ಕಳೆದ ವಾರ ರಾಜ್ಯ ಕಾಂಗ್ರೆಸ್ ನ ನಾಯಕರೊಬ್ಬರು ಮುಂಬೈಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಅವರು ಕೇರಳದ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತಾಲ ಅವರನ್ನು ಭೇಟಿ ಮಾಡಿದ್ದಾರೆ. ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಅತ್ಯಾಪ್ತರಾಗಿರುವ ರಮೇಶ್ ಚೆನ್ನಿತಾಲ ಒಂದು ಸಂದೇಶವನ್ನು ನೀಡುವ ಸಲುವಾಗಿಯೇ ರಾಜ್ಯದ ಈ ನಾಯಕರನ್ನು ಕರೆಸಿದ್ದರಂತೆ.
ಮೂಡಾ ಪ್ರಕರಣದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳು ಅಂತಿಮವಾಗಿ ಸಿಎಂ ಸಿದ್ದರಾಮಯ್ಯ ಅವರ ಪದಚ್ಯುತಿಗೆ ಕಾರಣವಾಗಬಹುದು ಅಂತ ಹಲವು ನಾಯಕರು ಲೆಕ್ಕ ಹಾಕುತ್ತಿದ್ದಾರಲ್ಲ?ಈ ಹಿನ್ನೆಲೆಯಲ್ಲಿ ರಾಜ್ಯದ ಕಾಂಗ್ರೆಸ್ ನಾಯಕರೊಬ್ಬರಿಗೆ ಫೋನು ಮಾಡಿದ ರಮೇಶ್ ಚನ್ನಿತಾಲ:’ನೀವು ಮುಂಬೈಗೆ ಬನ್ನಿ.ಮಾತನಾಡೋಣ’ ಎಂದಿದ್ದಾರೆ.
ಇಂತಹ ಆಹ್ವಾನದ ಹಿನ್ನೆಲೆಯಲ್ಲಿ ಮುಂಬೈಗೆ ಹೋದ ಈ ನಾಯಕರು ಅಲ್ಲಿ ಹೋಟೆಲ್ ಒಂದರಲ್ಲಿ ರಮೇಶ್ ಚೆನ್ನಿತಾಲ ಅವರನ್ನು ಭೇಟಿ ಮಾಡಿದ್ದಾರೆ.ಈ ಭೇಟಿಯ ಸಂದರ್ಭದಲ್ಲಿ ನೇರವಾಗಿ ವಿಷಯಕ್ಕೆ ಬಂದ ಚೆನ್ನಿತಾಲ ಅವರು:’ಸೋನಿಯಾ ಮೇಡಂ ಮತ್ತು ರಾಹುಲ್ ಗಾಂಧಿಯವರು ತುರ್ತಾಗಿ ಒಂದು ಸಂದೇಶವನ್ನು ಮುಟ್ಟಿಸಲು ಹೇಳಿದರು ಎಂಬ ಕಾರಣಕ್ಕಾಗಿ ನಾನು ನಿಮ್ಮನ್ನು ಕರೆದೆ.ವಿಷಯ ಏನು ಅಂದ್ರೆ ಕರ್ನಾಟಕದಲ್ಲಿ ಯಾವ ಕಾರಣಕ್ಕೂ ನಾಯಕತ್ವ ಬದಲಾವಣೆ ಮಾಡುವ ಇರಾದೆ ವರಿಷ್ಟರಿಗಿಲ್ಲ’ ಅಂತ ನೇರವಾಗಿ ಹೇಳಿದ್ದಾರೆ.
ಅಷ್ಟೇ ಅಲ್ಲ,ಇದಕ್ಕೇನು ಕಾರಣ ಅಂತ ವಿವರಿಸತೊಡಗಿದ ಅವರು:’ಸಿದ್ದರಾಮಯ್ಯ ಅವರನ್ನು ಇಳಿಸುವ ಯಾವುದೇ ಪ್ರಯತ್ನ ಪಕ್ಷಕ್ಕೆ ದುಬಾರಿಯಾಗಲಿದೆ.ಅರ್ಥಾತ್,ಅವರನ್ನಿಳಿಸಿದರೆ ಸರ್ಕಾರ ಅಸ್ಥಿರವಾಗುತ್ತದೆ.ಇದು ಗೊತ್ತಿರುವುದರಿಂದಲೇ ಬಿಜೆಪಿ ನಾಯಕರು ಸಿದ್ದರಾಮಯ್ಯ ಅವರನ್ನು ಇಳಿಸಲು ಯತ್ನಿಸುತ್ತಿದ್ದಾರೆ.ಯಾಕೆಂದರೆ ಆಪರೇಷನ್ ಕಮಲದ ಮೂಲಕ ರಾಜ್ಯ ಸರ್ಕಾರವನ್ನು ಬೀಳಿಸಿ ಪರ್ಯಾಯ ಸರ್ಕಾರ ರಚಿಸುವುದು ಅಸಾಧ್ಯ ಅಂತ ಅವರಿಗೂ ಮನವರಿಕೆ ಆಗಿದೆ.
ಹೀಗಾಗಿ ನಿರ್ದಿಷ್ಟ ಸಂಖ್ಯೆಯ ಶಾಸಕರನ್ನು ಸೆಳೆದು ಸರ್ಕಾರವನ್ನು ಬೀಳಿಸಿದರೆ ಸಾಕು ಅಂತ ಅವರು ಕಾಯುತ್ತಿದ್ದಾರೆ.ಆದರೆ ಇದು ಕೂಡಾ ಸುಲಭವಲ್ಲ.ಆದರೆ ಒಂದು ವೇಳೆ ಸಿದ್ದರಾಮಯ್ಯ ಕೆಳಗಿಳಿದರೆ ನಿರ್ದಿಷ್ಟ ಸಂಖ್ಯೆಯ ಶಾಸಕರು ಪಕ್ಷ ತೊರೆಯುವ ಸನ್ನಿವೇಶ ಸೃಷ್ಟಿಯಾಗಬಹುದು.
ಯಾಕೆಂದರೆ ಸಿದ್ದರಾಮಯ್ಯ ಕೆಳಗಿಳಿದರೆ ಭವಿಷ್ಯದ ನಾಯಕತ್ವಕ್ಕಾಗಿ ಪೈಪೋಟಿ ನಡೆಯುತ್ತದೆ.ಈ ಪೈಪೋಟಿ ಅಂತಿಮವಾಗಿ ರಾಜ್ಯ ಕಾಂಗ್ರೆಸ್ ನಲ್ಲಿ ಒಡಕುಂಟು ಮಾಡುತ್ತದೆ.ಅಷ್ಟಾದರೆ ಸಾಕು ಸರ್ಕಾರ ಉರುಳುತ್ತದೆ.ಹೀಗಾಗಿ ಬಿಜೆಪಿಯವರಿಗೆ ಅವಕಾಶ ಕೊಡಬಾರದು ಎಂದರೆ ಸಿದ್ಧರಾಮಯ್ತ ಅವರ ನಾಯಕತ್ವದಲ್ಲೇ ಸರ್ಕಾರ ಮುಂದುವರಿಯಬೇಕು.ಹೀಗಾಗಿ ಮುಖ್ಯಮಂತ್ರಿಯಾಗಲು ಬಯಸುತ್ತಿರುವವರು ಈಗಿರುವ ಜಾಗದಲ್ಲೇ ಸಮಾಧಾನದಿಂದಿರಬೇಕು.ಇವತ್ತು ಎಲ್ಲಕ್ಕಿಂತ ಮುಖ್ಯವೆಂದರೆ ಸರ್ಕಾರ.ಅದು ಸುಭದ್ರವಾಗಿದ್ದರೆ ಪಕ್ಚ ಸೇಫ್.ಹೀಗಾಗಿ ಎಲ್ಲರೂ ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.ಯಾವ ಕಾರಣಕ್ಕೂ ಪರ್ಯಾಯ ನಾಯಕತ್ವದ ವಿಷಯವನ್ನು ತಮ್ಮ ತನಕ ಎಳೆದುಕೊಂಡು ಬರಬಾರದು ಎಂಬುದು ಮೇಡಂ ಮತ್ತು ರಾಹುಲ್ ಗಾಂಧಿ ಅವರ ಮೆಸೇಜು.ಇದನ್ನು ರಾಜ್ಯ ಕಾಂಗ್ರೆಸ್ ನ ಪ್ರಮುಖ ನಾಯಕರಿಗೆ ನೀವು ತಲುಪಿಸಬೇಕು’ ಅಂತ ಚೆನ್ನಿತಾಲ ಅವರು ಹೇಳಿದಾಗ ಈ ನಾಯಕರು ಸುಮ್ಮನೆ ತಲೆ ಅಲ್ಲಾಡಿಸಿದರಂತೆ.
ವರಿಷ್ಟರಿಗೆ ಬೊಮ್ಮಾಯಿ ಕಂಪ್ಲೇಂಟು (Political analysis)
ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗಳಿಸಿದ ಭರ್ಜರಿ ಗೆಲುವಿನಿಂದ ಬಿಜೆಪಿ ಮಿತ್ರಕೂಟಕ್ಕೆ ನಿರಾಶೆಯಾಗಿರುವುದು ಸಹಜ. ಆದರೆ ಶಿಗ್ಗಾಂವಿಯಲ್ಲಿ ಮಿತ್ರಕೂಟದ ಅಭ್ಯರ್ಥಿಯಾಗಿದ್ದ ತಮ್ಮ ಪುತ್ರ ಭರತ್ ಸೋತಿರುವ ರೀತಿಯಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕ್ರುದ್ದರಾಗಿದ್ದಾರೆ.
ಕಾರಣ ? ಕ್ಷೇತ್ರದಲ್ಲಿ ತಮ್ಮ ಪುತ್ರ ಸೋಲಲು ಕಾಂಗ್ರೆಸ್ ಕಾರಣವಲ್ಲ.ಬದಲಿಗೆ ತಮ್ಮ ಪಕ್ಷದ ಇಬ್ಬರು ನಾಯಕರೇ ಕಾರಣ ಎಂಬುದು ಬಸವರಾಜ ಬೊಮ್ಮಾಯಿ ಅವರ ನೋವು. ಈ ಇಬ್ಬರು ಸೇರಿ ಕ್ಷೇತ್ರದ ಲಿಂಗಾಯತ ಮತ ಬ್ಯಾಂಕನ್ನು ವಿಭಜಿಸಿದರು. ಅದೇ ಕಾಲಕ್ಕೆ ಕಾಂಗ್ರೆಸ್ ಅಹಿಂದ ಮತಗಳನ್ನು ಕನ್ ಸಾಲಿಡೇಟ್ ಮಾಡಿಕೊಳ್ಳುವುದರ ಜತೆ ಗಣನೀಯ ಪ್ರಮಾಣದ ಲಿಂಗಾಯತ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಯಿತು.
ಅಂದ ಹಾಗೆ ಕ್ಷೇತ್ರದಲ್ಲಿ ತಮ್ಮ ಪುತ್ರ ಗೆಲ್ಲಬಾರದು ಎಂದು ಬಯಸಿದ ಇಬ್ಬರು ನಾಯಕರು ಪಕ್ಷದಲ್ಲಿ ಪವರ್ ಫುಲ್ ಆಗಿರುವವರು.ನಾನು ಮುಖ್ಯಮಂತ್ರಿಯಾದ ನಂತರದ ದಿನಗಳಲ್ಲಿ ನನ್ನ ವಿರುದ್ದ ದ್ವೇಷ ಕಾರತೊಡಗಿದವರು.ಆದರೆ ತಮ್ಮ ದ್ವೇಷವನ್ನು ಮೀರಿ ಅವರು ಪಕ್ಷದ ಗೆಲುವಿಗಾಗಿ ಶ್ರಮಿಸಬೇಕಿತ್ತು.ಆದರೆ ಅವರಿಗೆ ಪಕ್ಷಕ್ಕಿಂತ ತಮ್ಮ ದ್ವೇಷವೇ ಹೆಚ್ಚಾಯಿತು ಅಂತ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ದೂರು ಸಲ್ಲಿಸಲು ಬೊಮ್ಮಾಯಿ ನಿರ್ಧರಿಸಿದ್ದಾರೆ. ಹೀಗೆ ಬೊಮ್ಮಾಯಿ ಅವರು ವರಿಷ್ಟರಿಗೆ ದೂರು ನೀಡುತ್ತಿದ್ದಾರೆ ಎಂದರೆ,ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಗೆ ನಡೆಯುತ್ತಿರುವ ಹೋರಾಟಕ್ಕೆ ಟಾನಿಕ್ ಸಿಕ್ಕಂತೆ ಎಂಬುದು ಹಲವರ ವಾದ.
ತಿಮ್ಮಾಪುರ್ ಖಾತೆ ಕಟ್ (Political analysis)
ಈ ಮಧ್ಯೆ ಸಚಿವ ಆರ್.ಬಿ.ತಿಮ್ಮಾಪೂರ್ ಅವರು ಅಬಕಾರಿ ಖಾತೆ ಕಳೆದುಕೊಳ್ಳುವುದು ನಿಶ್ಚಿತವಾಗಿದೆ. ವಸ್ತುಸ್ಥಿತಿ ಎಂದರೆ ತಿಮ್ಮಾಪೂರ್ ವಿರುದ್ದ ಮದ್ಯ ಮಾರಾಟಗಾರರು ಮುಗಿಬಿದ್ದು ಭ್ರಷ್ಟಾಚಾರದ ಆರೋಪ ಹೊರಿಸಿದರಲ್ಲ? ಇದಾದ ನಂತರ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ದ ಈ ಅಸ್ತ್ರವನ್ನು ಬಳಸಿಕೊಂಡರು.
ಈ ಬೆಳವಣಿಗೆಯಿಂದ ಕಿರಿಕಿರಿ ಮಾಡಿಕೊಂಡ ಕಾಂಗ್ರೆಸ್ ವರಿಷ್ಟರು, ಮದ್ಯ ಮಾರಾಟಗಾರರ ಆರೋಪದ ಹಿನ್ನೆಲೆಯಲ್ಲಿ ತಿಮ್ಮಾಪೂರ್ ಅವರನ್ನು ಸಂಪುಟದಿಂದ ಕೈಬಿಡಿ ಅಂತ ಸಿಎಂ ಸಿದ್ದರಾಮಯ್ಯ ಅವರಿಗೆ ಹೇಳಿದ್ದರಂತೆ. ಈ ಹಿನ್ನೆಲೆಯಲ್ಲಿ ನವೆಂಬರ್ 18 ರ ಸೋಮವಾರ ಮಂತ್ರಿಗಳ ಸಭೆ ಕರೆದ ಸಿದ್ದರಾಮಯ್ಯ: ವರಿಷ್ಟರು ಹೀಗೆ ಹೇಳುತ್ತಿದ್ದಾರೆ.ಏನು ಮಾಡೋದು? ಅಂತ ಕೇಳಿದ್ದಾರೆ.
ಆದರೆ ಸಭೆಯಲ್ಲಿದ್ದ ಮಂತ್ರಿಗಳು,’ ತಿಮ್ಮಾಪೂರ್ ಅವರನ್ನು ಮಂತ್ರಿಮಂಡಲದಿಂದ ತೆಗೆಯೋದು ಬೇಡ. ಹಾಗೇನಾದರೂ ಮಾಡಿದರೆ ಮದ್ಯ ಮಾರಾಟಗಾರರ ಆರೋಪವನ್ನು ನಾವೇ ಒಪ್ಪಿಕೊಂಡಂತಾಗುತ್ತದೆ.ಹೀಗಾಗಿ ಅಗತ್ಯವೆನಿಸಿದರೆ ಅವರ ಖಾತೆ ಬದಲಾವಣೆ ಮಾಡಿ’ಎಂದಿದ್ದಾರೆ.
ಆದರೆ ಖಾತೆ ಬದಲಾವಣೆ ಯಾವಾಗ?ಎಂಬ ಪ್ರಶ್ನೆ ಬಂದಾಗ,ಇದೂ ಸಧ್ಯಕ್ಕೆ ಬೇಡ.ಹೇಗಿದ್ದರೂ ಮುಂದಿನ ತಿಂಗಳು ವಿಧಾನಸಭಾ ಅಧಿವೇಶನ ನಡೆಯುತ್ತದಲ್ಲ?ಅದು ಮುಗಿಯಲಿ.ನಂತರ ಕೆಲವರ ಖಾತೆಗಳಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡುವ ಹೆಸರಿನಲ್ಲಿ ತಿಮ್ಮಾಪೂರ್ ಅವರ ಖಾತೆಯನ್ನು ಬದಲಿಸಿದರೆ ಆಯಿತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.ಮೂಲಗಳ ಪ್ರಕಾರ ತಮ್ಮ ಸಹೋದ್ಯೋಗಿಗಳ ಈ ಅಭಿಪ್ರಾಯಕ್ಕೆ ಸಿದ್ಧರಾಮಯ್ಯ ಯಸ್ ಅಂದಿದ್ದಾರೆ.
ಅಶೋಕ್- ಕೃಷ್ಣಪ್ಪ ಲೇಟೆಸ್ಟ್ ವಾರ್ (Political analysis)
ಅಂದ ಹಾಗೆ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ವಿರುದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಎಂ.ಕೃಷ್ಣಪ್ಪ ಮುನಿಸಿಕೊಂಡ ಸುದ್ದಿ ಈಗ ಸುನಾಮಿಯಂತೆ ಹಬ್ಬುತ್ತಿದೆ. ಒಂದು ಕಾಲದಲ್ಲಿ ಗಳಸ್ಯ ಕಂಠಸ್ಯರಾಗಿದ್ದ ಅಶೋಕ್ ಮತ್ತು ಕೃಷ್ಣಪ್ಪ ಯಾವ ಕಾರಣಕ್ಕಾಗಿ ದೂರವಾಗಿದ್ದಾರೋ ಗೊತ್ತಿಲ್ಲ.ಆದರೆ ಇತ್ತೀಚಿನ ದಿನಗಳಲ್ಲಿ ಇಬ್ಬರೂ ಹಾವು ಮುಂಗುಸಿಯಂತಾಗಿರುವುದು ಮಾತ್ರ ನಿಜ. ಇದರ ಮುಂದುವರಿದ ಭಾಗವಾಗಿ ಮೊನ್ನೆ ಕೃಷ್ಣಪ್ಪ ಅವರು ಬಹಿರಂಗವಾಗಿಯೇ ಅಶೋಕ್ ಅವರಿಗೆ ಸವಾಲೆಸೆದಿದ್ದಾರಂತೆ.
ಹೀಗೆ ಕೃಷ್ಣಪ್ಪ ಸವಾಲೆಸೆಯಲು ಅವರ ಆಪ್ತರು ತಲುಪಿಸಿದ ಮೆಸೇಜು ಕಾರಣ.ಅದರ ಪ್ರಕಾರ ಅಶೋಕ್ ಅವರು ತಮ್ಮ ಅಪ್ತರ ಬಳಿ ಮಾತನಾಡುತ್ತಾ:ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ತುಂಬ ಹಾರಾಡುತ್ತಿದ್ದ ಬಿಜೆಪಿಯ ಇಬ್ಬರು ನಾಯಕರಿಗೆ ಟಿಕೆಟ್ ತಪ್ಪಿಸಿದ್ದೇನೆ.ಮುಂದಿನ ಸಲ ಈ ಕೃಷ್ಷಪ್ಪನವರಿಗೂ ಟಿಕೆಟ್ ತಪ್ಪಿಸಿ ಸೈಡ್ ಲೈನ್ ಮಾಡುತ್ತೇನೆ ಎಂದಿದ್ದರಂತೆ. ಯಾವಾಗ ಅಶೋಕ್ ಇಂತಹ ಮಾತನಾಡಿದ್ದಾರೆ ಅಂತ ತಮ್ಮ ಆಪ್ತರು ಬಂದು ಹೇಳಿದರೋ?ಇದಾದ ನಂತರ ಕೃಷ್ಣಪ್ಪ ಧಗ್ ಅಂತ ಉರಿದಿದ್ದಾರೆ.ಅಷ್ಟೇ ಅಲ್ಲ.ಮೊನ್ನೆ ಅಶೋಕ್ ಅವರಿದ್ದ ಜಾಗಕ್ಕೇ ಹೋಗಿ ಗುಡುಗಿದ್ದಾರೆ. ‘ನೀವೇನು ನನಗೆ ಟಿಕೆಟ್ ತಪ್ಪಿಸೋದು?ಮುಂದಿನ ಚುನಾವಣೆಯ ಹೊತ್ತಲ್ಲಿ ನಾನೇ ನಿಮ್ಮ ಕ್ಷೇತ್ರಕ್ಕೆ ನುಗ್ಗಿ ನನ್ನ ತಾಖತ್ತು ತೋರಿಸುತ್ತೇನೆ’ ಅಂತ ಅವರು ಸವಾಲೊಡ್ಡಿರುವ ರೀತಿ ಬಿಜೆಪಿ ಪಾಳಯದ ಕುತೂಹಲಕ್ಕೆ ಕಾರಣವಾಗಿದೆ.
ವಿಜಯೇಂದ್ರ ಅವರ ಸಮಸ್ಯೆ ಏನು? (Political analysis)
ಇನ್ನು ಪಕ್ಷದ ಭಿನ್ನಮತೀಯರನ್ನು ನಿಭಾಯಿಸುವ ವಿಷಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪಕ್ವತೆ ತೋರಿಸುತ್ತಿಲ್ಲ ಅಂತ ಖುದ್ದು ಯಡಿಯೂರಪ್ಪ ಆಪ್ತರೇ ಹೇಳತೊಡಗಿದ್ದಾರೆ. ಮೊನ್ನೆ ಯತ್ನಾಳ್ ಅಂಡ್ ಗ್ಯಾಂಗಿನ ವಿರುದ್ದ ವರಿಷ್ಟರಿಗೆ ದೂರು ನೀಡಲು ವಿಜಯೇಂದ್ರ ದಿಲ್ಲಿಗೆ ಹೋಗಿ ಬಂದರಲ್ಲ?ಇದಾದ ನಂತರ ಯಡಿಯೂರಪ್ಪ ಅವರ ಆಪ್ತರೇ ವಿಜಯೇಂದ್ರ ವಿಷಯದಲ್ಲಿ ಮುಖ ಗಂಟು ಹಾಕಿಕೊಳ್ಳುತ್ತಿದ್ದಾರೆ.
ಅಲ್ರೀ,ಪಕ್ಷದ ರಾಜ್ಯಾಧ್ಯಕ್ಷರ ದಿಲ್ಲಿ ಭೇಟಿ ಹೇಗಿರಬೇಕು?ಇಲ್ಲಿ ವಿಮಾನ ಹತ್ತಿ ದಿಲ್ಲಿಯಲ್ಲಿಳಿದ ಕೂಡಲೇ ವರಿಷ್ಟರ ಮನೆಗೆ ಹೋಗುವಂತಿರಬೇಕು.ಅದು ಬಿಟ್ಟು ದಿನಗಟ್ಟಲೆ ಕಾಯುವ ಪರಿಸ್ಥಿತಿ ತಂದುಕೊಂಡು ಆಮೇಲೆ ಅತ್ತು ಕರೆದು ಔತಣ ಮಾಡಿಸಿಕೊಂಡರೆ ಏನು ಪ್ರಯೋಜನ?
ಎಲ್ಲಕ್ಕಿಂತ ಮುಖ್ಯವಾಗಿ ತಮಗೇಕೆ ಈ ಪರಿಸ್ಥಿತಿ ಬರುತ್ತಿದೆ ಅಂತ ವಿಜಯೇಂದ್ರ ಅವರಿಗೆ ಅರ್ಥವಾಗುತ್ತಿಲ್ಲ.ಒಂದು ವೇಳೆ ಅವರು ಕೋರ್ ಕಮಿಟಿಯ ಮುಂದೆ ಪ್ರತಿ ವಿಷಯವನ್ನಿಟ್ಟು ಚರ್ಚೆ ಮಾಡಿದ್ದರೆ,ತೀರ್ಮಾನ ತೆಗೆದುಕೊಂಡಿದ್ದರೆ ಅದರ ಆಟವೇ ಬೇರೆಯಾಗುತ್ತಿತ್ತು. ಯಾಕೆಂದರೆ ಪಕ್ಷದ ಕೋರ್ ಕಮಿಟಿ ತೀರ್ಮಾನದ ವಿರುದ್ದ ಯಾರೇ ಹೋದರೂ ಅವರನ್ನು ನಿಯಂತ್ರಿಸುವುದು ಸುಲಭವಾಗುತ್ತಿತ್ತು.ಯಾಕೆಂದರೆ ಇಂತಹ ಸಂದರ್ಭದಲ್ಲಿ ಇಡೀ ಕೋರ್ ಕಮಿಟಿ ವಿಜಯೇಂದ್ರ ಅವರ ಬೆನ್ನಿಗೆ ನಿಲ್ಲುತ್ತಿತ್ತು.
ಆದರೆ ಇಡೀ ಪಕ್ಚವನ್ನು ಯಂಗ್ ಬ್ರಿಗೇಡಿಯರುಗಳ ಮೂಲಕ ನಡೆಸಲು ಹೊರಟಿರುವ ವಿಜಯೇಂದ್ರ ದೊಡ್ಡ ತಪ್ಪು ಮಾಡುತ್ತಿದ್ದಾರೆ.ಎಲ್ಲಿಯವರೆಗೆ ಅವರು ಈ ತಪ್ಪು ಮುಂದುವರಿಸುತ್ತಾರೋ?ಅಲ್ಲಿಯವರೆಗೆ ಅವರು ಎಡವುತ್ತಲೇಇರುತ್ತಾರೆ ಎಂಬುದು ಯಡಿಯೂರಪ್ಪ ಆಪ್ತರನೇಕರ ಮಾತು.
ಲಾಸ್ಟ್ ಸಿಪ್ (Political analysis)
ಪಕ್ಷದ ಭಿನ್ನಮತೀಯರ ವಿರುದ್ದ ತಿರುಗಿ ಬಿದ್ದಿರುವ ಬಿಜೆಪಿ ನಿಷ್ಟರ ಪಡೆ ಈ ತಿಂಗಳ 29 ರಂದು ‘ಪಕ್ಷ ರಕ್ಷಣೆ’ ಯಾತ್ರೆ ಆರಂಭಿಸಲಿದೆ. ಮಾಜಿ ಸಚಿವರಾದ ಕಟ್ಟಾ ಸುಬ್ರಮಣ್ಯ ನಾಯ್ಡು,ರೇಣುಕಾಚಾರ್ಯ,ಬಿ.ಸಿ.ಪಾಟೀಲ್ ಸೇರಿದಂತೆ ಹಲ ಮಂದಿ ಪ್ರಮುಖರಿರುವ ಈ ಪಡೆ 29 ರಂದು ಮುಳಬಾಗಿಲಿನ ಕುರುಡುಮಲೈಗೆ ಭೇಟಿ ನೀಡಲಿದ್ದು ಅಲ್ಲಿಂದ ಮೈಸೂರು,ಮುರುಡೇಶ್ವರ,ದಾವಣಗೆರೆಗೆ ತೆರಳಲಿದೆ. ಹೀಗೆ ಹೋದಲ್ಲೆಲ್ಲ ಪಕ್ಷ ನಿಷ್ಟೆಯ ಅನಿವಾರ್ಯತೆಯನ್ನು ಒತ್ತಿ ಹೇಳಲಿರುವ ಪಡೆ ಪಕ್ಷಾಧ್ಯಕ್ಷ ವಿಜಯೇಂದ್ರ ಅವರ ಪರ,ಭಿನ್ನರ ವಿರುದ್ದ ಧ್ವನಿ ಎತ್ತಲಿದೆ.
Read also : Political analysis | ಜೆಡಿಎಸ್ ಸಾರಥಿಯಾಗಲು ನಿಖಿಲ್ ರೆಡಿ
ಆರ್.ಟಿ.ವಿಠ್ಠಲಮೂರ್ತಿ