ದಾವಣಗೆರೆ, ಆ.6 (DAVANAGERE ):- ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ ಶೋಷಿತರು, ದಮನಿತರು, ಸಮಾಜದ ಕೆಳಸ್ತರದಲ್ಲಿರುವವರು ನ್ಯಾಯ ವಿತರಣೆಯಿಂದ ವಂಚಿತರಾಗಿದ್ದು ಅವರಿಗೆ ಸೂಕ್ತ ಸಮಯದಲ್ಲಿ ನ್ಯಾಯ ವಿತರಣೆ ಮಾಡುವಲ್ಲಿ ವಕೀಲರ ಪಾತ್ರ ಪ್ರಮುಖವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ತಿಳಿಸಿದರು.
ಜಿಲ್ಲಾ ವಕೀಲರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಜುಲೈನಲ್ಲಿ ನಡೆದ ಲೋಕ್ ಅದಾಲತ್ನಲ್ಲಿ ಅತೀ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದಕ್ಕಾಗಿ ಏರ್ಪಡಿಸಲಾಗಿದ್ದ ವಕೀಲರಿಗೆ ಅಭಿನಂದನಾ ಸಮಾರಂಭ ಹಾಗೂ ಸೆಪ್ಟಂಬರ್ನಲ್ಲಿ ನಡೆಯಲಿರುವ ಲೋಕ್ ಅದಾಲತ್ ಸಂಬಂಧ ಪೂರ್ವಭಾವಿ ಸಭೆಯಲ್ಲಿ ಕರ್ನಾಟಕ ಹೈಕೋರ್ಟ್ ಜಿಲ್ಲಾ ವಕೀಲರ ಸಂಘಕ್ಕೆ ಪ್ರಶಂಸಾ ಪತ್ರ ನೀಡಿ ಮಾತನಾಡಿದರು.
Read also : DAVANAGERE JOB NEWS : ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಭಾರತದಲ್ಲಿ ಧರ್ಮ, ವರ್ಗ, ಜಾತಿ, ಲಿಂಗ ಹಾಗೂ ಲಿಂಗಬೇಧವನ್ನು ಮೀರಿ ಜನತೆ ನ್ಯಾಯಾಲಯಗಳನ್ನು ನ್ಯಾಯ ದೇಗುಲಗಳೆಂದು ಭಾವಿಸಿದ್ದಾರೆ . ಅವರ ನಂಬಿಕೆಯನ್ನು ಉಳಿಸಲು ಅತ್ಯಂತ ಪರಿಣಾಮಕಾರಿಯಾಗಿ ನ್ಯಾಯಾಲಯಗಳು ವಕೀಲರ ಸಹಕಾರದೊಂದಿಗೆ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ ಅವರು, ಹಸಿದವರಿಗೆ ಅನ್ನ, ಕಷ್ಟದಲ್ಲಿರುವವರಿಗೆ ಸಹಾಯ, ತಪ್ಪು ಮಾಡಿದವರನ್ನು ಸರಿದಾರಿಗೆ ತರುವ ಮೂಲಕ ಸೋಲಿನಲ್ಲೂ ಧೈರ್ಯ, ಉತ್ಸಾಹ ತುಂಬುವ ಮೂಲಕ, ಕಕ್ಷಿದಾರರಿಗೆ ತಾಯಿಬೇರುಗಳಾಗಿ ವಕೀಲರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಪ್ರಶಂಸಿಸಿದರು. ಕಳೆದ ಲೋಕ್ ಅದಾಲತ್ನಲ್ಲಿ 25 ಕುಟುಂಬಗಳನ್ನು ಒಂದು ಮಾಡುವ ಮೂಲಕ ಕೌಟುಂಬಿಕ ನ್ಯಾಯಾಲಯ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ ಎಂದರು.
ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಮಾತನಾಡಿದ ಜಿಲ್ಲಾ ಸೇವಾ ಮತ್ತು ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ್ ಮ. ಕರೆಣ್ಣವರ ಅವರು, ದಾವಣಗೆರೆ ಜಿಲ್ಲಾ ವಕೀಲರ ಸಂಘವು ಲೋಕ್ ಅದಾಲತ್ನಲ್ಲಿ ಅತೀ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸುತ್ತಿದ್ದಕ್ಕಾಗಿ ನಿರಂತರವಾಗಿ ಕರ್ನಾಟಕ ಹೈಕೋರ್ಟ್ನಿಂದ ಪ್ರಶಂಸಾ ಪತ್ರವನ್ನು ಪಡೆಯುತ್ತಿರುವುದು ಅಭಿನಂದನೀಯ ಎಂದು ಶ್ಲಾಘಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್ಕುಮಾರ್ ಮಾತನಾಡಿ, ಭಾರತದಲ್ಲಿ ನ್ಯಾಯಾಂಗವು ಇಂದಿಗೂ ಜನತೆಯ ವಿಶ್ವಾಸ, ನಂಬಿಕೆಯನ್ನು ಉಳಿಸಿಕೊಂಡಿದ್ದು ಆ ನಿಟ್ಟಿನಲ್ಲಿ ನ್ಯಾಯಾಂಗದ ಭಾಗವಾಗಿರುವ ನ್ಯಾಯಾಧೀಶರು, ವಕೀಲರು ಮತ್ತು ನ್ಯಾಯಾಂಗ ಸಿಬ್ಬಂದಿ ಹೆಚ್ಚು ಹೊಣೆಗಾರಿಕೆಯಿಂದ ಕರ್ತವ್ಯ ನಿರ್ವಹಿಸಬೇಕಾಗಿದೆ. ಲೋಕ್ ಅದಾಲತ್ನಲ್ಲಿ ವಕೀಲರ ಸಹಕಾರದಿಂದ ಅತೀ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು ಕರ್ನಾಟಕ ಹೈಕೋರ್ಟ್ ನೀಡಿರುವ ಪ್ರಶಂಸಾ ಪತ್ರ ದಾವಣಗೆರೆ ವಕೀಲ ಸಮುದಾಯಕ್ಕೆ ಸಂದ ಗೌರವವಾಗಿದೆ ಎಂದು ಪ್ರತಿಪಾದಿಸಿದರು.
ಸಮಾರಂಭದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪ್ರವೀಣ್ಕುಮಾರ್ ಆರ್.ಎನ್, ಮಕ್ಕಳ ಸ್ನೇಹಿ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶರಾದ ಶ್ರೀರಾಮ ನಾರಾಯಣ ಹೆಗಡೆ, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಶಿವಪ್ಪ ಗಂಗಪ್ಪ ಸಲಗರೆ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತಾ, ನ್ಯಾಯಾಧೀಶರಾದ ಶ್ರೀಮತಿ ರೇಷ್ಮಾ, ಅಮರ್ ವಿ.ಎಲ್., ಸಿ. ನಾಗೇಶ್, ಶ್ರೀಮತಿ ಗಾಯಿತ್ರಿ ಹೆಚ್.ಡಿ., ಮಲ್ಲಿಕಾರ್ಜುನ್, ಸಿದ್ಧರಾಜು, ನಾಜಿಯಾ ಕೌಸರ್ ಉಪಸ್ಥಿತರಿದ್ದರು.
ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಜಿ.ಕೆ.ಬಸವರಾಜ್ ಗೋಪನಾಳ್ ಸ್ವಾಗತಿಸಿದರು, ಕಾರ್ಯದರ್ಶಿ ಎಸ್. ಬಸವರಾಜ್ ನಿರೂಪಿಸಿದರು, ಕಾರ್ಯಕಾರಿ ಸಮಿತಿ ಸದಸ್ಯರಾದ ವಾಗೀಶ್ ಕಟಗಿಹಳ್ಳಿ ಮಠ, ಭಾಗ್ಯಲಕ್ಷ್ಮಿ ಆರ್., ಮಧುಸೂದನ್ ಟಿ.ಹೆಚ್., ರಾಘವೇಂದ್ರ ಎಂ., ಸಂತೋಷ್ ಕುಮಾರ್ ಜಿ.ಜೆ., ನಾಗರಾಜ್ ಎಲ್., ನೀಲಕಂಠಯ್ಯ ಕೆ.ಎಂ, ಅಜಯ್ ಬಿ., ಚೌಡಪ್ಪ ಎಂ., ಇನ್ನಿತರ ವಕೀಲರು ಪಾಲ್ಗೊಂಡಿದ್ದರು.