ ಹೋದ ಪ್ರಮುಖ ನಾಯಕರೊಬ್ಬರು ರಾಜ್ಯ ಬಿಜೆಪಿಯ ಪ್ರಸಕ್ತ ಪರಿಸ್ಥಿತಿಗೆ ಏನು ಕಾರಣ?ಅಂತ ಪಿನ್ ಟು ಪಿನ್ ವಿವರ ನೀಡಿದ್ದಾರೆ.
ಅವರು ನಡ್ಡಾಗೆ ವಿವರಿಸಿದ ಪ್ರಕಾರ,ರಾಜ್ಯ ಬಿಜೆಪಿಯ ಇವತ್ತಿನ ಸ್ಥಿತಿಗೆ ಭವಿಷ್ಯದ ಬಗೆಗಿರುವ ಆತಂಕವೇ ಮೂಲ ಕಾರಣ.
ಇವತ್ತು ಕರ್ನಾಟಕದಲ್ಲಿ ಪಕ್ಷ ಅಧಿಕಾರದಲ್ಲಿಲ್ಲ ಎಂಬುದೇನೋ ನಿಜ.ಆದರೆ ನಾಳೆ ಅಧಿಕಾರಕ್ಕೆ ಬಂದ ಮೇಲೆ ತಮ್ಮ ಜಾಗ ಯಾವುದು ಎಂಬ ಬಗ್ಗೆ ಬಹುತೇಕ ನಾಯಕರಲ್ಲಿ ಗೊಂದಲವಿದೆ.
ಅರ್ಥಾತ್, ಇವತ್ತು ಪಕ್ಷದ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ ಇದೇ ಹುದ್ದೆಯಲ್ಲಿ ಮುಂದುವರಿದರೆ ನಿಶ್ಚಿತವಾಗಿ ಮುಖ್ಯಮಂತ್ರಿ ಹುದ್ದೆಯ ಕ್ಯಾಂಡಿಡೇಟು. ಅದೇ ರೀತಿ ಪಕ್ಷ ಅಧಿಕಾರಕ್ಕೆ ಬಂದು ವಿಜಯೇಂದ್ರ ಮುಖ್ಯಮಂತ್ರಿಯಾದರೆ ಮುಂದಿನ ಇಪ್ಪತ್ತು-ಇಪ್ಪತ್ತೈದು ವರ್ಷಗಳ ಕಾಲ ರಾಜ್ಯ ಬಿಜೆಪಿಯ ನಾಯಕತ್ವ ಅವರ ಕೈಲಿರುತ್ತದೆ. ಯಾಕೆಂದರೆ ಒಂದು ಸಲ ಅವರು ಮುಖ್ಯಮಂತ್ರಿಯಾದರೆ ಪ್ರಬಲ ಲಿಂಗಾಯತ ಸಮುದಾಯ ಸಾಲಿಡ್ಡಾಗಿ ಅವರ ಬೆನ್ನಿಗೆ ನಿಲ್ಲುತ್ತದೆ.ಹೀಗೆ ಒಂದು ಸಲ ಅದು ವಿಜಯೇಂದ್ರ ಬೆನ್ನಿಗೆ ನಿಂತರೆ ಅವರನ್ನು ಅಲುಗಾಡಿಸುವುದು ಅಸಾಧ್ಯದ ಕೆಲಸ.
ಇದನ್ನು ಮತ್ತಷ್ಟು ಸ್ಪಷ್ಟವಾಗಿಸಿಕೊಳ್ಳಬೇಕು ಎಂದರೆ ಇಪ್ಪತ್ತು ವರ್ಷಗಳ ಹಿಂದಿನ ಯಡಿಯೂರಪ್ಪ ಎಪಿಸೋಡನ್ನು ಗಮನಿಸಬೇಕು. ಅಂದ ಹಾಗೆ ಇಪ್ಪತ್ತು ವರ್ಷಗಳ ಹಿಂದಿನವರೆಗೂ ಯಡಿಯೂರಪ್ಪ ಜಾತಿಯ ನಾಯಕರಾಗಿ ನೆಲೆಯಾಗಿರಲಿಲ್ಲ. ವಸ್ತುಸ್ಥಿತಿ ಎಂದರೆ 2004 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಜಾತಿ ರಸಾಯನ ಶಾಸ್ತ್ರವನ್ನು ಇಂಪ್ಲಿಮೆಂಟ್ ಮಾಡಿದವರು ಅನಂತಕುಮಾರ್. ಅವರು ದಲಿತ ವರ್ಗದ ಎಡಗೈ ಮತಗಳಿಗಾಗಿ ಗೋವಿಂದಕಾರಜೋಳ್, ಶಾಣಪ್ಪ ಅವರಂತಹ ನಾಯಕರನ್ನು ಸೆಳೆದುಕೊಂಡರು. ಹಿಂದುಳಿದ ವರ್ಗಗಳ ಮತ ಬ್ಯಾಂಕ್ ವಶಪಡಿಸಿಕೊಳ್ಳಲು ಬಂಗಾರಪ್ಪ ಅವರನ್ನು ಕಮಲ ಪಾಳಯಕ್ಕೆ ಸೆಳೆದರು.
ಒಂದು ಕಾಲದಲ್ಲಿ ಜಾತಿಗಳ ಬೆಂಬಲವಿಲ್ಲದೆ ತಿಣುಕಾಡುತ್ತಿದ್ದ ಬಿಜೆಪಿ ಸೈನ್ಯದ ಮುಂಚೂಣಿಯಲ್ಲಿ ಯಾವಾಗ ಜಾತಿ ಬ್ರಿಗೇಡ್ ಗಳು ನೆಲೆಯಾದವೋ?ಇದಾದ ನಂತರ ಬಿಜೆಪಿ ಗೆಲುವಿನತ್ತ ಮುನ್ನಡೆಯಿತು.2004 ರ ವಿಧಾನಸಭಾ ಚುನಾವಣೆಯಲ್ಲಿ ಎಪ್ಪತ್ತೊಂಬತ್ತು ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಅತ್ಯಂತ ದೊಡ್ಡ ಪಕ್ಷವಾಗಿ ಎಮರ್ಜ್ ಆಯಿತು.
ಆ ಸಂದರ್ಭದಲ್ಲಿ ಅಧಿಕಾರದ ಕನಸು ಬಿದ್ದಾಗ ಅನಂತಕುಮಾರ್ ಮತ್ತು ಯಡಿಯೂರಪ್ಪ ನಡುವೆ ಸಂಘರ್ಷ ಶುರುವಾಯಿತು.ಮತ್ತು ಈ ಸಂಘರ್ಷದ ಕಾಲದಲ್ಲಿ ಅನಂತಕುಮಾರ್ ಅವರನ್ನು ಹಣಿಯಲು ಯಡಿಯೂರಪ್ಪ ಜಾತಿಯ ಅಸ್ತ್ರವನ್ನು ಬಳಸಿಕೊಂಡರು.
ಯಶಸ್ವಿಯೂ ಆದರು. ಹೀಗೆ ಯಡಿಯೂರಪ್ಪ ಅವರು ಲಿಂಗಾಯತ ನಾಯಕರಾಗಿ ಎಮರ್ಜ್ ಆದ ಕಾಲಘಟ್ಟ ಹೇಗಿತ್ತೆಂದರೆ,ಅಷ್ಟೊತ್ತಿಗಾಗಲೇ ಲಿಂಗಾಯತ ಸಮುದಾಯವೂ ನಾಯಕತ್ವದ ಕೊರತೆಯಿಂದ ಬಳಲುತ್ತಿತ್ತು.ಹೀಗಾಗಿ ಅವತ್ತು ಅಧಿಕಾರದ ಸನಿಹಕ್ಕೆ ಬಂದ ಬಿಜೆಪಿಯ ಮುಂಚೂಣಿಯಲ್ಲಿ ನಿಂತ ಯಡಿಯೂರಪ್ಪ ಅದಕ್ಕೆ ಭರವಸೆಯ ನಾಯಕರಾಗಿ ಕಾಣಿಸಿದರು.
ಪರಿಣಾಮ? ರಾಮಕೃಷ್ಣ ಹೆಗಡೆ ಅವರ ನಂತರ ಸಮುದಾಯದ ನಾಯಕತ್ವವನ್ನು ಯಡಿಯೂರಪ್ಪ ಕೈಗೆ ಒಪ್ಪಿಸಲು ಲಿಂಗಾಯತರು ತಡ ಮಾಡಲಿಲ್ಲ. ಯಾವಾಗ ಇದು ಸಾಧ್ಯವಾಯಿತೋ? ಅಗ ಯಡಿಯೂರಪ್ಪ ಅವರ ವಿರುದ್ಧ ಅನಂತಕುಮಾರ್ ಅವರಿಗೆ ಶಕ್ತಿ ತುಂಬಲು ಬಿಜೆಪಿ ವರಿಷ್ಟರು ಹಿಂಜರಿದರು.’ಯಡಿಯೂರಪ್ಪ ಇಲ್ಲಿಗೆ-ಅನಂತಕುಮಾರ್ ದಿಲ್ಲಿಗೆ’ಎಂಬ ಸೂತ್ರ ರಚಿಸಿ ಕೈ ತೊಳೆದುಕೊಂಡರು.
ಹೀಗೆ ಒಂದು ಸಲ ಪ್ರಬಲ ಲಿಂಗಾಯತ ಸಮುದಾಯದ ನಾಯಕರಾಗಿ ಎಮರ್ಜ್ ಆದ ನಂತರ ಯಡಿಯೂರಪ್ಪ ಹಿಂತಿರುಗಿ ನೋಡಲಿಲ್ಲ. ಅಷ್ಟೇ ಅಲ್ಲ.ರಾಜ್ಯ ಬಿಜೆಪಿಯಲ್ಲಿ ಅವರಿಗೆ ಪರ್ಯಾಯವಾಗಿ ಮತ್ತೊಬ್ಬ ನಾಯಕ ಕೂಡಾ ಸೃಷ್ಟಿಯಾಗಲಿಲ್ಲ.
ಇವತ್ತು ಪಕ್ಷದ ಅಧ್ಯಕ್ಷರಾಗಿರುವ ವಿಜಯೇಂದ್ರ ಎಪಿಸೋಡನ್ನು ಈ ಹಿನ್ನೆಲೆಯಲ್ಲಿ ಗಮನಿಸಿದರೆ ಯತ್ನಾಳ್ ಅಂಡ್ ಗ್ಯಾಂಗಿನ ಧಾವಂತ ಅರ್ಥವಾಗುತ್ತದೆ.
ಅದಕ್ಕಿಂತ ಮುಖ್ಯವಾಗಿ ಅದರ ಹಿಂದಿರುವ ಶಕ್ತಿಗಳ ಧಾವಂತ ಅರ್ಥವಾಗುತ್ತದೆ. ಇದೇ ಕಾರಣಕ್ಕಾಗಿ ಯತ್ನಾಳ್ ಮತ್ತವರ ಹಿಂದೆ ಇರುವ ಶಕ್ತಿಗಳು ವಿಜಯೇಂದ್ರ ನೆಲೆಯಾಗುವುದನ್ನು ಇಷ್ಟಪಡುತ್ತಿಲ್ಲ ಅಂತ ಈ ನಾಯಕರು ನಡ್ಡಾ ಅವರಿಗೆ ವಿವರಿಸಿದ್ದಾರೆ. ಅವರು ನೀಡಿದ ವಿವರವನ್ನು ಕೇಳಿದ ನಡ್ಡಾ,ಹಾಗಿದ್ದರೆ ಇದು ಅಷ್ಟು ಸುಲಭವಾಗಿ ಸೆಟ್ಲ್ ಆಗುವ ಕೇಸಲ್ಲ ಅಂತ ಹೇಳಿದರಂತೆ.
ಯಡಿಯೂರಪ್ಪ ಕುದಿಯುತ್ತಿರುವುದು ಏಕೆ?(Political Analysis)
ಇನ್ನು ರಾಜ್ಯ ಬಿಜೆಪಿಯ ಬಣ ಸಂಘರ್ಷದ ವಿವರ ಪಡೆಯಲು ಪಕ್ಷದ ಉಸ್ತುವಾರಿ ರಾಧಾಮೋಹನದಾಸ್ ಅಗರ್ವಾಲ್ ಕರ್ನಾಟಕಕ್ಕೆ ಬಂದು ಹೋದರಲ್ಲ? ಇದಾದ ನಂತರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕುದಿಯುತ್ತಿದ್ದಾರೆ.
ಕಾರಣ? ಇಲ್ಲಿಗೆ ಬಂದು ಉಭಯ ಬಣಗಳ ನಾಯಕರ ಮಾತು ಆಲಿಸಿದ ಅಗರ್ವಾಲ್, ನಿಮ್ಮ ಹೋರಾಟವನ್ನು ನೀವು ಮುಂದುವರೆಸಿ. ಆದರೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ವಿರುದ್ದ ಹೇಳಿಕೆ ನೀಡಬೇಡಿ ಅಂತ ಯತ್ನಾಳ್ ಅವರಿಗೆ ಸೂಚಿಸಿದ್ದಾರೆ.
ಹೀಗೆ ರಾಜ್ಯ ಸರ್ಕಾರದ ವಿರುದ್ದ ನಿಮ್ಮ ಹೋರಾಟವನ್ನು ನೀವು ಮುಂದುವರೆಸಿ ಅಂತ ಯತ್ನಾಳ್ ಅವರಿಗೆ ಹೇಳಿದರೆ ಪಕ್ಷದ ಅಧ್ಯಕ್ಷ. ವಿಜಯೇಂದ್ರ ಅವರಿಗೆ ಏನು ಶಕ್ತಿ ನೀಡಿದಂತಾಯಿತು? ಎಂಬುದು ಯಡಿಯೂರಪ್ಪ ಅವರ ಸಿಟ್ಟು.
ಸಾಲದು ಎಂಬಂತೆ ಮೊನ್ನೆ ದಿಲ್ಲಿಗೆ ಹೋಗಿದ್ದ ಪ್ರತಿಪಕ್ಷ ನಾಯಕ ಅರ್.ಅಶೋಕ್ ಕೂಡಾ: ಪಕ್ಷವನ್ನು ಸಂಘಟಿಸಲು ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.ಅದರೆ ವಿಜಯೇಂದ್ರ ಬರೀ ಯುವಕರ ಪಡೆ ಕಟ್ಟುತ್ತಿದ್ದಾರೆ.ಇದರ ಬದಲು ಹಿರಿಯರಿಗೂ ಸಂಘಟನೆಯಲ್ಲಿ ಅವಕಾಶ ಕೊಟ್ಟರೆ ಪರಿಸ್ಥಿತಿಯನ್ನು ನಿಯಂತ್ರಿಸಬಹುದು ಅಂತ ನಡ್ಡಾ ಬಳಿ ಹೇಳಿದ್ದಾರಂತೆ.
ಯಾವಾಗ ಅಶೋಕ್ ಅವರು ವರಿಷ್ಟರ ಬಳಿ ಈ ಮಾತು ಹೇಳಿದ್ದಾರೆ ಎಂಬ ವಿವರ ದೊರೆಯಿತೋ? ಇದಾದ ನಂತರ ಅಶೋಕ್ ವಿಷಯದಲ್ಲಿ ಯಡಿಯೂರಪ್ಪ ಕೋಪಗೊಂಡಿದ್ದಾರೆ. ಆದರೆ ಹೀಗೆ ಕೋಪದಲ್ಲಿದ್ದರೂ ಮುಂದಿನ ದಾರಿ ಹೇಗೆ ಸಾಫ್ ಆಗುತ್ತದೆ ಅಂತ ಯಡಿಯೂರಪ್ಪ ಅವರಿಗೆ ಸ್ಪಷ್ಟವಾಗುತ್ತಿಲ್ಲ.ಯಾಕೆಂದರೆ ಇವತ್ತು ರಣಾಂಗಣದಲ್ಲಿರುವ ತಾವೇ ಆಗಲಿ, ಯತ್ನಾಳ್ ಅಂಡ್ ಗ್ಯಾಂಗೇ ಇರಲಿ. ಒಟ್ಟಿನಲ್ಲಿ ಇಬ್ಬರೂ ಭವಿಷ್ಯದ ನಾಯಕತ್ವಕ್ಕಾಗಿ ಬಡಿದಾಡುತ್ತಿರುವುದರಿಂದ ಸಮಸ್ಯೆಗೆ ಸುಗಮ ಪರಿಹಾರ ಕಷ್ಟ ಎಂಬುದು ಅವರಿಗೆ ಅರ್ಥವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅಧಿಕಾರ ಕೈಗೆ ಬಂದಾಗ ಬಣ ಬಡಿದಾಟಕ್ಜೆ ಬ್ರೇಕ್ ಹಾಕಬಹುದು.ಆದರೆ ಭವಿಷ್ಯದ ಅಧಿಕಾರಕ್ಕಾಗಿ ಪೈಪೋಟಿ ನಡೆದಾಗ ಇದು ಕಷ್ಟ ಎಂಬುದು ಅವರಿಗೂ ಗೊತ್ತು.
ಸೋಮಣ್ಣ ಹೆಸರು ರೇಸಿಗೆ ಬಂದಿದೆ (Political Analysis)
ಈ ಮಧ್ಯೆ ವಿಜಯೇಂದ್ರ ಅವರ ವಿರುದ್ದ ಹೋರಾಡುತ್ತಿರುವ ಯತ್ನಾಳ್ ಅಂಡ್ ಗ್ಯಾಂಗು ಅಧ್ಯಕ್ಷ ಪಟ್ಟಕ್ಕೆ ಹಲವರ ಹೆಸರುಗಳನ್ನು ಮುಂದೆ ಮಾಡುತ್ತಿದೆ. ಈ ಪೈಕಿ ಮೊದಲ ಹೆಸರು ಶೋಭಾ ಕರಂದ್ಲಾಜೆ ಅವರದು.ಕೇಂದ್ರ ಸಚಿವರಾಗಿರುವ ಶೋಭಾ ಕರಂದ್ಲಾಜೆ ಅಧ್ಯಕ್ಷರಾದರೆ ಎಲ್ಲ ಬಣಗಳು ಒಮ್ಮತದಿಂದ ಮುಂದೆ ಹೋಗಬಹುದು ಎಂಬುದು ಈ ಬಣದ ಲೆಕ್ಕಾಚಾರ.
ಇನ್ನು ಎರಡನೆಯ ಹೆಸರು ಕೇಂದ್ರ ಸಚಿವ ವಿ.ಸೋಮಣ್ಣ ಅವರದು.ಸೋಮಣ್ಣ ಅವರು ಕೇಂದ್ರ ಸಚಿವರಾಗಿದ್ದುಕೊಂಡೇ ರಾಜ್ಯ ಬಿಜೆಪಿಯ ಅಧ್ಯಕ್ಷರಾದರೆ ಒಳ್ಳೆಯದು ಎಂಬುದು ಭಿನ್ನರ ಲೆಕ್ಕಾಚಾರ. ಈ ಮಧ್ಯೆ ಅರವಿಂದ ಬೆಲ್ಲದ್ ಅವರ ಹೆಸರನ್ನೂ ಯತ್ನಾಳ್ ಗ್ಯಾಂಗು ಪರಿಗಣಿಸಿದ್ದು,ಇವರ್ಯಾರೂ ಪಟ್ಟದ ಕುದುರೆಯಾಗಲು ಅಣಿಯಾಗದಿದ್ದರೆ ನಾನು ರೆಡಿ ಅಂತ ಯತ್ನಾಳ್ ಹೇಳಿದ್ದಾರಂತೆ. ಹೀಗೆ ಅಧ್ಯಕ್ಷ ಪಟ್ಟಕ್ಕೆ ಯತ್ನಾಳ್ ಗ್ಯಾಂಗು ಪರಿಗಣಿಸುತ್ತಿರುವ ಎಲ್ಲ ಹೆಸರುಗಳು ಸಂಘಪರಿವಾರದ ನಾಯಕರೊಬ್ಬರ ಅಪೇಕ್ಷೆಯಂತೆ ಕೇಳಿ ಬರುತ್ತಿವೆ ಎಂಬುದು ಬಿಜೆಪಿ ಮೂಲಗಳ ಮಾತು
ಬಿಜೆಪಿ ವರಿಷ್ಟರಿಗೆ ಡಿಕೆಶಿ ಸಂದೇಶ (Political Analysis)
ಈ ಮಧ್ಯೆ ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಬಂದ ನಂತರ ಬಿಜೆಪಿ ಪಾಳಯ ಡಿಸಿಎಂ ಡಿಕೆಶಿ ಕಡೆ ನೋಡುತ್ತಿದೆ. ಅಂದ ಹಾಗೆ ಡಿಕೆಶಿ ಹಟ ಹಿಡಿದಿದ್ದರೆ ಚನ್ನಪಟ್ಟಣ ಕ್ಷೇತ್ರದಲ್ಲಿ ತಮ್ಮ ಸಹೋದರ ಡಿ.ಕೆ.ಸುರೇಶ್ ಅವರಿಗೆ ಟಿಕೆಟ್ ಕೊಡಿಸಬಹುದಿತ್ತು. ಆದರೆ ಅವರು ಯಾವುದೇ ವ್ಯಾಮೋಹಕ್ಕೆ ಬಲಿ ಆಗದೆ ಸಿ.ಪಿ.ಯೋಗೇಶ್ವರ್ ಅವರನ್ನು ಬಿಜೆಪಿಯಿಂದ ಸೆಳೆತಂದರು.ಅಷ್ಟೇ ಅಲ್ಲ.ಅವರನ್ನು ಗೆಲ್ಲಿಸುವಲ್ಲಿ ಸಫಲರೂ ಆದರು.
ಆದರೆ ಹೀಗೆ ಗೆಲುವನ್ನೇ ಮಾನದಂಡವಾಗಿಟ್ಟು ಡಿಕೆಶಿ ಕೆಲಸ ಮಾಡಿದ ಹಾಗೆ ಮೈತ್ರಿಕೂಟದ ನಾಯಕರು ಕೆಲಸ ಮಾಡಿದ್ದರೆ ಆಟವೇ ಬೇರೆಯಾಗುತ್ತಿತ್ತು.ಆದರೆ ಈ ವಿಷಯದಲ್ಲಿ ಒಟ್ಟಾರೆ ಮೈತ್ರಿಕೂಟವೇ ವಿಫಲವಾಯಿತು. ಉದಾಹರಣೆಗೆ ಶಿಗ್ಗಾಂವಿಯನ್ನೇ ತೆಗೆದುಕೊಳ್ಳಿ ಲೋಕಸಭೆ ಚುನಾವಣೆಯಲ್ಲಿ ತಾವು ಗೆದ್ದ ನಂತರ ಬಸವರಾಜ ಬೊಮ್ಮಾಯಿ ಅವರು ಒಬ್ಬ ಪಂಚಮಸಾಲಿ ಲಿಂಗಾಯತ ಅಭ್ಯರ್ಥಿಯನ್ನು ಹುಡುಕುವ ಕೆಲಸ ಮಾಡಬೇಕಿತ್ತು. ಅದರೆ ಅವರು ಪುತ್ರ ವ್ಯಾಮೋಹಕ್ಕೆ ತುತ್ತಾದರು.
ಪರಿಣಾಮ?ಕ್ಷೇತ್ರದ ಲಿಂಗಾಯತ ಮತಗಳು ಚೆಲ್ಲಾಪಿಲ್ಲಿಯಾಗಿ ಬೊಮ್ಮಾಯಿ ಪುತ್ರ ಭರತ್ ಸೋಲು ಅನುಭವಿಸುವಂತಾಯಿತು. ಇದೇ ರೀತಿ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ದೇವೇಂದ್ರಪ್ಪ ಅವರಿಗೆ ಟಿಕೆಟ್ ಕೊಡಬೇಕು ಅಂತ ಬಹುತೇಕ ಸ್ಥಳೀಯ ನಾಯಕರು ಹೇಳಿದರು.ಆದರೆ ಈ ಕ್ಷೇತ್ರದಲ್ಲಿ ಬಂಗಾರು ಹನುಮಂತು ಅವರಿಗೇ ಟಿಕೆಟ್ ನೀಡಬೇಕು ಅಂತ ವಿಜಯೇಂದ್ರ ಪಟ್ಟು ಹಿಡಿದು ಯಶಸ್ವಿಯಾದರು.
ಯಾವಾಗ ಅವರು ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯವನ್ನು ನಿರ್ಲಕ್ಷಿಸಿದರೋ? ಅವತ್ತೇ ಬಿಜೆಪಿಯ ಪರಿಸ್ಥಿತಿ ಹೊಯ್ದಾಡತೊಡಗಿತು. ಯಾಕೆಂದರೆ ದೇವೇಂದ್ರಪ್ಪ ಅವರಿಗೆ ಟಿಕೆಟ್ ಕೊಡದೇ ಹೋಗಿದ್ದರಿಂದ ಸ್ಥಳೀಯ ನಾಯಕರನೇಕರು ತಟಸ್ಥರಾಗಿ ಬಿಜೆಪಿ ಸೋಲುವಂತಾಯಿತು.
ಇನ್ನು ಚನ್ನಪಟ್ಟಣ ಕ್ಷೇತ್ರದ ವಿಷಯಕ್ಕೆ ಬಂದರೆ ಅಲ್ಲೂ ಇದೇ ಕತೆ. ಅಲ್ಲಿ ಬಿಜೆಪಿಯ ಸಿ.ಪಿ.ಯೋಗೇಶ್ವರ್ ಅವರು ಮೈತ್ರಿಕೂಟದ ಅಭ್ಯರ್ಥಿಯಾಗಿದ್ದರೆ ನಿರಾಯಾಸವಾಗಿ ಗೆಲ್ಲಬಹುದಿತ್ತು.ಆದರೆ ಅಂತಿಮ ಕ್ಷಣದವರೆಗೂ ಇದು ಸಾಧ್ಯವಾಗದೆ ಹೋಗಿದ್ದರಿಂದ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಕೈ ಹಿಡಿದರು. ಅವರು ಹಿಡಿದರು ಎಂಬುದಕ್ಕಿಂತ ಡಿಕೆ ಬ್ರದರ್ಸ್ ಅವರ ಕೈ ಹಿಡಿದು ಕಾಂಗ್ರೆಸ್ ಹಡಗಿಗೆ ಹತ್ತಿಸಿಕೊಂಡರು.
ಪರಿಣಾಮ? ಯೋಗೇಶ್ವರ್ ಗೆದ್ದು ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲುವಂತಾಯಿತು.
ಹೀಗಾಗಿ ಉಪಚುನಾವಣೆಯ ಸೋಲು ರಾಜ್ಯದ ಮೈತ್ರಿಪಕ್ಷಗಳಿಗೆ ಕಲಿಸಿದ ಪಾಠವೆಂದರೆ ಗೆಲುವಿಗೆ ನಿಸ್ವಾರ್ಥ ಹೋರಾಟ ಬೇಕು. ಡಿಕೆಶಿ ಅದನ್ನು ಸಾಧಿಸಿ ತೋರಿಸಿದರು ಎಂಬುದು ಕಮಲ ಪಾಳಯದ ಮಾತು. ಬಿಜೆಪಿ ಮೂಲಗಳ ಪ್ರಕಾರ, ಪಕ್ಷದ ವರಿಷ್ಟರಿಗೆ ಈ ಕುರಿತ ಮೆಸೇಜು ರವಾನೆಯಾಗಿದೆ. ಅರ್ಥಾತ್, ನಮ್ಮ ಗೆಲುವಿಗೆ ಡಿಕೆಶಿ ಮಾಡೆಲ್ ಹೋರಾಟದ ಅಗತ್ಯವಿದೆ ಎಂಬ ಮೆಸೇಜು ರವಾನೆಯಾಗಿದೆ.
ಆರ್.ಟಿ.ವಿಠ್ಠಲಮೂರ್ತಿ
Read also : Political analysis | ಯಡಿಯೂರಪ್ಪ ನೋವು ಷಾ ಕಿವಿಗೆ ಬಿತ್ತು