ಕಳೆದ ವಾರ ದಿಲ್ಲಿಗೆ ಹೋದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.ಇದಾದ ನಂತರ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಜತೆ ಮಾತ ನಾಡಿದ ಅವರು ಪ್ರಮುಖ ವಿಷಯವೊಂದನ್ನು ಪ್ರಸ್ತಾಪಿಸಿದ್ದಾರೆ.
ಕರ್ನಾಟಕದಲ್ಲಿ ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಸಚಿವ ಸಂಪುಟ ಪುನರ್ರಚನೆಗೆ ಗ್ರೀನ್ ಸಿಗ್ನಲ್ ಕೊಡಿ ಎಂಬುದು ಈ ಪ್ರಸ್ತಾಪ. ವಾಸ್ತವವಾಗಿ ಹಲವು ದಿನಗಳ ಹಿಂದೆಯೇ ರಾಜ್ಯ ಸಚಿವ ಸಂಪುಟದ ಪುನರ್ರಚನೆ ಕಾರ್ಯ ಪೂರ್ಣವಾಗಬೇಕಿತ್ತು.
ಆದರೆ, ಧಿಡೀರನೇ ಉದ್ಬವಿಸಿದ ಅಧಿಕಾರ ಹಂಚಿಕೆಯ ಬಿಕ್ಕಟ್ಟು ಸಂಪುಟ ಪುನರ್ರಚನೆಗೆ ಬ್ರೇಕ್ ಹಾಕಿದ್ದಲ್ಲದೆ ಮುಂದೇನು ಎನ್ನುವ ಆತಂಕ ಸೃಷ್ಟಿಸುವಲ್ಲಿ ಯಶಸ್ವಿಯಾಗಿತ್ತು. ಈ ಹಂತದಲ್ಲಿ ಸಿಎಂ ಹುದ್ದೆ ತಮಗೆ ಬೇಕೇ ಬೇಕು ಅಂತ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದರೆ,ಯಾವ ಕಾರಣಕ್ಕೂ ಪಟ್ಟ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಅಂತ ಸಿದ್ದರಾಮಯ್ಯ ಪ್ರತಿಪಟ್ಟು ಹಾಕಿ ಕುಳಿತರು.
ಹೀಗೆ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಪಟ್ಟು,ಪ್ರತಿಪಟ್ಟುಗಳ ನಡುವೆ ಸೋನಿಯಾಗಾಂಧಿ,ರಾಹುಲ್ ಗಾಂಧಿ ಕಸಿವಿಸಿಗೊಂಡರೂ ಅಂತಿಮವಾಗಿ ಎರಡು ಅಭಿಪ್ರಾಯಗಳಿಗೆ ಕಿವಿ ತೆರೆದು ಕುಳಿತರು.
ಮೊದಲನೆಯದಾಗಿ ಈ ವಿಷಯದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಏನು ಹೇಳುತ್ತಾರೆ?ಎಂಬುದಾದರೆ,ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ರಾಹುಲ್ ಗಾಂಧಿಯವರ ಪರ್ಸನಲ್ ಸರ್ವೆ ಟೀಮು ಏನು ಹೇಳುತ್ತದೆ? ಎಂಬುದು ಮತ್ತೊಂದು.
ಈ ಪೈಕಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು:ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಪಟ್ಟ ನೀಡುವುದು ನ್ಯಾಯವಾದರೂ ಅ ಪಟ್ಟವನ್ನು ಸಿದ್ದರಾಮಯ್ಯ ಅವರಿಂ ದ ಬಲವಂತವಾಗಿ ಕಿತ್ತುಕೊಳ್ಳುವುದು ಅಪಾಯಕಾರಿ ಎಂದಿದ್ದಾರೆ.
ಎಷ್ಟೇ ಆದರೂ ಸಿದ್ದರಾಮಯ್ಯ ಟಫ್ ನಾಯಕ.ಅಂತವರ ಜತೆ ವ್ಯವಹರಿಸುವಾಗ ಗೌರವಯುತ ಮಾರ್ಗದಲ್ಲೇ ಹೋಗಬೇಕು.ಅರ್ಥಾತ್,ಅಧಿಕಾರ ಹಂಚಿಕೆ ವಿಷಯದಲ್ಲಿ ಸಹಕಾರ ನೀಡುವಂತೆ ಅವರ ಮನ ವೊಲಿಸಬೇಕು.ಹೀಗೆ ಅವರ ಮನವೊಲಿಸದೆ ಮುಖ್ಯಮಂತ್ರಿ ಹುದ್ದೆಯನ್ನು ಕಿತ್ತುಕೊಳ್ಳುವುದು ಧೀರ್ಘಕಾಲೀನ ಅಪಾಯಕ್ಕೆ ಕಾರಣವಾಗಬಹುದು ಎಂಬುದು ಮಲ್ಲಿಕಾರ್ಜುನ ಖರ್ಗೆಯವರ ವಾದ.
ಇದೇ ರೀತಿ ಅಹಿಂದ ವರ್ಗಗಳ ಮತ ಹೆಚ್ಚಿರುವ ಕೇರಳ,ತಮಿಳುನಾಡು,ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಹತ್ತಿರದಲ್ಲಿರುವಾಗ ಸಿದ್ಧರಾಮಯ್ತ ಅವರಂತಹ ನಾಯಕರನ್ನು ಮು ಟ್ಟುವುದು ಕಷ್ಟ.ಹೀಗಾಗಿ ಅವರ ಮನವೊಲಿಕೆ ಕಾರ್ಯ ಪೂರ್ಣವಾಗುವವರೆಗೆ ದುಡುಕುವ ಅಗತ್ಯವಿಲ್ಲ ಎಂಬುದು ಅವರ ಅಭಿಪ್ರಾಯ.
ಇದು ಒಂದು ಕಡೆಗಾದರೆ ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಹುಲ್ ಗಾಂಧಿಯವರ ಪರ್ಸನಲ್ ಸರ್ವೇ ಟೀಮು ಕೂಡಾ ವಿವರವಾದ ವರದಿಯನ್ನು ಸಿದ್ದಪಡಿಸಿತ್ತಲ್ಲದೆ, ಸಿದ್ದರಾಮಯ್ಯ ಅವರು ಪಟ್ಟ ಬಿಟ್ಟುಕೊಡಲು ಒಪ್ಪಿದರೆ ಮಾತ್ರ ಅಧಿಕಾರ ವರ್ಗಾವಣೆ ಪ್ರಕ್ರಿಯೆ ನಡೆಯಬೇಕು.ಇಲ್ಲದಿದ್ದರೆ ಯಥಾಸ್ಥಿತಿ ಮುಂದುವರಿಯಬೇಕು ಎಂದಿದೆ.ಅಷ್ಟೇ ಅಲ್ಲ,ಕರ್ನಾಟಕದ ಮತ ಬ್ಯಾಂಕ್ ಸ್ವರೂಪದ ಬಗ್ಗೆ ಸ್ಪಷ್ಟವಾಗಿ ವಿವರಿಸಿದೆ.
ಇವತ್ತು ರಾಜ್ಯದ ಪ್ರತಿಕ್ಷೇತ್ರದಲ್ಲೂ ಪರಿಶಿಷ್ಟರಿದ್ದಾರೆ,ಮುಸ್ಲಿಮರಿದ್ದಾರೆ.ಕುರುಬರು ಇವರಷ್ಟು ಪ್ರಮಾಣದಲ್ಲಿಲ್ಲದಿದ್ದರೂ ಬಹುತೇಕ ಕ್ಷೇತ್ರಗಳಲ್ಲಿ ಸಾಲಿಡ್ಡಾಗಿದ್ದಾರೆ.ಇದರರ್ಥ,ಅಹಿಂದ ವರ್ಗದ ಮತಗಳು ಹೆ ಚ್ಚು ಕಡಿಮೆ ಎಲ್ಲ ಕ್ಷೇತ್ರಗಳಲ್ಲಿ ದಟ್ಟವಾಗಿವೆ. ಇಂತಹ ಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರೆ ಮುಂದಿನ ದಿನಗಳಲ್ಲಿ ಪಕ್ಷದ ಸ್ಥಿತಿ ಸಂಕಷ್ಟಕ್ಕೆ ಸಿಲುಕುತ್ತದೆ.
ಅಂದ ಹಾಗೆ 2029 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ವಿರುದ್ಧ ಹೋರಾಡಲು ಕಾಂಗ್ರೆಸ್ ಪಕ್ಷಕ್ಕಿರುವ ಪ್ರಬಲ ಸೇನಾ ನೆಲೆ ಎಂದರೆ ಕರ್ನಾಟಕ. ಇವತ್ತು ಸಿದ್ದರಾಮಯ್ಯ ಅವರ ನ್ನು ಬಲವಂತವಾಗಿ ಇಳಿಸಲು ಮುಂದಾದರೆ ಈ ಸೇನಾ ನೆಲೆ ಕುಸಿಯುವುದಷ್ಟೇ ಅಲ್ಲ,ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಸೈನ್ತವನ್ನು ಮುನ್ನಡೆಸುವುದು ಕಷ್ಟಕರವಾಗುತ್ತದೆ.
ಇಂತಹ ಪರಿಸ್ಥಿತಿಯಲ್ಲಿ ನಾವು ಕರ್ನಾಟಕದ ಒಕ್ಕಲಿಗ ಮತ ಬ್ಯಾಂಕ್ ಅನ್ನು ಆಧರಿಸಬಹುದಾ?ಎಂದರೆ ಅದೂ ಅಸಾಧ್ಯ.ಯಾಕೆಂದರೆ ಒಕ್ಕಲಿಗ ಮತ ಬ್ಯಾಂಕಿನ ಶೇಕಡಾ ಐವತ್ತರಷ್ಟು ಮತಗಳು ಕುಮಾರ ಸ್ವಾಮಿ -ದೇವೇಗೌಡರ ನೇತೃತ್ವದ ಜಾತ್ಯಾತೀತ ದಳದ ಜತೆ ನಿಂತರೆ,ಇಪ್ಪತ್ತೈದರಷ್ಟು ಮತಗಳು ಬಿಜೆಪಿ ಜತೆಗಿವೆ.ಹೀಗಾಗಿ ಅಹಿಂದ ಮತ ಬ್ಯಾಂಕಿನಿಂದ ಬೀಳುವ ಹೊಡೆತವನ್ನು ಒಕ್ಕಲಿಗ ಮತ ಬ್ಯಾಂಕ್ ನೆರವಿನಿಂದ ತೂಗಿಸಲು ಸಾಧ್ಯವಿಲ್ಲ ಎಂದು ಈ ಟೀಮು ಸ್ಪಷ್ಟವಾಗಿ ಹೇಳಿದೆ.
ಯಾವಾಗ ಎರಡೂ ಕೋನಗಳಿಂದ ಬಂದ ಅಭಿಪ್ರಾಯ ಸಿದ್ದರಾಮಯ್ಯ ಅವರ ಪರವಾಗಿತ್ತೋ? ಅಗ ರಾಹುಲ್ ಗಾಂಧಿ ಸ್ಪಷ್ಟವಾದ ನಿಲುವಿಗೆ ಬಂದಿದ್ದಾರೆ.ಅಂದರೆ?ಸಿದ್ದರಾಮಯ್ಯ ಅವರು ಒಪ್ಪಿದರೆ ಮಾತ್ರ ಬೇರೊಬ್ಬರು ಮುಖ್ಯಮಂತ್ರಿ ಆಗಬಹುದು.ಇಲ್ಲದಿದ್ದರೆ ಇಲ್ಲ ಎಂಬುದು.
ಯಾವಾಗ ಅವರ ನಿಲುವು ಸ್ಪಷ್ಟವಾಯಿತೋ? ಇದಾದ ನಂತರ ಕರ್ನಾಟಕದಲ್ಲಿ ನಡೆಯುತ್ತಿದ್ದ ಅಧಿಕಾರ ಹಂಚಿಕೆಯ ಜಗ್ಗಾಟಕ್ಕೆ ಬ್ರೇಕ್ ಬಿದ್ದಿದೆ. ಹೀಗೆ ಬ್ರೇಕ್ ಬಿದ್ದ ಬೆನ್ನಲ್ಲೇ ಶನಿವಾರ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಗೆ ಹೋಗಿದ್ದ ಸಿದ್ದರಾಮಯ್ಯ ಅವರು ಸಭೆಯ ನಂತರ ರಾಹುಲ್ ಗಾಂಧಿಯವರ ಜತೆ ಮಾತುಕತೆ ನಡೆಸಿದ್ದಾರೆ.
ಈ ಮಾತುಕತೆಯ ಸಂದರ್ಭದಲ್ಲಿ ರಾಜ್ಯ ಸಚಿವ ಸಂಪುಟ ಪುನರ್ರಚನೆಯ ಬಗ್ಗೆ ಪ್ರಸ್ತಾಪಿಸಿದ ಸಿದ್ದರಾಮಯ್ಯನವರು: ಸರ್ಕಾರಕ್ಕೆ ಶಕ್ತಿ ತುಂಬುವ ದೃಷ್ಟಿಯಿಂದ ಪುನರ್ರಚನೆ ಪ್ರಕ್ರಿಯೆ ಬೇಗ ಮುಗಿಯುವುದು ಒಳ್ಳೆಯದು ಎಂದಿದ್ದಾರೆ.
ಯಾವಾಗ ಸಿದ್ದರಾಮಯ್ಯನವರು ಈ ಪ್ರಸ್ತಾಪ ಮಂಡಿಸಿದರೋ? ಆಗ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ:’ವೈ ನಾಟ್ ಸಿದ್ರಾಮಯ್ಯಾಜೀ?ಸಂಪುಟ ಪುನರ್ರಚನೆಯ ಸ್ವರೂಪ ಹೇಗಿರಬೇಕು?ಮಂತ್ರಿ ಮಂಡಲ ದಿಂದ ಹೊರಹೋಗಬೇಕಾದವರು ಯಾರು? ಸೇರ್ಪಡೆ ಅಗಬೇಕಾದವರು ಯಾರು? ಎಂಬ ಬಗ್ಗೆ ವಿವರವಾಗಿ ಚರ್ಚಿಸಿ ಜನವರಿ ಒಂಬತ್ತರಂದು ದಿಲ್ಲಿಗೆ ಬನ್ನಿ.ಫೈನಲ್ ಮಾಡೋಣ’ ಎಂದಿದ್ದಾರೆ.
ಮೂಲಗಳ ಪ್ರಕಾರ,ದಿಲ್ಲಿಯಿಂದ ವಾಪಸ್ಸಾದ ನಂತರ ಸಿದ್ದರಾಮಯ್ಯ ಅವರು ಸಂಪುಟ ಪುನರ್ರಚನೆಯ ಸ್ವರೂಪದ ಬಗ್ಗೆ ಚರ್ಚೆ ಆರಂಭಿಸಿದ್ದಾರೆ.
ಸಾವಂತ್ ಆ್ಯಕ್ಟೀವ್ ಆಗಿದ್ದೇಕೆ? (Political analysis)
ಇನ್ನು ಗೋವಾದ ಮುಖ್ಯಮಂತ್ರಿ, ಬಿಜೆಪಿ ನಾಯಕ ಪ್ರಮೋದ್ ಸಾವಂತ್ ಫುಲ್ಲು ಆ್ಯಕ್ಟೀವ್ ಆಗಿದ್ದಾರೆ. ಹೀಗವರು ಫುಲ್ಲು ಆ್ಯಕ್ಟೀವ್ ಆಗಿರುವುದು ಕರ್ನಾಟಕದ ರಾಜಕಾರಣದ ಬಗ್ಗೆ. ವಾಸ್ತವವಾಗಿ ಕರ್ನಾ ಟಕದಲ್ಲಿ ನವೆಂಬರ್ ಹೊತ್ತಿಗೆ ಕ್ರಾಂತಿ ಸಂಭವಿಸುತ್ತದೆ.ಇದರ ಫಲವಾಗಿ ಕಾಂಗ್ರೆಸ್ ಹೈಕಮಾಂಡ್ ವರಿಷ್ಟರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಕೆಳಗಿಳಿಸಿ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಹುದ್ದೆಯ ಮೇಲೆ ಕೂರಿಸುತ್ತಾರೆ.
ಹೀಗೆ ಸಿದ್ದರಾಮಯ್ಯ ಅವರು ಕೆಳಗಿಳಿದು ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಪಟ್ಟಕ್ಕೆ ಏರಿದರೆ ರಾಜ್ಯ ಕಾಂಗ್ರೆಸ್ ನ ಹಲವು ಮಂತ್ರಿಗಳು,ಶಾಸಕರನ್ನು ಒಳಗೊಂಡ ಪಡೆ ತಿರುಗಿ ಬೀಳುತ್ತದೆ.
ಹೀಗೆ ತಿರುಗಿ ಬೀಳುವ ಶಾಸಕರ ಪಡೆಯನ್ನು ಬಿಜೆಪಿಯ ಕಡೆ ಸೆಳೆದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಉರುಳುತ್ತದೆ ಎಂಬುದು ಪ್ರಮೋದ್ ಸಾವಂತ್ ಅವರ ಲೆಕ್ಕಾಚಾರವಾಗಿತ್ತು. ತಮ್ಮ ಈ ಲೆಕ್ಕಾಚಾರಕ್ಕೆ ಪೂರಕವಾಗಿ ಮೋದಿ-ಅಮಿತ್ ಶಾ ಅವರಿಂದ ಸಿಗ್ನಲ್ಲು ಪಡೆದ ಪ್ರಮೋದ್ ಸಾವಂತ್ ಅವರು ಸಿದ್ದರಾಮಯ್ಯ ಅವರ ಸಂಪುಟದ ಬ್ರಿಗೇಡಿಯರ್,ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅಂಡ್ ಗ್ಯಾಂಗಿನ ಸಂಪರ್ಕದಲ್ಲಿದ್ದರು ಎಂಬುದು ಮೂಲಗಳ ಹೇಳಿಕೆ.
ಅಂದ ಹಾಗೆ ಪ್ರಮೋದ್ ಸಾವಂತ್ ಅವರ ಲೆಕ್ಕಾಚಾರಕ್ಕೆ ನವೆಂಬರ್ ತಿಂಗಳಲ್ಲಿ ಬಲ ಸಿಕ್ಕಿದ್ದಷ್ಟೇ ಅಲ್ಲ,ಇನ್ನೇನು ಸಿದ್ಧರಾಮಯ್ಯ ಕೆಳಗೆ ಇಳಿದು ಡಿ.ಕೆ.ಶಿವಕುಮಾರ್ ಪಟ್ಟಾಭಿಷೇಕದ ಮುಹೂರ್ತ ಫಿಕ್ಸಾಗ ಬಹುದು ಎಂಬ ಮಾತು ಕೇಳಿಬರತೊಡಗಿತು. ಒಂದು ಹಂತದವರೆಗೆ ಈ ಮಾತು ಪವರ್ ಫುಲ್ಲಾಗಿ ಕೇಳಿ ಬಂತಾದರೂ ಡಿಸೆಂಬರ್ ನಾಲ್ಕನೇ ವಾರದ ಹೊತ್ತಿಗೆ ಕಾವು ಕಳೆದುಕೊಳ್ಳತೊಡಗಿತು. ಯಾವಾಗ ಸಿದ್ರಾಮಯ್ಯ ಅವರು ಕೆಳಗೆ ಇಳಿಯುವುದಿಲ್ಲ ಎಂ ಬುದು ನಿಕ್ಕಿಯಾಯಿತೋ?ಇದಾದ ನಂತರ ಪ್ರಮೋದ್ ಸಾವಂತ್ ಅವರ ಗೇಮ್ ಪ್ಲಾನು ಬದಲಾಯಿತು.
ಅರ್ಥಾತ್, ಮೊನ್ನೆ ಮೊನ್ನೆಯ ತನಕ ಸಿದ್ಧರಾಮಯ್ಯ ಟೀಮಿನ ಸಂಪರ್ಕದಲ್ಲಿದ್ದ ಪ್ರಮೋದ್ ಸಾವಂತ್ ಇದ್ದಕ್ಕಿದ್ದಂತೆ ಸಿದ್ರಾಮಯ್ಯ ವಿರೋಧಿ ಬಣದ ಪ್ರಮುಖ ನಾಯಕರೊಬ್ಬರನ್ನು ಭೇಟಿ ಮಾಡಿ ಚರ್ಚಿಸಿದರು. ಮೂಲಗಳ ಪ್ರಕಾರ, ಸಿದ್ರಾಮಯ್ಯ ಅವರು ಪಟ್ಟ ಬಿಟ್ಟುಕೊಡದೆ ಇರುವುದರಿಂದ ಹತಾಶರಾಗಿರುವ ಕೆಲ ಶಾಸಕರನ್ನು ಹೊರಗೆಳೆಯುವುದು ಪ್ರಮೋದ್ ಸಾವಂತ್ ಲೆಕ್ಕಾಚಾರ.ಇದು ಎಷ್ಟರ ಮಟ್ಟಿಗೆ ಸಫಲ ವಾಗುತ್ತದೋ?ಅದು ಬೇರೆ ವಿಷಯ.
ಆದರೆ ಪ್ರಮೋದ್ ಸಾವಂತ್ ಇದ್ದಕ್ಕಿದ್ದಂತೆ ಆ್ಯಕ್ಟೀವ್ ಆಗಿರುವ ಬೆಳವಣಿಗೆ ಬರೀ ಕಾಂಗ್ರೆಸ್ ಮಾತ್ರವಲ್ಲ, ಜೆಡಿಎಸ್ ಪಾಳೆಯವನ್ನೂ ಬಡಿದೆಬ್ಬಿಸಿದೆ.ಮೊನ್ನೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಇಲ್ಲ ಎಂದರಲ್ಲ?ಈ ಬೆಳವಣಿಗೆಗೂ,ವಿಜಯೇಂದ್ರ ಅವರ ಹೇಳಿಕೆಗೂ ಸಂಬಂಧವಿದೆ ಅಂತ ವಿಶ್ಲೇಷಿಸಲಾಗುತ್ತಿದೆಯಾದರೂ ಸಾವಂತ್ ರ ಹೊಸ ಗೇಮಿನ ಪಾತ್ರ ಇದರಲ್ಲಿದೆ ಎಂಬ ಅನುಮಾನವೂ ಹಲವರಲ್ಲಿದೆ.
ಲಾಸ್ಟ್ ಸಿಪ್ (Political analysis)
ರಾಜ್ಯ ರಾಜಕಾರಣ ಪಡೆಯುತ್ತಿರುವ ತಿರುವು,ತಲುಪಿರುವ ಘಟ್ಟದಿಂದ ಕಿರಿಕಿರಿ ಅನುಭವಿಸುತ್ತಿರುವ ಹಲವು ನಾಯಕರು,ಶಾಸಕರು ಇಂಡಸ್ಟ್ರಿಯಲಿಸ್ಟುಗಳಾಗಲು ಹೊರಟಿದ್ದಾರೆ.
ಈ ಪೈಕಿ ಚನ್ನಪಟ್ಟಣ ಕ್ಷೇತ್ರದ ಶಾಸಕ, ಮಾಜಿ ಸಚಿವ ಸಿ.ಪಿ.ಯೋಗೀಶ್ವರ್ ಅವರು ನೀರಾ ಫ್ಯಾಕ್ಟರಿ ಸ್ಥಾಪಿಸುವ ತಯಾರಿ ಮುಂದುವರಿಸಿದ್ದರೆ, ಕಾಂಗ್ರೆಸ್ ನ ಮತ್ತೊಬ್ಬ ಅತಿರಥ ನಾಯಕರು ಸಕ್ಕರೆ ಕಾರ್ಖಾನೆಯನ್ನು ಸ್ಥಾಪಿಸಲು ತಯಾರಿ ನಡೆಸಿದ್ದಾರೆ.
ಸವದತ್ತಿ-ಬೆಳಗಾವಿ ಮಾರ್ಗದಲ್ಲಿ ತಲೆ ಎತ್ತಲಿರುವ ಈ ಸಕ್ಕರೆ ಕಾರ್ಖಾನೆ ದಕ್ಷಿಣ ಭಾರತದಲ್ಲೇ ಅತ್ಯಂತ ದೊಡ್ಡ ಸಕ್ಕರೆ ಕಾರ್ಖಾನೆಯಾಗಲಿದೆ ಎಂಬುದು ಲೇಟೆಸ್ಟು ಸುದ್ದಿ.
ಆರ್.ಟಿ.ವಿಠ್ಠಲಮೂರ್ತಿ