ದಾವಣಗೆರೆ (Davanagere): ಸ್ಟಾರ್ ಕ್ರಿಯೇಶನ್ಸ್ ಲಾಂಛನದಲ್ಲಿ ಚಂದ್ರಕಾಂತ ಪೂಜಾರಿ, ಉಮೇಶ್ ಹೆಗ್ಡೆ ನಿರ್ಮಿಸಿರುವ ಚಿತ್ರ ರಾನಿ ಸೆ.12ರಂದು ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದು ನಿರ್ದೇಶಕ ಗುರುತೇಜ್‍ಶೆಟ್ಟಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷದ ಬಿಗ್ ಬಜೆಟ್ ಚಿತ್ರಗಳಲ್ಲಿ ಒಂದಾದ ರಾನಿ ಚಿತ್ರದಲ್ಲಿ ಆಕ್ಷನ್ ಎಲಿಮೆಂಟ್ಸ್ ಜಾಸ್ತಿಯಿದ್ದರೂ, ಅದರ ಹಿಂದೊಂದು ಕೌಟುಂಬಿಕ ಕಥೆ, ನವಿರಾದ ಲವ್ ಸ್ಟೋರಿ ಕೂಡ ಇರುತ್ತದೆ. ಕನ್ನಡತಿ ಧಾರಾವಾಹಿ ಖ್ಯಾತಿಯ ನಟ ಕಿರಣ್‍ರಾಜ್ ಅವರು ಇದೇ ಮೊದಲಬಾರಿಗೆ ಒಬ್ಬ ಗ್ಯಾಂಗ್‍ಸ್ಟರ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅದ್ಭುತ ಕುಂಚ ಕಲಾವಿದನಾಗಿದ್ದ ರಾಘವನ ಕೈಗೆ ಗನ್ ಹೇಗೆ ಬಂತು, ಗ್ಯಾಂಗ್‍ಸ್ಟರ್ ರಾನಿ ಹೇಗಾದ ಎಂಬ ಬಗ್ಗೆ ಚಿತ್ರ ಸಾಗುತ್ತದೆ ಎಂದರು.
ಚಿತ್ರದಲ್ಲಿ ರಾಧ್ಯ, ಅಪೂರ್ವ ಹಾಗೂ ಸಮೀಕ್ಷಾ ಮೂವರು ನಾಯಕಿಯರಾಗಿ ನಟಿಸಿದ್ದಾರೆ. ವಿಶೇಷವಾಗಿ ಈ ಚಿತ್ರದಲ್ಲಿ ಗುರುಪ್ರಸಾದ್, ಬಿ.ಸುರೇಶ್, ರವಿಶಂಕರ್, ಸುಜಯ್ ಶಾಸ್ತ್ರಿ ಸೇರಿದಂತೆ ಐದು ಜನ ನಿರ್ದೇಶಕರು ಬಣ್ಣ ಹಚ್ಚಿದ್ದಾರೆ. ಗಿರೀಶ್‍ಹೆಗ್ಡೆ ಎಕ್ಸಿಕ್ಯುಟಿವ್ ಪ್ರಡ್ಯೂಸರ್ ಆಗಿರುವ ಈ ಚಿತ್ರಕ್ಕೆ ರಾಘವೇಂದ್ರ ಬಿ.ಕೋಲಾರ ಅವರ ಛಾಯಾಗ್ರಹಣ ಇದೆ ಎಂದರು.
ಮಣಿಕಾಂತ್ ಕದ್ರಿ ಅವರ ಸಂಗೀತ ಸಂಯೋಜನೆ, ಸತೀಶ್ ಪೆರ್ಡೂರು ಅವರ ಕಲಾ ನಿರ್ದೇಶನ, ಉಮೇಶ್ ಅವರ ಸಂಕಲನ ಹೀಗೆ ಈ ಚಿತ್ರದಲ್ಲಿ ಸಾಕಷ್ಟು ಅನುಭವಿ ತಂತ್ರಜ್ಞರುಗಳೇ ಕೆಲಸ ಮಾಡಿದ್ದಾರೆ. ಚಿತ್ರದಲ್ಲಿ 4 ಭರ್ಜರಿ ಸಾಹಸ ದೃಶ್ಯಗಳಿದ್ದು, ವಿನೋದ್ ಮಾಸ್ಟರ್ ಆಕ್ಷನ್ ಕಂಪೋಸ್ ಮಾಡಿದ್ದಾರೆ. ಈ ಚಿತ್ರದ 4 ಹಾಡುಗಳಿಗೆ ಪ್ರಮೋದ್ ಮರವಂತೆ ಅವರ ಸಾಹಿತ್ಯವಿದ್ದು, ಕುನಾಲ್ ಗಂಜಾವಾಲಾ, ಹಂಸಿಕಾ ಅಯ್ಯರ್ ದನಿಯಾಗಿದ್ದಾರೆ. ಬೆಂಗಳೂರು ಮತ್ತು ಮೈಸೂರು ಸುತ್ತಮುತ್ತ 92 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ ಎಂದರು.
Read also : Serial ‘Drishtibottu’ | ಕಲರ್ಸ್ ಕನ್ನಡದಲ್ಲಿ ಸೆ.9 ರಿಂದ ಹೊಸ ಧಾರಾವಾಹಿ ದೃಷ್ಟಿಬೊಟ್ಟು
ಉಳಿದಂತೆ ಗಿರೀಶ್ ಹೆಗ್ಡೆ, ಕರಿಸುಬ್ಬು, ಮೈಕೊ ನಾಗರಾಜ್, ಉಗ್ರಂ ಮಂಜು, ಉಗ್ರಂ ರವಿ, ಯಶ್‍ಶೆಟ್ಟಿ, ಶ್ರೀಧರ್, ಲಕ್ಷ್ಮಿಸಿದ್ದಯ್ಯ ಮುಂತಾದವರು ಅಭಿನಯಿಸಿದ್ದಾರೆ. ಈಗಾಗಲೇ ಪೋಸ್ಟರ್ , ಟೀಸರ್, ಟ್ರೈಲರ್ ಹಾಗೂ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಾಯಕನಟ ಕಿರಣ್ ರಾಜ್, ನಿರ್ಮಾಪಕ ಚಂದ್ರಕಾಂತ್ ಪೂಜಾರಿ ಇದ್ದರು.