ಏಳನೆಯ ಕ್ಲಾಸಿಗೆ ಬರುವಷ್ಟೊತ್ತಿಗೆ ನಾವು ಓದುತ್ತಿದ್ದ ಶಾಲೆಯ ಋಣ ತೀರಿತ್ತೆಂದು ಕಾಣುತ್ತೆ ,ಆ ಶಾಲೆಯನ್ನು ಬಿಟ್ಟು ಹೋಗಲೇಬೇಕಾದ ಪರಿಸ್ಥಿತಿ ಒದಗಿಬಂದಿತು.ನಾನು ಮತ್ತು ನನ್ನಂತಹ ಅನೇಕ ಗೆಳೆಯರಿಗೂ ಸಂತೆ ಮಾರ್ಕೆಟ್ಟಿನ ಆ ಶಾಲೆಯನ್ನು ಬಿಟ್ಟು ಹೋಗಲು ಮನಸ್ಸಿರಲಿಲ್ಲ.ಆ ಸಂತೆ ಬಯಲಿನಲ್ಲಿ ಆಟವಾಡಲು ಸಾಕಷ್ಟು ಅವಕಾಶವಿತ್ತು.ಕೂಡ್ಲಿಗಿ-ಕೊಟ್ಟೂರು ರಸ್ತೆಯಲ್ಲಿ ಓಡಾಡುವ ಬಸ್ಸುಗಳಿಗೆ ಉಚ್ಚಿಬೆಲ್ಲಿನ ಸಮಯದಲ್ಲಿ ಟಾಟಾ ಹೇಳಬಹುದಿತ್ತು, ಪ್ರತಿಯಾಗಿ ಬಸ್ಸಿನಲ್ಲಿದ್ದವರೂ ಟಾಟಾ ಹೇಳಿದರಂತೂ ಖುಷಿಯಾಗುತ್ತಿತ್ತು.ಇಂತಹ ಸಂಭ್ರಮಗಳಲ್ಲಿ ಕಾಲ ಸರಿದಿದ್ದೇ ಗೊತ್ತಾಗುತ್ತಿರಲಿಲ್ಲ.
ಮೊದಲಿಗೆ ಅಲ್ಲಿ ಶಾಲೆಯಂತೇನೂ ಇರಲಿಲ್ಲ.ಸೊಲ್ಲಮ್ಮ ದೇವಿಯ ಗುಡಿಯಲ್ಲಿ ನಡೆಯುತ್ತಿದ್ದ ಕಾರಣಕ್ಕೋ ಏನೋ ಶಾಲೆಯ ಸ್ವಂತ ಕಟ್ಟಡ ಗುಡಿಯಿಂದ ಸ್ವಲ್ಪ ದೂರದಲ್ಲಿ ನಿರ್ಮಾಣವಾದರೂ ಸೊಲ್ಲಮ್ಮದೇವಿಯ ಹೆಸರು ಶಾಲೆಯ ಜೊತೆಗೆ ಅಂಟಿಕೊಂಡೇ ಇತ್ತು. ಹೀಗಿರುವಾಗ ಐದನೆಯ ಕ್ಲಾಸಿಂದ ಆರನೆಯ ಕ್ಲಾಸೂ ಮುಗಿದು ಇದೀಗ ಏಳನೆಯ ಕ್ಲಾಸು ಪಬ್ಲಿಕ್ಕೂ..ಎಂದೆಲ್ಲ ಮೇಷ್ಟ್ರುಗಳು ಓಡಾಡಿದರೂ ಏಳನೆ ಕ್ಲಾಸು ಶಾಲೆಗೆ ಮಂಜೂರಾಗಲಿಲ್ಲ.
ಸಂತೆ ಮಾರ್ಕೆಟ್ಟಿನ ಹುಂಚಿ ಮರದ ಕೆಳಗೆ ಕುಂತು ವಿದ್ಯಾರ್ಥಿಗಳೊಂದಿಗೆ ಮಾತಾಡುತ್ತಲೇ ಅತ್ತುಬಿಟ್ಟ ಮೇಷ್ಟ್ರ ಮುಖದ ನೋವಿನ ನೆನಪು ಇನ್ನೂಅಚ್ಚಳಿಯದೆ ಹಾಗೆ ಉಳಿದುಬಿಟ್ಟಿದೆ. ಅವತ್ತು ಚೆನ್ನಪ್ಪ ಮೇಷ್ಟ್ರು ಮುಖವನ್ನು ನೋಡಾಕೂ ಆಗ್ತಿರಲಿಲ್ಲ.ಸಂತೆ ಬಝಾರಿನ ಆ ಗದ್ದಲದಲ್ಲಿಯೂ ಗಾಢ ಮೌನ ಆವರಿಸಿದಂತಿತ್ತು. ಕೇವಲ ಆರನೆಯ ಕ್ಲಾಸಿನವರೆಗೂ ನಡೆಸಿಕೊಂಡು ಬಂದಿದ್ದ ಸೊಲ್ಲಮ್ಮನ ಗುಡಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಮ್ಮ ಋಣ ತೀರಿತ್ತು.
ಶಾಲೆಯ ಮುಂದಿನ ರಸ್ತೆ ಬದಿಯಲ್ಲಿ ಕಟುಕರ ಅಂಗಡಿಗಳಲ್ಲಿ ಕುರಿ ಕಡಿದು ಮಾರುವ ಮಾಂಸದಂಗಡಿಗಳಿದ್ದವು. ಮುದುಕಿಯರು ಬಂದು ಕಟುಕರ ಕೃಷ್ಣಪ್ಪನ ಹತ್ತಿರ ಕಾಡಿ ಬೇಡಿ ಮಾಂಸವನ್ನು ಸಿಲವಾರದ ಕೇಟ್ಲಿಯಲ್ಲಿ ಹಾಕಿಕೊಂಡು ಹೋಗುವುದನ್ನು ನೋಡುವುದು ನಿತ್ಯದ ಕಾಯಕವಾಗಿತ್ತು. ಶುಕ್ರವಾರ ಸಂತೆಯ ದಿನದಂದು ಶಾಲೆಯ ಮುಂದೆ ಅದೆಷ್ಟು ಸಂಭ್ರಮವಿತ್ತೂ ಅಂತೀರಿ,ಬಗೆ ಬಗೆಯ ತರಕಾರಿಗಳು ಹರಡಿ ಕುಂತ ವ್ಯಾಪಾರಿಗಳು, ಗಡಿಗೆ ,ಮಡಕೆಗಳು, ರೊಕ್ಕ ಸಂಗ್ರಹಿಸುವ ಕುಡಿಕೆಗಳು ಮನ ಸೆಳೆಯುತ್ತಿದ್ದವು.ಕುಡಿಕೆಗಳೆಂದರೆ ಚಿಲ್ಲರೆ ಕಾಸು ಸಂಗ್ರಹಿಸಿ ಒಮ್ಮೊಮ್ಮೆ ದೂರದ ಹಂಪಿ,ಹೊಸಪೇಟೆಯ ಟೀಬಿ ಡ್ಯಾಮು,ಸೊಂಡೂರಿನ ರಮ್ಯ ತಾಣಗಳನ್ನು ತೋರಿಸುವ ಮಾಂತ್ರಿಕರಂತೆ ಕಾಣಿಸುತ್ತಿದ್ದವು.
ಒಡಲಲ್ಲಿ ಅದು ಹೇಗೆ ಇಷ್ಟೆಲ್ಲ ಬಚ್ಚಿಟ್ಟುಕೊಳ್ಳುತ್ತಿದ್ದವೋ ಏನೋ…ಅವುಗಳನ್ನು ನೋಡುತ್ತಾ ನಿಲ್ಲುತ್ತಿದ್ದ ನಮಗೆ ಹೊಸ ಲೋಕವೊಂದು ಕಾಣಿಸುತ್ತಿತ್ತು. ಅಷ್ಟು ಕಷ್ಟ ಪಟ್ಟು ಮಣ್ಣು ಹೊತ್ತು , ಮಣ್ಣ ಕಣ್ಣಿಗೊತ್ತಿ ಕೈ ಮುಗಿದು ಹದ ಮಾಡಿದ ಗಡಿಗೆಗಳು,ಮಡಿಕೆಗಳು,ತರಹೇವಾರಿ ಕನಸಿನ ಕುಡಿಕೆಗಳ ಕೇಳಿ ಸಂತೆಗೆ ಬರುವ ಜನರು ಸಾಕಷ್ಟಿರುತ್ತಿದ್ದರು. ಆ ದಿನ ನಮ್ಮ ಕ್ಲಾಸ್ಮೇಟ್ ಕೆ.ವೀರಪ್ಪ ಅಲಿಯಾಸ್ ಕುಂಬಾರ ವೀರಪ್ಪನದು ಅಧಿಕೃತ ರಜಾದಿನವಾಗುತ್ತಿತ್ತು.ಸಣ್ಣವಯಸ್ಸಿಗೆ ವ್ಯಾಪಾರ ಶುರು ಹಚ್ಚಿಕೊಂಡ ವೀರಪ್ಪ ನಮ್ಮ ಬಳಗದಲ್ಲಿಯೇ ಪ್ರಬುದ್ಧತೆ ಹೊಂದಿದ್ದ.ಯಾರಾದರೂ ನೆಲದ ಮೇಲೆ ಸಾಲಾಗಿ ಪೇರಿಸಿಟ್ಟ ಮಡಕೆ,ಗಡಿಗೆಗಳನ್ನು ಎಷ್ಟಪೋ ಇದು?ಎಂದು ಕಾಲಿನಲ್ಲಿ ತೋರಿಸಿದರೆ ,ಅಷ್ಟೇ ವೇಗವಾಗಿ ಕೈಲಿ ಹಿಡಕಂಡು ಕೇಳಪೋ ಎಂದು ಮುಲಾಜಿಲ್ಲದೇ ಹೇಳುತ್ತಿದ್ದ.
ಶಾಲೆಯಲಿ ಪಾಠ ನಡೀತಿರಬೇಕಾದರೆ ,ಬೇಡುವ ಹುಡುಗರ ದೈನೇಸಿ ಮುಖಗಳು,ಡಾಣಿ ಮಂಡಕ್ಕಿ ಕೊಡಿಸೆಂದು ಪೀಡಿಸುವ ಮಕ್ಕಳು,ಬೇಲ್ದಾರ ಕೆಲಸದಿಂದ ಬಂದ ಕೂಲಿಯಲ್ಲಿ ಸಂತಿ ಮಾಡುವ ಚಿಂತಿಯಲ್ಲಿ ಕುಳಿತವರು,ಇವೆಲ್ಲವನ್ನು ಮರೆಸಲೆಂಬಂತೆ ಘಮ್ಮೆನ್ನುವ ಒಣಮೀನಿನ ವಾಸನೆ ಸೇರಿ ವಿಚಿತ್ರವಾದ ಲೋಕವೊಂದನ್ನು ಸೃಷ್ಟಿಸಿತ್ತು.ಸಂತಿಯಿಲ್ಲದ ದಿನಗಳಲ್ಲಿ ಸಹಪಾಠಿ ಕಮ್ಮಾರ ಹನುಮಂತನನ್ನು ಅವರಪ್ಪ ದೂರದಿಂದಲೇ ಕೂಗುತ್ತಿದ್ದ.ಬೀಜಗಣಿತದ ಕಬ್ಬಿಣಕ್ಕಿಂತ ಕುಲುಮೆಯಲಿ ಕಾದ ಕೆಂಪು ಕೆಂಡಗಣ್ಣಿನ ಕುರ್ಸಿಗಿ,ಕುಡುಗೋಲು,ಕೊಡ್ಲಿಗಳಿಗೆ ಸುತ್ತಿಗೆ ಏಟು ಹಾಕುವುದು ಎಷ್ಟೋ ಮೇಲು ಎಂದುಕೊಂಡ ಕಾರಣ ಅದನ್ನೇ ಕಾಯುತ್ತಿರುವವವನಂತೆ ಕರೆ ಬಂದ ಕ್ಷಣವೇ ಓಡುತ್ತಿದ್ದ.ಇದಕ್ಕೆಲ್ಲ ಪರ್ಮಿಷನ್ ಗಿರ್ಮಿಸನ್ನುಗಳ ಅಗತ್ಯವೇ ಅವನಿಗಿರಲಿಲ್ಲ.
ಬ್ಯಾಸಿಗ್ಯಾಗ ತಣಾಗಿರ್ತಾವ ಸರ್ ಇದ್ರಾಗ ಕುಡಿಯಾ ನೀರು
ಇಂತಹದ್ದೊಂದು ಸುಂದರ ಬದುಕಿನ ಆವರಣವನ್ನು ಬಿಟ್ಟು ಏಳನೆಯ ಕ್ಲಾಸಿಗೆ ಪ್ಯಾಟಿ ಬಸಣ್ಣನ ಗುಡಿ ಶಾಲೆಗೆ ಹೋಗುವುದೆಂದರೆ ಬಹಳ ದುಃಖವಾಗುತ್ತಿತ್ತು.ಅಲ್ಲಿದ್ದ ಐದು ಆರನೇ ಕ್ಲಾಸಿನ ಹುಡುಗರ ಕಣ್ಣಲ್ಲಿ ನಾವು ಉನ್ನತ ವ್ಯಾಸಂಗಕ್ಕೆ ಹೊರಟು ನಿಂತಿರುವ ಮಹಾನ್ ಮೇಧಾವಿಗಳೆಂಬಂತೆ ಕಾಣುತ್ತಿದ್ದೆವು.ನಮ್ಮೆಲ್ಲರ ಟೀಸಿಗಳನ್ನು ಕೊಡುವಾಗ ಶಾಲೆಗೇನಾದರೂ ನೆನಪಿಗೆ ಕೊಡ್ರಪಾ ಎಂದು ಹೆಡ್ಮಾಸ್ತರು ಕೇಳಿದಾಗ, ಕುಂಬಾರ ವೀರೇಶ ದೊಡ್ಡದೊಂದು ಮಡಕೆ ಹೊತ್ತು ತಂದು “ಬ್ಯಾಸಿಗ್ಯಾಗ ತಣಾಗಿರ್ತಾವ ಸರ್ ಇದ್ರಾಗ ಕುಡಿಯಾ ನೀರು” ಎಂದಿದ್ದ.
ಹೀಗೆ ಶಾಲೆ ಬಿಟ್ಟುಬಂದ ನಮಗೆ ಪ್ಯಾಟಿ ಬಸಣ್ಣನ ಗುಡಿಯ ಮುಂದಿನ ಶಾಲೆಗೆ ಏಳನೆಯ ಕ್ಲಾಸಿಗೆ ಪ್ರವೇಶವಾಯ್ತು.ನಮ್ಮ ಮನಿಯಿಂದ ಶಾಲೆಗೆ ಹೋಗುವಾಗ ಕಡಿದಾದ ಓಣಿಯ ದಾರಿ ಬದಿಯ ಮನೆಗಳೆಲ್ಲ ಬಿಕೋ ಎನ್ನುತ್ತಿದ್ದವು.ಎಲ್ಲೋ ಅಲ್ಲೊಬ್ಬ ಇಲ್ಲೊಬ್ಬ ಮುದುಕಿಯರು ಮಾತ್ರ ತಲೆಯ ಹೇನು ಹೆಕ್ಕುತ್ತಲೋ ಜ್ವಾಳ ಹಸನು ಮಾಡುತ್ತಲೊ ಇರುವ ದೃಶ್ಯ ಸಾಮಾನ್ಯವಾದುದಾಗಿತ್ತು.ಹರೆಯದ ಹುಡುಗರು ಬೆಳಗಿನ ಮ್ಯಾಟಿನಿ ಷೋ ಗೆ ಹೋಗುವ ತಯಾರಿಯಲ್ಲಿರುತ್ತಿದ್ದರು.
ಈ ಓಣಿಯ ಮುಂದೆಯೆ ಮಸಣಕ್ಕೂ ಹೋಗುವ ದಾರಿಯಿದ್ದ ಕಾರಣ ಸತ್ತವರ ಹಿಂದೆ ಅಳುತ್ತಾ ಸಾಗುವ ಜನಗಳ ನೋಡಿದಾಗಲೆಲ್ಲ ಸಂಕಟವಾಗುತ್ತಿತ್ತು.ಆಗ ಒಂದು ಸ್ವಲ್ಪ ಹೊತ್ತು ಪಾಠ ಮಾಡುತ್ತಿದ್ದ ರಾಮದಾಸ್ ನಾಯ್ಕ್ ಮೇಷ್ಟ್ರು,ಮರಬದ ಈರಣ್ಣ ಹೆಡ್ಮೇಷ್ಟ್ರು,ವೆಂಕಮ್ಮ ಟೀಚರ್ರೂ…ಹೊರಗೆ ಬಂದು ನಿಂತು “ಮೊನ್ನಿನ್ನ ಮಾತಾಡಿಸಿ ಹೋಗ್ಯನ…ನೋಡ್ರಿ ಸರ್ ಇವತ್ತಾಗಲೇ ಇಲ್ಲ”ಸಂಭಾಷಣೆಗಳು ತೀರಾ ಕಾಮನ್ ಎನ್ನುವಂತೆ ಆಗಿಬಿಟ್ಟಿದ್ದವು.
ಸೊಲ್ಲಮ್ಮನ ಗುಡಿ ಶಾಲೆಯ ಬಣ್ಣದ ಚಿತ್ರಗಳನ್ನು ಇಲ್ಲಿ ಕಾಣುವುದು ಕಷ್ಟವಾಗಿತ್ತು.ಕುಲುಮೆಯ ಕೆಂಡ,ಎತ್ತುಗಳ ಮಲಗಿಸಿ ಲಾಳ ಹಾಕುವ ಲಾಲ್ಸಾಬು,ಕಟುಕರ ಕೃಷ್ಣಪ್ಪನ ತಾಯಿ ಹೃದಯದ ಮಾತುಗಳು,ಕುಂಬಾರನ ಆ ನೋಟ,ಡಾಣಿ ಮಂಡಕ್ಕಿ ಮಾರುವವನ ಸಂಕಟ,ಮನೆ ಕಟ್ಟುವ ಬೇಲ್ದಾರನ ನಿಟ್ಟುಸಿರು….ಇವುಗಳಾವುವೂ ಇಲ್ಲದ ಹೊಸದೊಂದು ಲೋಕಕ್ಕೆ ಕಾಲಿರಿಸಿದಂತಾಗಿತ್ತು.
ಎಲ್ಲಿ ನೋಡಿದರೂ ಹಣೆಗೆ ಇಬತ್ತಿ ಕಟ್ಟು ಬಡಕೊಂಡು ಕುಂತ ಹುಡುಗರೆ ತುಂಬಿದ ಶಾಲೆಗೆ ನಾವು ಅಪರಿಚಿತರಾಗಿ ಹೋಗಿದ್ದೆವು. ನಾವು ಶಾಲೆಯಿಂದ ಮನೆಗೆ ಸಾಗುತ್ತಿದ್ದ ದಾರಿಯಿತ್ತಲ್ಲ, ಮುಂಜಾನೆ ಶಾಲೆಗೆ ಹೋಗುವಾಗ ಹೊದ್ದು ಮಲಗಿರುತ್ತಿತ್ತಲ್ಲ ಅದೇ ಓಣಿ ,ನಾವು ಶಾಲೆ ಮುಗಿಸಿಕೊಂಡು ಮನೆಗೆ ವಾಪಸಾಗುವಾಗ ಚಟುವಟಿಕೆಯಿಂದ ಕೂಡಿರುತ್ತಿತ್ತು.ಅದುವರೆಗೂ ಅದೆಲ್ಲಿ ಅಡಗಿರುತ್ತಿದ್ದರೋ ಏನೋ ಸಂಜೆ ರಂಗೇರುತ್ತಿದ್ದಂತೆ ಓಣಿಯೂ ರಂಗೇರುತ್ತಿತ್ತು.
ಅಂಥಾ ಸುಂದರ ನಗುವಿನ ಅಲೆಗಳ ಜೊತೆಗೆ ಸ್ಪರ್ಧೆಗೆ ಬಿದ್ದಂತೆ ಪಾಂಡ್ಸ್ ಪೌಡರಿನ ಪರಿಮಳ ಬೇರೆಯದೇ ಲೋಕವೊಂದನ್ನು ಸೃಷ್ಟಿಸುತ್ತಿತ್ತು.ಹಗಲೆಲ್ಲಾ ಪವರ್ಕಟ್ ಆಗಿ ನಿಂತ ಕಾರ್ಖಾನೆಗಳಂತೆ ತೋರುತ್ತಿದ್ದ ಓಣಿ ಒಮ್ಮೆಲೇ ಕರೆಂಟು ಬಂತೆಂದು ಚಾಲೂಗೊಂಡ ಕಾರ್ಖಾನೆಗಳಂತೆ ಕಾಣುತ್ತಿದ್ದವು.
ಆ ವಿಕ್ಷಿಪ್ತತೆಯ ಗರ್ಭಧರಿಸಿದ ಓಣಿಗೆ ನಾನಾತರಹದ ಹೆಸರುಗಳು ಇದ್ದವು.ಬುಡಬುಡಿಕೀ ಕಾಲುವಿ ಎಂದೂ ಕರೆಯಲಾಗುತ್ತಿತ್ತು.ಅಲ್ಲಿದ್ದ ಸಂಜೆಯ ಹೆಂಗಸರ ಆ ನಗು ಮತ್ತು ಕೆಂಪು ಕವಳದ ಪ್ರಭಾವದಿಂದಲೋ ಇಡೀ ಸಂಜೆ ಕೆಂಪು ಬಣ್ಣಕೆ ತಿರುಗಿದಂತೆ ಕಾಣುತ್ತಿತ್ತು.
ಇದಾಗಿ ,ಎಷ್ಟೋ ವರುಷಗಳ ನಂತರ ಸಂಬಂಧಿಕರೊಬ್ಬರು ನಿಧನರಾಗಿದ್ದ ಕಾರಣ ಆ ಕಿರಿದಾದ ದಾರಿಯಲ್ಲಿ ಸಾಗಿಬಂದೆ.ದಾರಿ ಎಷ್ಟೊಂದು ಕಿರಿದಾಗಿದೆಯಲ್ಲ?ಗೆಳೆಯನನ್ನು ಕೇಳಿದೆ.ಮಸಣ ಕೂಡ ಊರಿಗೆ ಬಂದಿರುವ ಹಾಗೆ ಕಂಡಿತು.ಇಲ್ಲ ಇಲ್ಲ ಊರೇ ಮಸಣದ ಕಡೆಗೆ ನಡೆದಿರುವಂತೆ ತೋರಿತು.ಆ ಕೇರಿಯ ಹಿಂದಿನ ಲವಲವಿಕೆಯ ಜಾಗದಲ್ಲೀಗ ಮಸಣದ ಹಾದಿಯಲ್ಲಿ ಕಾಯುತ್ತ ನಿಂತವರಂತೆ ಮುದುಕ ಮುದುಕಿಯರಿದ್ದರು.ಮೈತುಂಬಾ ಚರ್ಮರೋಗ ಹಚ್ಚಿಕೊಂಡ ಒಂದುಕಾಲದ ಚೆಲುವೆಯರು ನರಳುತ್ತಿದ್ದರು.
ಮತ್ತದೇ ಬಾಲ್ಯದ ಧ್ಯಾನ!
ದಾರಿಯುದ್ದಕೂ ಬಿದ್ದ ಮಂಡಕ್ಕಿ ,ವೀಳ್ಯದೆಲೆಗಳನ್ನು ಆರಿಸುತಿರುವ ಹುಡುಗರು ಕಣ್ಣಿಗೆ ಬಿದ್ದರು ,ಕೆಟ್ಟೆನಿಸಿತು.
ಒಂದರೆಕ್ಷಣ ಹೊತ್ತು ಬಾಲ್ಯಕೆ ಹೊರಟುಹೋದೆ.
ಪಾಂಡ್ಸ್ ಪೌಡರಿನ ಪರಿಮಳ ಸುತ್ತಲೂ ಪಸರಿಸಿತು.
ಸಂಜೆಗಳು ರಂಗೇರಿದವು ಅವಳ ಕವಳ ಕೆಂಪಿನ ತುಟಿಗಳ ಹಾಗೆ.
ಬಿ.ಶ್ರೀನಿವಾಸ.