Kannada News | Dinamaana.com | 29-07-2024
ಕಳೆದ ವಾರ ವಿಧಾನಸಭೆಯ ಆಡಳಿತ ಪಕ್ಷದ ಮೊಗಸಾಲೆಯಲ್ಲಿ ಇಬ್ಬರು ಶಾಸಕರು ಗಂಭೀರ ಚರ್ಚೆಯಲ್ಲಿ ಮುಳುಗಿದ್ದರು.ಸಿದ್ದು ಸರ್ಕಾರ ಅಸ್ಥಿರವಾಗಲಿದೆಯೇ ಎಂಬುದು ಈ ಚರ್ಚೆಯ ಕೇಂದ್ರ ಬಿಂದು. ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಶಾಸಕರು,’ಅಲ್ಲ ಸಾರ್,ಈ ವಾಲ್ಮೀಕಿ ಅಭಿವೃದ್ದಿ ನಿಗಮ (Valmiki Development Corporation) ದಲ್ಲಿ ನಡೆದ ಹಗರಣಕ್ಕೆ ಸಂಬಂಧಿಸಿದಂತೆ ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರಿಗೆ ಜಾರಿ ನಿರ್ದೇಶನಾಲಯ ನೋಟೀಸ್ ಕೊಡುತ್ತದೆ ಎಂಬ ಮಾತು ಕೇಳಿ ಬರುತ್ತಿದೆ.
ಒಂದು ವೇಳೆ ಇದು ನಿಜವಾದರೆ ಮುಂದಿನ ದಿನಗಳಲ್ಲಿ ಅದು ಸಿಎಂ ಸಿದ್ದರಾಮಯ್ಯ ಅವರನ್ನು ಸುತ್ತಿಕೊಳ್ಳುವುದಿಲ್ಲವೇ? ಅಂತ ಪ್ರಶ್ನಿಸಿದರು. ಅವರ ಪ್ರಶ್ನೆಗೆ ಉತ್ತರಿಸಿದ ಮತ್ತೊಬ್ಬ ಶಾಸಕರು: ನೋಡೋಣ ಸಾರ್, ಇದು ಎಲ್ಲಿಗೆ ತಲುಪುತ್ತದೆ ಅಂತ.ಹಾಗೇನಾದರೂ ಆದರೆ ಅದು ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Chief Minister Arvind Kejriwal) ಎಪಿಸೋಡಿನ ಪುನರಾವರ್ತನೆಯಾಗುತ್ತದೆ. ಆದರೆ, ಅಬ್ಕಾರಿ ಹಗರಣಕ್ಕೆ ಸಂಬಂಧಿಸಿದ ಕೇಜ್ರಿವಾಲ್ ಎಪಿಸೋಡಿನಂತೆ ಈ ಎಪಿಸೋಡು ಸಿಂಪಲ್ ಆಗಿಲ್ಲ ಎಂದರು.
ಆದರೆ, ಪಟ್ಟು ಬಿಡದ ಹಿರಿಯ ಶಾಸಕರು,’ವಾಲ್ಮೀಕಿ ಅಭಿವೃದ್ದಿ ನಿಗಮದಿಂದ ಆಕ್ರಮವಾಗಿ ವರ್ಗಾವಣೆಯಾದ ಹಣದಲ್ಲಿ ಒಂದು ಪಾಲು ತೆಲಂಗಾಣ (Telangana)ದ ಪಾರ್ಲಿಮೆಂಟ್ ಎಲೆಕ್ಷನ್ನಿಗೆ ಹೋಗಿದೆ ಅನ್ನುತ್ತಿದ್ದಾರೆ. ಹಾಗೇನಾದರೂ ಆದರೆ ಎಲೆಕ್ಷನ್ನಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಕರ್ನಾಟಕದ ಮತ್ತೊಬ್ಬ ನಾಯಕರಿಗೆ ಹಗರಣ ಸುತ್ತಿಕೊಳ್ಳುತ್ತದೆ.
ಈಗಿರುವ ಮತ್ತೊಂದು ಸುದ್ದಿ ಅಂದರೆ ಇ.ಡಿ.ವಶದಲ್ಲಿರುವ ಮಾಜಿ ಸಚಿವ ನಾಗೇಂದ್ರ ಇದ್ದಾರಲ್ಲ? ಇವರನ್ನು ಈ ಮುಂಚೆಯೇ ಭೇಟಿಯಾಗಿದ್ದ ಧಣಿ ಖ್ಯಾತಿಯ ಬಿಜೆಪಿ ಶಾಸಕರೊಬ್ಬರು: ನೀವು ಈ ಹಗರಣದಲ್ಲಿ ಫಿಟ್ ಆಗುವುದು ಗ್ಯಾರಂಟಿ. ಜೈಲಿಗೆ ಹೋಗುವುದೂ ಗ್ಯಾರಂಟಿ. ಆದರೆ ನೀವೇನೂ ಯೋಚಿಸಬೇಡಿ.ಹೀಗೆ ಹಣವನ್ನು ಆಕ್ರಮವಾಗಿ ವರ್ಗಾವಣೆ ಮಾಡಲು ಸರ್ಕಾರದ ಪ್ರಮುಖರು ಹೇಳಿದ್ದರು ಅಂತ ತನಿಖಾಧಿಕಾರಿಗಳ ಮುಂದೆ ಹೇಳಿಕೆ ಕೊಡಿ. ಮುಂದೆ ನೀವು ಜೈಲಿನಿಂದ ಹೊರಬರುವಂತೆ ನಾನು ನೋಡಿಕೊಳ್ಳುತ್ತೇನೆ. ಅದಾದ ಆರು ತಿಂಗಳಲ್ಲಿ ನಿಮ್ಮನ್ನು ಬಿಜೆಪಿಗೆ ಸೇರಿಸುತ್ತೇನೆ ಅಂತ ಪ್ರಾಮಿಸ್ಸು ಮಾಡಿದ್ದಾರಂತೆ ಎಂದರು.
ಅವರ ಮಾತಿಗೆ ನಕ್ಕ ಈ ಶಾಸಕರು: ನೋಡೋಣ. ಬರೀ ಈ ಎಪಿಸೋಡು ಅಂತಲ್ಲ, ಮೈಸೂರಿನ ಮೂಡಾ ಹಗರಣದಲ್ಲೂ ಸಿಎಂ ಹೆಸರಿಗೆ ಮಸಿ ಅಂಟಿಸಲು ಬಿಜೆಪಿ-ಜೆಡಿಎಸ್ ನಾಯಕರು ಹೊರಟಿದ್ದಾರೆ. ಮೈಸೂರು ಪಾದಯಾತ್ರೆ ಮಾಡ್ತೀವಿ. ಇನ್ನೊಂದು ಮಾಡ್ತೀವಿ ಅಂತ ಅವರೇನು ಮಾಡ್ತಿದ್ದಾರೋ? ಇದೆಲ್ಲ ಅವರಿಗೆ ಬೂಮ್ ರಾಂಗ್ ಆಗುತ್ತೆ.ಎಲ್ಲಕ್ಕಿಂತ ಮುಖ್ಯವಾಗಿ ಇಂತಹ ಎಪಿಸೋಡುಗಳ ಮೂಲಕ ಸರ್ಕಾರವನ್ನು ಬೀಳಿಸುತ್ತೇವೆ ಅಂತ ಅವರು ಅಂದ್ಕೊಂಡ್ರೆ ಅದು ಭ್ರಮೆ. ಯಾಕೆಂದರೆ ಸರ್ಕಾರವನ್ನು ಅಸ್ಥಿರಗೊಳಿಸಿ ಇವರೇನು ಪರ್ಯಾಯ ಸರ್ಕಾರ ರಚನೆ ಮಾಡ್ತಾರಾ? ಮೊದಲನೆಯದಾಗಿ ರಾಜ್ಯ ಬಿಜೆಪಿಯಲ್ಲೇ ಭಿನ್ನಮತ ಇದೆ.
ಹಿರಿಯ ನಾಯಕ ಯತ್ನಾಳ್ ಅವರು ಬಹಿರಂಗವಾಗಿ ಪಕ್ಷಾಧ್ಯಕ್ಷ ವಿಜಯೇಂದ್ರ ಅವರ ಮೇಲೆ ಧಾಳಿ ಮಾಡ್ತಿದ್ದಾರೆ.ಅವರು ಅಷ್ಟು ಮಾತಾಡಿದ್ತೂ ಬಿಜೆಪಿ ವರಿಷ್ಟರು ಕ್ರಮ ತಗೊಳ್ತಿಲ್ಲ. ಇದರರ್ಥ ಏನು? ಯಡಿಯೂರಪ್ಪ ವಿರೋಧಿ ಟೀಮು ಪವರ್ ಫುಲ್ಲಾಗಿದೆ ಅಂತಲ್ಲವೇ? ಹಾಗೆಯೇ ಇವತ್ತಲ್ಲ,ನಾಳೆ ವಿಜಯೇಂದ್ರ ಅವರನ್ನು ಕೆಳಗೆ ಇಳಿಸಲು ಅದು ಬಯಸುತ್ತಿದೆ ಅಂತ ತಾನೇ? ಹೀಗೆ ತನ್ನದೇ ಗೊಂದಲದಲ್ಲಿರುವ ಬಿಜೆಪಿ ಕರ್ನಾಟಕದಲ್ಲಿ ಪರ್ಯಾಯ ಸರ್ಕಾರ ರಚನೆ ಮಾಡಲು ಸಾಧ್ಯವಾ? ಹೋಗಲಿ, ಇವತ್ತು ಮೈತ್ರಿಕೂಟದ ಮುಂದೆ ಒಬ್ಬ ಸರ್ವಸಮ್ಮತ ಸಿಎಂ ಕ್ಯಾಂಡಿಡೇಟ್ ಇದ್ದಾರಾ?
ಇದೇ ರೀತಿ ಕೇಂದ್ರದಲ್ಲಿರುವ ಮೋದಿ ಸರ್ಕಾರ ಕೂಡಾ ಈಗ ಪವರ್ ಫುಲ್ ಅಲ್ಲ. ತನ್ನ ಉಳಿವಿಗಾಗಿ ಅದು ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಅವರನ್ನು ಓಲೈಸುವ ಸ್ಥಿತಿಯಲ್ಲಿದೆ.ಹೀಗಾಗಿ ಕರ್ನಾಟಕ ಸರ್ಕಾರವನ್ನು ಬೀಳಿಸುವ ಯತ್ನ ಅದಕ್ಕೆ ದುಬಾರಿಯಾಗುತ್ತದೆ. ಒಂದು ವೇಳೆ ಈ ಎಲ್ಲವನ್ನೂ ಮೀರಿ ಬಿಜೆಪಿ ಮೈತ್ತಿಕೂಟದ ನಾಯಕರು ಮುಂದುವರಿಯುತ್ತಾರೆ ಅಂದುಕೊಳ್ಳಿ.ಆಗ ಪರಿಣಾಮ ಬೇರೆಯಾಗಬಹುದು ಎಂದರು.
ಇದರಿಂದ ಕುತೂಹಲಗೊಂಡ ಹಿರಿಯ ಶಾಸಕರು,ಇನ್ನೇನಾಗಬಹುದು?ಎಂದು ಪ್ರಶ್ನಿಸಿದರು. ಆದರೆ, ಈಗ ಗಂಭೀರರಾದ ಮತ್ತೊಬ್ಬ ಶಾಸಕರು:’ಏನಾಗುತ್ತದೆ ಅಂತ ನನಗೂ ಸರಿಯಾಗಿ ಗೊತ್ತಿಲ್ಲ.ಅದು ಟಾಪ್ ಸೀಕ್ರೆಟ್. ಆದರೆ, ನಾನು ಗ್ರಹಿಸಿದ ಪ್ರಕಾರ ಬಿಜೆಪಿ ನಾಯಕರ ದೊಡ್ಡ ಹಗರಣವೊಂದು ಬಯಲಾಗುತ್ತದೆ.ಅದೂ ಇಲ್ಲಲ್ಲ. ದಿಲ್ಲಿ ಲೆವೆಲ್ಲಿನಲ್ಲಿ ಸ್ಪೋಟಿಸುತ್ತದೆ. ಅದರ ಹೊಡೆತಕ್ಕೆ ರಾಜ್ಯದ ನಾಯಕರು ಮಾತ್ರವಲ್ಲ.ಕೇಂದ್ರದ ಬಿಜೆಪಿ ನಾಯಕರೂ ಬೆಚ್ಚಿ ಬೀಳಲಿದ್ದಾರೆ ಅಂತ ಹೇಳಿ ಮೌನಕ್ಕೆ ಶರಣಾದರು.
ಕೆಪಿಸಿಸಿಗೆ ಶರಣ ಪ್ರಕಾಶ್ ಪಾಟೀಲ್? (Sharan Prakash Patil)
ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಿಂಗಾಯತ ನಾಯಕರೊಬ್ಬರನ್ನು ತರಲು ಕಾಂಗ್ರೆಸ್ ವರಿಷ್ಟರು ಚಿಂತನೆ ನಡೆಸಿದ್ದಾರೆ.ಕಾರಣ? ಪ್ರತಿಪಕ್ಷ ಬಿಜೆಪಿಯ ಮುಂಚೂಣಿಯಲ್ಲಿ ಲಿಂಗಾಯತ ಸಮುದಾಯದ ಬಿ.ವೈ.ವಿಜಯೇಂದ್ರ ಸೆಟ್ಲಾಗಿರುವುದರಿಂದ ಅದೇ ಸಮುದಾಯದ ನಾಯಕರೊಬ್ಬರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತರುವುದು ಅನಿವಾರ್ಯ ಎಂಬುದು ವರಿಷ್ಟರ ಯೋಚನೆ.
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಗಣನೀಯ ಪ್ರಮಾಣದ ಲಿಂಗಾಯತ ಮತಗಳು ಕೈ ವಶವಾಗಿದ್ದರೂ ಲೋಕಸಭಾ ಚುನಾವಣೆಯ ಹೊತ್ತಿಗೆ ಚಿತ್ರ ಬದಲಾಗಿದೆ.ಸರ್ವೆಗಳ ಪ್ರಕಾರ,ಲೋಕಸಭಾ ಚುನಾವಣೆಯಲ್ಲಿ ಚಲಾವಣೆಯಾದ ಲಿಂಗಾಯತ ಮತಗಳ ಪೈಕಿ ಶೇಕಡಾ ಎಪ್ಪತ್ತಾರರಷ್ಡು ಮತಗಳು ಬಿಜೆಪಿ ಮೈತ್ರಿಕೂಟಕ್ಕೆ ದಕ್ಕಿವೆ.
ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಲಿಂಗಾಯತ ನಾಯಕರನ್ನು ಕೆಪಿಸಿಸಿ ಅಧ್ಯಕ್ಷ ಪಟ್ಟದ ಮೇಲೆ ಕೂರಿಸಬೇಕು ಅಂತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರಂತೆ.ಯಾವಾಗ ಇಂತಹದೊಂದು ಪ್ರಪೋಸಲ್ಲು ಮಂಡನೆ ಅಯಿತೋ?ಇದಾದ ನಂತರ ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸಿನಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಮತ್ತು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಹೆಸರುಗಳು ಕಾಣಿಸಿಕೊಂಡಿದೆ.
ಈ ಪೈಕಿ ಈಶ್ವರ ಖಂಡ್ರೆ ಪಕ್ಷದ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿದವರು.ಲೋಕಸಭಾ ಚುನಾವಣೆಯಲ್ಲಿ ತಮ್ಮ ಪುತ್ರನನ್ನು ಗೆಲ್ಲಿಸಿಕೊಂಡು ಬಂದವರು.ಎಲ್ಲಕ್ಕಿಂತ ಮುಖ್ಯವಾಗಿ ವೀರಶೈವ-ಲಿಂಗಾಯತ ಪಾಳಯದಲ್ಲಿ ಅವರಿಗೊಂದು ಪವರ್ ಇದೆ.ಈ ಎಲ್ಲ ಕಾರಣಗಳಿಂದಾಗಿ ಅವರ ಹೆಸರು ಫ್ರಂಟ್ ಲೈನಿಗೆ ಬಂದಿದೆ.
ಆದರೆ ಈ ವಿಷಯದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಹೆಸರಿಗೆ ಇನ್ನಷ್ಟು ಪವರ್ರು ದಕ್ಕುತ್ತಿದೆ.ಕಾರಣ?ಅವರನ್ನು ಈ ಜಾಗದಲ್ಲಿ ಕೂರಿಸುವ ವಿಷಯದಲ್ಲಿ ಖುದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉತ್ಸುಕರಾಗಿದ್ದಾರೆ. ಉತ್ತರ ಕರ್ನಾಟಕ ಭಾಗದ ಬಳ್ಳಾರಿ,ರಾಯಚೂರು,ಕೊಪ್ಪಳ,ಗುಲ್ಬರ್ಗ ಮತ್ತು ಬೀದರ್ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗಾಗಿ ಶರಣಪ್ರಕಾಶ್ ಪಾಟೀಲ್ ಅವಿರತವಾಗಿ ಶ್ರಮಿಸಿರುವುದು ಖರ್ಗೆಯವರನ್ನು ಸಂಪ್ರೀತಗೊಳಿಸಿದೆ.
ಇದೇ ರೀತಿ ಉತ್ತರ ಕರ್ನಾಟಕ ಭಾಗದ ಲಿಂಗಾಯತ ಪಾಳಯದಲ್ಲಿ ಅವರ ಬಗ್ಗೆ ವ್ಯಕ್ತವಾಗುತ್ತಿರುವ ವಿಶ್ವಾಸ ಕೂಡಾ ಖರ್ಗೆಯವರಿಗೆ ಮಹತ್ವದ್ದಾಗಿ ಕಾಣಿಸಿದೆ.ವಸ್ತುಸ್ಥಿತಿ ಎಂದರೆ ಕರ್ನಾಟಕದ ನೆಲೆಯಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆಗಳು ಸೃಷ್ಟಿಯಾಗುವುದೇ ಆದರೆ ಲಿಂಗಾಯತ ಕೋಟಾದಲ್ಲಿ ಶರಣ ಪ್ರಕಾಶ್ ಪಾಟೀಲರಿಗೆ ಅವಕಾಶ ಕೊಡಿಸುವ ಲೆಕ್ಕಾಚಾರ ಖರ್ಗೆ ಅವರಿಗಿತ್ತು.
ಆದರೆ ಹೆಚ್ಚುವರಿ ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಿದರೆ ಭಿನ್ನಮತ ಸ್ಪೋಟಿಸಬಹುದು ಎಂಬ ಆತಂಕ ಇರುವುದರಿಂದ ಅ ಪ್ರಪೋಸಲ್ಲು ಯಾವತ್ತೋ ಬಿದ್ದು ಹೋಗಿದೆ.ಆದರೆ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಬೇರೆಯವರನ್ನು ತಂದು ಕೂರಿಸುವ ಕಾಲ ಹತ್ತಿರವಾಗುತ್ತಿದ್ದಂತೆಯೇ ಖರ್ಗೆ ಅವರು ಶರಣ ಪ್ರಕಾಶ್ ಪಾಟೀಲ್ ಹೆಸರನ್ನು ರೇಸಿಗೆ ತಂದು ನಿಲ್ಲಿಸಿದ್ದಾರೆ.
ವಿಜಯಶಂಕರ್ ಗವರ್ನರ್ ಆದ ರಹಸ್ಯ (Vijayashankar Governor)
ಇನ್ನು ಸಿ.ಹೆಚ್.ವಿಜಯಶಂಕರ್ ಮೇಘಾಲಯದ ರಾಜ್ಯಪಾಲರಾಗಿ ನೇಮಕಗೊಂಡ ಬೆಳವಣಿಗೆ ರಾಜ್ಯದ ಬಿಜೆಪಿ ನಾಯಕರಿಗೆ ಅಚ್ಚರಿ ಮೂಡಿಸಿದೆ. ಮೂಲಗಳ ಪ್ರಕಾರ,ಕರ್ನಾಟಕದಿಂದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರನ್ನು ರಾಜ್ಯಪಾಲ ಹುದ್ದೆಗೆ ಪರಿಗಣಿಸಲಾಗುತ್ತದೆ ಅಂತ ಯಡಿಯೂರಪ್ಪ ಸೇರಿದಂತೆ ಬಹುತೇಕರು ಲೆಕ್ಕ ಹಾಕಿದ್ದರು.
ಆದರೆ ಇದ್ದಕ್ಕಿದ್ದಂತೆ ಸಿ.ಹೆಚ್.ವಿಜಯಶಂಕರ್ ಅವರನ್ನು ಮೇಘಾಲಯದ ರಾಜ್ಯಪಾಲ ಹುದ್ದೆಗೆ ನೇಮಕ ಮಾಡಿರುವ ಬೆಳವಣಿಗೆ ಹಲವು ಬಗೆಯ ಲೆಕ್ಕಾಚಾರಗಳಿಗೆ ಕಾರಣವಾಗಿದೆ. ಮೊದಲನೆಯದಾಗಿ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಕುರುಬ ಸಮುದಾಯಕ್ಕೆ ಸೇರಿರುವುದರಿಂದ ಅದೇ ಸಮುದಾಯದ ಮತ್ತೊಬ್ಬ ನಾಯಕರನ್ನು ರಾಜ್ಯಪಾಲ ಹುದ್ದೆಗೆ ತಂದರೆ ಪಾಸಿಟಿವ್ ಮೆಸೇಜು ಹೋಗುತ್ತದೆ ಎಂಬುದು ಕೇಂದ್ರದ ಲೆಕ್ಕಾಚಾರ ಇರಬಹುದು.
ಎರಡನೆಯದಾಗಿ, ಕುರುಬ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಅಂತ ಆರ್ಭಟಿಸಿ ಆ ಸಮುದಾಯದ ಕೆ.ಎಸ್.ಈಶ್ವರಪ್ಪ ಬಿಜೆಪಿ ತೊರೆದರಲ್ಲ? ಅವರ ಈ ನಿರ್ಧಾರವೇ ವಿಜಯಶಂಕರ್ ಅವರಿಗೆ ವರವಾಗಿರಬಹುದು ಎಂಬುದು ಮತ್ತೊಂದು ಲೆಕ್ಕಾಚಾರ.
ಎಲ್ಲಕ್ಕಿಂತ ಮುಖ್ಯವಾಗಿ ಸಧ್ಯದ ರಾಜಕೀಯ ಬೆಳವಣಿಗೆಗಳು ಸಿದ್ಧರಾಮಯ್ಯ ಅವರನ್ನು ದುರ್ಬಲಗೊಳಿಸುವ ಪ್ರಯತ್ನವಾಗಿ ಕಾಣುತ್ತಿರುವುದರಿಂದ ಪ್ರಬಲ ಕುರುಬ ಸಮುದಾಯ ಆಕ್ರೋಶಗೊಂಡಿದೆ.ಇಂತಹ ಸಂದರ್ಭದಲ್ಲಿ ಕರ್ನಾಟಕದ ಕುರುಬ ನಾಯಕರೊಬ್ಬರಿಗೆ ಟಾಪ್ ಪೋಸ್ಟು ಕೊಟ್ಟರೆ,ತಾವು ಕುರುಬರ ವಿರೋಧಿಗಳಲ್ಲ ಎಂದು ಹೇಳಲು ಬಿಜೆಪಿ ನಾಯಕರಿಗೆ ಇದು ಸಾಕ್ಷ್ಯವಾಗಬಹುದು ಎಂಬುದು ಮಗದೊಂದು ಲೆಕ್ಕಾಚಾರ.
ಅದೇನೇ ಇರಲಿ,ಒಟ್ಟಿನಲ್ಲಿ ರಾಜಕಾರಣದ ವಿವಾದಗಳಿಂದ ಸದಾ ಕಾಲ ದೂರವೇ ಇದ್ದ ಸಿ.ಹೆಚ್.ವಿಜಯಶಂಕರ್ ರಾಜ್ಯಪಾಲರಾಗಿರುವುದು ಹಲವರಿಗೆ ಅಚ್ಚರಿಯಾದರೆ,ಒಂದು ಬಣದವರಿಗೆ ‘ಸಂತೋಷ’ ತಂದಿರುವುದು ನಿಜ.
ಇಬ್ರಾಹಿಂ ನಡೆ ಕಾಂಗ್ರೆಸ್ ಕಡೆ (CM Ibrahim)
ಈ ಮಧ್ಯೆ ಜುಲೈ 28 ರ ಭಾನುವಾರ ಬೆಂಗಳೂರಿನಲ್ಲಿ ವಿವಿಧ ವಿವಿಧ ಪಕ್ಷಗಳ ನಾಯಕರ ಜತೆ ಮಹತ್ವದ ಸಭೆ ನಡೆಸಿದ ಹಿರಿಯ ನಾಯಕ ಸಿ.ಎಂ.ಇಬ್ರಾಹಿಂ,ಆಗಸ್ಟ್ ಅಂತ್ಯದ ವೇಳೆಗೆ ಸಮಾವೇಶ ನಡೆಸಲು ತೀರ್ಮಾನಿಸಿದ್ದಾರೆ. ಜನತಾ ಪಕ್ಷ,ಸಂಯುಕ್ತ ಜನತಾದಳ ಮತ್ತು ಲೋಕಶಕ್ತಿ ಪಕ್ಷಗಳ ನಾಯಕರ ಜತೆ ಭಾನುವಾರ ನಡೆಸಿದ ಸಭೆಯಲ್ಲಿ ಮುಂದೇನು ಮಾಡಬೇಕು ಅಂತ ಚರ್ಚಿಸಿದಾಗ ಎರಡು ದಾರಿಗಳು ಕಾಣಿಸಿದವಂತೆ.
ಅಂದ ಹಾಗೆ ಜಾತ್ಯಾತೀತ ತತ್ವದಡಿ ಮುಂದುವರಿಯುವುದು ಪಕ್ಕಾ ಆಗಿದ್ದರೂ ಭವಿಷ್ಯದ ದೃಷ್ಟಿಯಿಂದ ಯಾವ ದಾರಿ ಹಿಡಿಯಬೇಕು ಎಂಬುದು ನಿರ್ಧಾರವಾಗಬೇಕು. ಈ ಪೈಕಿ ಮೊದಲ ದಾರಿ ಕಾಂಗ್ರೆಸ್ ಸೇರುವುದು.ಎರಡನೆಯ ದಾರಿ ಮೂರನೇ ಶಕ್ತಿಯನ್ನು ಕಟ್ಟುವುದು ಅಂತ ಈ ಸಭೆಯಲ್ಲಿ ಪ್ರಸ್ತಾಪವಾದಾಗ ಹಲವರು,ಇವತ್ತಿನ ಸ್ಥಿತಿಯಲ್ಲಿ ಕಾಂಗ್ರೆಸ್ ಕೈ ಬಲಪಡಿಸುವುದೇ ಬೆಸ್ಟು ಎಂದಿದ್ದಾರೆ.
ವರ್ತಮಾನದ ರಾಜಕಾರಣ ಬಯಸುವ ಸವಾಲುಗಳನ್ನು ಗಮನಿಸಿದರೆ ಕರ್ನಾಟಕದಲ್ಲಿ ತೃತೀಯ ಶಕ್ತಿಯನ್ನು ಕಟ್ಟಿ ಬೆಳೆಸುವುದು ಕಷ್ಟದ ಕೆಲಸ. ಎಲ್ಲಕ್ಕಿಂತ ಮುಖ್ಯವಾಗಿ ಜಾತ್ಯಾತೀತ ಶಕ್ತಿ ಬಲಿಷ್ಟವಾಗಬೇಕು ಎಂಬುದು ನಮ್ಮ ನಿಲುವಾಗಿರುವಾಗ ಕಾಂಗ್ರೆಸ್ ಸೇರುವುದು ಒಳ್ಳೆಯದು ಎಂಬುದು ಹಲವರ ಅಭಿಪ್ರಾಯ. ಇಷ್ಟಾದರೂ ಕೆಲ ನಾಯಕರು,ಇವತ್ತಿನ ಸ್ಥಿತಿಯಲ್ಲಿ ತೃತೀಯ ಶಕ್ತಿಯನ್ನು ಕಟ್ಟುವುದು ಸವಾಲಿನ ಕೆಲಸವೇ ಇರಬಹುದು.ಮತ್ತು ಜಾತ್ಯಾತೀತ ಶಕ್ತಿಗಳನ್ನು ಬಲಪಡಿಸುವುದು ಅನಿವಾರ್ಯವೂ ಇರಬಹುದು.ಆದರೂ ತೃತೀಯ ಶಕ್ತಿಯನ್ನು ಉಳಿಸಿಕೊಳ್ಳುವುದು ಮುಖ್ಯ ಎಂದರಂತೆ. ಹೀಗಾಗಿ ಈ ಕುರಿತು ನಿರ್ಧರಿಸಲು ಅಗಸ್ಟ್ ಅಂತ್ಯದಲ್ಲಿ ಸಮಾವೇಶ ನಡೆಸಬೇಕು ಅಂತ ಸಭೆ ತೀರ್ಮಾನಿಸಿದೆ.
ಮೂಲಗಳ ಪ್ರಕಾರ,ಕರ್ನಾಟಕದಲ್ಲಿ ಎನ್.ಸಿ.ಪಿ ಕಟ್ಟಲು ಮಹಾರಾಷ್ಟ್ರದ ಶರದ್ ಪವಾರ್ ಆಹ್ವಾನ ನೀಡಿದ್ದರೂ ಕೈ ಪಾಳಯ ಸೇರುವುದು ಸಿ.ಎಂ.ಇಬ್ರಾಹಿಂ ಯೋಚನೆ.ಮುಂದೇನು ಕತೆಯೋ ನೋಡಬೇಕು.
ಅರ್.ಟಿ.ವಿಠ್ಠಲಮೂರ್ತಿ (R.T.Vithalamurthy)