ಸಂತಸ ತರುವ ಬಂಧಗಳೇ ಸಂಬಂಧಗಳು..ಕೆಲವೊಮ್ಮೆ ಸಂಕಟ ತರುವ ಬಂಧಗಳು ಸಂಬಂಧಗಳಾಗುತ್ತವೆ. ಸಂಬಂಧಗಳನ್ನು ಸಂತಸ ಮಾಡಿಕೊಳ್ಳುವ, ಸಂಕಟ ಮಾಡಿಕೊಳ್ಳುವ ಜವಾಬ್ದಾರಿ ನಮ್ಮದೇ ಆಗಿರುತ್ತದೆ. ಕುಟುಂಬ ಅಂದಮೇಲೆ ಸಂಬಂಧಗಳ ಸರಮಾಲೆ ನೋಡುತ್ತೇವೆ..ಸುಖ ದುಃಖ ಎಲ್ಲವನ್ನೂ ಹಂಚಿಕೊಳ್ಳಲು ಸಂಬಂಧಗಳು ಬಹಳ ಮುಖ್ಯ,ಕುಟುಂಬದ ಹೊರತಾಗಿ ಸ್ನೇಹ ಸಂಬಂಧವೂ ಅಮೂಲ್ಯವಾದದ್ದು. ಕುಟುಂಬ ಸಂಬಂಧದಲ್ಲಿ ಇಂದಿನ ಕಾಲದಲ್ಲಿ ಅತ್ಯಂತ ಒಗಟಾಗಿರುವ ಸಂಬಂಧ ಅತ್ತೆ ಮತ್ತು ಸೊಸೆಯರದ್ದು.
ಪರಿಸ್ಥಿತಿ ಸರಿ ಇಲ್ಲದೆ ಇದ್ದಾಗ ನಾವು ನಮ್ಮ ಮನಸ್ಥಿತಿ ಸರಿಯಾಗಿ ಇಟ್ಟುಕೊಳ್ಳಬೇಕು ಎನ್ನುವ ಮಾತಿದೆ..ನಮ್ಮ ಯೋಚನಾ ಲಹರಿ ನಮ್ಮೆಲ್ಲ ನೋವು ನಲಿವಿಗೆ ಕಾರಣವಾಗಿದೆ.ಅತ್ತೆ- ಸೊಸೆ ಎಂದರೆ ಜಗಳ ,ಮುನಿಸು , ಮನಸ್ತಾಪ ಎನ್ನುವ ಮಟ್ಟಿಗೆ ಇಂದಿನ ಪರಿಸ್ಥಿತಿ ನಿರ್ಮಾಣವಾಗಿದೆ.
ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬ ಆಗಲು ಕಾರಣ ಕೂಡ ಇದಾಗಿದೆ.
ಯಾವುದೇ ವ್ಯಕ್ತಿಯನ್ನು ನೋಡಿದಾಗ ಅವನಲ್ಲಿ ಉತ್ತಮ ಅಂಶಗಳ ಜೊತೆಗೆ, ಬೇಡವಾದ ಕೆಲವೊಂದು ಗುಣಗಳು ಇರುತ್ತವೆ. ಅದೇ ರೀತಿ ಯಾವುದೇ ಸಂಬಂಧ ತೆಗೆದುಕೊಂಡರು ಅದರಲ್ಲಿ ಒಳ್ಳೆಯದರ ಜೊತೆಗೆ ಕೆಲವು ಲೋಪಗಳು ಇರುವುದು ಸಹಜ. ಇಂದಿನ ಕೆಲ ಹೆಣ್ಣುಮಕ್ಕಳು ಅವಿಭಕ್ತ ಕುಟುಂಬದ ಎಲ್ಲಾ ಲಾಭಗಳನ್ನು ಬಯಸುತ್ತಾರೆ, ಆದರೆ ಕಷ್ಟ ಸಹಿಸಲು ಒಪ್ಪುವುದಿಲ್ಲ..
Read also : poem | ತಾಯಿಯ ಪ್ರೀತಿ…
ಒಟ್ಟಾಗಿರುವ ಲಾಭಗಳು ಮತ್ತು ನಷ್ಟಗಳ ಬಗ್ಗೆ ನಾವು ಅನೇಕ ಓದಿರುತ್ತೇವೆ, ಹಾಗೆಯೇ ಇಂದಿನ ಸಾಮಾಜಿಕ ಜಾಲತಾಣದ ಯುಗದಲ್ಲಿ ನೋಡಿರುತ್ತೇವೆ ಮತ್ತು ಕೇಳಿರುತ್ತೇವೆ.ನಾವು ನಮ್ಮ ಮನಸ್ಥಿತಿಯನ್ನು ಹೇಗೆ ಹೊಂದಿಸಿಕೊಳ್ಳಬೇಕು ಎಂಬುದರ ಬಗ್ಗೆ ಒಂದೆರಡು ಮಾತುಗಳು
- ನಮ್ಮ ಮಕ್ಕಳ ಹುಟ್ಟು ಹಬ್ಬಕ್ಕೆ ವೃದ್ಧಾಶ್ರಮ, ಅನಾಥಾಶ್ರಮಕ್ಕೆ ಹೋಗುವ ನಾವುಗಳು ನಮ್ಮ ಮನೆಯಲ್ಲಿ ಇರುವ ವೃದ್ಧರನ್ನು ಪ್ರೀತಿಸೋಣ, ಗೌರವಿಸೋಣ.
- ಸಮಾಜ ಸೇವೆ ಎಂದು ಎಲ್ಲೆಲ್ಲೋ ಹೋಗುವ ನಾವುಗಳು ನಮ್ಮ ಮನೆಯವರ ಸೇವೆಯನ್ನೇ ಮಾಡೋಣ.
- ದಾದಿಯರನ್ನು ಗೌರವಿಸುವ ನಾವು ಅವರ ಕೆಲಸವನ್ನು ಸ್ವಲ್ಪ ಮಟ್ಟಿಗೆ ಮನೆಯಲ್ಲಿ ಮಾಡಿದರೆ ಸಾಕು.
- ಕೆಲಸ ತಪ್ಪಿದ್ದಲ್ಲ ಅಂತ ತಿಳಿದ ಮೇಲೆ ಅದನ್ನು ನಗುತ್ತಲೇ ಮಾಡೋಣ.
- ಸ್ಟೇಟಸ್ ಗಳಲ್ಲಿ ಅತ್ಯಂತ ಪ್ರಬುದ್ಧ ಸಾಲುಗಳನ್ನು ಹಾಕುವ ನಾವುಗಳು ಸ್ವಲ್ಪ ಪ್ರಬುದ್ಧವಾಗಿ ಯೋಚಿಸೋಣ..
- ತಾಳ್ಮೆಗಿಂತ ಮಿಗಿಲಾದ ಶಕ್ತಿ ಇನ್ನೊಂದು ಇಲ್ಲ ಎಂಬುದನ್ನು ಅರಿಯೋಣ.
- ನಮ್ಮ ಹೆತ್ತವರೊಂದಿಗೆ ನಾವು ಜಗಳ ಆಡುತ್ತೇವೆ. ಅಣ್ಣ -ತಮ್ಮಂದಿರ ಜೊತೆಗೆ ಅಕ್ಕ- ತಂಗಿಯರ ಜೊತೆಗೆ ಭಿನ್ನಾಭಿಪ್ರಾಯಗಳು ಬರುತ್ತವೆ ಅಂದಮೇಲೆ ಬೇರೆ ಪರಿಸ್ಥಿತಿ ಬೇರೆ ವಾತಾವರಣದಲ್ಲಿ ಬೆಳೆದವರೊಂದಿಗೆ ಭಿನ್ನಾಭಿಪ್ರಾಯ ಬರುವುದು ಸಹಜ ಎಂಬುದನ್ನು ಅರ್ಥ ಮಾಡಿಕೊಳ್ಳೋಣ.
- ಎಲ್ಲರೊಂದಿಗೆ ಬದುಕಿದಾಗ ಆಗುವ ಲಾಭಗಳನ್ನು ಪ್ರತಿದಿನ ಮಲಗುವ ಮುನ್ನ ಸ್ಮರಿಸೋಣ.
- ಪ್ರತಿನಿತ್ಯ ಅವರೊಂದಿಗೆ ಬದುಕಲೇ ಬೇಕು ಅವರ ಮುಖ ನೋಡಲೇ ಬೇಕು ಅಂದಾಗ ಅವರೊಂದಿಗೆ ಜಗಳ ಆಡಿ ಮುಖ ಕೆಡಿಸಿಕೊಳ್ಳುವುದಕ್ಕಿಂತ ಸ್ವಲ್ಪ
ಸಹಿಸಿಕೊಳ್ಳೋಣ. - ನಾವು ಒಂದು ಸಾರಿ ನಾವು ನಮ್ಮದು ಕಷ್ಟ ಅಸಾಧ್ಯ ಅಲ್ಲ ಅಂತ ಯೋಚಿಸಲು ಶುರು ಮಾಡಿದರೆ ಸಾಕು ಮನೆ ನೆಮ್ಮದಿಯ ತಾಣವಾಗುತ್ತದೆ.ಕ್ಷಮಿಸುವ ಗುಣವನ್ನು ಬೆಳಸಿಕೊಂಡು ಮುಂದೆ ನಡೆದರೆ ಜೀವನ ಸುಂದರ..
ಸುಚಿತ್ರ .ಟಿ (ಸುವಿ)
ದಾವಣಗೆರೆ