ದಾವಣಗೆರೆ, ಡಿ. 23 : ಶಿಕ್ಷಣ ಸೇರಿದಂತೆ ಎಲ್ಲಾ ವಲಯಗಳಯೂ ತಮ್ಮ ಸಾಮರ್ಥ್ಯವನ್ನು ತೋರಿಸಲು ಪೌಷ್ಠಿಕಯುಕ್ತ ಆಹಾರ ಮತ್ತು ಆರೋಗ್ಯಯುತವಾದ ಪರಿಸರದ ಜೊತೆಗೆ ಗುಣಮಟ್ಟದ ಶಿಕ್ಷಣ ಪಡೆದಲ್ಲಿ ಅವರ ಸರ್ವೋತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ ಕರಣ್ಣನವರ ತಿಳಿಸಿದರು.
ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲ ಚೇತನ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಮಕ್ಕಳ ರಕ್ಷಣಾ ಘಟಕ ಇವರ ಸಹಯೋಗದಲ್ಲಿ ಮಂಗಳವಾರ ಜಿಲ್ಲಾ ಪಂಚಾಯತ್ ಕಚೇರಿ ಎಸ್ ಎಸ್ ಮಲ್ಲಿಕಾರ್ಜುನ ಸಭಾಂಗಣದಲ್ಲಿ ಜಿಲ್ಲೆಯ ಪಾಲನಾ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಆರ್.ಟಿ.ಇ ಪೋಕ್ಸೋ, ಬಾಲ್ಯವಿವಾಹ ನಿಷೇಧ ಕಾಯ್ದೆ, ಬಾಲ ನ್ಯಾಯ ಕಾಯ್ದೆಗಳ ತರಬೇತಿ ಹಾಗೂ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಎಂದರೆ ಕೇವಲ ಪಠ್ಯಕ್ಕೆ ಸೀಮಿತವಾದುದಲ್ಲ. ಮಕ್ಕಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು. ಪೋಷಕರಿಗೆ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಬಯಸುವುದು ಹಾಗೂ ತಮ್ಮ ಮಗು ವಿಜ್ಞಾನಿ, ರೈತ, ಸೈನಿಕ, ಐ.ಪಿ.ಎಸ್.,ಐ.ಎ.ಎಸ್, ಶಿಕ್ಷಕ ಹಾಗೂ ನ್ಯಾಯದೀಶರಂತಹ ಉನ್ನತ ಹುದ್ದೆಗಳಿಗೆ ಅಲಂಕರಿಸುವಂತೆ ಕನಸು ಕಾಣುವುದು ತಪ್ಪಲ್ಲಾ. ಆದರೆ ಆ ಶಾಲೆಯಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ, ಅವರ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒಳಗೊಂಡಿದೆಯೇ ಇಲ್ಲವೇ ಎಂಬುದನ್ನರಿಯಬೇಕು.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಪ್ರೋತ್ಸಾಹಿಸಬೇಕು. ಭವಿಷ್ಯದ ಬಗ್ಗೆ ಸಹಕಾರ ನೀಡುವುದು ಸಮಾಜದಲ್ಲಿ ಗೌರವಯುತ ವ್ಯಕ್ತಿಗಳಾಗಿ ಬದುಕುವುದನ್ನು ಸಹ ತಿಳಿಹೇಳಬೇಕಿದೆ ಎಂದು ತಿಳಿಸಿದರು.
ಪ್ರತಿವರ್ಷ ಆಯವ್ಯಯದಲ್ಲಿ ಮಕ್ಕಳ ಸರ್ವಾತೋಮುಖ ಅಭಿವೃದ್ಧಿಗೆ ಅನುದಾನವನ್ನು ಮೀಸಲಿಟ್ಟು ಅದನ್ನು ಪೌಷ್ಠಿಕ ಆಹಾರಗಳಾದ ಹಾಲು, ಮೊಟ್ಟೆ ಮತ್ತು ಊಟೋಪಚಾರಗಳಿಗೆ ಸಮರ್ಪಕವಾಗಿ ವೆಚ್ಚ ಮಾಡಿ ಮಗುವಿನ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಸಹಕರಿಸುವುದು ಮುಖ್ಯವಾಗಿದೆ ಎಂದರು.
ಪ್ರಸ್ತುತ ಮಹಿಳೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹ ಹೆಚ್ಚಾಗಿ ಕಂಡು ಬರುತ್ತಿದೆ. ಇವುಗಳನ್ನು ತಡೆಯುವುದು ಅಂಗನವಾಡಿ ಮತ್ತು ಆರೋಗ್ಯ ಇಲಾಖೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜವಾಬ್ದಾರಿಯಾಗಿರದೆ, ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಸಹಾಯವಾಣಿ ಸಂಖ್ಯೆ 112, 1098 ಮಹಿಳಾ ಮತ್ತು ಮಕ್ಕಳ ಕಲ್ಯಾಣಿ ಇಲಾಖೆ,ಮಕ್ಕಳ ರಕ್ಷಣಾ ಘಟಕ , ಜೆಜೆಬಿ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಮಾಹಿತಿಯನ್ನು ನೀಡಬೇಕು ಹಾಗೂ ಕೆಲವು ಪ್ರಕರಣಗಳಲ್ಲಿ ಮಾಹಿತಿದಾರರ ಹೆಸರನ್ನು ಬಹಿರಂಗಪಡಿಸದೆ ಗೌಪ್ಯವಾಗಿಡುವುದರ ಜೊತೆಗೆ ಸೂಕ್ತ ರಕ್ಷಣೆಯನ್ನು ನೀಡಲಾಗುವುದು ಎಂದು ತಿಳಿಸಿದರು.
Read also : ಭಾರಿ ಅವಘಡ ಸಂಭವಿಸದಂತೆ ಕ್ರಮವಹಿಸಿ : ಜಿಲ್ಲಾಧಿಕಾರಿ ಗಂಗಾಧರಸ್ವಾಮಿ
ನೊಂದ ವ್ಯಕ್ತಿಗೆ ರಕ್ಷಣೆ ಮತ್ತು ಕಾನೂನು ಸಲಹೆ ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಅದರಂತೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾವರಿಗೆ, ಬಾಲ್ಯ ವಿವಾಹ, ಅಪಘಾತ ಪ್ರಕರಣಗಳು, ಕಳವು ಪ್ರಕರಣ, ಕುಟುಂಬಸ್ಥರನ್ನು ಕಳೆದುಕೊಂಡ ಸಂತ್ರಸ್ಥರಿಗೆ ಹಾಗೂ ಇತರೆ ಯಾವುದೇ ರೀತಿಯ ದೌರ್ಜನ್ಯಕ್ಕೊಳಗಾದ ಸಂತ್ರಸ್ಥರಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಕಳೆದ ಮೂರು ತಿಂಗಳಲ್ಲಿ ರೂ.1.50 ಕೋಟಿಗಳಷ್ಟು ಪರಿಹಾರ ನೀಡಿದೆ. ಪರಿಹಾರ ನೀಡಿದ ತಕ್ಷಣ ಸಂತ್ರಸ್ಥರ ನೋವು ಕಡಿಮೆ ಆಗುವುದಿಲ್ಲ, ಅವರ ಮಾನಸಿಕ ನೋವನ್ನು ಹಿಂದುರುಗಿಸಲು ಸಾಧ್ಯವಿಲ್ಲ. ಆದರೆ ಸಂತ್ರಸ್ಥರಿಗೆ ಕಾನೂನು ಸುವ್ಯವಸ್ಥೆ ಬಗ್ಗೆ ಬಲವಾದ ನಂಬಿಕೆ ಬರುತ್ತದೆ ಎಂದು ತಿಳಿಸಿದರು.
ಮಕ್ಕಳು ಭಿಕ್ಷಾಟನೆ ಮತ್ತು ಕಳ್ಳತನ ಮಾಡುತ್ತಿದ್ದಾರೆ, ಆದರೆ ಮಕ್ಕಳು ಯಾವ ಕಾರಣಕ್ಕಾಗಿ ಭಿಕ್ಷಾಟನೆ ಮತ್ತು ಕಳ್ಳತನ ಮಾಡುತ್ತಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಮಕ್ಕಳ ಮನಸ್ಸನ್ನು ಯಾರಾದರು ಬದಲಾವಣೆ ಮಾಡಿ ದುಡ್ಡಿನ ಆಸೆಗಾಗಿ ಈ ರೀತಿ ಮಾಡುತ್ತಿದ್ದಾರೆ ಅಥವಾ ಮಕ್ಕಳೆ ನೇರವಾಗಿ ಈ ಕಸಬನ್ನು ಆರಿಸಿಕೊಂಡರ ಎಂಬುದನ್ನು ಸಹ ನಾವು ಗಮನಿಸಬೇಕಾದ ಅಂಶವಾಗಿದೆ. ಜಿಲ್ಲೆಯಲ್ಲಿ 140 ಅಂಗನವಾಡಿ ಕೇಂದ್ರಗಳಲ್ಲಿ ಬಾಲ್ಯವಿವಾಹ ನಿಷೇದ ಕುರಿತು ಅರಿವು ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಮತ್ತು 2026 ರ ಮಾರ್ಚ್ ಅಂತ್ಯಕ್ಕೆ ಜಿಲ್ಲೆಯ 100 ಕೇಂದ್ರಗಳಲ್ಲಿ ಮಕ್ಕಳ ಹಕ್ಕುಗಳು,ಲೈಂಗಿಕ ದೌರ್ಜನ್ಯ ಮತ್ತು ಬಾಲ್ಯ ವಿವಾಹ ನಿಷೇಧ ಕುರಿತು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಟಿ.ಎನ್.ಕವಿತಾ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಮಂಜುಳಮ್ಮ ಸದಸ್ಯರುಗಳಾದ ಕರಿಯಮ್ಮ, ನಾಗರಾಜ ನಾಯ್ಕ, ದುರಗಪ್ಪ ಹಾಗೂ ಇತರರು ಉಪಸ್ಥಿತರಿದ್ದರು.
