ಹರಿಹರ (Harihara) : ರಾಜ್ಯದ ಎಲ್ಲಾ ಜಾತಿಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿ ತಯಾರಿಸಲಾಗಿರುವ ಸಮೀಕ್ಷಾ ವರದಿಯನ್ನು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಿ ಬಿಡುಗಡೆ ಮಾಡಬೇಕೆಂದು ಕರ್ನಾಟಕದಲಿತ ಸಂಘರ್ಷ ಸಮಿತಿ ಹರಿಹರ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ಈಗಾಗಲೆ ಮುಖ್ಯಮಂತ್ರಿ ಸಿದ್ಧರಾಮಯ್ಯರವರು, ಇದು ಕೇವಲ ಹಿಂದುಳಿದ ವರ್ಗಗಳ ಜಾತಿ ಸಮೀಕ್ಷೆ ಅಲ್ಲ, ರಾಜ್ಯದ ಏಳು ಕೋಟಿ ಕನ್ನಡಿಗರ ಸಮೀಕ್ಷೆ. ಇಡೀ ದೇಶದಲ್ಲಿ ಇಂತಹ ಸಮೀಕ್ಷೆ ನಡೆಸಿದ ಪ್ರಥಮ ರಾಜ್ಯ ಕರ್ನಾಟಕ, ಅ.18 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದೆಂದು ಹೇಳಿದ್ದಾರೆ.
ಈ ಮಾತಿಗೆ ಬದ್ಧರಾಗಿ ಜಾತಿವಾರು ಸ್ಥಿತಿಗತಿಗಳ ಅರಿಯುವ ಜಾತಿಗಣತಿ ಎಂದೆ ಕರೆಯಲಾಗುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷಾವರದಿಯನ್ನು ಸರ್ಕಾರ ಒಪ್ಪಿಕೊಂಡು ಬಿಡುಗಡೆ ಮಾಡಲು ಕ್ರಮಕೈಗೊಳ್ಳಬೇಕು. 12ನೆ ಶತಮಾನದಲ್ಲೆ ರಾಜ್ಯವು ಸಮಸಮಾಜವನ್ನು ಪ್ರತಿಪಾದಿಸಿತ್ತು, ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಮೈಸೂರು ಸಂಸ್ಥಾನದಲ್ಲಿ ಮೀಸಲಾತಿ ಜಾರಿ ಮಾಡಲಾಗಿತ್ತು, ದೇವರಾಜು ಅರಸು ಅವರು ಹಾವನೂರು ಆಯೋಗ ರಚಿಸಿ ಹಿಂದುಳಿದ ವರ್ಗಗಳ ಅಧ್ಯಯನಕ್ಕೆ ಮುನ್ನುಡಿ ಬರೆದಿದ್ದರು.
ವೀರಪ್ಪ ಮೊಯ್ಲಿ ಮೀಸಲಾತಿ ಮಿತಿಯನ್ನು ಶೇ.73ಕ್ಕೇರಿಸಲು ಪ್ರಯತ್ನಿಸಿದ್ದರು. ಈಗ ರಾಜ್ಯದ ಎಲ್ಲಾ ಜಾತಿ ಜನಗಣತಿ ನಡೆಸಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿ ಸಮೀಕ್ಷಾವರದಿಯನ್ನು ತಯಾರಿಸಿರುವುದು ಇಡೀ ದೇಶಕ್ಕೆ ಮಾದರಿಯಾಗಿದೆ.
ರಾಜ್ಯದ ಜನಸಂಕ್ಯೆಯ ಮುಕ್ಕಾಲು ಭಾಗಕ್ಕೂ ಹೆಚ್ಚಿರುವ ಅಹಿಂದ ವರ್ಗಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಪ್ರಾತಿನಿಧ್ಯ, ಉದ್ಯೋಗ ಮತ್ತು ಶಿಕ್ಷಣದ ಅವಕಾಶಗಳು ಲಭಿಸಿಲ್ಲ. ಅರಿವು ಮತ್ತು ಸಂಘಟನೆಯ ಕೊರತೆಯ ಕಾರಣಕ್ಕೆ ಅಹಿಂದ ವರ್ಗಗಳಿಗೆ ಅವಕಾಶ ಸಿಕ್ಕಿಲ್ಲ ಎಂಬುದು ಹಾಗೂ ನಿರ್ಧಿಷ್ಟ ಜನಸಂಖ್ಯಾ ಪರಿಸ್ಥಿತಿ ಗೊತ್ತಿಲ್ಲದಿರುವುದು ಪ್ರಮುಖ ಕಾರಣವಾಗಿದೆ. ಹಿರಿಯ ನ್ಯಾಯವಾದಿ ಎಚ್.ಕಾಂತರಾಜು ಅವರ ನೇತೃತ್ವದ ಆಯೋಗ ನಡೆಸಿದ ಸಮೀಕ್ಷೆಗೆ ಅಂಕಿ-ಅಂಶಗಳನ್ನು ಸಂಗ್ರಹಿಸಿದ ವಿಧಾನವನ್ನು ತಜ್ಞರ ಸಮಿತಿ ಮತ್ತು ಐಐಎಂ ಸಂಸ್ಥೆಗಳು ದೃಢೀಕರಿಸಿವೆ. ಹೀಗಾಗಿ ಕೆಲವು ಪಟ್ಟಭದ್ರರು ಜಾತಿಗಣತಿ ಅವೈಜ್ಞಾನಿಕ ಎಂಬ ಆರೋಪ ಹುರುಳಿದ್ದಾಗಿದೆ.
Read also : Davanagere | ಬೆಂಗಳೂರಿನ ಬಿಡಿಎ ಮಾದರಿಯಲ್ಲಿ ಗೃಹಗಳ ನಿರ್ಮಾಣಕ್ಕೆ ಸಚಿವರಿಂದ ಸೂಚನೆ
ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಜಾತಿ ಜನಗಣತಿ ನಡೆಸುವುದಾಗಿ ವಾಗ್ದಾನ ನೀಡಿತ್ತು, ಕೊಟ್ಟ ಮಾತಿನಂತೆ ಈಗ ಜಾತಿ ಜನಗಣತಿ ವರದಿಯನ್ನು ಒಪ್ಪಿ ಬಿಡುಗಡೆ ಮಾಡಿ ನಾವು ನುಡಿದಂತೆ ನಡೆಯುವವರು ಎನ್ನುವುದನ್ನು ಸಾಬೀತು ಮಾಡಬೇಕೆಂದು ಅವರು ಹೇಳಿದ್ದಾರೆ. ಸಂಪುಟ ಸಭೆಯಲ್ಲಿ ಸಭೆಯಲ್ಲಿ ವರದಿ ಮಂಡಿಸಿದಾಗ ಕೆಲವರು ಆಕ್ಷೇಪ ಎತ್ತಿದಾಗ ಒಪ್ಪಬೇಕೋ ಬೇಡವೋ ಎಂದು ನಿರ್ಧರಿಸುವ ಅಭಿಪ್ರಾಯ ಸಂಪುಟ ಸಭೆಯ ಅಧಿಕಾರ, ಆದರೆ ಸಂಪುಟ ಸಭೆಯಲ್ಲಿ ಮಂಡಿಸಬಾರದು ಎಂಬುದು ಗುಂಡಾ ಪ್ರವೃತ್ತಿ, ಸರ್ವಾಧಿಕಾರಿ ಧೋರಣೆಯಾಗುತ್ತದೆ ಎಂದು ಅವರು ಟೀಕಿಸಿದ್ದಾರೆ.